-->
ಪರೀಕ್ಷೆ ಎಂದು ಚಿಂತಿಸದಿರಿ : ಆತ್ಮ ವಿಶ್ವಾಸದಿಂದ ಬರೆಯಿರಿ

ಪರೀಕ್ಷೆ ಎಂದು ಚಿಂತಿಸದಿರಿ : ಆತ್ಮ ವಿಶ್ವಾಸದಿಂದ ಬರೆಯಿರಿ

ಲೇಖಕರು : ವಾಲ್ಟರ್ ಹೆಚ್ ಡಿ’ಮೆಲ್ಲೊ 
ಸಹನಿರ್ದೇಶಕರು
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ 
ಬೆಳಗಾವಿ ವಿಭಾಗ , ಬೆಳಗಾವಿ       

                ವಿದ್ಯಾರ್ಥಿಗಳೇ ನೀವೆಲ್ಲಾ ಪರೀಕ್ಷಾ ತಯಾರಿಯ ತಿಂಗಳಿನಲ್ಲಿದ್ದೀರಿ. ಇನ್ನೇನು ಕಣ್ಣು ತೆರೆಯುವಷ್ಟರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಮ್ಮ ಕಣ್ಣ ಮುಂದೆ ಬಂದೇ ಬಿಡುತ್ತೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಬಂತೆಂದರೆ ಸಾಕು ನಮ್ಮ ಮಕ್ಕಳು ಭಯಭೀತರಾಗುತ್ತಾರೆ. ಕಾರಣ ಈ ತಿಂಗಳುಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುತ್ತವೆ. ಕೋವಿಡ್-19ರ ನಂತರದ ಎರಡು ವರ್ಷಗಳಲ್ಲಿ ಪೂರ್ಣವಾಗಿ ಪಾಠ ಬೋಧನೆಗಳು ಈ ಶೈಕ್ಷಣಿಕ ಸಾಲಿನಲ್ಲಿ ನಡೆಯುವ ಮೂಲಕ ಮಕ್ಕಳ ಕಲಿಕಾಮಟ್ಟ ಉತ್ತಮಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಆದಾಗ್ಯೂ ನಮ್ಮ ಮಕ್ಕಳು ಓದು, ಅರ್ಥೈಸುವಿಕೆ ಹಾಗೂ ಬರವಣಿಗೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. 
       ಪರೀಕ್ಷೆಯ ತಯಾರಿಗೆ ತಮ್ಮದೇ ಆದ ದೈನಂದಿನ ಓದಿನ ವೇಳಾಪಟ್ಟಿ ಸಿದ್ದಪಡಿಸಿಕೊಂಡು ವಿದ್ಯಾರ್ಥಿಗಳು ಪರೀಕ್ಷಾ ತಯಾರಿ ಮಾಡುವುದು ತುಂಬಾ ಅವಶ್ಯಕವಾಗಿದೆ. ಪರೀಕ್ಷಾ ತಯಾರಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ಬೇಗ 4.30 ರಿಂದ 5ಗಂಟೆಯೊಳಗೆ ಏದ್ದೇಳುವ ಮೂಲಕ ಓದುವ ಅಭ್ಯಾಸವನ್ನು ರೂಡಿಸಿಕೊಂಡರೆ ತುಂಬಾ ಒಳ್ಳೆಯದು. ಬೆಳಗ್ಗಿನ ಅವಧಿಯು ಓದಿಗೆ ಬಹಳ ಸೂಕ್ತವಾದ ಸಮಯವಾಗಿರುವುದರಿಂದ ಈ ಸಮಯವನ್ನು ಚೆನ್ನಾಗಿ ಉಪಯೋಗಿಸುವುದು ಸೂಕ್ತ. ಈ ಅವಧಿಯಲ್ಲಿ ಓದಿದ ಅಂಶಗಳು ಬಹಳ ಬೇಗನೆ ನಮ್ಮ ಮನಸ್ಸಿಗೆ ಹೋಗುವುದರಿಂದ ಕಲಿಕೆ ಸುಲಭವಾಗುತ್ತದೆ.
     ಓದಿನ ವೇಳಾಪಟ್ಟಿಯು ಕಠಿಣತೆಯಿಂದ ಸುಲಭದೆಡೆಗಿರಬೇಕು. ಪ್ರತಿ ವಿದ್ಯಾರ್ಥಿಯು ತನಗೆ ಕ್ಲಿಷ್ಟಕರವಾದ ವಿಷಯಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಮೂಲಕ ಬೆಳಗ್ಗಿನ ಅವಧಿಯಲ್ಲಿ ಕಠಿನ ವಿಷಯಗಳನ್ನು ಅಭ್ಯಾಸ ಮಾಡುವುದು ಸೂಕ್ತ. ಹಾಗೆಯೇ ಸಂಜೆ ಹಾಗೂ ರಾತ್ರಿ ವೇಳೆಯನ್ನೂ ಸದುಪಯೋಗಪಡಿಸಿಕೊಂಡು ಕಲಿಕೆಗೆ ಮೀಸಲಿಡುವುದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ನಿದ್ದೆಗೆಟ್ಟು ಓದದೆ, ಪರೀಕ್ಷಾ ಅವಧಿಗಳಲ್ಲಿ ಕನಿಷ್ಠ 6 ಗಂಟೆಯಾದರೂ ನಿದ್ದೆ ಮಾಡಬೇಕು. ಪರೀಕ್ಷಾ ತಯಾರಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಟಿವಿ, ಮೊಬೈಲ್ ಇವುಗಳಿಂದ ದೂರವಿದ್ದು ಓದಿನೆಡೆಗೆ ಮನಸ್ಸನ್ನು ಕೇಂದ್ರೀಕರಿಸಿದರೆ ಯಶಸ್ಸನ್ನು ಖಂಡಿತವಾಗಿಯೂ ಪಡೆಯಬಹುದು.  
        ಭಾಷಾ ಕಲಿಕೆಯಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲೀಷ್ ಭಾಷೆ ಮಕ್ಕಳಿಗೆ ಬಹಳ ಕ್ಲಿಷ್ಟವಾಗಿರುವುದನ್ನು ಗಮನಿಸಲಾಗಿದೆ. ಮಕ್ಕಳ ಓದು ಮತ್ತು ಬರವಣಿಗೆ ನಿರ್ಧಿಷ್ಟ ಮಟ್ಟದಲ್ಲಿಲ್ಲ. ವಿದ್ಯಾರ್ಥಿಗಳು ಪ್ರಶ್ನೆಗಳ ಉತ್ತರಗಳನ್ನು ಅರ್ಥಗರ್ಭಿತವಾಗಿ ಎರಡರಿಂದ ಮೂರು ಸಲ ಓದಿ ನಂತರ ಉತ್ತರ ಬರೆದು ಕಲಿತರೆ ಇದರಿಂದ ಓದಿನ ಹಾಗೂ ಬರವಣಿಗೆ ಕೌಶಲ್ಯ ವೃದ್ಧಿಯಾಗಿ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಹಾಗೂ ಪರೀಕ್ಷೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ.
     ವಿದ್ಯಾರ್ಥಿಗಳೇ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸಿ. ಪರೀಕ್ಷಾ ದಿನಗಳಂದು ಆರೋಗ್ಯ ಹಾಗೂ ತಾವು ತೆಗೆದುಕೊಳ್ಳುವ ಆಹಾರದ ಕಡೆಗೂ ಗಮನ ನೀಡುವ ಮೂಲಕ ಯಾವುದೇ ಭಯ ಹಾಗೂ ಆತಂಕವಿಲ್ಲದೆ ಪರೀಕ್ಷಾ ತಯಾರಿ ನಡೆಸಿ. ಸಮಯದ ನಿರ್ವಹಣೆಯನ್ನು ಚೆನ್ನಾಗಿ ಮಾಡುವ ಮೂಲಕ ತಯಾರಿ ನಡೆಸಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗಿರುತ್ತದೆ.
............................. ವಾಲ್ಟರ್ ಹೆಚ್ ಡಿ’ಮೆಲ್ಲೊ 
ಸಹನಿರ್ದೇಶಕರು, 
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ 
ಬೆಳಗಾವಿ ವಿಭಾಗ , ಬೆಳಗಾವಿ
*****************************************


Ads on article

Advertise in articles 1

advertising articles 2

Advertise under the article