ಹಕ್ಕಿ ಕಥೆ : ಸಂಚಿಕೆ - 90
Wednesday, March 15, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಈಗ ಮಾರ್ಚ್ ತಿಂಗಳು. ಬಹಳಷ್ಟು ಮರಗಳು ಹೂ ಬಿಡುವ ಸಮಯ. ಮಾವು, ಹಲಸು, ಗೇರು, ನೇರಳೆ ಮತ್ತು ಅನೇಕ ಕಾಡು ಮರಗಳು ಹೂ ಬಿಡುವ ಸಮಯ. ಒಂದೊಂದು ಮರದ ಹೂವಿನ ಪರಿಮಳವೇ ಬೇರೆ. ಕೆಲವು ಹೂವಿಗೆ ಪರಿಮಳ ಇಲ್ಲದಿದ್ದರೂ ಅವುಗಳ ಬಣ್ಣ ಬಹಳ ಆಕರ್ಷಕ. ಸುಮಾರು ಹತ್ತು ವರ್ಷಗಳ ಹಿಂದೆ ನಾನೊಮ್ಮೆ ಬಿದಿರು ಹೂ ಬಿಡುವುದನ್ನು ಮೊದಲ ಬಾರಿಗೆ ನೋಡಿದ್ದೆ. ಸಂಸೆ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ನಾನು ಶಿಕ್ಷಕರು ಇಲ್ಲದ ಕಾರಣ ಪಕ್ಕದ ಹೊರನಾಡು ಶಾಲೆಗೆ ವಾರದಲ್ಲಿ ಎರಡು ದಿನ ನಿಯೋಜನೆ ಮೇರೆಗೆ ಹೋಗುತ್ತಿದ್ದೆ. ಹೊರನಾಡು ಬಸ್ ನಿಲ್ದಾಣದಲ್ಲಿ ಇಳಿದು ಪಕ್ಕದ ರಸ್ತೆ ಹಿಡಿದು ನಿಧಾನವಾಗಿ ಗುಡ್ಡ ಏರಲಾರಂಭಿಸಿದೆ. ದಾರಿಯಲ್ಲೊಂದು ಬಸದಿ, ಆ ನಂತರ ಪ್ರಾಥಮಿಕ ಶಾಲೆ ಅದನ್ನೂ ದಾಟಿ ಗುಡ್ಡ ಹತ್ತಿದರೆ ಸ್ವಲ್ಪ ಸಮತಟ್ಟು ಜಾಗ ಸಿಗುವಲ್ಲಿ ಹೊರನಾಡು ಹೈಸ್ಕೂಲ್ ಇತ್ತು. ಶಾಲೆಗಿಂತ ಸ್ವಲ್ಪ ಮೊದಲೇ ಒಂದು ದೊಡ್ಡ ಬಿದಿರಿನ ಪೊದೆ ಇತ್ತು. ಬಿದಿರು ಗುಂಪಾಗಿ ಬೆಳೆಯುವ ಸಸ್ಯ. ಒಂದೇ ಬುಡದಿಂದ ನೂರಾರು ಬಿದಿರು ಹುಟ್ಟುವುದು ಸಾಮಾನ್ಯ. ಆ ವರ್ಷ ಆ ಬಿದಿರು ಹೂ ಬಿಟ್ಟಿತ್ತು ಎನ್ನುವುದು ನೋಡುವಾಗ ತಕ್ಷಣ ತಿಳಿಯುತ್ತಿರಲಿಲ್ಲ. ಬಿದಿರು ಹೂಬಿಟ್ಟದ್ದು ನನಗೆ ತಿಳಿದದ್ದು ಅದರಲ್ಲಿ ಓಡಾಡುತ್ತಿದ್ದ ಹಕ್ಕಿಗಳಿಂದ. ಪುಟಾಣಿ ಗುಬ್ಬಚ್ಚಿ ಗಾತ್ರದ ಹಕ್ಕಿಗಳು ಬಿದಿರಿನ ತುಂಬಾ ಓಡಾಡುತ್ತಿದ್ದವು. ಮೊದಲಿಗೆ ನಾನೂ ಗುಬ್ಬಚ್ಚಿ ಇರಬೇಕು ಅಂದುಕೊಂಡಿದ್ದೆ. ಆನಂತರ ಸ್ವಲ್ಪ ಹೊತ್ತು ನೋಡುತ್ತಾ ನಿಂತಾಗ ಅವುಗಳು ಗುಬ್ಬಚ್ಚಿಗಳಲ್ಲ ಅವು ರಾಟವಾಳ ಅಥವಾ ಮುನಿಯಾ ಹಕ್ಕಿ ಇರಬೇಕು ಎಂದು ಅನಿಸಿತು. ಹೂಬಿಟ್ಟು ಬಿದಿರಕ್ಕಿ ಆಗಿತ್ತು, ಆ ಬಿದಿರಕ್ಕಿಯದ್ದೇ ಬಣ್ಣ. ಮೈಮೇಲೆಲ್ಲ ಗೀರು ಗೀರು ಕಂದು ಗೆರೆಗಳು. ಕೆಲವು ಹಕ್ಕಿಗಳ ತಲೆ, ಎದೆ ಮತ್ತು ಬೆನ್ನಿನ ಭಾಗಗಳು ಗುಲಾಬಿ ಬಣ್ಣ ಹೊಂದಿದ್ದವು. ಎಲ್ಲಾದರೂ ಕೆಂಪು ರಾಟವಾಳ ಇರಬಹುದೇ ಎಂಬ ಸಂಶಯ ಉಂಟಾಯಿತು. ಫೋಟೋ ತೆಗೆಯೋಣ ಎಂದರೆ ಬಿದಿರಿನ ಪೊದೆಯ ಒಳಗೆ ಚುರುಕಾಗಿ ಓಡಾಡುತ್ತಿದ್ದ ಪುಟಾಣಿ ಹಕ್ಕಿಗಳ ಫೋಟೋ ತೆಗೆಯಲು ಕ್ಯಾಮರಾ ಫೋಕಸ್ ಆಗುತ್ತಿರಲಿಲ್ಲ. ಬಹಳ ಹೊತ್ತು ಕಾದು, ಸರ್ಕಸ್ ಮಾಡಿದ ನಂತರ ಕೆಲವು ಫೋಟೋ ಸಿಕ್ಕಿತು. ಸಂಜೆ ಮನೆಗೆ ಹೋಗಿ ಚಹಾ ಕುಡಿದು ಗೆಳೆಯ ಜಯಂತರ ಸ್ಟುಡಿಯೋಗೆ ಹೋದೆ. ಇವತ್ತು ಯಾವ ಹೊಸ ಹಕ್ಕಿ ಸಿಕ್ಕಿತು ಮಾಷ್ಟ್ರೇ ಎಂದು ಜಯಂತಣ್ಣ ಕೇಳಿದರು. ಗುಬ್ಬಚ್ಚಿಯ ತರಹದ್ದು ಗುಲಾಬಿ ಬಣ್ಣದ ಹಕ್ಕಿ ಸಿಕ್ಕಿದೆ ಎಂದು ತೋರಿಸಿದೆ. ನನ್ನ ಬಳಿ ಯಾವುದೇ ಪುಸ್ತಕ ಇರಲಿಲ್ಲ. ವಾಟ್ಸಾಪ್ ಅನ್ನುವುದು ಇನ್ನೂ ಪ್ರಾರಂಭವಾಗದ ಕಾಲ ಅದು. ಫೇಸ್ ಬುಕ್ ನಲ್ಲಿ ಕರಾವಳಿ ಪಕ್ಷಿವೀಕ್ಷಕರ ಗುಂಪು ಒಂದೇ ನನಗಿದ್ದ ಮಾಹಿತಿ ಮೂಲ. ಆ ಗುಂಪಿಗೆ ಪೋಟೋ ಹಾಕಿ ಇದ್ಯಾವ ಹಕ್ಕಿ ? ತಿಳಿದವರು ಹೇಳಿ ಎಂದು ಫೋಸ್ಟ್ ಮಾಡಿದೆ.
ಮರುದಿನ ನೋಡಿದರೆ ಗೆಳೆಯ ಶಿವಶಂಕರ್ ಮತ್ತು ಇನ್ನೂ ಕೆಲವರು ಇದು ರೋಸ್ ಫಿಂಚ್ ಎಂಬ ಹಕ್ಕಿ ಎಂದು ಗುರುತು ಹಿಡಿದಿದ್ದರು. ಗಂಡು ಹಕ್ಕಿ ಕೆಂಪು ಬಣ್ಣ ಆದರೆ ಹೆಣ್ಣು ಕಂದು ಬಣ್ಣ ಹೊಂದಿರುತ್ತದೆ. ಗೆಳೆಯ ಲೋಕೇಶ್ ಸರ್ ಹತ್ತಿರ ಇದ್ದ ಸಲೀಂ ಅಲಿ ಪುಸ್ತಕ ತೆಗೆದು ಹುಡುಕಿದಾಗ ತಿಳಿದದ್ದು ಈ ಪುಟಾಣಿ ಹಕ್ಕಿ ಹಿಮಾಲಯ ಮತ್ತು ಅದರಾಚೆಯ ಬಲೂಚಿಸ್ತಾನದಿಂದ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಹಕ್ಕಿ. ಬೇಸಗೆಯಲ್ಲಿ ತನ್ನ ಮೂಲ ನೆಲೆಗೆ ಹಿಂದಿರುಗಿ ಸಂತಾನೋತ್ಪತ್ತಿ ಮಾಡುತ್ತದೆ. ಇಂತಹ ಅಪರೂಪದ ಹಕ್ಕಿ ನೋಡಲು ಸಿಕ್ಕಿದ್ದು ಅದೇ ಮೊದಲು.
ಚಳಿಗಾಲ ಮುಗಿಯುತ್ತಾ ಬಂತು. ನಿಮ್ಮ ಆಸುಪಾಸಿನಲ್ಲೂ ಇಂತಹ ಅಪರೂಪದ ಹಕ್ಕಿಗಳು ಇರಬಹುದು, ಅವು ಮತ್ತೆ ತಮ್ಮ ಊರಿಗೆ ಹೊರಡಲು ತಯಾರಾಗುತ್ತಿರಬಹುದು.
ಕನ್ನಡದ ಹೆಸರು: ಗುಲಾಬಿ ಗುಬ್ಬಿ
ಇಂಗ್ಲೀಷ್ ಹೆಸರು: COMMON ROSEFINCH
ವೈಜ್ಞಾನಿಕ ಹೆಸರು: CARPODACUS ERYTHRINUS
ಚಿತ್ರ ಕೃಪೆ : ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************