-->
ಬದಲಾಗೋಣವೇ ಪ್ಲೀಸ್ - 89

ಬದಲಾಗೋಣವೇ ಪ್ಲೀಸ್ - 89

ಬದಲಾಗೋಣವೇ ಪ್ಲೀಸ್ - 89

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
           
       ಶಾಂತ ಸಾಗರದಲ್ಲಿ ಅಲೆಗಳ ಆರ್ಭಟವಿಲ್ಲದೆ ಸಲೀಸಾಗಿ ಪಯಣಿಸುತ್ತಿದ್ದ ಹಡಗೊಂದು ಕಾಲಕ್ರಮೇಣ ಅಶಾಂತ ಸಾಗರದೊಳಗೆ ಪ್ರವೇಶಿಸಿತು. ಅಲ್ಲಿ ಕ್ಷಣ-ಕ್ಷಣಕ್ಕೂ ಪಯಣದ ಹೋರಾಟ. ಒಮ್ಮೆಲೆ ಎದುರಾಗುವ ತೀವ್ರತರನಾದ ಅಲೆಗಳ ಆರ್ಭಟ. ಮುಗಿಲೆತ್ತರಕ್ಕೆ ಹಾರುವ ಅಲೆಗಳು. ಚಲನೆಯ ದಿಕ್ಕನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿಯಾಗಿ ಬೀಸುತ್ತಿರುವ ಗಾಳಿ, ಅಗೋಚರವಾಗಿ ಧುತ್ತನೆ ಎದುರಾಗುವ ಅನಿರೀಕ್ಷಿತ ತಿರುವುಗಳು... ಹೀಗೇ ಸದಾ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಪಯಣ. ಈ ಎಲ್ಲದರ ಮಧ್ಯೆ ಭಾರತುಂಬಿದ ಹಡಗು ತೇಲಿಕೊಂಡು ಪಯಣ ಮುಂದುವರಿಸಿತು. ಸಾಗರದ ಗಾತ್ರದೊಳು ಸಾಸಿವೆಯಷ್ಟು ಕೂಡಾ ನಗಣ್ಯವಾದ ಗಾತ್ರದ ಹಡಗು ಎಲ್ಲಿಯವರೆಗೆ ಒಂದು ಹನಿ ನೀರನ್ನು ತನ್ನೊಳಗೆ ಸೇರಲು ಬಿಡುವುದಿಲ್ಲವೋ ಅಲ್ಲಿಯವರೆಗೆ ಹಡಗು ಮುಳುಗಲು ಸಾಧ್ಯವಿಲ್ಲ ಎಂಬುದು ಸತ್ಯ . ತನ್ನ ಸುತ್ತ ಅಗಾಧವಾದ ಜಲರಾಶಿಯಿದ್ದರೂ ಅದು ಮುಳುಗದು . ಯಾವಾಗ ನೀರು ತನ್ನೊಳಗೆ ಸೇರಲು ಅವಕಾಶ ನೀಡಿತೊ ಆಗ ಮುಳುಗಲು ಪ್ರಾರಂಭಿಸುತ್ತದೆ. ಒಳಗಿನ ನೀರು ಹೆಚ್ಚಾದಂತೆ ಪಯಣ ಮುಂದುವರಿಸಲಾಗದೆ ಒಳಭಾರ ಹೆಚ್ಚಾಗಿ ಮುಳುಗುವತ್ತ ಸಾಗುತ್ತದೆ. ಈ ಹಂತದಲ್ಲಿ ಯಾರಾದರೂ ಒಳಬರುವ ನೀರನ್ನು ತಡೆದರೆ ಮಾತ್ರ ಹಡಗು ಅಪಾಯವನ್ನು ಮೀರಿ ತನ್ನ ಗುರಿಯನ್ನು ತಲುಪಲು ಸಾಧ್ಯವಿದೆ.
       ಹಡಗಿನ ನಿದರ್ಶನ ಪ್ರಸ್ತುತ ಬದುಕಿಗೆ ತುಂಬಾ ಅವಶ್ಯಕವಾಗಿದೆ. ನಮ್ಮ ಬದುಕು ಕೂಡಾ ಹಡಗಿನ ಪಯಣದಂತೆ. ಹುಟ್ಟಿನಿಂದ ತನ್ನದೇ ಆದ ನೆಮ್ಮದಿ ಸಹಿತ - ಚಿಂತೆ ರಹಿತವಾದ ಶಾಂತ ಸಾಗರದಲ್ಲಿ ಪಯಣಿಸುತ್ತಿದ್ದ ನಮಗೆ ಕಾಲಕ್ರಮೇಣ ಅಶಾಂತ ಸಾಗರದ ಪರಿಚಯವಾಗುತ್ತದೆ. ಚಿಂತೆಗಳೆಂಬ ಅಗಾಧ ನೀರ ರಾಶಿಯ ಪರಿಚಯವಾಗುತ್ತದೆ. ಚಿಂತೆ ಎಂಬ ಅಗಾಧ ನೀರ ರಾಶಿಯ ಮಧ್ಯೆ ಇದ್ದರೂ ಆ ನೀರನ್ನು ಎಲ್ಲಿಯವರೆಗೆ ಒಳ ಮನಸ್ಸಿಗೆ ಸೇರಿಸಲು ಬಿಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಬದುಕ ಪಯಣ ನೆಮ್ಮದಿಯಿಂದ ಸಾಗುತ್ತದೆ. ಯಾವಾಗ ನೀರು ಒಳ ಸೇರುತ್ತದೊ ಆಗ ಬಾಹ್ಯ ಭಾರಕ್ಕಿಂತಲೂ ಒಳಗಿನ ಭಾರ ಹೆಚ್ಚಾಗತೊಡಗುತ್ತದೆ. ಹೊರಭಾರ ಎಷ್ಟಾದರೂ ಇರಲಿ, ತಡೆಯಬಹುದು. ಆದರೆ ಒಳಭಾರವನ್ನು ಮಾತ್ರ ತಡೆಯಲಾಗದು. ಅದಕ್ಕಾಗಿ ಒಳಭಾರವನ್ನು ಮಾತ್ರ ಇಳಿಸಲೇಬೇಕು. ಇಂದು ನಾವೆಲ್ಲರೂ ಬಾಹ್ಯವಾಗಿ ಶಾಂತಸಾಗರದಲ್ಲಿ ಹಗುರಾಗಿರುವವರಂತೆ ತೋರುತ್ತಿದ್ದೇವೆ. ಆದರೆ ಒಳಗೆ ಅತಿಯಾದ ಭಾರ ಹೊತ್ತಿರುತ್ತಾರೆ. ಬಹುಭಾರ ಹೊತ್ತಿದ್ದಾರೆ ಎಂದು ನಮ್ಮ ಮುಖವೇ ಹೇಳುತ್ತಿರುತ್ತದೆ. ಕೆಲವರದ್ದು ಹೊರಭಾರ ಮತ್ತೆ ಕೆಲವರದ್ದು ಒಳಭಾರ. ಹಗುರಾಗುವುದು ಎಂದರೆ ಹೊರಗಿನ ಭಾರವನ್ನು ಇಳಿಸುವುದಲ್ಲ. ಮನದ ಚಿಂತೆಗಳೆಂಬ ಒಳಭಾರವನ್ನು ಇಳಿಸಿ ಹಗುರಾಗುವುದು. ಅಂದರೆ ನಮ್ಮೊಳಗೆ ನಾವೇ ಸೃಷ್ಪಿಸಿಕೊಂಡಿರುವ ನಕರಾತ್ಮಕ ಚಿಂತನೆಗಳು - ಸ್ವ ಆಲೋಚನೆಗಳು - ಸ್ವಾರ್ಥಪರ ನಿಲುವುಗಳು - ಸಣ್ಣತನದ ಭಾವಗಳು - ನನ್ನದೇ ಸರಿ ಎಂಬ ನಿರ್ಧಾರಗಳು - ಬಳಸಿ ಬಿಸಾಡುವ ಯೋಚನೆಗಳು ಇತ್ಯಾದಿಗಳು ಒಳ ಭಾರವನ್ನು ಇಳಿಸುವುದು. ಇದಕ್ಕೊಂದು ಧನಾತ್ಮಕ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಇದಕ್ಕೆ ರೆಡಿಮೇಡ್ (ಸಿದ್ಧ) ಪರಿಹಾರವಿಲ್ಲ. ನಮ್ಮೊಳಗಿನ ಒಳಭಾರವನ್ನು ನಾವೇ ಇಳಿಸಬೇಕು ಅಥವಾ ನಮ್ಮ ಸಹ ಮನಸ್ಕರಾದ ಸಂಗಡಿಗರು ಇಳಿಸಬಹುದು. ಈ ನಿಟ್ಟಿನಲ್ಲಿ ನಮ್ಮೊಳಗಿನ ಒಳಭಾರವನ್ನು ಇಳಿಸಿ - ನಂತರ ನಮ್ಮ ಜತೆಗಿರುವವರ ಒಳಭಾರವನ್ನು ಇಳಿಸಲು ಸಹಕರಿಸೋಣ.... ಇದಕ್ಕೆ ಯಾರನ್ನು ಕಾಯದೆ ನಾವೇ ಸಿದ್ಧರಾಗಿರೋಣ. ಒಳಭಾರವನ್ನು ಇಳಿಸಲು ಬದಲಾಗೋಣವೇ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article