-->
ಪುಟ್ಟ ಮನಸ್ಸು... (ಲೇಖನ)

ಪುಟ್ಟ ಮನಸ್ಸು... (ಲೇಖನ)

ಲೇಖನ : ಸುಜನ್ ನಾಯ್ಕ್ 
10ನೇ ತರಗತಿ 
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ 
ಸರಕಾರಿ ಪ್ರೌಢ ಶಾಲೆ ಪೆರ್ವಾಜೆ. 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.                 
     
        ನಿಮಗೇನಾದರೂ ಕೆಲಸ ಹೇಳಿದ ಹೊತ್ತಿನಲ್ಲಿ , ನಿಮಗೆ ಇಷ್ಟವಾಗದಿದ್ದರೆ ‘ನನಗೆ ಮನಸಿಲ್ಲ’ ಎಂದು ಹೇಳಿ ಬಿಡುತ್ತೀರಿ. ನಾವು ಏನೇ ಮಾಡಿದರೂ ಅದಕ್ಕೆ ಕಾರಣ ‘ಮನಸ್ಸು' ಎಂದು ನಾವು ನಾವು ನಂಬಿ ಬಿಟ್ಟಿದ್ದೇವೆ. ಈ ಮನಸ್ಸು ಎಂಬ ಮೂರಕ್ಷರದ ಪದದಿಂದ, ಜೀವನ ಎಂಬ ಮೂರಕ್ಷರದ ಪದವನ್ನು ರೂಪಿಸಿಕೊಳ್ಳಬಹುದು. ಅದಕ್ಕೆ , ನಮ್ಮ ಹಿರಿಯರು ಹೇಳಿದ್ದು ಮನಸ್ಸಿದ್ದರೆ ಮಾರ್ಗ ಎಂದು. ಎಲ್ಲರ ಮನವು ಒಂದೇ ರೀತಿ ಇರುವುದಿಲ್ಲ. ಮನದ ಭಾವನೆಗಳು ಕಿರಿಯರಿಂದ ಹಿರಿಯರವರೆಗೆ ಬಗೆ ಬಗೆಯ ರೀತಿಯಲ್ಲಿ ಇರುತ್ತದೆ. ಆದರೆ ಅದನ್ನು ಅರಿತುಕೊಳ್ಳಲು ಅಂತಹುದೇ ಮನಸ್ಕರಿಗೆ ಸಾಧ್ಯ.
        ಎಳೆಯ ವಯಸ್ಸಿನ ಮನಸ್ಸು ....
ಚಿಕ್ಕ ಮಕ್ಕಳಿಗೆ ಅವರದೇ ಆದ ಮನಸ್ಸು. ಆ ಮನಸನ್ನು ಅರಿಯಲು ಅವರ ಜೊತೆಯೇ ಕಾಲ ಕಳೆಯಬೇಕು. ಮಕ್ಕಳ ಮನಸ್ಸು ಮೇಲು  ಕೀಳುಗಳಿಲ್ಲದ  ಪರಿಶುದ್ಧ ಮನಸ್ಸು. 
      ಪುಟ್ಟ ಮನಸ್ಸಿನ ದೊಡ್ಡ ಕಲ್ಪನೆಯನ್ನು ಯಾರಿಂದಲೂ ಅರಿಯಲು ಸಾಧ್ಯವಿಲ್ಲ. ಆಟಿಕೆಗಳೊಂದಿಗೆ ಆಟ ಆಡುವ ಹೊತ್ತಿನಲ್ಲಿ ಅವರದೇ ಆದ ಕಾಲ್ಪನಿಕ ಪ್ರಪಂಚವನ್ನು ತನ್ನ ಕಣ್ಣೆದುರು ಸೃಷ್ಟಿಸಿ ಬಿಡುತ್ತಾರೆ. ಗೊಂಬೆಗಳೊಂದಿಗೆ ಆಟ ಆಡುವ ಹೊತ್ತಿನಲ್ಲಿ ಗೊಂಬೆಗಳಿಗೆ ಜೀವ ತುಂಬಿಸುವ ಶಕ್ತಿಯು ಆ ಪುಟ್ಟ ಮನಸ್ಸಿಗೆ ತಿಳಿದಿದೆ. ನಾಳೆಯ ಚಿಂತೆಯಿಲ್ಲದ ಆ ಮನಸ್ಸಿಗೆ ಇಂದಿನ ಕಲ್ಪನೆಯದ್ದೇ ಚಿಂತೆ. ಪುಟ್ಟ ಮನಸ್ಸಿನ ನಡುವೆ ಧ್ವೇಷ ಎಂಬುವುದು ಬೆಳೆಯುವುದಿಲ್ಲ. ತಂಟೆ ತಕರಾರು ನಡೆದಾಗ ಒಂದೇ ಸಮನೆ “ಕೋಪ" ಎಂದು ಹೇಳಿ, ಆಟ ಆಡುವ ಹೊತ್ತಿನಲ್ಲಿ “ರಾಜಿ" ಎಂದು ಹೇಳುವ ಮನೋಭಾವ ಈ ಪುಟ್ಟ ಮನಸ್ಸಿನದ್ದು.
       ಜಾತ್ರೆ ಉತ್ಸವದ ಸಂತೆಯಲ್ಲಿ ದೊಡ್ಡವರ ಕಣ್ಣು ದೊಡ್ಡ ದೊಡ್ಡ ವಸ್ತುಗಳ ಕಡೆಗೆ ಹೋದರೆ , ಪುಟ್ಟ ಮನಸ್ಸಿನ ಕಣ್ಣು ಆಟ ಸಾಮಾನುಗಳ ಕಡೆಗೆ ಹೋಗಿ ಬಿಡುತ್ತದೆ. ಆಟ ಸಮಾನು ತೆಗೆದು ಕೊಟ್ಟರೆ ಎಲ್ಲಿಲ್ಲದ ಖುಷಿ.., ಆದರೆ ಆ ಮನಸ್ಸಿಗೆ ಶೋಧಿಸುವ ಗುಣ ಹೆಚ್ಚು. ಒಮ್ಮೆ ತೆಗೆದುಕೊಂಡ ಆಟಿಕೆಯನ್ನು ಮನೆಗೆ ತಂದಾಗ ತಲೆ ಬುಡವೇ ಇರುವುದಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಎಳೆಯ ವಿಜ್ಞಾನಿ ಈ ಮನಸ್ಸು. 
ಯಾಕೆ..? ಏನು..? ಎತ್ತ ಎನ್ನುತ್ತಾ ಪ್ರಶ್ನೆ ಕೇಳುತ್ತಲೇ ಇರುವ ಪುಟ್ಟ ಮನಸ್ಸು ಸದಾ ಚಿಂತನೆಯಲ್ಲಿ ತೊಡಗಿರುತ್ತದೆ. ಸತ್ಯವನ್ನು ಮರೆಮಾಚದೆ ಹೇಳಿ ಬಿಡುವ ಈ ಮನಸ್ಸಿಗೆ ಅದರದೇ ಆದ ಪುಟ್ಟ ಆಸೆ, ಎಲ್ಲರೂ ನನ್ನನ್ನೇ ನೋಡಬೇಕು. ಎಲ್ಲರೂ ನನ್ನನ್ನು ಮಾತನಾಡಿಸಬೇಕೆಂದು ತಂಟೆ ತಕರಾರು ನಡೆಸಿ ಎಲ್ಲರ ಗಮನ ಆ ಎಳೆಯ ಮನಸ್ಸಿನ ಮೇಲೆ ಸೆಳೆಯುತ್ತದೆ. ಮುಂದೆ ಬಾಲ ಲೀಲೆಯ ಪುಟ್ಟ ಮನಸ್ಸನ್ನು ಅರಿಯುವವರು ಯಾರು...? 
....................................... ಸುಜನ್ ನಾಯ್ಕ್ 
ಹತ್ತನೇ ತರಗತಿ 
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ. 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ. 
*******************************************


Ads on article

Advertise in articles 1

advertising articles 2

Advertise under the article