-->
ಪ್ರಿಯ ವಿದ್ಯಾರ್ಥಿಗೊಂದು ಅಕ್ಕರೆಯ ಪತ್ರ

ಪ್ರಿಯ ವಿದ್ಯಾರ್ಥಿಗೊಂದು ಅಕ್ಕರೆಯ ಪತ್ರ

ಲೇಖಕರು : ಗೀತಾ ಶೆಟ್ಟಿ
ಉಪನ್ಯಾಸಕರು, ಡಯಟ್ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
Mob: +91 87628 51848
 
           ಕಂದಾ ನಿನ್ನ ನೆನಪಾಯಿತು, ಯಾಕೆ ಅಂತ ಕೇಳ್ತಾ ಇದ್ದೀಯಾ? ನನ್ನ ಪತ್ರ ಯಾಕಿರಬಹುದು. ಊಹಿಸಿ ನೋಡು, ಖಂಡಿತಾ ನಿನಗೆ ಗೊತ್ತಾಗಿರಬಹುದು ನನ್ನ ಪತ್ರ ನಿನಗೆ ಯಾಕೆ ಎಂದು. ಹೌದು ಮಗುವೇ, ಈ ವರ್ಷದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿ ನೀನು ಅಲ್ಲವೇ..
      ಮಗುವೇ ಯಾಕೆ ಗೊಂದಲ, ಹೆದರಿಕೆ, ಗಾಬರಿ, ಭಯ… ಇದ್ಯಾವುದೂ ಬೇಡವೇ ಬೇಡ. ಈ ರೀತಿಯ ಸಾರ್ವತ್ರಿಕ ಪರೀಕ್ಷೆಗಳು ಎಲ್ಲರ ಜೀವನದಲ್ಲಿ ಸಾಮಾನ್ಯ. ನಾನೂ ಸಹ ನಿನ್ನ ಹಾಗೆ ಈ ಘಟ್ಟವನ್ನು ದಾಟಿ ಬಂದವಳೇ. ಇಲ್ಲಿ ಬೇಕಾಗಿರುವುದು ಒಂದೇ, ಪರೀಕ್ಷೆಯನ್ನು ಯಾವ ರೀತಿ ನಾವು ಎದುರಿಸುತ್ತೇವೆ ಮತ್ತು ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎಂಬುದೇ ಇಲ್ಲಿ ಪ್ರಮುಖ ಆಂಶ.
      ಇದು ನಿನ್ನ ಜೀವನದ ಪ್ರಥಮ ಪರೀಕ್ಷೆ ಅಲ್ಲ ಅಲ್ವಾ ಪುಟ್ಟಾ...? ಪ್ರಾಥಮಿಕ ಹಂತದಿಂದ ಈ 
ದಿನದವರೆಗೂ ಎಷ್ಟೊಂದು ಪರೀಕ್ಷೆ ಎದುರಿಸಿರುವೆ. ಇದೂ ಕೂಡ ಹಾಗೆಯೇ ಹೊರತು ಭಿನ್ನವಾಗಿಲ್ಲ. ಇಡೀ ವರ್ಷ ನೀ ಕಲಿತ ಪಾಠಗಳ ಒಂದಷ್ಟು ಅಂಶಗಳ ಬಗ್ಗೆ ಪ್ರಶ್ನೋತ್ತರ, ಅದರ ಉತ್ತರ ನಿನ್ನಲ್ಲೆ ಇದೆ. ಆದರೆ ನೀ ಗಾಬರಿಗೊಂಡಲ್ಲಿ ಉತ್ತರ ಮರೆಯುವ ಸಾಧ್ಯತೆ ಹೆಚ್ಚು. ವರ್ಷವಿಡಿ ಕಲಿತ, ಶಿಕ್ಷಕರು ಕಲಿಸಿದ ವಿಷಯಗಳೇ ಹೊರತು ಇನ್ಯಾವುದೂ ಅಲ್ಲ. ಇಲ್ಲಿ ನಿನ್ನ ಸಮಯ ಪ್ರಜ್ಙೆ, ಸಮಾಧಾನದ ಸ್ಥಿತಿ ಕಲಿತದ್ದನ್ನು ಬರೆಯಲು ಅವಶ್ಯಕ ಅಲ್ಲವೆ ಮಗು.. ನಿನ್ನ ಉತ್ತರ ಪತ್ರಿಕೆ ನಿನ್ನದೇ, ಆದ್ದರಿಂದ ತಡಬಡಿಸಬೇಡ, ಗಾಬರಿ ಪಟ್ಟುಕೊಳ್ಳದೆ ಸಮಾಧಾನ ಚಿತ್ತದಿಂದ ನಿನಗೆ ಸಾಧ್ಯವಾಗುವಷ್ಟು ಬರೆಯಲು ಮನಸ್ಸು ಮಾಡು. ಇಲ್ಲಿ ನಿನ್ನ ಮನಸ್ಥಿತಿ ಮುಖ್ಯ. ಅದರ ಯಜಮಾನ ನೀನಲ್ಲವೇ, ನೀನು ಹೇಳಿದ ಹಾಗೆ ಕೇಳುವ ಮನಸ್ಥಿತಿ ನಿನ್ನದಾಗಬೇಕೆ ಹೊರತು, ಹೆದರಿಕೆಯಿಂದ ಬಾಗಬಾರದು. ಆತ್ಮ ವಿಶ್ವಾಸದ ಮುಂದೆ ಬೇರೆಲ್ಲವೂ ಗೌಣ. ನಾನು ಇದನ್ನು ಸಾಧಿಸಬಲ್ಲೆ ಎಂದು ಆತ್ಮ ವಿಶ್ವಾಸ ನಿನ್ನಲ್ಲಿ ಇದ್ದಲ್ಲಿ ಪ್ರಪಂಚದ ಯಾವುದೇ ಶಕ್ತಿ ನಿನ್ನ ಯಶಸ್ಸನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಮಗುವೇ. 
     ಸ್ವಾಮಿ ವಿವೇಕಾನಂದರ ಈ ಮಾತನ್ನು ನೆನಪಿನಲ್ಲಿಡು ಕಂದಾ  “ನಿನ್ನ ಬಾಳನ್ನು ರೂಪಿಸಿಕೊಳ್ಳುವವನು ನೀನೆ”.  ಕಂದಾ ನಿನ್ನ ಪ್ರಯತ್ನ ಗುರು ಸಾಧಿಸುವತ್ತಾ ಇರಲಿ, ಇದಕ್ಕೆ ಪ್ರಾಮಾಣಿಕ ಪ್ರಯತ್ನ ಹಾಗೂ ಆತ್ಮವಿಶ್ವಾಸದ ಅತೀ ಅಗತ್ಯ ಇದೆ. ಈ ಸಮಯದಲ್ಲಿ ಯಾವುದೇ ರೀತಿಯ ಉದಾಸೀನತೆ, ಪ್ರಲೋಭನೆಗೆ ಒಳಗಾಗದೇ ಒಂದೇ ನಿರ್ಧಿಷ್ಟ ಗುರಿಯೊಂದಿಗೆ ಮುನ್ನುಗ್ಗು. ಪರೀಕ್ಷೆಯ ಮೊದಲು ನಿನ್ನಿಂದ ಎಲ್ಲವೂ ಸಾಧ್ಯ. ಆದರೆ ಪರೀಕ್ಷೆ ನಂತರದಲ್ಲಿ ಅಯ್ಯೋ ನಾನು ಇನ್ನೂ ಹೆಚ್ಚಿನ ಪ್ರಯತ್ನ ಪಟ್ಟಿದ್ದರೆ, ಒಳ್ಳೆಯದಿತ್ತು ಎಂದು ಯೋಚಿಸುವ ಹಾಗಾಗಬಾರದಲ್ಲವೇ...? ನಿನ್ನ ಸಾಮರ್ಥ್ಯ ಏನೆಂದು ನಿನಗೆ ಗೊತ್ತಿದೆ. ಅದರ ಆಧಾರದಲ್ಲಿ ನಿನ್ನ ಗುರಿ ನಿರ್ಧರಿಸು. ನಂತರದಲ್ಲಿ ಪಶ್ಚಾತ್ತಾಪ ಪಡುವ ಬದಲು ಈಗ ನಾನೇನು ಮಾಡಬಲ್ಲೆ ಎಂದು ತಿಳಿದುಕೋ.
       ಕೆಲವೇ ದಿನಗಳಲ್ಲಿ ಪರೀಕ್ಷೆ ಆರಂಭಗೊಳ್ಳಲಿದೆ. ಇರುವ ಸಮಯದಲ್ಲಿ ನಿನ್ನ ನಿರ್ಧಿಷ್ಠ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸು. ಅಂತಿಮ ಹಂತದ ತಯಾರಿ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದರ ಪೂರ್ಣ ಪ್ರಯೋಜನ ಪಡೆ ಮಗು. ಓದಿದ್ದನ್ನು ಪುನರ್ ಮನನ ಮಾಡಿದಲ್ಲಿ ಉತ್ತರ ಬರೆಯಲು ಸಹಕಾರಿ. ಪರೀಕ್ಷೆಗೆ ಹೋಗುವ ಮೊದಲು ಬರೆಯುವ ಪೆನ್, ಪ್ರವೇಶಪತ್ರ ಹಾಗೂ ಆವಶ್ಯಕ ವಸ್ತುಗಳಿರಲಿ, ಬೇಡದ ವಸ್ತುಗಳು ನಿನ್ನ ಜೊತೆ ಇಲ್ಲದಿರಲಿ. ಪರೀಕ್ಷೆಯ ಹಿಂದಿನ ದಿನ ಹೆಚ್ಚು ಹೊತ್ತು ನಿದ್ದೆ ಬಿಡಬೇಡ. ಇದರಿಂದ ಆರೋಗ್ಯದ ಸಮಸ್ಯೆ ಉಂಟಾಗಿ ಇಷ್ಟು ದಿನದ ಪ್ರಯತ್ನಕ್ಕೆ ತೊಂದರೆ ಉಂಟಾಗಬಹುದು ಗಮನದಲ್ಲಿ ಇರಲಿ. ವಿದ್ಯಾರ್ಥಿ ಜೀವನ ಒಂದು ತಪಸ್ಸಿಗೆ ಸಮ. ಚೆನ್ನಾಗಿ ಓದು, ಅರ್ಥ ಮಾಡಿಕೊ, ಗಡಿಬಿಡಿ ಬೇಡ, ಸಮಚಿತ್ತ ನಿನ್ನದಾಗಿರಲಿ, ಪರೀಕ್ಷೆಯನ್ನು ಯಾವುದೇ ಭಯವಿಲ್ಲದೇ ಎದುರಿಸು, ಫಲಿತಾಂಶ ಏನೇ ಆದರೂ ಎದೆಗುಂದದಿರು. ಅದನ್ನು ಸಮಾನ ಚಿತ್ತದಿಂದ ಸ್ವೀಕರಿಸಲು ನಿನ್ನನ್ನು ನೀನೆ ಪರಿವರ್ತಿಸಿಕೊ. ಜೀವನ ಭಗವಂತ ಕೊಟ್ಟ ಬಹುದೊಡ್ಡ ವರ, ಅದನ್ನು ಸಾರ್ಥಕ ಪಡಿಸಿಕೊಳ್ಳುವ ರೂವಾರಿ ನೀನೆ... ಕಂದಾ ನೀನೆ... ನಿನ್ನ ಜೊತೆ ನಿನ್ನ ಹೆತ್ತವರು, ಶಿಕ್ಷಕರು ಮತ್ತ ನಾವೂ ಇದ್ದೇವೆ. ಧೈರ್ಯದಿಂದ ಪರೀಕ್ಷೆ ಎದುರಿಸಿ. ಯಶಸ್ವಿಯಾಗಿ ಅದರ ಸವಿ ನೀನುಂಡು ನಮಗೆಲ್ಲರಿಗೂ ಹಂಚುವೆಯಾ ಕಂದಾ… ನಿನಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾ ನನ್ನ ಪತ್ರ ಮುಗಿಸುವೆ ಮಗುವೇ...
..................................................... ಗೀತಾ ಶೆಟ್ಟಿ
ಉಪನ್ಯಾಸಕರು, ಡಯಟ್ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
Mob: +91 87628 51848
********************************************


Ads on article

Advertise in articles 1

advertising articles 2

Advertise under the article