ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 46
Saturday, March 25, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 46
ನಮಸ್ತೆ ಮಕ್ಕಳೇ... ಚೆನ್ನಾಗಿದ್ದೀರಿ ಅಲ್ವಾ? ಓದಿದಷ್ಟೂ ಮುಗಿಯದ, ಕೇಳಿದಷ್ಟೂ ಕೊನೆಯಾಗದ, ನೋಡಿದಷ್ಟೂ ಬರಿದಾಗದ ಜ್ಞಾನ.. ಮಾಹಿತಿಗಳನ್ನು ತುಂಬಿಸಿಕೊಂಡ ತಲೆಯೊಳಗೆ ನಮ್ಮದೂ ಒಂದಷ್ಟು ಯೋಜನೆ... ಯೋಚನೆಗಳು...!
ಅದ್ಭುತ ಅಲ್ವಾ? Super computer ನಮ್ಮ ಮೆದುಳು. ಅದಕ್ಕೆ ಎಲ್ಲರನ್ನೂ ಎಲ್ಲದನ್ನೂ ಆಲೋಚನೆಗೆ ಹಚ್ಚುವುದು. ಮೊನ್ನೆ ಎಂದಿನಂತೆ ಶಾಲೆಗೆ ಹೋಗ್ತಿದ್ದೆ. ನಮ್ಮ ಕಡೆ ಜೀಪ್ ಗಳು ಹೆಚ್ಚು. ಹಾಗಾಗಿ ಪ್ರತಿ ದಿನವೂ ಜೀಪ್ ಪಯಣ. ಆ ದಿನ ಜೀಪ್ ಗೆ ಹೆಚ್ಚು ಜನ ಆಗಿರ್ಲಿಲ್ಲ. ದಾರಿ ಮಧ್ಯೆ ಇಬ್ಬರು ಸ್ವಲ್ಪ ಪ್ರಾಯದ ಮಹಿಳೆಯರು ನಿಂತಿದ್ರು. ಡ್ರೈವರ್ ಜೀಪ್ ನಿಲ್ಲಿಸೋದೂ.. ಆ ಕಡೆಯಿಂದ ಒಂದು ರಿಕ್ಷಾ ಬಂದು ನಿಲ್ಲೋದು ಸರಿ ಹೋಯ್ತು. ಅವರು ಆಟೋ ರಿಕ್ಷಾದ ಹತ್ತಿರ ಇದ್ರು ಅದಕ್ಕೆ ಹತ್ತಿದ್ರು. ಇದು ನಾನು ಊಹಿಸಿದ ಕಾರಣ. ಜೀಪಿನ ಡ್ರೈವರ್ ಗೆ ಸಿಟ್ಟು ಬಂತು. ಜೀಪಿನಲ್ಲಿ ಬರಲು ಅವರಿಗೆ ಕೈ ಕಾಲು ಸರಿ ಬಗ್ಗೋದಿಲ್ಲ ಅಂದ್ರು. ಇದು ಡ್ರೈವರ್ ಕೊಟ್ಟ ಕಾರಣ. ಆಗ ಸಹ ಪ್ರಯಾಣಿಕರೊಬ್ಬರು "ಹಾಗಲ್ಲ.. ಅದು ಅವರ ಸಂಬಂಧಿಕರ ರಿಕ್ಷಾ ಆಗಿರಬಹುದು" ಅಂದ್ರು. ಅವರಿಬ್ಬರೊಳಗೆ ಚರ್ಚೆ ಮುಂದುವರೆಯುತ್ತಿತ್ತು. ನನಗೆ ಬಹಳ ತಮಾಷೆ ಅನಿಸಿತು. ಬೇರೆ ಜನರು ಇರ್ಲಿಲ್ಲ ಜೀಪಿನಲ್ಲಿ. ಇರ್ತಿದ್ದರೆ ಅವರೂ ಬೇರೆ ಬೇರೆ ಕಾರಣಗಳನ್ನು ಕೊಡ್ತಿದ್ರೇನೋ...!
ಒಂದು ಸಂದರ್ಭದ ಬಗ್ಗೆ ವಾಸ್ತವ ಗೊತ್ತಿಲ್ಲದೆ ಎಷ್ಟೊಂದು ಕಥೆಗಳು ಹುಟ್ಟುತ್ತವೆ. ಶಾಲೆಯ ಗೆಳತಿಯೊಬ್ಬಳಿಗೆ ತುಂಬಾ ಸಣ್ಣದರಿಂದಲೇ ಕೆಮ್ಮು.. ಶೀತ.. ಬಹಳ ಕಡೆ ಮದ್ದು ಮಾಡಿದ್ರೂ ಪೂರ್ತಿ ಕಡಿಮೆಯಾಗಿರಲಿಲ್ಲ. ಆಗ, ವಯಸ್ಸಿನಲ್ಲಿ ತುಂಬಾ ದೊಡ್ಡವರೊಬ್ಬರು, "ನಿನಗೆ ಕೊರೋನಾ ಇರ್ಬಹುದು.. ಹೋಗಿ ಮೊದಲು ಪರೀಕ್ಷೆ ಮಾಡಿಸಿಕೋ" ಅಂದ್ರಂತೆ.
ತುಂಬಾ ಬೇಜಾರು ಮಾಡಿಕೊಂಡ್ಲು. ನಿಮ್ಗೆ ಮೊನ್ನೆ ಹೇಳಿದ್ನಲ್ಲಾ... ಬುದ್ಧನ ಕಥೆ... ಅದನ್ನೇ ಹೇಳಿದೆ. ಅವಳ ಮನೆಯವರಿಗೂ ತುಂಬಾ ನೊಂದುಕೊಂಡ್ರು. ಅವರು ಹಾಗೆ ಹೇಳ್ಬಾರ್ದಿತ್ತು. ಅಷ್ಟು ಗೊತ್ತಾಗೋದಿಲ್ವಾ ಅವರಿಗೆ...? ಅವರ ಮಕ್ಕಳಿಗೆ ಹಾಗೆ ಹೇಳ್ತಿದ್ರೆ ಅವರಿಗೂ ಬೇಸರ ಆಗ್ತಿರ್ಲಿಲ್ವಾ? .....ಬೇಸರದಿಂದ ಇನ್ನೂ ಉದ್ದುದ್ದದ ಮಾತುಗಳು ಬಂದು ಹೋದವು. ಹೌದಲ್ವಾ? ನಾವೂ ನಮ್ಗೆ ಯಾರಾದರೂ ಏನಾದರೂ ಹೇಳಿದಾಗ ಇಂತಹದ್ದೇ ಅಸಮಾಧಾನಗಳನ್ನು ಬೇರೆಯವರಲ್ಲಿ ಹೊರ ಹಾಕ್ತೇವೆ.
ಅವರು ಹಾಗೆ ಹೇಳಿದ್ದು ತಪ್ಪು...! ಅಷ್ಟು ದೊಡ್ಡವರಾದ್ರೂ ಹೇಗೆ ಮಾತನಾಡ್ಬೇಕು ಅಂತಾ ತಿಳಿದುಕೊಳ್ಳದಿರುವುದು ಅವರ ಸಮಸ್ಯೆ. ಅವರ ದೌರ್ಬಲ್ಯ! ಹೌದು. ಅವರ ದೌರ್ಬಲ್ಯಕ್ಕೆ ನಾವ್ಯಾಕೆ ಅಳ್ಬೇಕು! ಚೆನ್ನಾಗಿದೆ ಅಲ್ವಾ ಈ ಮಾತು! ಮಂಗಳೂರಿನ ಸ್ವರೂಪದ ಗೋಪಾಡ್ಕರ್ ಸರ್ ಇದನ್ನೇ ಹೇಳ್ತಿರ್ತಾರೆ. ನೀವೂ ಪ್ರಯೋಗ ಮಾಡಿ ನೋಡಿ. ಯಾರೋ ಬೈದ್ರು... ಏನೋ ಅಂದ್ರು... ಅಂತೆಲ್ಲಾ ಬದುಕೇ ಮುಗಿದು ಹೋದಂತೆ ಅತ್ತುಕೊಂಡು ಪರಿಸ್ಥಿತಿಯನ್ನು ಅಡಿಮೇಲು ಮಾಡುವ ಬಹಳಷ್ಟು ಮಂದಿ ನಮ್ಮ ನಡುವೆ! ನಾವೂ ಎಷ್ಟೋ ಸಲ ಯಾರದೋ ಮಾತಿಗೆ ಬೇಜಾರು ಮಾಡ್ಕೊಂಡಿರ್ತೇವೆ. ಈಗ ಆಲೋಚನೆ ಮಾಡಿ!
ನಮ್ಮ ಹುಡುಗಿಯ ಮುಖದಲ್ಲಿಯೂ ನಗು ಬಂತು! ಎಂದಿಗಿಂತ ಆರೋಗ್ಯಪೂರ್ಣವಾದ ನಗು ಅದು. ನಿಮ್ಮ ಮಾತುಗಳನ್ನೂ ಹಂಚಿಕೊಳ್ತೀರಿ ಅಲ್ವಾ...?
ಕಳೆದ ಬಾರಿಯ ಪತ್ರಕ್ಕೆ ಎಷ್ಟೊಂದು ಅಂದದ ಪ್ರತಿಕ್ರಿಯೆಗಳು. ಹೊಸ ಗೆಳೆಯ ಗೆಳತಿಯರೂ ಬರೆದಿದ್ದಾರೆ. ಭವ್ಯಶ್ರೀ, ಶಿಶಿರ್ ಎಸ್, ಶ್ರಾವ್ಯ, ಪ್ರಿಯಾ, ರಮ್ಯಾ ಶ್ರೀನಿವಾಸ್, ಅಕ್ಷರ ಪಟ್ವಾಲ್, ಹೃದ್ವಿ ಕೆ, ಧನ್ವಿ ರೈ, ಸಿಂಚನಾ ಶೆಟ್ಟಿ, ನಿಭಾ, ಧೀರಜ್ ಕೆ ಆರ್, ಲಹರಿ ಜಿ. ಕೆ ....ನಿಮ್ಮೆಲ್ಲರಿಗೂ ಪ್ರೀತಿಯ ವಂದನೆಗಳು.
ಈ ಬಾರಿಯೂ ನಿಮಗಾಗಿ ಕಾಯ್ತಾ ಇರ್ತೇನೆ...! ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************