-->
ಪರೀಕ್ಷಾ ಸಿದ್ಧತೆ : ಸಣ್ಣಪುಟ್ಟ ಸಲಹೆಗಳು

ಪರೀಕ್ಷಾ ಸಿದ್ಧತೆ : ಸಣ್ಣಪುಟ್ಟ ಸಲಹೆಗಳು

ಲೇಖಕರು : ಡಾ. ಎನ್. ಶಿವಪ್ರಕಾಶ್
ಉಪನ್ಯಾಸಕರು,
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
   
        ಪರೀಕ್ಷೆಗಳನ್ನು ಎದುರಿಸುವುದು ಬಹಳಷ್ಟು ಮಂದಿಗೆ ಕಠಿಣ ಸವಾಲು. ಕೆಲವರಿಗೆ ಭಯ, ಮತ್ತೆ ಕೆಲವರಿಗೆ ಏನೋ ಆತಂಕ. ಕಲಿಯಲು ತುಂಬಾ ಇರುತ್ತದೆ , ಸಾಕಷ್ಟು ಯೋಜಿತವಾಗಿ ಸಂಘಟಿತವಾಗಿ ಇರಬೇಕಾಗುತ್ತದೆ, ಓದಿರುವುದನ್ನು ನೆನಪಿನಲ್ಲಿಡಬೇಕು.... ಹೀಗೆ ಹಲವು ಸವಾಲುಗಳಿರುತ್ತದೆ. ಸವಾಲುಗಳನ್ನು ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ...? ಎಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡಬಹುದು.
     ನಮ್ಮ ಶಾಲಾ ಜೀವನದಲ್ಲಿ ಅತಿ ಹೆಚ್ಚು ಸಕ್ರಿಯವಾಗಿ ಅವಧಿಯನ್ನು ನಾವು ಕಳೆಯುವುದು ಶಾಲೆಯಲ್ಲಿ. ಬೆಳಗ್ಗೆ 9.30 ರಿಂದ ಸಂಜೆ 4:30 ಗಂಟೆಯವರೆಗೆ ಅಂದರೆ ಸುಮಾರು 7 ಗಂಟೆ ಕಾಲ ನಮ್ಮ ಸಮಯವನ್ನು ಶಾಲೆಯಲ್ಲಿ ಕಲಿಯುತ್ತೇವೆ. ಈ ಅವಧಿಯನ್ನು ತಪ್ಪಿಸದೆ ಶಾಲೆಯಲ್ಲಿ ಕಳೆಯಬೇಕು ಮತ್ತು ಕಲಿಯಬೇಕು. ತರಗತಿಯಲ್ಲಿ ಶಿಕ್ಷಕರು ಕಲಿಸುವ ವಿಷಯವನ್ನು ಗಮನಕೊಟ್ಟು ಕಲಿಯಬೇಕು. ಅವರು ಹೇಳುವ ಅಂಶಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ನೋಟು ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಳ್ಳುವುದು ಎಂದರೆ ಕಲಿಕೆಯ ಕಡೆಗೆ ಗಮನ ಕೊಡುತ್ತಿದ್ದೀರಿ ಎಂದು ಅರ್ಥ. ಯಾವುದೇ ವಿಷಯ ಅರ್ಥವಾಗದಿದ್ದರೆ ತಕ್ಷಣ ನನಗೆ ಅರ್ಥವಾಗಿಲ್ಲ ಪುನ: ಹೇಳಿಕೊಡಿ ಎಂದರೆ ಶಿಕ್ಷಕರು ಹೇಳಿಕೊಡುತ್ತಾರೆ. ಆದ್ದರಿಂದ ತರಗತಿ ಸಮಯದಲ್ಲಿ ತರಗತಿಯಲ್ಲಿ ಹೆಚ್ಚಿನ ಸಮಯವನ್ನು ಸಕ್ರಿಯವಾಗಿ ಕಳೆಯುವುದು ಪರೀಕ್ಷೆ ನಿಟ್ಟಿನಿಂದ ಸಹಕಾರಿಯಾದ ಅಂಶವಾಗಿದೆ .
       ಸಹಪಾಠಿಗಳ ಜೊತೆಗೆ ಕಲಿಯುವುದು , ಸಣ್ಣ ಸಣ್ಣ ಕಲಿಕಾ ಗುಂಪುಗಳನ್ನು ರಚಿಸಿ ಪರಸ್ಪರ ಚರ್ಚಿಸುವುದು , ಕಲಿಯುವುದು ಮಾಡಿದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಜೊತೆಗೂಡಿ ಕೆಲಸ ಮಾಡುವುದು, ಕಲಿಯುವುದು, ಪರಸ್ಪರ ಸಹಾಯ ಮಾಡುವುದು ಕಲಿಕೆಯಲ್ಲಿ ಮುಂಬರಲು ಸಹಕರಿಸುವುದು ಪ್ರಯೋಜನಕಾರಿಯಾಗಿದೆ.
      ಶಿಕ್ಷಕರ ಸಹಾಯ ಪಡೆಯುವುದು. ಕ್ಲಿಷ್ಟವೆನಿಸಿದ ವಿಷಯಗಳ ಬಗ್ಗೆ ನಿಮ್ಮ ಶಿಕ್ಷಕರಲ್ಲಿ ಚರ್ಚೆ ಮಾಡಿ ಸುಲಭವಾಗಿ ಸರಳವಾಗಿ ಬರೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸಣ್ಣಸಣ್ಣ ಮಿಂಚು ಪಟ್ಟಿಗಳನ್ನು ತಯಾರಿಸಿ . ಪ್ರತಿಯೊಂದು ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಆ ಪರಿಕಲ್ಪನೆಗಳು ವ್ಯಾಖ್ಯೆಗಳು ಮುಖ್ಯಾಂಶಗಳನ್ನು ಒಳಗೊಂಡ ಮಿಂಚು ಪಟ್ಟಿಯನ್ನು ತಯಾರಿಸಿ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಈ ಮಿಂಚುಪಟ್ಟಿಗಳು ನಿಮಗೆ ತುಂಬಾ ಸಹಾಯ ಮಾಡುತ್ತದೆ. ನೆನಪಿನಲ್ಲಿಟ್ಟುಕೊಳ್ಳಲು ಇದು ಸಹಕಾರಿ. ಕಲಿಯಲು ಸೂಕ್ತವಾದ ಸ್ಥಳವನ್ನು ಆಯ್ದುಕೊಳ್ಳಿ . ಹೆಚ್ಚು ಸದ್ದು-ಗದ್ದಲಗಳಿಲ್ಲದ ಟಿವಿ ಮೊಬೈಲ್ ಗಳಿಂದ ದೂರವಿರುವ ಸ್ಥಳವನ್ನು ಆಯ್ದುಕೊಳ್ಳಿ . ಶಾಲಾ ಗ್ರಂಥಾಲಯ, ಮರಗಿಡಗಳ ನೆರಳಿನಲ್ಲಿ , ಶಾಂತವಾದ ತರಗತಿ ಕೊಠಡಿಯಲ್ಲಿ ಕುಳಿತು ಕೊಂಡು ಕಲಿಯಿರಿ. ಕಲಿಕಾ ವಾತಾವರಣ ಇರುವಲ್ಲಿ ನಿದ್ದೆ ಬಾರದು. ಇಲ್ಲದಿದ್ದಲ್ಲಿ ಮಲಗುವ ಎಂದೆನಿಸೀತು. ಆದಕಾರಣ ಕಲಿಕೆಗೆ ಪೂರಕವಾದ ಸ್ಥಳವು ಕೂಡ ಪರೀಕ್ಷಾ ಸಿದ್ಧತೆಯ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. 
     ವಿಷಯ ಬದಲಿಸಿ. ಒಂದೇ ವಿಷಯವನ್ನು ಸುದೀರ್ಘಕಾಲ ಓದಿದರೆ ನಿಮ್ಮ ಏಕಾಗ್ರತೆಗೆ ತೊಡಕಾಗುತ್ತದೆ. ಪ್ರತಿ 30 ನಿಮಿಷಕ್ಕೊಮ್ಮೆ ವಿಷಯವನ್ನು ಬದಲಿಸಿ. ಆಗಾಗ ಕಷ್ಟವೆನಿಸುವ ವಿಷಯವನ್ನು ಮತ್ತೆ ಮತ್ತೆ ಓದಿಕೊಂಡು ಕಲಿಯಿರಿ. ಗಟ್ಟಿಯಾಗಿ ಓದಿ. ಮತ್ತೆ ಮತ್ತೆ ಓದಿ ಮತ್ತು ಪುನರ್ ಮನನ ಮಾಡಿ. ಸಾಮಾನ್ಯವಾಗಿ ನಾವು ಓದಿರುವ ವಿಷಯ ಒಂದು ದಿನಗಳೊಳಗೆ ಮರೆತುಹೋಗುತ್ತದೆ. ಆದ್ದರಿಂದ ಮತ್ತೆ ಮತ್ತೆ ಓದಿ ಅರ್ಥೈಸಿಕೊಳ್ಳುವುದು ಅವಶ್ಯಕ.
      ಆಯಾ ದಿನ ಓದಿರುವ ಅಂಶಗಳನ್ನು ಸಂಜೆ ವೇಳೆಯಲ್ಲಿ ಪುನರಾವಲೋಕನ ಮಾಡುವುದು ಒಳಿತು. ಮಾಡಿಟ್ಟಿರುವ ಟಿಪ್ಪಣಿಯನ್ನು ಮತ್ತೆ ಮತ್ತೆ ಓದಿ ಅಥವಾ ಓದಿರುವ ಅಂಶಗಳ ಸಾರಾಂಶ ಬರೆದಿಟ್ಟುಕೊಳ್ಳಿ. ಆಗ ಇಡೀ ಅಧ್ಯಾಯವನ್ನು ಓದುವ ಅವಶ್ಯಕತೆ ಬರುವುದಿಲ್ಲ. 
       ಕಲಿಯುವ ಸಮಯವನ್ನು ನಿಗದಿಪಡಿಸಿಕೊಳ್ಳಿ. ಮನೆಕೆಲಸ , ಮುಂತಾದ ಚಟುವಟಿಕೆಗಳಿಗೆ ಕಲಿಕಾ ಅವಧಿಗಳನ್ನು ಸಾಕಷ್ಟು ಮುಂಚಿತವಾಗಿ ಯೋಜಿತವಾಗಿ ಮಾಡಿಟ್ಟುಕೊಳ್ಳಿ. ಎಲ್ಲಾ ವಿಷಯಗಳನ್ನು ಪ್ರತಿದಿನ ಸ್ವಲ್ಪ ಸ್ವಲ್ಪವಾದರೂ ಕಲಿಯುವುದು ಒಳ್ಳೆಯದು. ಕಲಿಕಾ ವಿಷಯಗಳನ್ನು, ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ಚಾರ್ಟ್ ನಲ್ಲಿ ಡಯಾಗ್ರಾಮ್ ರೂಪದಲ್ಲಿ ಬರೆದಿಟ್ಟು ಮುಖ್ಯಾಂಶಗಳು ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಕೊಳ್ಳುವಂತೆ ಮಾಡಿ.
       ಅವಶ್ಯಕತೆಯಿರುವ ಕಷ್ಟವೆನಿಸುವ ಪರಿಕಲ್ಪನೆಗಳನ್ನು ಕಲಿಕಾಂಶಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುವಂತೆ ಶಿಕ್ಷಕರ ಸಹಾಯವನ್ನು ಸಂಕೋಚ ಪಡದೆ ಪಡೆದುಕೊಳ್ಳಿ. ಶಿಕ್ಷಕರು ಸದಾ ನಿಮ್ಮ ಸಹಾಯಕ್ಕೆ ಸಿದ್ಧರಾಗಿರುತ್ತಾರೆ. ಅರ್ಥೈಸಿಕೊಳ್ಳುವುದಕ್ಕೆ ಗಮನಕೊಡಿ. ಕಂಠಪಾಠ ಮಾಡುವ ಮೊದಲಿಗೆ ವಿಷಯವನ್ನು ಅರ್ಥೈಸಿಕೊಳ್ಳಿ. ಇದರಿಂದ ಅಂಶಗಳನ್ನು ಬರೆದುಕೊಳ್ಳಲು ಸುಲಭವಾಗುವುದು.
      ರಿವಿಜನ್ ತಪ್ಪಿಸಿಕೊಳ್ಳಬೇಡಿ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಶಿಕ್ಷಕರು ಎಲ್ಲಾ ಪ್ರಶ್ನೆಗಳನ್ನು ಮತ್ತು ಅದರ ಉತ್ತರಗಳನ್ನು ತರಗತಿಯಲ್ಲಿ ಚರ್ಚೆಯನ್ನು ಮಾಡುತ್ತಾರೆ. ಕ್ಲಿಷ್ಟವೆನಿಸುವ ಅಂಶವನ್ನು ಮತ್ತೊಮ್ಮೆ ವಿವರಿಸುತ್ತಾರೆ. ಸರಳವಾಗಿ ಬರೆಯುವುದು ಹೇಗೆ...? ಎಂದು ಹೇಳಿಕೊಡುತ್ತಾರೆ. ಪರೀಕ್ಷೆ ಕಡೆಗೆ ಗಮನ ಕೇಂದ್ರೀಕರಿಸಿ ಟಿವಿ ಸೀರಿಯಲ್ ಗಳು, ಮೊಬೈಲ್, ಕ್ರಿಕೆಟ್, ಕಬಡ್ಡಿ ಮುಂತಾದುವುಗಳಿಂದ ನಿಮ್ಮ ಮನಸ್ಸನ್ನು ವಿಚಲಿತಗೊಳಿಸದಂತೆ ದೂರವಿರಿ. 
     ಸಾಕಷ್ಟು ವಿಶ್ರಾಂತಿ ಪಡೆಯಿರಿ. ಪರೀಕ್ಷೆಗೆ ಸಿದ್ಧತೆ ಮಾಡುವುದು ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಆಯಾಸವನ್ನುಂಟು ಮಾಡುತ್ತದೆ. ಮನಸ್ಸಿಗೆ ಹಾಗೂ ಶರೀರಕ್ಕೆ ಸಾಕಷ್ಟು ವಿಶ್ರಾಂತಿ ನೀಡಿ. 30 ನಿಮಿಷ ನಿರಂತರವಾಗಿ ಕಲಿತರೆ ಕನಿಷ್ಠ ಹತ್ತು ನಿಮಿಷ ಬಿಡುವು ಕೊಡಿ. ಸ್ವಲ್ಪ-ಸ್ವಲ್ಪ ಅವಧಿಯಲ್ಲಿ ಕಲಿಯುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅತ್ತಿತ್ತ ನಡೆಯಿರಿ. ಶುದ್ಧ ಗಾಳಿ ಸೇವಿಸಿ. ಸಣ್ಣಪುಟ್ಟ ವ್ಯಾಯಾಮ ಮಾಡುವುದು, ಯೋಗ ಮಾಡುವುದರಿಂದ ನಮ್ಮ ರಕ್ತಸಂಚಾರ ಮಿದುಳಿಗೆ ಹೆಚ್ಚಾಗುವುದು. ಇದರಿಂದಾಗಿ ಓದು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಏಕಾಗ್ರತೆ ಹೆಚ್ಚುತ್ತದೆ.
        ನಿಮ್ಮ ಯೋಗಕ್ಷೇಮವನ್ನು ನೀವೇ ನೋಡಿಕೊಳ್ಳಿ. ಪರೀಕ್ಷೆ ಮುಗಿಯುವವರೆಗೆ ಸಿಕ್ಕಸಿಕ್ಕದ್ದನ್ನು ತಿನ್ನಬೇಡಿ. ಬೀದಿ ಬದಿಯ ಆಹಾರವನ್ನು ತ್ಯಜಿಸಿ. ಐಸ್ ಕ್ಯಾಂಡಿ ಐಸ್ ಕ್ರೀಮ್ ಗಳನ್ನು ತಿನ್ನದಿರುವುದು ಒಳಿತು. ಸಮತೋಲನ ಆಹಾರವನ್ನು ಸೇವಿಸಿ. ಹಣ್ಣು ತರಕಾರಿ ಹಾಲು ಯುಕ್ತ ಆಹಾರಗಳನ್ನು ಸಾಕಷ್ಟು ಸೇವಿಸಿ ಮತ್ತು ಸಾಕಷ್ಟು ನಿದ್ದೆ ಮಾಡಿ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಿದ್ದೆಗೆಟ್ಟು ಓದುವುದು ಹೆಚ್ಚಿನ ಆಯಾಸ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಆದುದರಿಂದ ಪ್ರತಿದಿನ ಹೆಚ್ಚಿನ ಸಮಯವನ್ನು ಓದಲು ಬಳಸಿ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಾಡಿದ ಟಿಪ್ಪಣಿಯನ್ನು ಮಾತ್ರ ಓದಿಕೊಂಡು ಕೊನೆ ಕ್ಷಣದ ಒತ್ತಡದಿಂದ ಪಾರಾಗಬಹುದು .
      ಪ್ರಶ್ನೆಪತ್ರಿಕೆಯನ್ನು ಮತ್ತೆ ಮತ್ತೆ ನೋಡಿ. ಬಹು ಆಯ್ಕೆ ಪ್ರಶ್ನೆಗಳು ವಸ್ತುನಿಷ್ಠ ಪ್ರಶ್ನೆಗಳು, ಕಿರು ಉತ್ತರ ಹಾಗೂ ದೀರ್ಘ ಉತ್ತರದ ಪ್ರಶ್ನೆಗಳನ್ನು ಓದಿ. ಹಾಗೂ ಅವುಗಳಿಗೆ ಉತ್ತರಿಸಬೇಕಾದ ರೀತಿಯನ್ನು ಸರಿಯಾಗಿ ತಿಳಿದುಕೊಳ್ಳಿ. ಪ್ರಶ್ನೆ ಪತ್ರಿಕೆಯ ನೀಲ ನಕಾಶೆ ಅರ್ಥೈಸಿಕೊಳ್ಳಿ. ಮತ್ತೊಬ್ಬರಿಗೆ ಕಲಿಸಿ. ನಿಮಗೆ ಅರ್ಥ ವಾಗಿರುವುದನ್ನು ನಿಮ್ಮ ಸಹಪಾಠಿಗೆ ಕಲಿಸಲು ಪ್ರಯತ್ನಿಸಿ. ಇದರಿಂದಾಗಿ ಅವರಿಗೆ ಲಾಭವಾಗುವ ಜೊತೆಗೆ ಕಲಿಕೆ ನಿಮಗೂ ಗಟ್ಟಿಯಾಗುತ್ತದೆ. ಯಾವುದೇ ಒಂದು ಪರಿಕಲ್ಪನೆಯನ್ನು ನೀವು ಮತ್ತೊಬ್ಬರಿಗೆ ವಿವರಿಸುವುದರಿಂದ ಆಗ ವಿಷಯ ನಿಮಗೆ ಹೆಚ್ಚು ಸ್ಪಷ್ಟವಾಗುತ್ತದೆ. ಕಲಿಯಬೇಕಾದ ವಿಷಯಗಳನ್ನು ಸಣ್ಣ ಸಣ್ಣ ತುಣುಕುಗಳಾಗಿ ಮಾಡಿಟ್ಟುಕೊಳ್ಳಿ. ಇದು ನೆನಪಿನಲ್ಲಿಟ್ಟುಕೊಳ್ಳಲು ಸುಲಭ ವಿಧಾನ.
      ನಿಮ್ಮ ಜ್ಞಾನವನ್ನು ನೀವೇ ಪರೀಕ್ಷಿಸಿಕೊಳ್ಳಿ. ನೀವು ಓದಿರುವ ವಿಷಯಗಳು ಎಷ್ಟರಮಟ್ಟಿಗೆ ಕಲಿತಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಣ್ಣಪುಟ್ಟ ಪರೀಕ್ಷೆಗಳನ್ನು ನೀವೇ ಅಥವಾ ನಿಮ್ಮ ಕಲಿಕಾ ಗುಂಪಿನ ಜೊತೆಗೆ ಮಾಡಿಕೊಳ್ಳಿ. ಎಲ್ಲಾ ವಿಷಯಗಳನ್ನು ಓದಿ ಮುಗಿಸಿದಲ್ಲಿ ನೀವು ಆಟ, ಧ್ಯಾನ, ಚಿತ್ರ, ಸಂಗೀತದ ಮೂಲಕ ಆತ್ಮವಿಶ್ವಾಸ ಹೆಚ್ಚಿಸಬಹುದು. 
       ನಿಮ್ಮ ಪರೀಕ್ಷಾ ವಿಷಯಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಪ್ರಶ್ನೋತ್ತರಗಳು ನಿಮ್ಮಲ್ಲಿರುವುದನ್ನು ಖಾತ್ರಿಪಡಿಸಿ. ಮೊದಲ ಅಧ್ಯಾಯದಿಂದಲೇ ಓದಲು ಆರಂಭಿಸಿ. ನಿಮ್ಮೊಳಗೆ, ನೀವು ಹಾಗೂ ನಿಮ್ಮ ಸ್ನೇಹಿತರು ಪದೇಪದೇ ಕ್ವಿಜ್ ಮಾಡಬಹುದು. ಪ್ರತಿದಿನ ಓದಿ. ಸಾಧ್ಯವಾದರೆ ಬೆಳಿಗ್ಗೆದ್ದು ಓದಲು ಪ್ರಯತ್ನಿಸಿ. ಮನೆಯಲ್ಲಿ ಓದುವ ವಾತಾವರಣ ಇಲ್ಲದಿದ್ದಲ್ಲಿ ಅಧ್ಯಾಪಕರ ಸಹಾಯ ಪಡೆದು ಶಾಲೆಯಲ್ಲಿ ಓದಬಹುದು. 
      ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿ ಉತ್ತರಿಸಲು ಪ್ರಯತ್ನಿಸಿ. ಪ್ರತಿದಿನದ ಕಲಿಕೆಗೆ ಗುರಿಯನ್ನು ನೀವೇ ನಿಗದಿಪಡಿಸಿ. ನೀವು ಕಲಿತಿರುವ ವಿಷಯವನ್ನು ನಿಮ್ಮ ಸ್ನೇಹಿತರಿಗೆ ವಿವರಿಸಲು ಪ್ರಯತ್ನಿಸಿ. ನಿಮ್ಮ ಕಲಿಕಾ ಶೈಲಿಗೆ ತಕ್ಕಂತೆ ಕಲಿಯಿರಿ. ಕೆಲವರು ಗಟ್ಟಿಯಾಗಿ ಓದಿ ಕಲಿಯುತ್ತಾರೆ. ಕೆಲವರು ಮೌನವಾಗಿ ಓದಿ ಕಲಿಯುತ್ತಾರೆ. ಕೆಲವರು ಬರೆದು ಕಲಿಯುತ್ತಾರೆ. ನಿಮಗೆ ಯಾವುದು ಸೂಕ್ತವೆನಿಸುತ್ತದೆ ಆ ತಂತ್ರವನ್ನು ಬಳಸಿ 
      ಪರೀಕ್ಷೆಯ ಮುಂಚಿತವಾಗಿ ಕಲಿಯಬೇಕಾದ ಅಂಶಗಳ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲಾ ನೋಟ್ಸ್ ಗಳು ಪ್ರಶ್ನೋತ್ತರಗಳು ಸಿದ್ಧವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿ. ರಾತ್ರಿ ಸಾಕಷ್ಟು ನಿದ್ದೆ ಮಾಡಿ. ಅನಾವಶ್ಯಕವಾಗಿ ದೂರದೂರಿಗೆ ಪ್ರಯಾಣ ಮಾಡಬೇಡಿ. ಮದುವೆ, ಧಾರ್ಮಿಕ ಸಭೆ, ಸಮಾರಂಭಗಳಿಗೆ ಹಾಜರಾಗುವುದನ್ನು ತಾತ್ಕಾಲಿಕವಾಗಿ ಪರೀಕ್ಷೆ ಮುಗಿಯುವವರೆಗೆ ಮುಂದೂಡಿ. ಕನಿಷ್ಠ 7 ಗಂಟೆ ನಿದ್ದೆ ಮಾಡಿ ಸಾಕಷ್ಟು ನೀರು ಕುಡಿಯಿರಿ. ಆರೋಗ್ಯದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
     ಪರೀಕ್ಷೆ ಎನ್ನುವುದು ಜೀವನದ ಅಂತಿಮ ಮಾನದಂಡವಲ್ಲ. ಅದನ್ನು ಒಂದು ಹಬ್ಬದಂತೆ ಸ್ವೀಕರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ.
ಖುಷಿಯಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆ ಸುಲಭವಾಗಲಿ. ಎಲ್ಲರಿಗೂ ಶುಭವಾಗಲಿ
................................ ಡಾ. ಎನ್. ಶಿವಪ್ರಕಾಶ್
ಉಪನ್ಯಾಸಕರು,
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*****************************************


Ads on article

Advertise in articles 1

advertising articles 2

Advertise under the article