-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 45

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 45

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 45


           ನಮಸ್ತೆ ಮಕ್ಕಳೇ.... ಹೇಗಿದ್ದೀರಿ?
ಕಲಿಯುವ ಹಾದಿಯಲ್ಲಿ ಬೆಳೆಯುತ್ತಿರುವ ಪ್ರತಿ ಅವಕಾಶದಲ್ಲೂ ಖುಷಿಯಾಗಿದ್ದೀರಾ...?
      ಪರೀಕ್ಷೆಗಾಗಿ ಓದುವುದು, ಅಂಕ ಗಳಿಕೆಗಾಗಿ ಓದುವುದು.... ಬದುಕಿಗೊಂದು ಗುರಿ... ಅದರೆಡೆಗೆ ಸಾಗಲು ಈ ಪ್ರಯತ್ನ ಅಲ್ವಾ...? 
     ನಮ್ಮೂರಲ್ಲಿ ಒಬ್ಬ ಬಿ.ಕಾಂ ಆದ ಹುಡುಗ. ಡಿಗ್ರಿ ಪಡೆದುಕೊಂಡಿದ್ದಾನೆ... ಡಿಗ್ರಿಯ certificate ಗೆ ಸರಿಯಾದ ಕೆಲಸಗಳನ್ನು ಹುಡುಕಿದ. ಎಲ್ಲೂ ಸಿಗಲಿಲ್ಲ. ಕೊನೆಗೊಂದು ಪಂಚರ್ ಅಂಗಡಿ ಹಾಕಿದ. 10 ರೂಪಾಯಿಯಿಂದ ಆರಂಭವಾದ ಆದಾಯ...! ದಿನಕ್ಕೆ ಇಪ್ಪತ್ತು ಸಾವಿರದಷ್ಟು ಸಂಪಾದಿಸಿದ್ದಾರೆ. ಈಗ ನಾಲ್ಕು ಹಾರ್ಡ್ ವೇರ್ ಅಂಗಡಿಗಳ ಮಾಲಿಕ...! ಸಂತೋಷದ ಜೀವನ...! ಇದು ಬದುಕು..!
       ನಿಮಗೆ J.K.Rowling ಗೊತ್ತಾ? ಹ್ಯಾರಿ ಪಾಟರ್ ಗೊತ್ತಿದೆ ಅಲ್ವಾ? ಮಕ್ಕಳ ಮನಗೆದ್ದ ಕಥಾ ಸರಣಿ.....! J K Rowling ಒಬ್ಬ ಹೆಣ್ಣುಮಗಳು...! ಜುಲೈ 31, 1965 ರಲ್ಲಿ ಇಂಗ್ಲೆಂಡ್ ನಲ್ಲಿ ಜನನ. ಈಗ 58 ವರ್ಷ!
     ಅವಳ ಹೆಸರಿನಲ್ಲಿ ಇವಳು ಹೆಣ್ಣುಮಗಳೆಂದು ಗೊತ್ತಾಗುವುದಿಲ್ಲ. ಹೆಣ್ಣು ಎಂದು ಗೊತ್ತಾದರೆ ಬರಹಗಳು ತಿರಸ್ಕರಿಸಲ್ಪಡುತ್ತವೆ ಎನ್ನುವ ಕಾರಣಕ್ಕೆ! ಶಾಲೆಯಲ್ಲಿ ಶಿಕ್ಷಕರೊಬ್ಬರು ಅವಳಲ್ಲಿನ ಭಾಷಾ ಸಾಮರ್ಥ್ಯವನ್ನು ಗುರುತಿಸಿದರು. ಬರೆವಣಿಗೆಯ ಸಾಧ್ಯತೆಗೆ ಪ್ರೋತ್ಸಾಹಿಸಿದರು. ನಂತರ ಎರಡು ಭಾಷೆಗಳನ್ನು ಕಲಿತು ಭಾಷಾ ಅನುವಾದಕಿಯಾಗಿ ದುಡಿದಳು. ಅನೇಕ ಸಣ್ಣ ಸಣ್ಣ ಲೇಖನಗಳನ್ನು ಆರಂಭದಲ್ಲಿ ಬರೆಯುತ್ತಿದ್ದಳು. ಈ ಸಂದರ್ಭದಲ್ಲಿ ಹ್ಯಾರಿ ಪಾಟರ್ ಕಥೆ ಬರೆಯಲು ಆರಂಭಿಸಿದಳು. ಅದಾಗಲೇ ಅನಾರೋಗ್ಯ ಪೀಡಿತ ಅಮ್ಮ ಮರಣ ಹೊಂದಿದರು. ಆ ದಿನಗಳಲ್ಲಿ ಬರೆಯುವ ವೇಗವೂ ಹೆಚ್ಚಾಯಿತು. ಮದುವೆಯಾಯಿತು. ಗಂಡನಿಂದ ಶೋಷಣೆಗೆ ಒಳಪಟ್ಟು ಮಗುವಿನ ಜೊತೆ ಮತ್ತೆ ಊರು ಸೇರಿದಳು. ಗೆಳತಿಯ ಸಹಾಯದಿಂದ ಒಂದು ಮನೆ ಸಿಕ್ಕಿತು.
ಮತ್ತೆ ಬರೆದಳು.....! ಹ್ಯಾರಿ ಪಾಟರ್ ಸರಣಿಗಳು ಸಿದ್ಧಗೊಂಡವು. ಪ್ರಕಟಣೆಗಾಗಿ ಪ್ರಕಾಶಕರನ್ನು ಹುಡುಕಿದಳು. ಮೊದಲು ಸಿಕ್ಕಿದ ಪ್ರಕಾಶಕರು ಮಕ್ಕಳ ಸಾಹಿತ್ಯ ಬರೆದು ದುಡ್ಡು ಮಾಡಲು ಸಾಧ್ಯವೇ.....? ಎಂದು ಪುಸ್ತಕವನ್ನು ಅವಳ ಮುಖಕ್ಕೆ ಎಸೆದು‌ ಅವಮಾನಿಸಿದರು..! ವ್ಯಂಗ್ಯವಾಡಿದರು...! ಹೀಗೆ ಒಂದೆರಡಲ್ಲ... ಹನ್ನೆರಡು ಪ್ರಕಾಶಕರೂ ತಿರಸ್ಕರಿಸಿದರು...! 
       ‌ಕೊನೆಗೊಬ್ಬರು ಪ್ರಕಾಶಕರ ಬಳಿ ಪುಸ್ತಕವನ್ನೊಪ್ಪಿಸಿದಳು. Rowling....! ಅವರು ಅದನ್ನು ಮನೆಯಲ್ಲಿಟ್ಟಿದ್ದರು. ಅವರ ಮಗ ಒಂದೇ ಸಮನೆ ಅತ್ಯಂತ ಕುತೂಹಲದಿಂದ ಹ್ಯಾರಿ ಪಾಟರ್ ನ್ನು ಓದತೊಡಗಿದ. ಮಗನ‌ ಆಸಕ್ತಿ ಆ ಪ್ರಕಾಶಕರಿಗೆ ಆಶ್ಚರ್ಯವನ್ನುಂಟುಮಾಡಿತು! ಭರವಸೆಯನ್ನು ಮೂಡಿಸಿತು. ಪುಸ್ತಕ ಪ್ರಕಟಣೆಯ ಹಕ್ಕು ಸ್ವಾಮ್ಯವನ್ನು ಪಡೆದುಕೊಂಡರು. ಮೊದಲನೆಯ ಬಾರಿಗೆ J.K.Rowling ನಾಲ್ಕುಸಾವಿರ ಡಾಲರ್ ಹಣ ಪಡೆದಳು..! ಈ ಪುಸ್ತಕದ ಜನಪ್ರಿಯತೆ ನೋಡಿ ಅಮೇರಿಕಾದ Publishing house ಒಂದು, ಒಂದು ಲಕ್ಷ ಡಾಲರ್ ಕೊಟ್ಟು ಪ್ರಕಟಣೆಯ‌ ಹಕ್ಕನ್ನು ಖರೀದಿಸಿತು. ಅಮೇರಿಕಾದ ವಾರನ್ ಬ್ರದರ್ಸ್ ಈ ಪುಸ್ತಕದ ಜನಪ್ರಿಯತೆ ನೋಡಿ, ಈ ಕೃತಿಯನ್ನು ಸಿನೆಮಾ ಮಾಡುವ ಸಲುವಾಗಿ ಒಂದು ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿದ್ರು. ನೋಡ್ತಾ ನೋಡ್ತಾ J.K.Rowling ಒಂದರ ಹಿಂದೆ ಒಂದರಂತೆ ಏಳು ಹ್ಯಾರಿ ಪಾಟರ್ ಸರಣಿಗಳನ್ನು ಬರೆಯುತ್ತಾ ಹೋದರು. ಹಿರಿಯರು ಕಿರಿಯರೆನ್ನದೆ ಎಲ್ಲರೂ ಹ್ಯಾರಿ‌ಪಾಟರ್ ನ್ನು ಮೆಚ್ಚಿ ಕೊಂಡರು...! 2004 ರಲ್ಲಿ ಅಮೇರಿಕಾದ ಫೋರ್ಬ್ಸ್ ಪತ್ರಿಕೆ ಇವರನ್ನು ಬಿಲಿಯನೇರ್ ಲೇಖಕಿ ಎಂದು ಪ್ರಕಟಿಸಿತು. ಆದರೆ ಅನೇಕ ಸಮಾಜಮುಖಿ ಕಾರ್ಯಗಳಿಗಾಗಿಯೇ ಹಣವನ್ನು ವಿನಿಯೋಗಿಸುತ್ತಿದ್ದ ಲೇಖಕಿಯನ್ನು ನಂತರ Highest paid ಲೇಖಕಿ ಎಂದು ಗುರುತಿಸಿತು...!
      ಒಂದು ಕಾಲದಲ್ಲಿ ಹನ್ನೆರಡು ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟ ಅದೇ ಹ್ಯಾರಿ ಪಾಟರ್ ನ... ಅದೇ Rowling....! ಇಂದು ವಿಶ್ವಪ್ರಸಿದ್ಧ ಲೇಖಕಿ..!
ಪ್ರತಿ ಹಂತದ ಸೋಲು, ಅವಮಾನಗಳನ್ನು ಯಶಸ್ಸಿನ‌ ಮೆಟ್ಟಿಲನ್ನಾಗಿಸಿದವಳು...!
     ಎಲ್ಲ ಪರೀಕ್ಷೆಗಳಲ್ಲಿಯೂ ಸೋಲು ಗೆಲುವು ಎರಡೂ ಇರ್ತದೆ..‌! ಸ್ವೀಕರಿಸುವ ತಾಳ್ಮೆ.... ಸಾಧಿಸುವ ಉತ್ಸಾಹಕ್ಕಾಗಿ ನಾವು ಸಾಮಾನ್ಯರಂತೆ ಆಲೋಚಿಸಬಾರದು...! ಸಾಧಕರ ಕಥೆಗಳು ಪ್ರೇರಣೆಯಾಗುತ್ತವೆ ಅಲ್ವಾ...? 
Reject ಆಗೋದು ಅಂದ್ರೆ ಸೋಲಲ್ಲ...!ಸೋಲೋದು ಅಂದ್ರೆ ಸಾವಲ್ಲ!
      ಪರೀಕ್ಷೆ ಯಾರದೋ ನಿರೀಕ್ಷೆಯನ್ನು ಈಡೇರಿಸಲು. ಕೆಲವೊಮ್ಮೆ...! ಅದು ನಮ್ಮದೇ ಆದಾಗ ಓದುವುದು, ಅಭ್ಯಾಸ ಮಾಡುವುದು ಒಂದು ಸುಖ..! ಹಾಗಾಗಲಿ....! ಕ್ಷಣ ಕ್ಷಣವನ್ನೂ ಆನಂದಿಸಿ...! ಹಾಗಾಗದಿದ್ದಾಗ....ಬದುಕಿನಲ್ಲಿ ಸಾವಿರಾರು ಆಯ್ಕೆಗಳಿವೆ...! ನಿಮ್ಮದೇ ಖುಷಿಗಾಗಿ ಆ ಆಯ್ಕೆ ಪ್ರಾಮಾಣಿಕವಾಗಿರಲಿ...!
       ನಾನೂ... ಓದಿ ಓದಿ ಅನ್ತಿದ್ದೇನಾ...? ಮುಂದುವರೆಯಿರಿ ನಿಮ್ಮದೇ ಖುಷಿಗಾಗಿ... ಸಂಭ್ರಮಗಳು ಇನ್ನಷ್ಟಿವೆ ಬದುಕಿನಲ್ಲಿ... ಅದು ಕ್ಷಣಿಕವಾದರೆ ದುಃಖವೂ ಜೊತೆಗಿರಬಹುದು...! ಆಚೆ ಈಚೆ... ಅವರು... ಇವರು... ಎಲ್ಲರೂ ಹೇಳುವವರೇ ನಮಗೆ..! ನಾವೆಷ್ಟು ಕೇಳಿದ್ದೇವೆ..? ಯಾಕೆ ಕೇಳಬೇಕು...! ಉತ್ತರ ಕಂಡುಕೊಳ್ಳುತ್ತಾ ಬಿಡುವಾದರೆ ಉತ್ತರಿಸಿ.
      ಕಳೆದ ಬಾರಿಯ ಪತ್ರಕ್ಕೆ ಶ್ರಾವ್ಯ, ಶಿಶಿರ್, ಹೃದ್ವಿ ಕೆ, ಸಿಂಚನಾ ಶೆಟ್ಟಿ, ನಿಭಾ, ಪ್ರಿಯಾ, ಶ್ರಾವ್ಯ, ಭವ್ಯಶ್ರೀ, ಸಾತ್ವಿಕ್ ಗಣೇಶ್, ಸಾನ್ವಿ ಸಿ ಎಸ್, ಪೂಜಾ, ವೈಷ್ಣವಿ ಕಾಮತ್... ಎಲ್ಲರೂ ಮರುಪತ್ರದೊಂದಿಗೆ ಅಕ್ಷರ ಪ್ರೀತಿಯನ್ನು ಹಂಚಿದ್ದೀರಿ. ವಂದನೆಗಳು ನಿಮಗೆ..!ಓದಿದವರೆಲ್ಲರೂ ಬರೆಯಲು ಆರಂಭಿಸಿ....!ಬರೆದವರೆಲ್ಲರೂ ಬೆಳೆಯುತ್ತಿರುವುದನ್ನು ನೋಡಿ ನಮಗೆಲ್ಲಾ ಹೆಮ್ಮೆ.
        ಸರಿ ಮಕ್ಕಳೇ.... ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article