-->
ಹಕ್ಕಿ ಕಥೆ : ಸಂಚಿಕೆ - 88

ಹಕ್ಕಿ ಕಥೆ : ಸಂಚಿಕೆ - 88

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
            ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ನಿನ್ನೆ ಬೆಳಗ್ಗೆ ಶಾಲೆಗೆ ಹೋದಾಗ ನಾಲ್ಕು ಜನ ವಿದ್ಯಾರ್ಥಿಗಳು ಶಾಲೆಯ ಅಂಗಳದ ಮಾವಿನ ಮರವನ್ನು ನೋಡುತ್ತಾ ನಿಂತಿದ್ದರು. ಎರಡು ವಾರದಿಂದ ಮಾವಿನ ಮರದ ತುಂಬಾ ಹೂವು ಅರಳಿತ್ತು. ಹೂವಿನಿಂದ ಮಿಡಿ ಆಗಿದೆಯಾ ಅಂತ ಯಾವಾಗಲೂ ಲೆಕ್ಕ ಹಾಕುತ್ತಾ ನಿಂತಿರುತ್ತಾರೆ ಅಂದುಕೊಂಡು ಅಲ್ಲೇ ನೆರಳಿನಲ್ಲಿ ನನ್ನ ಬೈಕ್ ನಿಲ್ಲಿಸಿ ಅವರ ಹತ್ತಿರ ಹೋದೆ. ಎಂಟನೇ ತರಗತಿಯ ವಿದ್ಯಾರ್ಥಿ ಆದಿತ್ಯ ಕೈಯಲ್ಲಿ ಹಕ್ಕಿಯ ಕ್ಯಾಟಲಾಗ್ ಹಿಡಿದುಕೊಂಡು ನಿಂತಿದ್ದ. ಉಳಿದವರು ಅವನು ನೋಡುತ್ತಿದ್ದ ಕಡೆಗೇ ನೋಡುತ್ತಾ ಏನಿದೆ ಮರದಲ್ಲಿ ಎಂದು ಅವನನ್ನು ಕೇಳುತ್ತಿದ್ದರು. ಆದಿತ್ಯ ನನ್ನನ್ನು ನೋಡಿದವನೇ ಸರ್ ಅಲ್ಲಿ ನಾಲ್ಕು ಹಕ್ಕಿಗಳು ಇದ್ದಾವೆ ಸರ್. ನೋಡ್ಲಿಕ್ಕೆ ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಿದೆ, ಆದರೆ ಗುಬ್ಬಚ್ಚಿ ಅಲ್ಲ. ಹೊಟ್ಟೆ ಮತ್ತು ಕೆಳಭಾಗ ಎಲ್ಲ ಬಿಳೀ ಬಣ್ಣ ಇದೆ, ಮೇಲಿನ ಭಾಗ ನೇರಳೆ ಮಿಶ್ರಿತ ನೀಲಿ ಬಣ್ಣ ಇದೆ. ಕೊಕ್ಕು ಚಂದದ ಕೆಂಪು ಬಣ್ಣ ಇದೆ. ಹಣೆಯ ಬಾಗದಲ್ಲಿ ಕಪ್ಪು ಬಣ್ಣ ಇದೆ. ಬಾಲ ಗಿಡ್ಡ ಇದೆ ಸರ್. ಒಂದಲ್ಲ ನಾಲ್ಕೋ ಐದೋ ಹಕ್ಕಿ ಇದೆ ಸರ್, ಈ ಪುಸ್ತಕದಲ್ಲಿ ಅದರ ಚಿತ್ರ ಇಲ್ಲ, ಅದ್ಯಾವ ಹಕ್ಕಿ ನೋಡಿ ಎಂದ.
      ಮಾವಿನ ಮರದ ಹೂವಿಗೆ ಯಾವುದೋ ಹಕ್ಕಿ ಬಂದಿರಬೇಕು, ಆದರೆ ಇವನು ಇಷ್ಟೆಲ್ಲ ಬಣ್ಣ ಹೇಳುತ್ತಿದ್ದಾನೆ ಎಂದು ನಾನೂ ಮರದಕಡೆಗೆ ನೋಡಿದೆ. ಈ ಬದಿಯ ಗೆಲ್ಲಿನಲ್ಲಿವೆ ಎಂದ. ಅವನು ತೋರಿಸಿದ ಕಡೆ ನೋಡಿದರೆ ನನಗೆ ಆಶ್ಚರ್ಯವೂ ಸಂತೋಷವೂ ಒಂದೇ ಬಾರಿ ಆಯಿತು. ಸುಮಾರು ಹತ್ತು ವರ್ಷದ ಹಿಂದೆ ನಾನು ಸಂಸೆ ಶಾಲೆಯಲ್ಲಿ ಇದ್ದಾಗ ನೋಡಿ ದಾಖಲಿಸಿದ ಹಕ್ಕಿ. ಆನಂತರ ಅದನ್ನು ಎಲ್ಲೂ ನೋಡಿರಲಿಲ್ಲ. ಈಗಿನ ಶಾಲೆಯ ಆಸುಪಾಸಿನಲ್ಲಿ ಇದೇ ಮೊದಲನೆ ಬಾರಿಗೆ ನೋಡಿದ್ದು. ಸೂರಕ್ಕಿಯಂತೆ ಕೂಗುತ್ತಾ ಮಾವಿನ ಮರದ ಕೊಂಬೆಯ ಮೇಲೆ ಇರಬಹುದಾದ ಪುಟ್ಟ ಕೀಟಗಳನ್ನು ಹುಡುಕುತ್ತಾ, ಮರಕುಟಿಗ ಹಕ್ಕಿಯಂತೆ ಮರದ ಕಾಂಡವನ್ನು ಕುಟ್ಟುತ್ತಾ ಕೀಟವನ್ನು ಹುಡುಕುತ್ತಾ ಕೊಂಬೆಯ ತುಂಬ ಚುರುಕಾಗಿ ಓಡಾಡುತ್ತಿದ್ದವು. ಮರಕುಟಿಗ ಹಕ್ಕಿ ಸಾಮಾನ್ಯವಾಗಿ ಮರವನ್ನು ಕುಟ್ಟುತ್ತಾ ಕೆಳಗೆ ಬರುವುದು ವಾಡಿಕೆ. ಆದರೆ ಈ ಹಕ್ಕಿ ತಲೆಕೆಳಗೆ ಮಾಡಿಕೊಂಡು ಮರದ ಮೇಲಿಂದ ಕೆಳಗೆ ಅಥವಾ ಕೆಳಗಿಂದ ಮೇಲೆ ಯಾವುದೇ ದಿಕ್ಕಿನಲ್ಲಿ ಚುರುಕಾಗಿ ಓಡಾಡುತ್ತದೆ. ಅವುಗಳು ಹಾಗೆ ಓಡಾಡುವುದನ್ನು ನೋಡುವುದೇ ಚಂದ. ನೆಲದಮೇಲೆ ಗುಂಪಾಗಿ ಗುಬ್ಬಚ್ಚಿಗಳು ಓಡಾಡುವಂತೆ ಇವುಗಳು ಮರದ ಮೇಲೆ ಓಡಾಡುತ್ತವೆ.
       ಕಾಡು ಚೆನ್ನಾಗಿರುವ ಪ್ರದೇಶಗಳಲ್ಲಿ ಘಟ್ಟ ಪ್ರದೇಶ ಮತ್ತು ಅದರ ಆಸುಪಾಸಿನಲ್ಲಿ ಈ ಹಕ್ಕಿಗಳು ಕಾಣಲು ಸಿಗುತ್ತವೆ. ಮರಕುಟಿಗ ಅಥವಾ ಕುಟ್ರು ಹಕ್ಕಿಗಳು ಬಳಸಿದ ಗೂಡುಗಳ ಜಾಗದಲ್ಲಿ ಈ ಹಕ್ಕಿಗಳು ತಮ್ಮ ಗೂಡು ಮಾಡುತ್ತವೆ ಎಂದು ಪಕ್ಷಿ ತಜ್ಞ ಸಲೀಂ ಅಲಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸುಮಾರು ಹತ್ತು ನಿಮಿಷದ ನಂತರ ಒಂದೊಂದಾಗಿ ಹಕ್ಕಿಗಳು ದೂರದ ಇನ್ನೊಂದು ಮರದ ಕಡೆಗೆ ಹಾರಿ ಹೋದವು. ನಾಳೆ ಮತ್ತೊಮ್ಮೆ ಈ ಹಕ್ಕಿಗಳು ಬಂದರೆ ಅದರ ವಿಡಿಯೋ ಮಾಡಿ ಕಳಿಸ್ತೇನೆ. ಮತ್ತೆ ಸಿಗೋಣ.. 
ಕನ್ನಡ ಹೆಸರು: ಮಕ್ಮಲ್ ನೆತ್ತಿಯ ಮರಗುಬ್ಬಿ
ಇಂಗ್ಲೀಷ್ ಹೆಸರು: Velvet-fronted Nuthatch
ವೈಜ್ಞಾನಿಕ ಹೆಸರು: Sitta frontalis
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article