ಬದಲಾಗೋಣವೇ ಪ್ಲೀಸ್ - 87
Wednesday, March 1, 2023
Edit
ಬದಲಾಗೋಣವೇ ಪ್ಲೀಸ್ - 87
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಜನಸಾಗರದ ನಡುವೆ ಏಕಾಂಗಿಯಾಗಿ , ಸದ್ದು-ಗದ್ದಲಗಳ ನಡುವೆ ಮೌನಿಯಾಗಿ , ಜನಸಾಮಾನ್ಯರ ಮಧ್ಯೆ ವಿಭಿನ್ನವಾಗಿ , ಮಾಮೂಲಿಗಳ ಮಧ್ಯೆ ಕುತೂಹಲಿಯಾಗಿ ಪಡುವಣ ಕಡಲ ಅರಬ್ಬಿ ಸಮುದ್ರದ ತಟದ ಮರಳ ರಾಶಿಯ ಮೇಲೆ ಕೂತು ಸೂರ್ಯಾಸ್ತದ ಸವಿಯನ್ನು ಸವಿಯತೊಡಗಿದೆ. ನಿಮಿಷ ನಿಮಿಷಕ್ಕೂ ಕುತೂಹಲ ಸಂಭ್ರಮ. ಕ್ಷಣ ಕ್ಷಣಕ್ಕೂ ರೋಮಾಂಚನ. ನನ್ನನ್ನು ನಾನೇ ಮರೆತು ಬಗೆ ಬಗೆಯ ಕಲ್ಪನೆಯ ದೃಶ್ಯಗಳನ್ನು ಹೆಣೆಯುತ್ತಾ ಮೈಮರೆತಿದ್ದೆ. ಅಗೋಚರ ಸಂಭ್ರಮದಲ್ಲಿ ತಲ್ಲೀನನಾಗಿದ್ದೆ. ಎಲ್ಲಾ ಮರೆತು ನಾನೇ ಭಾಗ್ಯಶಾಲಿ ಎಂದು ಮೈಮರೆತಿದ್ದೆ. ಇದರ ಮಧ್ಯೆ ವಿಶಾಲ ದಿಗಂತದ ಕೊನೆಯಂಚಿನಲ್ಲಿ ಕೆಂಬಣ್ಣದ - ಹೊಂಬಣ್ಣದ ಓಕೋಳಿಯಾಟವಾಡಿ ಕಡೆಗೊಂದು ಕ್ಷಣ ಸೂರ್ಯನು ಶರಧಿಯ ನೀರೊಳಗೆ ಅದೃಶ್ಯನಾದ. ಸಂಭ್ರಮ ನಿಂತಿತು. ಏಕಾಂಗಿ ಬದುಕಿನ ನನಗೆ ವಾಸ್ತವದ ಅರಿವಾಯಿತು. ಸೂರ್ಯ ಮರೆಯಾದ ಕೂಡಲೇ ದುಗುಡ ಆವರಿಸಿತು. ಸುತ್ತಲಿದ್ದ ಜನಸಾಗರ ಕರಗತೊಡಗಿತು. ಸದ್ದು ಗದ್ದಲಗಳು ಮರೆಯಾಗಿ ಸಮುದ್ರದ ಸ್ವರ ಮಾತ್ರ ಕೇಳಿಸತೊಡಗಿತು. ಸುತ್ತಲೂ ನೀರವ ಮೌನ. ಸ್ಫೂರ್ತಿಯಾಗಿದ್ದ ಸೂರ್ಯನನ್ನು ಹುಡುಕಾಡಿದೆ. ಎಲ್ಲೋ ಕಾಣ ಸಿಗಲಿಲ್ಲ. ಕ್ಷಣಕ್ಷಣಕ್ಕೂ ಮಬ್ಬು ಆವರಿಸತೊಡಗಿತು. ಕತ್ತಲೂ ತನ್ನ ಪ್ರಭಾವವನ್ನು ಹೆಚ್ಚಿಸತೊಡಗಿತು. ಏನು ಮಾಡುವುದೆಂದು ತೋಚದಾಯಿತು. ನಿಂತಲ್ಲೇ ನಿಂತ ನನಗೆ ಮುಂದಿನ ದಾರಿ ಕಾಣದಾಯಿತು. ಏಕಾಂಗಿಯಾಗಿದ್ದ ನನಗೆ ಇತರರ ಆಶ್ರಯದ ಅಗತ್ಯತೆ ಅರಿವಾಗತೊಡಗಿತು.
ಕುಸಿಯತೊಡಗಿದ ನನಗೆ "ಅಣ್ಣಾ... ಈ ಕಂದೀಲು ಹಿಡಿದುಕೊಂಡು ನಿನ್ನ ಗುರಿಯತ್ತ ಸಾಗು" ಎಂಬ ಸ್ಫೂರ್ತಿಯ ಮಾತು ಕೇಳಿಸಿತು. ಆತನ ಹೆಸರು ಭರತ್. ನನ್ನಂತೆ ದಿಕ್ಕೆಟ್ಟು ಕುಸಿಯುತ್ತಿರುವ ಭಾವಜೀವಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ಕತ್ತಲಿಗೆ ಕಾರಣ ಹುಡುಕಿ... ಮತ್ತಷ್ಟೂ ಕುಸಿಯದಂತೆ ಸ್ಫೂರ್ತಿ ನೀಡಿ, ಕುಸಿದ ಬದುಕಿಗೆ ಊರುಗೋಲಾಗಿ, ಬದುಕಿನ ಅಗತ್ಯತೆಯ ಅರಿವನ್ನು ಅನಾವರಣಗೊಳಿಸಿ ಕತ್ತಲ ಪಯಣಕ್ಕೆ ಕಂದೀಲು ಕೊಟ್ಟು ಮುಂದಡಿಯಿಡಲು ಪ್ರೇರಣೆ ನೀಡುತ್ತಿದ್ದ. "ಸುಂದರ ಸೂರ್ಯಾಸ್ತ ಮುಗಿದು ಹೋಯಿತೆಂದು ಚಿಂತಿಸುತ್ತಾ ಕೂಡುವುದು ಜೀವನವಲ್ಲ. ಅದು ನಾಳೆ ಬೆಳಗಿನ ಹೊಸದಾದ ಸೂರ್ಯೋದಯದ ಬೆಡಗಿಗೆ ಪೂರ್ವತಯಾರಿಯ ಸಮಯ. ಆ ಪೂರ್ವ ತಯಾರಿವರೆಗೆ ತಾಳ್ಮೆಯಿಂದ ಕಾದು ಸೂರ್ಯೋದಯದ ಅಮೂಲ್ಯ ಸಮಯಕ್ಕೆ ಸರಿಯಾಗಿ ಹಾಜರಿದ್ದು ಖುಷಿಯಿಂದ ಸಂಭ್ರಮಿಸುವುದನ್ನು ಕಲಿತುಕೊ. ಅಲ್ಲಿಯವರೆಗೆ ಧನಾತ್ಮಕ ಚಿಂತನೆಯ ಕಂದೀಲು ಹಿಡಿದು ಪಯಣ ಮುಂದುವರೆಸು. ನಿನಗೆ ಶುಭವಾಗಲಿ ಅಣ್ಣಾ.." ಎಂದು ಕುಸಿದ ನನ್ನ ಕೈಯನ್ನು ಮೇಲೆತ್ತಿ , ಕೈ ಹಿಡಿದು , ನಾಲ್ಕಾರು ಹೆಜ್ಜೆ ಜತೆಯಾಗಿ ಬಂದು ಮುಂದಿನ ಪಯಣದ ದಾರಿಗೆ ಶುಭ ಕೋರಿ ಮರೆಯಾದ.
ಈಗ ನಾನು ನಿಂತಲ್ಲೇ ನಿಂತಿರುವೆ. ಆಯ್ಕೆ ನನ್ನ ಕೈಯಲ್ಲಿಯೇ ಇದೆ. ನಾಳಿನ ಸೂರ್ಯಾಸ್ತದ ಸೂರ್ಯನಿಗಾಗಿ ಕಂದೀಲು ಹಿಡಿದು ಪಯಣ ಮುಂದುವರೆಸುವುದೋ... ಅಥವಾ ಕಂದೀಲು ನಂದಿಸಿ ಅಲ್ಲೇ ಕುಸಿದು ಮೈ ಮರೆಯುವುದೋ.... ನಿರ್ಧಾರ ನನ್ನದು... ಆಯ್ಕೆಯೂ ನನ್ನದು.... ಬದಲಾವಣೆಯೂ ನನ್ನದೆ... ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************