ಬದಲಾಗೋಣವೇ ಪ್ಲೀಸ್ .....! ಸಂಚಿಕೆ - 88
Wednesday, March 8, 2023
Edit
ಬದಲಾಗೋಣವೇ ಪ್ಲೀಸ್ - 88
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
"ಅಯ್ಯೋ.. ಆ ಬಸ್ ಡ್ರೈವರ್ ಗೆ ಏನಾಗಿದೆ. ಸ್ವಲ್ಪನೂ ಕಾಮನ್ ಸೆನ್ಸ್ ಇಲ್ಲ. ಒಮ್ಮೆಲೆ ಬ್ರೇಕ್ ಹಾಕಿ ನನ್ನ ಹಣೆಗೆ ತಾಗಿತು. ಕೈಗೆಲ್ಲ ಗಾಯವಾಯಿತು. ಸರಿಯಾಗಿ ಗಾಡಿ ಚಲಾಯಿಸುವುದಕ್ಕೂ ಬರುವುದಿಲ್ಲ" ಎಂಬ ಆರೋಪದ ಧ್ವನಿ ಬಸ್ಸಿನೊಳಗಿನಿಂದ ಬಂತು. ನೋಡ ನೋಡುತ್ತಿದ್ದಂತೆ ಧ್ವನಿಯ ಪ್ರಮಾಣ ಹೆಚ್ಚಾಯಿತು. ಒಬ್ಬರು ಇಬ್ಬರಾದರು. ಇಬ್ಬರು ನಾಲ್ವರು ಆದರು. ಹೀಗೆ ಒಬ್ಬರೊಬ್ಬರು ತಮ್ಮೊಳಗೆ ಶಪಿಸತೊಡಗಿದರು.
ನಾನು ಹಾಗೂ ನನ್ನ ಗೆಳೆಯ ಬಸ್ಸಿನಿಂದ ಇಳಿದು ಬಸ್ಸಿನೆದುರು ಹೋದೆವು. ಬಸ್ಸಿನ ಎದುರುಗಡೆ ಚಕ್ರದ ಹತ್ತಿರ ಸಣ್ಣ ಮಗುವೊಂದರ ಅಳು ಕೇಳಿಸಿತು. ಮಾರ್ಗದ ಬದಿಯಲ್ಲಿ ನಿಂತಿದ್ದ ತಾಯಿಯ ಕೈಯಿಂದ ತಪ್ಪಿಸಿಕೊಂಡ ಮಗುವು ಬಸ್ಸನ್ನು ನೋಡದೆ ಮಾರ್ಗ ದಾಟಲು ಓಡಿತು. ಮಾರ್ಗ ಮಧ್ಯೆ ಓಡುತ್ತಿರುವ ಮಗುವನ್ನು ಕಂಡ ಚಾಲಕ ತಕ್ಷಣವೇ ಬ್ರೇಕ್ ಹಾಕಿದ. ಹೇಗೋ ಮಗುವಿನ ಪ್ರಾಣ ಉಳಿಯಿತು. ಬದುಕುಳಿದ ಮಗುವಿನ ಮುಖ ನೋಡಿ ತಾಯಿಯು ಕೃತಜ್ಞತೆ ಭಾವದಿಂದ ಚಾಲಕನನ್ನೇ ನೋಡುತ್ತಿದ್ದಳು. ಚಾಲಕ ಅಪಘಾತದ ಶಾಕ್ ನಿಂದ ಇನ್ನೂ ಹೊರಬಂದಿಲ್ಲ. ಬಸ್ಸಿನ ಹೊರಗಡೆ ಏನಾಗಿದೆ ಎಂದು ತಿಳಿಯದೆ ಬಸ್ಸಿನೊಳಗಿಂದಲೆ ಕೂತಲ್ಲೆ ಕೂತು ಗೊಣಗುತ್ತಿರುವವರ ಧ್ವನಿ ಹೆಚ್ಚಾಗ ತೊಡಗಿತು. ವಾಸ್ತವ ಕಂಡ ನನಗೆ ಮಾತ್ರ ಪರಿಸ್ಥಿತಿಯ ಅರಿವಾಯಿತು. ಚಾಲಕ ಬ್ರೇಕ್ ಹಾಕಿದಾಗ ಆದ ತೊಂದರೆಗೆ ಸಿಡುಕುವ ಬದಲು ಅಪಘಾತ ತಪ್ಪಿಸಿದಕ್ಕೆ ಕೃತಜ್ಞತೆ ಹೇಳುವ ಮನಸ್ಥಿತಿ ನನ್ನದಾಯಿತು. ಇಲ್ಲಿ ತಪ್ಪು ಯಾರದ್ದು? ಮುಗ್ಧ ಮಗುವಿನ ಕೈಯನ್ನು ಸಮರ್ಪಕವಾಗಿ ಹಿಡಿಯದ ತಾಯಿಯದ್ದೇ ? ಏನೂ ಅರಿಯದೆ ತಾಯಿಯ ಕೈತಪ್ಪಿಸಿ ಮಾರ್ಗ ದಾಟಿದ ಮಗುವಿನದ್ದೇ ? ಅಪಘಾತ ತಪ್ಪಿಸಿದ ಚಾಲಕನದ್ದೇ ? ವಾಸ್ತವ ತಿಳಿಯದೆ ಮತ್ತು ಕಾರಣ ಅರಿಯದೆ ಶಪಿಸುತ್ತಿರುವ ಪಯಣಿಗರದ್ದೇ ?. ಆರೋಪಿಸುವ ಮುನ್ನ ನೈಜ ಕಾರಣ ತಿಳಿಯುವ ಮನೋಸ್ಥಿತಿ ನಮ್ಮದಾಗಲಿ. ಆ ಬದಲಾವಣೆಯ ಆಯ್ಕೆ ನಮ್ಮದಾಗಲಿ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************