ಹಕ್ಕಿ ಕಥೆ : ಸಂಚಿಕೆ - 89
Wednesday, March 8, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಸಂಜೆ ಆರು ಗಂಟೆ ಆಗಿತ್ತು. ಸ್ನೇಹಿತ ಗಿರೀಶರಿಗಾಗಿ ಕಾಯುತ್ತಾ ನಿಂತಿದ್ದೆ. ಪಶ್ಚಿಮ ಘಟ್ಟದ ಮಡಿಲಿನ ಕಾರ್ಗಲ್ ಸಮೀಪದ ಪುಟ್ಟ ಹಳ್ಳಿ ಅವರ ಊರು. ಅವರು ಬರುವುದು ಇನ್ನೂ ಮೂವತ್ತು ನಿಮಿಷ ಆಗಬಹುದು ಎಂದು ಕರೆ ಮಾಡಿದರು. ಆ ಹೊತ್ತಿಗೆ ಅವರ ಊರಿಗೆ ಬೇರೆ ಬಸ್ ಇರಲಿಲ್ಲ. ಸರಿ ಹಾಗಾದ್ರೆ ಸ್ವಲ್ಪಹೊತ್ತು ಇಲ್ಲೇ ಓಡಾಡೋಣ ಅಂತ ಬಸ್ ಸ್ಟಾಂಡಿನಿಂದ ಮುಂದಕ್ಕೆ ಹೋದರೆ ಅಲ್ಲೊಂದು ದೊಡ್ಡ ಸೇತುವೆ ಇತ್ತು. ಮಳೆಗಾಲದಲ್ಲಿ ಭರ್ಜರಿ ನೀರು ಹರಿಯುವ ಜಾಗ ಆಗಿರಬೇಕು. ಬೇಸಗೆಯಾದ್ದರಿಂದ ನೀರು ಕಡಿಮೆ ಇದ್ದರೂ ಕೆಳಗಡೆ ಇದ್ದ ಬಂಡೆಕಲ್ಲುಗಳನ್ನು ನೋಡಿದಾಗ ಮಳೆಗಾಲದ ವೈಭವ ಹೇಗಿರಬಹುದು ಎಂದು ಊಹಿಸಬಹುದಾಗಿತ್ತು. ದೂರದಲ್ಲಿ ಸಂಜೆಯ ಸೂರ್ಯ ನಿಧಾನಕ್ಕೆ ಕೆಂಪಾಗುತ್ತಾ ಇದ್ದ. ಸುತ್ತಮುತ್ತಲೂ ಪಕ್ಷಿಗಳ ಕಲರವ ಕೇಳುತ್ತಿತ್ತು. ಅಷ್ಟರಲ್ಲಿ ಬಿಳೀ ಬಣ್ಣದ ಹಕ್ಕಿಯೊಂದು ನಿಧಾನವಾಗಿ ಹಾರುತ್ತಾ ಬಸ್ ಸ್ಟಾಂಡಿನ ಕಡೆಗೆ ಹೋಗಿ ಅಲ್ಲೇ ವಿದ್ಯುತ್ ತಂತಿಯ ಮೇಲೆ ಕುಳಿತುಕೊಂಡಿತು. ಅರೆ ಇದು ಬೆಳ್ಳಕ್ಕಿ ಅಲ್ಲ, ಬೇರೆ ಯಾವುದು ಆಗಿರಬಹುದು ಎಂದು ನೋಡಲು ಕೈಯಲ್ಲಿದ್ದ ಕ್ಯಾಮರಾ ಜೂಮ್ ಮಾಡಿದೆ. ಸುಮಾರು ಕಾಗೆಯ ಗಾತ್ರದ ಹಕ್ಕಿ. ಹೊಟ್ಟೆ ಮತ್ತು ಮೈಯೆಲ್ಲಾ ಬಿಳೀ ಬಣ್ಣ, ಕುಳಿತುಕೊಂಡಾಗ ಭುಜದಲ್ಲಿ ಅಂದರೆ ರೆಕ್ಕೆಯ ಭಾಗದಲ್ಲಿ ಕಪ್ಪು ಬಣ್ಣ ಎದ್ದು ಕಾಣುತ್ತಿತ್ತು. ತಲೆಯ ಭಾಗ ಸ್ವಲ್ಪ ಬೂದು ಬಣ್ಣ. ಹಕ್ಕಿಯ ಮುಖ ಆ ಕಡೆಗೆ ಇತ್ತು, ಹಾಗಾಗಿ ನಿಧಾನವಾಗಿ ಇನ್ನೊಂದು ಬದಿಗೆ ಹೋಗಿ ಮುಖ ಕಾಣುತ್ತದೆಯೇ ಅಂತ ನೋಡಿದೆ. ಯಕ್ಷಗಾನದವರು ಸುಂದರವಾಗಿ ಕಾಡಿಗೆ ಹಚ್ಚಿದಂತೆ ಕಣ್ಣಿನ ಸುತ್ತಲೂ ಕಪ್ಪು ಪಟ್ಟಿ, ಕೆಂಪು ಕಣ್ಣು, ಹಳದಿ ಮಿಶ್ರಿತ ಕಪ್ಪು ಕೊಕ್ಕು. ಮುಖ ನೋಡಿದಾಗ ಹಕ್ಕಿಯ ಗುರುತು ಸಿಕ್ಕಿಬಿಟ್ಟಿತು. ಗಾತ್ರದಲ್ಲಿ ಚಿಕ್ಕದಾದರೂ ಇದು ಗಿಡುಗನ ಜಾತಿಗೆ ಸೇರಿದ ಹದ್ದು ಎಂಬುದು ಸ್ಪಷ್ಟವಾಗಿ ತಿಳಿಯತು. ತಂತಿಯ ಮೇಲೆ ಕುಳಿತುಕೊಂಡು ತನ್ನ ಬಾಲವನ್ನು ಆಗಾಗ ಮೇಲೆತ್ತಿ ಕೆಳಗೆ ಇಳಿಸುತ್ತಿತ್ತು. ಈ ಹಿಂದೆ ಅಂಕಸಮುದ್ರ ಪಕ್ಷಿ ಹಬ್ಬಕ್ಕೆ ಹೋದಾಗ ಗೆಳೆಯ ರಂಗನಾಥರ ಊರಿನಲ್ಲಿ ನೋಡಲು ಸಿಕ್ಕಿದ ರಾಮದಾಸಹದ್ದು ಇದೇ ಎಂಬುದು ಸ್ಪಷ್ಟವಾಯ್ತ.
ದಟ್ಟ ಕಾಡಿನ ನಡುವೆ, ಬಯಲು ಪ್ರದೇಶದಲ್ಲಿ, ಹೊಲಗಳ ಮತ್ತು ಹುಲ್ಲುಗಾವಲುಗಳ ಸುತ್ತಲೂ ನೋಡಲು ಸಿಗುತ್ತದೆ. ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಹೆಚ್ಚಾಗಿ ನೋಡಲು ಸಿಗುತ್ತದೆ. ತಾನಿರುವ ಪ್ರದೇಶದಲ್ಲಿ ಸಾಮಾನ್ಯವಾಗಿ ಒಂದೇ ಮರದ ಮೇಲೆ ಎತ್ತರದಲ್ಲಿ ಯಾವಾಗಲೂ ಕುಳಿತಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆಕಾಶದಲ್ಲಿ ಹಾರುತ್ತಾ ಹೆಲಿಕಾಪ್ಟರ್ ನಂತೆ ಒಂದೇ ಕಡೆ ನಿಂತು ಸುತ್ತಲೂ ತನ್ನ ಆಹಾರವಾದ ಇಲಿ, ಹಲ್ಲಿ, ಮಿಡತೆಯಂತಹ ಕೀಟಗಳನ್ನು ಹುಡುಕುತ್ತದೆ. ಆಹಾರ ಕಂಡಾಗ ನಿಶ್ಶಬ್ದವಾಗಿ ಕೆಳಗಿಳಿದು ತನ್ನ ಆಹಾರವನ್ನು ಪಂಜಗಳಲ್ಲಿ ಹಿಡಿಯುತ್ತದೆ. ವರ್ಷದ ಯಾವುದೇ ಋತುವಿನಲ್ಲಾದರೂ ಸರಿ ಕಾಗೆಯಂತೆ ಮರದಮೇಲೆ ಕಟ್ಟಿಗೆ ಕಡ್ಡಿಗಳನ್ನು ಜೋಡಿಸಿ ಗೂಡು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಮರಿಗಳ ಪಾಲನೆ ಪೋಷಣೆಯಲ್ಲಿ ಗಂಡು ಹೆಣ್ಣು ಎರಡೂ ಹಕ್ಕಿಗಳು ಸಮಾನವಾಗಿ ಕೆಲಸ ಹಂಚಿಕೊಳ್ಳುತ್ತವೆ ಎಂದು ಪಕ್ಷಿ ತಜ್ಷ ಸಲೀಂ ಅಲಿ ಹೇಳುತ್ತಾರೆ.
ಕನ್ನಡ ಹೆಸರು: ರಾಮದಾಸ ಹದ್ದು
ಇಂಗ್ಲೀಷ್ ಹೆಸರು: BLACK WINGED KITE
ವೈಜ್ಞಾನಿಕ ಹೆಸರು: ELANUS CAERULEUS
ಚಿತ್ರ ಕೃಪೆ: ಸಂದೀಪ್
ಅಷ್ಟರಲ್ಲಿ ಗೆಳೆಯ ಗಿರೀಶ್ ಬಂದರು. ಹಕ್ಕಿಯನ್ನು ನೋಡುತ್ತಾ ಅರ್ಧ ಗಂಟೆ ಕಳೆದದ್ದೇ ತಿಳಿಯಲಿಲ್ಲ. ಸರಿ ನಾನು ಬರ್ಲಾ. ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************