ಜೀವನ ಸಂಭ್ರಮ : ಸಂಚಿಕೆ - 76
Sunday, March 12, 2023
Edit
ಜೀವನ ಸಂಭ್ರಮ : ಸಂಚಿಕೆ - 76
ಮಕ್ಕಳೇ, ಇಂದು ನಾವು ಸ್ಪರ್ಧೆ ಮತ್ತು ಸಹಕಾರದ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಜೀವನಕ್ಕೆ ಸ್ಪರ್ಧೆ ಮುಖ್ಯವೋ, ಸಹಕಾರ ಮುಖ್ಯವೋ ಈ ಲೇಖನ ಓದಿದ ಮೇಲೆ ತೀರ್ಮಾನಿಸಿ...
ವಿದೇಶದಲ್ಲಿ ಸ್ಪರ್ಧೆ ಸಾಮಾನ್ಯ. ಇದೇ ಪದ್ಧತಿಯನ್ನು ನಾವು ಭಾರತದಲ್ಲಿ ಕಾಣುತ್ತಿದ್ದೇವೆ. ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಅದೂ ಅಲ್ಲದೆ ವಿದ್ಯಾರ್ಥಿಗಳ ನಡುವೆ ಅಂಕಗಳ ಸ್ಪರ್ಧೆ. ಇದಕ್ಕೆ ಪೋಷಕರು, ಶಿಕ್ಷಕರು ಮತ್ತು ಸಮಾಜ ಬೆಂಬಲ ನೀಡುತ್ತಿದೆ. ಸ್ಪರ್ಧೆಯಿಂದ ಆಗುವ ಅನುಕೂಲ ಏನೆಂದರೆ ವಿದ್ಯಾರ್ಥಿಯು ಹೆಚ್ಚು ಶ್ರಮ ವಹಿಸಲು ಪ್ರೇರೇಪಣೆ ದೊರಕುತ್ತದೆ. ಹೆಚ್ಚು ಶ್ರಮ ವಹಿಸಿದಂತೆ ಆತ್ಮವಿಶ್ವಾಸ ಹೆಚ್ಚುತ್ತದೆ. ಒಬ್ಬ ವಿದ್ಯಾರ್ಥಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ದಿಸಲು ಆಗುವುದಿಲ್ಲ. ನಿಸರ್ಗ ಯಾವ ಸಾಮರ್ಥ್ಯ ನೀಡಿದಿಯೋ, ಅದರಲ್ಲಿ ಯಶಸ್ವಿಯಾಗಬಲ್ಲನು. ಉಳಿದುದರಲ್ಲಿ ಯಶಸ್ವಿಯಾಗುವುದು ಕಷ್ಟ. ಕೆಲವು ಮಕ್ಕಳು ಬುದ್ಧಿಯಲ್ಲಿ, ಕೆಲವರು ಜ್ಞಾನದಲ್ಲಿ, ಕೆಲವರು ಕ್ರೀಡೆಯಲ್ಲಿ , ಕೆಲವರು ಗಾಯನದಲ್ಲಿ , ಕೆಲವರು ನೃತ್ಯದಲ್ಲಿ ಮತ್ತೆ ಕೆಲವರು ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡುವರು. ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ವಿಶೇಷ ಸಾಮರ್ಥ್ಯ ಇರುವುದನ್ನು ಮನಗಾಣಬೇಕು. ನಮ್ಮ ರೂಪದಲ್ಲಿ ಹೇಗೆ ಭಿನ್ನವಾಗಿದೆಯೋ ಅದೇ ರೀತಿ ಸಾಮರ್ಥ್ಯದಲ್ಲಿ ಕೂಡ ಭಿನ್ನತೆಯನ್ನು ಕಾಣಬಹುದು.
ಸ್ಪರ್ಧೆಯಿಂದ ಆಗುವ ಅನನುಕೂಲಗಳು :
▪️ ಸ್ಪರ್ಧೆಯಲ್ಲಿ ಮುಂದಿರುವವರು, ಹಿಂದಿರುವವರ ಜೊತೆ ಬೆರೆಯುವುದಿಲ್ಲ. ಹಿಂದೆ ಉಳಿದವನನ್ನು ಕೀಳಾಗಿ ಕಾಣುತ್ತಾನೆ.
▪️ ಸಾಮಾಜಿಕ, ಮಾನಸಿಕ ಮತ್ತು ನೈತಿಕ ಬೆಳವಣಿಗೆ ಆಗುವುದು ವಿದ್ಯಾರ್ಥಿಗಳು ಒಟ್ಟೊಟ್ಟಿಗೆ ಬೆರೆತಾಗ. ಸ್ಪರ್ಧೆಯಲ್ಲಿ ಮುಂದಿರುವವನು ಎಲ್ಲರೊಂದಿಗೂ ಬೆರೆಯದೆ ಸಾಮಾಜಿಕ, ಮಾನಸಿಕ ಮತ್ತು ನೈತಿಕ ಬೆಳವಣಿಗೆಯಿಂದ ವಂಚಿತನಾಗುತ್ತಾನೆ.
▪️ ಜೀವನದ ಎಲ್ಲಾ ರಂಗದಲ್ಲೂ ಯಶಸ್ವಿಯಾಗಲು ಸಾಧ್ಯವಿಲ್ಲ. ಸೋತಾಗ ಕಷ್ಟ ಸುಖ ಹಂಚಿಕೊಳ್ಳಲು ಗೆಳೆಯರಿಲ್ಲದೆ, ಏಕಾಂಗಿ ಆಗುತ್ತಾನೆ. ಇದರಿಂದ ಮಾನಸಿಕವಾಗಿ ನೊಂದು ಹೋಗುತ್ತಾನೆ. ಇದರಿಂದ ಕಡಿಮೆ ಅಂಕ ಬಂದಾಗ, ಯಾವುದರಲ್ಲಾದರೂ ವಿಫಲರಾದಾಗ, ಜೀವನವೇ ಮುಗಿದು ಹೋಯಿತೆಂದು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ.
▪️ ಇಂಥ ಮಕ್ಕಳಲ್ಲಿ ಹೊಂದಾಣಿಕೆ ಕೊರತೆಯಿಂದ ವಿವಾಹ ವಿಚ್ಛೇದನ ಹೆಚ್ಚಾಗಿ ಕಂಡುಬರುತ್ತದೆ. ಮಾನವ ಸಂಘ ಜೀವಿ. ಆದುದರಿಂದ ಸ್ಪರ್ಧೆ ಇತಿಮಿತಿಯಲ್ಲಿರಬೇಕು. ಜೀವನದ ಮಹತ್ವ ತಿಳಿದಿರಬೇಕು. ಸ್ಪರ್ಧೆ ಬೇಕಾದಲ್ಲಿ ತನಗೆ ತಾನೆ ಸ್ಪರ್ಧೆ ಮಾಡಿಕೊಳ್ಳಬೇಕು. ಇಂದಿಗಿಂತ ನಾಳೆ ನಾನು ಇನ್ನೂ ಉತ್ತಮನಾಗಬೇಕು. ಈ ರೀತಿ ಸ್ಪರ್ಧೆ ಉತ್ತಮ. ಬೇರೊಬ್ಬರೊಂದಿಗೆ ಹೋಲಿಸಿಕೊಳ್ಳುವುದಲ್ಲ.
ವಿದ್ಯಾರ್ಥಿ ಜೀವನದಲ್ಲಿ ಸಹಕಾರ ಬಹಳ ಮುಖ್ಯ. ಇದರಲ್ಲಿ ಅನೇಕ ಉಪಯೋಗಗಳಿವೆ:
▪️ ಸಹಕಾರ ಮನೋಭಾವ ಇದ್ದಾಗ, ಅಲ್ಲಿ ಸ್ಪರ್ಧೆ ಇರುವುದಿಲ್ಲ. ತನಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ತಿಳಿಸಿಕೊಡುತ್ತಾನೆ. ಇದರಿಂದ ಒಟ್ಟಾಗಿ ಗುರಿ ಮುಟ್ಟಲು, ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ.
▪️ ಮಾನಸಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗೆ ಸಹಕಾರ ಮನೋಭಾವ ತುಂಬಾ ಅಗತ್ಯ.
▪️ ಸಹಕಾರದಲ್ಲಿ ಇನ್ನೊಬ್ಬರನ್ನು ಸೋಲಿಸಬೇಕೆಂಬ ಮನೋಭಾವ ಇರೋದಿಲ್ಲ.
▪️ ಸಹಕಾರ ಇರುವಲ್ಲಿ ಒಂಟಿತನ ಇರುವುದಿಲ್ಲ. ಕಷ್ಟ ಸುಖ ಹಂಚಿಕೊಳ್ಳಲು ಗೆಳೆಯರು ಇರುತ್ತಾರೆ.
▪️ ಜೀವನದಲ್ಲಿ ಸಮಸ್ಯೆ ಎದುರಿಸಲು ಗೆಳೆಯರು ಇರುತ್ತಾರೆ. ಗೆಳೆಯರ ಜೊತೆ ಚರ್ಚಿಸಿದಾಗ, ಹೊಸ ಹೊಸ ಪರಿಹಾರ, ಉಪಾಯಗಳು ದೊರಕುತ್ತವೆ.
▪️ ಸಹಕಾರ ಮನೋಭಾವದಿಂದ ಸಮಾಜ ಪ್ರಗತಿಪಥದಲ್ಲಿ ಇರುತ್ತದೆ. ಗುಂಪಿನಲ್ಲಿ ಕೆಲಸ ಮಾಡಿದಾಗ ಎಂತಹ ಗುರಿಯನ್ನಾದರೂ ಮುಟ್ಟಬಹುದು. ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು ಒಗ್ಗಟ್ಟಿನಲ್ಲಿ ಬಲವಿದೆ ಎಂದು. ಮಕ್ಕಳೇ ಸಹಕಾರಿ ತತ್ವ , ಸ್ಪರ್ಧೆಗಿಂತ ಒಳ್ಳೆಯದಲ್ಲವೇ?
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************