-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 54

ಸ್ಫೂರ್ತಿಯ ಮಾತುಗಳು : ಸಂಚಿಕೆ - 54

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                      
               ರೋಗಗಳು ಕಳೆಗಳಿದ್ದ ಹಾಗೆ. ಯಾವುದೇ ಜೀವಿಗಾಗಲೀ, ಸಸಿಗಾಗಲೀ ರೋಗ ತಗಲಿದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಕೆಲವೊಮ್ಮೆ ನಾಶವನ್ನೂ ಕಾಣಬಹುದು. ದೈಹಿಕವಾಗಿ ನಮ್ಮನ್ನು ಕಾಡುವ ರೋಗವು ಔಷಧಗಳಿಂದ ಬಹುತೇಕವಾಗಿ ಗುಣವಾಗುತ್ತದೆ. ಕೆಲವೊಮ್ಮೆ ಮನಸ್ಸಿಗೆ ರೋಗ ತಗಲುವುದಿದೆ. ಅದನ್ನು ಮನೋಜಾಡ್ಯ ಎನ್ನುವೆವು. ಮನೋಜಾಡ್ಯಗಳಲ್ಲಿ ಮನೋ ವಿಕಲ, ಮನೋ ವಿಕಾರ ಎಂದೂ ವರ್ಗಗಳಾಗಿ ಗುರುತಿಸಬಹುದು. ಮನೋ ವಿಕಲತೆ ಹುಟ್ಟಿನಿಂದಲೇ ಇರುತ್ತದೆ. ಅದು ಗುಣವಾದರೆ ಭಾಗ್ಯ. ಸಸ್ಯಗಳಿಗೆ ಮತ್ತು ಮಾನವನ ಹೊರತಾದ ಜೀವಿಗಳಿಗೆ ಮನೋ ವಿಕಲತೆ ಅಥವಾ ಮನೋ ವಿಕಾರತೆ ಇರದು. ಕೆಲವು ಪ್ರಾಣಿಗಳಿಗೆ ಹುಚ್ಚು ಹಿಡಿಯುವುದಿದೆ. ಅದು ಮನುಷ್ಯರನ್ನೂ ಬಿಟ್ಟಿಲ್ಲ. ಹುಚ್ಚು ಎನ್ನುವುದಕ್ಕೆ ಚಪಲತೆ ಎಂಬ ಅರ್ಥವೂ ಇದೆ. ಓದುವ ಹುಚ್ಚು, ಮದ್ಯದ ಹುಚ್ಚು, ಹಣದ ಹುಚ್ಚು, ಅಧಿಕಾರದ ಹುಚ್ಚು, ಪ್ರಚಾರದ ಹುಚ್ಚು, ಮನರಂಜನೆಯ ಹುಚ್ಚು, ತಿಂಡಿಯ ಹುಚ್ಚು, ವಾಹನದ ಹುಚ್ಚು ಇಂತಹ ಅಸಂಖ್ಯ ಹುಚ್ಚುಗಳನ್ನು ಕೇಳಿದ್ದೇವೆ. ಈ ಹುಚ್ಚುಗಳು ಮಿತಿಯಲ್ಲಿದ್ದರೆ ರೋಗವಲ್ಲ. ಮಿತಿ ಮೀರಿದರೆ ನಾವು ಹೆಸರುವಾಸಿಯಾಗುವುದರ ಬದಲು ನಮ್ಮ ಹೆಸರೇ ಮಾಸಬಹುದು; ಕುಪ್ರಸಿದ್ಧಿ ನಿಶ್ಚಿತ.
ಮನೋವಿಕಾರವೆನ್ನುವುದು ಅತ್ಯಂತ ಬಲವಾದ ಕಾಯಿಲೆ. ಈ ಕಾಯಿಲೆಗಳಲ್ಲಿ ಮೊದಲನೆಯದು, “ನನಗೆಲ್ಲವೂ ತಿಳಿದಿದಿದೆ” ಎಂಬ ಬಿಮ್ಮು. ಮೃಗಗಳಿಗೆ, ವೃಕ್ಷಗಳಿಗೆ “ನನಗೆ ಎಲ್ಲ ಗೊತ್ತು” ಎಂಬ ರೋಗ ಬರುವುದೇ ಇಲ್ಲ. ಜೀವ ವಿಕಾಸ ಸಿದ್ಧಾಂತದಲ್ಲಿ ಮಂಗನಿಂದ ಮಾನವ ಎನ್ನಲಾಗಿದೆ. ಮನುಷ್ಯನ ಮುಖವನ್ನು ಗಮನಿಸಿದಾಗ ಜೀವ ವಿಕಾಸ ಸಿದ್ದಾಂತ ಹೌದೆನಿಸುತ್ತದೆ. ಆದರೆ ಮನಸ್ಸನ್ನು ನೋಡಿದಾಗ ಮಾನವನಿಗೆ ಸಂಬಂಧಿಸಿದ ಜೀವವಿಕಾಸ ಸಿದ್ಧಾಂತ ಶ್ವೇತಮಿಥ್ಯ ಅಥವಾ ಹಸಿ ಸುಳ್ಳು ಎಂದನಿಸುತ್ತದೆ. ಮಂಗನನ್ನು ಮಾನವನೊಂದಿಗೆ ತಳಕು ಹಾಕಿ ಅವುಗಳನ್ನು ಅವಮಾನಿಸಲಾಗಿದೆ ಎಂದರೆ ತಪ್ಪಾಗದು. ಮಂಗಗಳಿಗಿರದ ದೊಡ್ಡ ರೋಗ ಮನುಷ್ಯನಿಗೆ ಹೇಗೆ ಅಂಟಿಕೊಂಡಿರಬಹುದು ಎಂಬ ಸಂದೇಹ ಏಳುತ್ತದೆ. ಆದರೆ ಈ ರೋಗ ಮುಗ್ಧ ಮನಸ್ಸುಗಳಿಗೆ ತಗಲುವುದಿಲ್ಲ, ಪ್ರಾಮಾಣಿಕರಿಗೆ ಮತ್ತು ಸಜ್ಜನರಿಗೆ ಈ ರೋಗ ಬರುವುದೇ ಇಲ್ಲ, ನಾನೆಲ್ಲವನ್ನೂ ತಿಳಿದವನು ಎಂಬುದು ವೈಯಕ್ತಿಕ ರೋಗವೇ ಹೊರತು ಸಾರ್ವತ್ರಿಕವಲ್ಲ ಎಂಬುದೂ ವಿಶೇಷ.
      ‘ಅಲ್ಪ ವಿದ್ಯಾ ಮಹಾ ಗರ್ವಿ’ , ‘ತುಂಬಿದ ಕೊಡ ತುಳುಕುವುದಿಲ್ಲ’ ಮೊದಲಾದ ಮಾತುಗಳಿವೆ. ಮಿತ ಜ್ಞಾನಿಯು ಪಂಡಿತನ ಮುಖವಾಡ ಧರಿಸುತ್ತಾನೆ. ತುಂಬ ತಿಳಿದವನು ಶಾಂತ ಮತ್ತು ವಿನಯಿಯಾಗಿರುತ್ತಾನೆ, ಸಜ್ಜನನಾಗಿರುತ್ತಾನೆ, ಮುಗ್ಧತೆಯ ಕಳಶವಾಗಿರುತ್ತಾನೆ, ಜ್ಞಾನಸಾಗರದ ಒಂದು ಹನಿಯಷ್ಟನ್ನೂ ತಾನು ತಿಳಿದಿಲ್ಲ ಎಂಬ ಸೌಜನ್ಯದ ಮಾತು ಹೇಳುತ್ತಾನೆ ಎಂಬುದು ಬಲ್ಲವರ ಅನುಭವ. ತನಗೆ ಎಲ್ಲವೂ ತಿಳಿದಿದೆ ಎಂದು ಶೋಕಿ ಮಾಡುವವರಿಗೆ ಇತರರ ಅನುಭವ ರುಚಿಸದು. ಮೈಸೂರು ಪಾಕು ಮಾಡಲು ಹೋಗಿ ಮಸಿ ಪಾಕು ಮಾಡಿದ ಪಾಕ ಪ್ರವೀಣನೊಬ್ಬನ ಕಥೆಯು ನೆಪಾಗುತ್ತದೆ. ಆತನಿಗೆ ತಿಂದು ಗೊತ್ತೇ ವಿನಹ ಮೈಸೂರು ಪಾಕು ಮಾಡಲು ಬೇಕಾದ ವಸ್ತುಗಳು ಮತ್ತು ಪಾಕ ವಿಧಾನ ತಿಳಿಯದೇ ಇದ್ದರೂ, ‘ಮೈಸೂರು ಪಾಕೇನು ಮಹಾ? ನಾನು ಮಾಡುವ ರುಚಿಯಾದ ಮೈಸೂರು ಪಾಕಿಗೆ ಸಮನಾದುದೇ ಇಲ್ಲ,’ ಎಂದು ಹುಂಬ ಧೈರ್ಯದಿಂದ ಪಾಕ ಸನ್ನದ್ಧನಾದ. ಪಾಕವು ಕಾದು, ಸೀದು ಮಸಿಯಾದರೂ ’ಪಾಕು’ ಆಗದೇ ಆತನೇ Patch ಆದನಂತೆ. ಅಜ್ಞರ ಅಹಂಕಾರ ಅವರನ್ನು ನಾಶಗೊಳಿಸುತ್ತದೆ. “ಅದರ ಬಗ್ಗೆ ನಾನರಿಯೆ” ಎಂದು ಹೇಳುವ ಪ್ರಾಮಾಣಿಕತೆ, ವಿನಯವಂತಿಕೆ ನಮ್ಮನ್ನು ಎತ್ತರಕ್ಕೇರಿಸುತ್ತದೆ.  ಮಕ್ಕಳೇ, ನಾನು ತಿಳಿದವನೆಂಬ ದೊಡ್ಡ ರೋಗ ನಮಗೆ ಬಾರದಿರಲಿ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article