-->
ಜೀವನ ಸಂಭ್ರಮ : ಸಂಚಿಕೆ - 75

ಜೀವನ ಸಂಭ್ರಮ : ಸಂಚಿಕೆ - 75

ಜೀವನ ಸಂಭ್ರಮ : ಸಂಚಿಕೆ - 75
                   
    
         ಮಕ್ಕಳೇ, ನಾವೆಲ್ಲ ಇಂದು ಪದೇಪದೇ ಕೇಳುತ್ತಿರುವುದು, ಜೀವನವೆಂದರೆ ಹೋರಾಟ ಎಂದು. ಹಾಗಾದರೆ ನೀವೇ ತೀರ್ಮಾನಿಸಿ.
       ಜೀವನವೆಂದರೆ ಹೋರಾಟ ಎಂಬುದು ವಿದೇಶಿಯರ ದೃಷ್ಟಿಕೋನ, ಭಾರತೀಯರದಲ್ಲ. ಹೋರಾಟದಲ್ಲಿ ಸಂತೋಷವಿಲ್ಲ. ಗೆದ್ದ ನಂತರ ಸಂತೋಷವಾಗುತ್ತದೆ.    
      ಉದಾಹರಣೆಗೆ ನೋಡೋಣ. ಇಂದು ಗ್ರಾಮ ಪಂಚಾಯಿತಿಯಿಂದ ಲೋಕಸಭೆ ವರೆಗೆ, ಅನೇಕ ಸಂಘ ಸಂಸ್ಥೆಗಳಿಗೆ ಚುನಾವಣೆ ಇರುವುದನ್ನು ನೋಡಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯ ಇರುವುದೇ ಚುನಾವಣೆಯಲ್ಲಿ. ಮತದಾರನು ತನ್ನ ನಾಯಕನನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾನೆ. ಆದರೆ ಇಂದು ನಡೆಯುತ್ತಿರುವ ಚುನಾವಣೆ ಹೋರಾಟಕ್ಕೆ ಕಾರಣವಾಗಿದೆ. ಈ ಹೋರಾಟ ಸಮುದಾಯದಲ್ಲಿ ಅಸಂತೋಷಕ್ಕೆ ಕಾರಣವಾಗಿದೆ. ಏಕೆಂದರೆ
1. ಹೋರಾಟದಲ್ಲಿ ಬೇರೆಯವರನ್ನು ಸೋಲಿಸುವುದೇ ಗುರಿಯಾಗಿರುತ್ತದೆ.
2. ಹೋರಾಟದಲ್ಲಿ ಯಶಸ್ವಿಯಾಗಲು ಬೇರೆಯವರನ್ನು ಅವಮಾನಿಸುವುದು, ಅವಹೇಳನ ಮಾಡುವುದು, ಇನ್ನೊಬ್ಬರ ದೋಷ ಗುರುತಿಸುವುದು, ಮತ್ತು ಅವರ ಕೊರತೆಗಳನ್ನು ಗುರುತಿಸುವುದನ್ನು ಕಾಣುತ್ತೇವೆ. ಇದರಿಂದ ಅವರವರ ಅನುಯಾಯಿಗಳಲ್ಲಿ ಅಸಂತೋಷ ಹೊಂದಿ ವೈಷಮ್ಯ, ಘರ್ಷಣೆ ಉಂಟಾಗುವುದನ್ನು ನೋಡುತ್ತಿದ್ದೇವೆ.
3. ಈ ಹೋರಾಟದಿಂದ ಅಭಿವೃದ್ಧಿ ಕುಂಠಿತವಾಗಿರುವುದನ್ನು ಕಾಣುತ್ತೇವೆ. ಈ ಹೋರಾಟದಿಂದ ಗ್ರಾಮಗಳು ಛಿದ್ರ ಛಿದ್ರವಾಗಿದ್ದು, ಯಾರಾದರೂ ಒಂದು ಒಳ್ಳೆಯ ಕೆಲಸ ಮಾಡಲು ಹೋದರೆ, ವಿರೋಧಿ ಗುಂಪು ಆ ಒಳ್ಳೆಯ ಕೆಲಸದಲ್ಲಿ ನ್ಯೂನ್ಯತೆ ಹುಡುಕಿ, ಆ ಕೆಲಸ ಆಗದಂತೆ ಮಾಡುವುದನ್ನು ಕಾಣುತ್ತಿದ್ದೇವೆ. ಇದರಿಂದ ಪ್ರತಿ ಒಳ್ಳೆಯ ಕೆಲಸಗಳಿಗೆ ವಿಘ್ನವಾಗುತ್ತಿದೆ.
4. ಹೋರಾಟದಲ್ಲಿ ಗೆಲುವೇ ಮುಖ್ಯವಾಗಿರುವುದರಿಂದ, ಯಾವ ಮಾರ್ಗವಾದರೂ ಸರಿಯೇ, ಸರಿಯಾದ ಮಾರ್ಗವೇ ಇರಬೇಕೆಂದಿಲ್ಲ. ಇದರಿಂದ ಅಡ್ಡ ದಾರಿಯ ಮಾರ್ಗದಲ್ಲೇ ಗೆಲುವನ್ನು ಹುಡುಕುವುದನ್ನು ಕಾಣುತ್ತಿದ್ದೇವೆ. ಇದರಿಂದ ಹೊಸ ಹೊಸ ಅನೈತಿಕ ಮಾರ್ಗಗಳು ಕಂಡುಬರುತ್ತದೆ. ಈ ಅನೈತಿಕ ಮಾರ್ಗವು ಜನರ ಸಂತೋಷವನ್ನು ನಾಶಪಡಿಸುತ್ತದೆ.
5. ಇಂದು ಕಾಣುತ್ತಿರುವ ಜಾತಿ, ಮತ, ಧರ್ಮ ಮತ್ತು ಲಿಂಗ ಆಧಾರಿತ ಘರ್ಷಣೆಗೆ ಈ ಹೋರಾಟವೇ ಕಾರಣವಾಗಿದೆ.
6. ಒಳ್ಳೆಯದರಲ್ಲಿ ಕೆಟ್ಟದ್ದನ್ನು ಹುಡುಕುವುದು, ಬೇರೆಯವರಲ್ಲಿ ತಪ್ಪನ್ನು, ದೋಷವನ್ನು ಗುರುತಿಸುವುದು. ಗೆಲುವಿಗೆ ಅನೈತಿಕ ಮಾರ್ಗ ಮತ್ತು ತಪ್ಪನ್ನು ಸಮರ್ಥಿಸುವುದು ಋಣಾತ್ಮಕ ಗುಣವಾಗಿದ್ದು. ಇವೆ ಅಸಂತೋಷಕ್ಕೆ ಕಾರಣ.
       ಇನ್ನು ಜೀವನವೆಂದರೆ ಹಬ್ಬ ಹೇಗೆ ನೋಡೋಣ?. ಜೀವನವೆಂದರೆ ಹಬ್ಬ ಎನ್ನುವುದು ಭಾರತೀಯ ಸಂಸ್ಕೃತಿ. ಭಾರತದಲ್ಲಿ ಆಗಾಗ್ಗೆ ಹಬ್ಬಗಳನ್ನು ಮಾಡುತ್ತೇವೆ. ಬಹುತೇಕ ಸಣ್ಣ ಪುಟ್ಟ ಹಬ್ಬಗಳೆ ತುಂಬಿವೆ. ಈ ಸಣ್ಣಪುಟ್ಟ ಹಬ್ಬಗಳಲ್ಲಿ ನಾವೇನು ಹೆಚ್ಚು ಹಣ ಖರ್ಚು ಮಾಡುವುದಿಲ್ಲ. ಪ್ರತಿ ಸಣ್ಣಪುಟ್ಟ ಹಬ್ಬಗಳಿಗೆ ಹೊಸ ಬಟ್ಟೆ ಖರೀದಿಸಬೇಕೆಂದಿಲ್ಲ. ಇರುವ ಬಟ್ಟೆಯನ್ನೇ ಶುಚಿ ಮಾಡಿ ಸುಂದರವಾಗಿ ಧರಿಸುತ್ತೇವೆ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ವೈವಿಧ್ಯಮಯ ಅಡುಗೆ ಮಾಡುತ್ತೇವೆ. ಗೆಳೆಯರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುತ್ತೇವೆ. ಮಾಡಿರುವ ಅಡುಗೆಯ ಸವಿಯನ್ನೇ ಹಂಚಿಕೊಂಡು ತಿನ್ನುತ್ತೇವೆ. ಇದರಿಂದ ಎಲ್ಲರ ಮುಖದಲ್ಲೂ ಸಂತೋಷ ಉಂಟಾಗುತ್ತದೆ. ಹಬ್ಬದ ಉದ್ದೇಶವೇ ಸಂತೋಷ.
ಮಕ್ಕಳೇ, ಭಾರತೀಯರಾದ ನಾವು ಹಬ್ಬದಂತೆ ಜೀವನ ಮಾಡಬೇಕು. ಹೇಗೆ ನೋಡೋಣ.
1. ಪ್ರತಿದಿನ ಸೂರ್ಯೋದಯಕ್ಕೆ ಮುಂಚೆ ಎದ್ದು, ದೈನಂದಿನ ನಿತ್ಯಕರ್ಮ ಮುಗಿಸಿ, ನಡಿಗೆ, ವ್ಯಾಯಾಮ, ಯೋಗಾಸನ ಮತ್ತು ಪ್ರಾಣಾಯಾಮ ಸೇರಿದಂತೆ ಯಾವುದಾದರೂ ದೈಹಿಕ ಚಟುವಟಿಕೆ ನಡೆಸುವುದು.
2. ದೈಹಿಕ ಚಟುವಟಿಕೆ ನಂತರ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಸುಂದರವಾಗಿ ಧರಿಸುವುದು. 
3. ದೇವರಲ್ಲಿ ನಂಬಿಕೆ ಇರುವವರು ಈ ಜಗತ್ತಿನಲ್ಲಿ ಅಗೋಚರ ಶಕ್ತಿ ಇದೆ ಎಂದು ನಂಬಿ ಪೂಜಿಸುವುದು. ದೇವರಲ್ಲಿ ನಂಬಿಕೆ ಇಲ್ಲದವರು ತಮ್ಮ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಳ್ಳುವುದು.
4. ಮನೆಯಲ್ಲಿರುವ ಸಾಮಗ್ರಿ ಬಳಸಿ ಪ್ರತಿದಿನ ವೈವಿಧ್ಯಮಯ ರುಚಿರುಚಿಯಾದ ಅಡುಗೆ ಮಾಡುವುದು. ಕೊರತೆ ಕಡೆ ಗಮನಹರಿಸದೆ ಇರುವುದನ್ನೇ ಸುಂದರವಾಗಿ ಬಳಸುವುದು.
5. ಕುಟುಂಬದ ಎಲ್ಲಾ ಸದಸ್ಯರು, ಬಂದಿರುವ ಗೆಳೆಯರು, ನೆಂಟರು ಸೇರಿದಂತೆ ಎಲ್ಲರೂ ಒಟ್ಟಿಗೆ ಕುಳಿತು ಊಟದ ರುಚಿ ಸವಿಯುವುದು. ನಿಧಾನವಾಗಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು ರುಚಿ ಅನುಭವಿಸಬೇಕು.
6. ನಮಗೆ ಪ್ರಿಯವಾದ ಕೆಲಸದಲ್ಲಿ ತೊಡಗುವುದು. ಆ ಕೆಲಸ ನಮಗೆ ಆನಂದ ಕೊಡಬೇಕು. ಆನಂದ ಉಂಟಾಗುವಂತೆ ಕೆಲಸ ಮಾಡುವುದು. ಅದಕ್ಕಾಗಿ ವೈವಿಧ್ಯಮಯವಾಗಿ ಅತ್ಯುತ್ತಮವಾಗಿ ತುಂಬಾ ಚೆನ್ನಾಗಿ ಮಾಡುವುದು.
7. ಒಳ್ಳೆಯದನ್ನೇ ನೋಡುವುದು, ಒಳ್ಳೆಯದನ್ನೇ ಕೇಳುವುದು, ಒಳ್ಳೆಯದನ್ನೇ ಗ್ರಹಿಸುವುದು ಹಾಗೂ ಒಳ್ಳೆಯ ಉಪಯುಕ್ತ, ಉತ್ಪಾದಕ, ನಿರ್ಮಾಣದ ಕೆಲಸ ಮಾಡುವುದು.
8. ಇನ್ನೊಬ್ಬರ ಲೋಪ ದೋಷ, ಕೊರತೆ ಗುರುತಿಸಬಾರದು. ಅವಕಾಶವಿದ್ದರೆ ಸಲಹೆ ನೀಡಬಹುದೇ ವಿನಹ ಇನ್ನೊಬ್ಬರನ್ನು ತಿದ್ದೇ ತೀರುತ್ತೇನೆ ಎಂಬ ಹಟ ಬೇಡ. ಇದರಿಂದ ಸಂತೋಷಕ್ಕೆ ಬಾಧಕ. ಆ ಇಡೀ ದಿನವನ್ನು ಆನಂದವಾಗಿ ಒಳ್ಳೆಯದಕ್ಕೆ ಬಳಸಬೇಕು. ಹೀಗೆ ಬಳಸಿದರೆ ಪ್ರತಿ ದಿನ ಹಬ್ಬ ಅಲ್ಲವೇ. ಜೀವನವೆಂದರೆ ವೈಭವದ ಜೀವನವಲ್ಲ. ಶ್ರೀಮಂತಿಕೆ ಜೀವನವಲ್ಲ. ಅದು ಸಂತೋಷದ ಜೀವನ. ಸಂತೋಷದ ಜೀವನಕ್ಕೆ ವೈಭವ, ಶ್ರೀಮಂತಿಕೆ ಅಗತ್ಯವಿಲ್ಲ. ಸಂತೋಷ ಇರುವುದು ಅನುಭವಿಸುವುದರಲ್ಲಿ. ಈಗ ನನ್ನಲ್ಲಿ ಸಾವಿರ ಕೆಜಿ ಅಕ್ಕಿ ಇದೆ. ಏನು ಮಾಡೋದು?. ಅದನ್ನು ವೈವಿಧ್ಯಮಯ ಅಡುಗೆ ಮಾಡಿ, ರುಚಿ ಸವಿದಾಗ ಆನಂದ ಉಂಟಾಗುತ್ತದೆ. ಹೀಗೆ ಬಳಸುವುದರಲ್ಲಿ ಸಂತೋಷವಿದೆಯೆ ವಿನಃ, ಸಂಗ್ರಹದಲ್ಲಿಲ್ಲ ಮತ್ತು ವಸ್ತುವಿನಲ್ಲಿ ಅಲ್ಲ. ಸಂತೋಷದ ಜೀವನವನ್ನು ವಸ್ತು, ಒಡವೆ, ಆಸ್ತಿಗಾಗಿ ಹಾಳು ಮಾಡಿಕೊಳ್ಳಬಾರದು. ಹೇಳಿ ಮಕ್ಕಳೇ, ಜೀವನವೆಂದರೆ ಹೋರಾಟವೇ ಅಥವಾ ಹಬ್ಬವೇ. ಹೋರಾಟದಿಂದ ಋಣಾತ್ಮಕ ಗುಣ ಹಾಗೂ ಹಬ್ಬದಿಂದ ಧನಾತ್ಮಕ ಗುಣ ಬೆಳೆಯುತ್ತದೆ ಅಲ್ಲವೇ. ಹೀಗೆ ನಾವು ಪ್ರತಿದಿನ ಹಬ್ಬವನ್ನೇ ಆಚರಿಸೋಣ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article