-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 53

ಸ್ಫೂರ್ತಿಯ ಮಾತುಗಳು : ಸಂಚಿಕೆ - 53

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com                        
                 ಮನೆಯ ದನವನ್ನು ಕರೆದು ಅದರ ಹಾಲು ಮಿಗತೆಯಿದ್ದರೆ ಬೇರೆಯವರಿಗೆ ಕೊಡುತ್ತೇವೆ. ಅದನ್ನು ಹಾಲು ವಿಕ್ರಯ ಅಥವಾ ಹಾಲಿನ ಮಾರಾಟ ಎನ್ನುವೆವು. ಹಾಲಿನ ವ್ಯಾಪಾರ ಅಥವಾ ವ್ಯವಹಾರ ಎಂದರೂ ತಪ್ಪಲ್ಲ. ಯಾಕೆಂದರೆ ಕೊಟ್ಟ ಹಾಲು ಹಣ ತರುತ್ತದೆ. ಹಾಲನ್ನು ಕರೆದಂತೆಯೇ ಅಳತೆ ಮಾಡಿ ಕೊಟ್ಟರೆ ಅದು ಪ್ರಕೃತಿ. ಲಾಭದ ಉದ್ದೇಶವನ್ನಿಟ್ಟು ಹಾಲಿಗೆ ನೀರನ್ನು ಬೆರೆಸಿ ಮಾರಾಟ ಮಾಡಿದರೆ ಅದು ವಿಕೃತಿ. ಪ್ರಕೃತಿಯಾಗಿರುವ ಹಾಲನ್ನು ವಿಕೃತಗೊಳಿಸಿರುವುದು ದನವಲ್ಲ. ಹಟ್ಟಿಯ ದನ ಮನೆಯೊಳಗಿನ ಮನುಷ್ಯನಿಗಿಂತ ಮಿಗಿಲು, ಅದು ವಿಕೃತವಾಗಿಲ್ಲ. ಪ್ರಕೃತಿ ಮಾನವತ್ವ, ವಿಕೃತಿ ದಾನವತ್ವ. ಸಮಾಜದೊಳಗೆ ವಿಕೃತಿಯ ಆರ್ಭಟವೇ ವಿಜೃಂಭಿಸುತ್ತದೆ. 
      ‘Nature is Future’ ಎಂಬ ಆಂಗ್ಲೋಕ್ತಿಯಿದೆ. ಕನ್ನಡೋಕ್ತಿಯಾಗಿ “ಪ್ರಕೃತಿಯೇ ದೇವರು” ಎಂಬುದಾಗಿಯೂ ಹೇಳುವೆವು. ಪ್ರಕೃತಿಯನ್ನು ಯಥವತ್ತಾಗಿ ಉಳಿಸಿದರೆ ಭವಿಷ್ಯವಿದೆ, ಹಾಗೆ ಉಳಿಸುವ ಮನಸ್ಸುಗಳು ದೇವರಿಗೆ ಸಮಾನ. ವಿಕೃತಗೊಳಿಸಿದರೆ ಪಿಶಾಚತ್ವ. ವಿಕೃತಿಯೆಂಬುದು ವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ವ್ಯಕ್ತಿಯೊಬ್ಬ ಚಹಾದ ಹುಡಿಗೆ ಅದೇ ಬಣ್ಣ ಮತ್ತು ಗಾತ್ರದ ಇತರೆ ಹುಡಿ ಮಿಶ್ರಗೊಳಿಸಿ ಮಾರಾಟ ಮಾಡಿದರೆ ಮುಂದೆ ಅವನು ಉತ್ತಮವಾದ ಚಹಾದ ಹುಡಿ ಮಾರಿದರೂ ಗ್ರಾಹಕರು ಸಿಗರು. ಅವನ ವ್ಯವಹಾರದ ಬಗ್ಗೆ ವಿಶ್ವಾಸ ನಾಶವಾಗಿ ಆತನಿಗೆ Future ಇರುವುದಿಲ್ಲ. ಅದಕ್ಕಾಗಿಯೇ “Nature is future‘ ಎಂಬ ಒಕ್ಕಣೆ ಹುಟ್ಟಿರುವುದಲ್ಲವೇ? ಸುಲಭ ಮತ್ತು ವೇಗದ ಶ್ರೀಮಂತಿಕೆಯನ್ನು ಬಯಸುವವರು ಹೆಚ್ಚು ವಿಕೃತರಾಗಿರುತ್ತಾರೆ. “ಲೋಭ ಮೂಲಾನಿ ಪಾಪಃ, ಇಷ್ಟ ಮೂಲಾನಿ ರೋಗಃ”. ಹಣದ ದಾಹಿಯಾದವನು ಪಾಪಿಯಾಗುತ್ತಾನೆ, ಶೋಕವನ್ನು ಅನುಭವಿಸುತ್ತಾನೆ. ಆದುದರಿಂದ ವಿಕೃತಿಯ ಲಾಭ ಪಾಪಕರ ಮತ್ತು ನಶ್ವರ.
       ಪ್ರಕೃತಿ ಮತ್ತು ವಿಕೃತಿಗಳೆರಡರಲ್ಲೂ ‘ಕೃತಿ’ ಇದೆ. ಕೃತಿಯೆಂದರೆ ಕೆಲಸ. ಸುಕೃತಿಯಾದರೆ ಅದಕ್ಕೆ ಎಲ್ಲೆಡೆಯೂ ಸ್ವೀಕೃತಿ ಇರುವುದೆಂಬುದನ್ನು ಮರೆಯಬಾರದು. ಸಾಹಿತ್ಯರಚನೆಯಲ್ಲಿಯೂ ಕೃತಿ ಎಂಬ ಪದ ಬರುತ್ತದೆ. ಕೃತಿಕಾರರು ಎಂದು ಸಾಹಿತ್ಯರಚಕನಿಗೆ ಉಪಾದಿಯಿರುತ್ತದೆ. ಆತನು ರಚಿಸುವ ಕೃತಿಗಳೂ ಪ್ರಕೃತಿಯಾಗಿರಬೇಕು; ಸತ್ಯವೂ ಸಮಾಜ ನಿರ್ಮಾಣಕ್ಕೆ ಪೂರಕವೂ ಆಗಿರಬೇಕು. ಸಾಹಿತ್ಯ ವಿಕೃತವಾದರೆ ಸಮಾಜವು ವಿಕಾರಗೊಳ್ಳುತ್ತದೆ. ಕೈಗಳಿಂದಾಗಲೀ ದೇಹದಂಡನೆಯಿಂದಾಗಲೀ ಮನೋಬಲದಿಂದಾಗಲೀ ಜ್ಞಾನ ಬಲದಿಂದಾಗಲೀ ಮಾಡುವ ಕೃತಿಗಳೆಲ್ಲವೂ ಪ್ರಕೃತಿಯನ್ನು ಎಂದರೆ ಸತ್ಯದ ಉಳಿವನ್ನೇ ಆಧರಿಸಿರಬೇಕು. ಪ್ರಕೃತಿಯನ್ನೂ ಮೀರಿದುದೆಲ್ಲವೂ ವಿಕೃತಿಯೇ ಆಗಿರುತ್ತದೆ. ಪ್ರಕೃತಿಯೆಂದರೆ ಸಹಜವಾಗಿರಬೇಕಾದುದೆಂದು ಅರ್ಥೈಸುತ್ತೇವೆ. ವಿಕೃತ ಮಾತು ಅಥವಾ ವಿಕೃತ ಭಾಷೆಯೆಂದು ಕೇಳಿದ್ದೇವೆ. ವಿಕೃತ ಹೇಳಿಕೆ ಎಂದರೂ ವಿಕೃತ ಮಾತೇ ಅಲ್ಲವೇ? ವಿಕೃತ ಹಸಿವು, ವಿಕೃತ ದಾಹ, ವಿಕೃತ ದೃಷ್ಟಿ, ವಿಕೃತ ವರ್ತನೆ, ವಿಕೃತ ಆಂಗಿಕತೆ, ವಿಕೃತ ವಿಚಾರಧಾರೆ, ವಿಕೃತ ಪರಿಸ್ಥಿತಿ ಹೀಗೆ ವಿಕೃತದೊಂದಿಗೆ ಜೋಡಿತ ಪದಗಳಿವೆ. ಇವು ಸಜ್ಜನಿಕೆಗೆ ವಿರುದ್ಧವಾದ ಮತ್ತು ಅಸಹನೀಯವಾದ ಅಸಹಜ ಮನಸ್ಥಿತಿ ಮತ್ತು ವಸ್ತುಸ್ಥಿತಿಗಳಾಗಿವೆ.
       ವಿಕೃತ ಭಾವವು ರಾಕ್ಷಸೀಯ. ರಾವಣನು ಜನ್ಮತಃ ಬ್ರಾಹ್ಮಣ. ಆದರೆ ಅವನ ವಿಕೃತ ಚೇಷ್ಟೆಗಳು ಅವನನ್ನು ರಾಕ್ಷಸ ಎಂದು ಸಾರುವಂತೆ ಮಾಡಿದುವು. ಮಹಾಭಾರತದಲ್ಲಿ ಕೌರವ ಸೋದರರು ವಿಕೃತ ಪಾತ್ರಗಳಾಗಲು ಅವರ ದಾರ್ಷ್ಟ್ಯವೇ ಕಾರಣ. ಕಂಸಾಸುರ, ನರಕಾಸುರ, ಮೂಕಾಸುರ, ಹಿಡಿಂಬಾಸುರ, ಮಹಿಷಾಸುರ, ಭಸ್ಮಾಸುರ ಮುಂತಾದವರು ಭಗವಂತನಿಂದಲೇ ವರಪಡೆದವರು. ಮಹಾ ಶಕ್ತಕಾಯರು. ಆದರೆ ಅವರ ವಿಕೃತ ಕರ್ಮಗಳು ಅವರನ್ನು ಆಹುತಿ ಪಡೆದುವು. ಚಕ್ರವರ್ತಿ ಶಿಬಿ. ಭೂಪಾಲ ಸತ್ಯ ಹರಿಶ್ಚಂದ್ರ, ಮಹಾರಾಜ ನಳ, ಭರತ ಚಕ್ರವರ್ತಿ, ಶ್ರೀರಾಮಚಂದ್ರ ಮುಂತಾದವರು ಪುರಾಣಪುರುಷರಾದರು. ಅವರ ಸುಕೃತಗಳೇ ಅವರನ್ನು ಉದ್ಧರಿಸಿವೆ..... ನಮಸ್ಕಾರ.
............ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article