ಸ್ಫೂರ್ತಿಯ ಮಾತುಗಳು : ಸಂಚಿಕೆ - 55
Monday, March 20, 2023
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಆಭರಣ ಎಂದೊಡನೆಯೇ ನೆನಪಿನಂಚಿಗೆ ಬರುವ ಮೊದಲ ವ್ಯಕ್ತಿ ಮಹಿಳೆ. ಶಿರಾಭರಣಗಳಾದ ಬೈತಲೆಸರ, ಬೈತಲೆ ಪದಕ, ಬಾಸಿಂಗ, ನಾಗರ ರಾಗಟೆ, ಕೇದಿಗೆ, ಸಂಪಿಗೆ, ಚೌರಿ, ರೋಜಾ ಹೂ, ಮೊಗ್ಗಿನ ಮಾಲೆ, ಮುಳ್ಳು, ಮೊಗ್ಗಿನ ಜಡೆ, ಗಿಳಿ ಹರಳು ಬಂಗಾರ, ಹರಳಲಂಕಾರ, ಗೊಂಡೆ ಹೂ ಮುಂತಾದುವುಗಳನ್ನು ಧರಿಸಿದ ಮಹಿಳೆಯ ಕಲ್ಪನೆ ಬಂದೇ ಬಿಡುತ್ತದೆ. ಕರ್ಣಾಭರಣಗಳಾದ ಓಲೆ, ಕಮಲಪುಷ್ಪ, ಬುಗುಡಿ, ಗುಬ್ಬಿ, ಬಳೆ, ಕೊಪ್ಪು, ಕೆನ್ನೆ ಸರಪಳಿ ಇತ್ಯಾದಿಗಳಿಂದ ಅಲಂಕೃತಳಾದ ವನಿತೆಯೂ ದೃಗ್ಗೋಚರವಾಗುವಳು. ನಾಸಿಕ ಭೂಷಣಗಳಾದ ಮೂಗುತಿ ಅಥವಾ ಬುಲಾಕು, ಕಂಠಾಭರಣಗಳಾದ ತಾಳಿ, ಚಂದ್ರಹಾರ, ಮೋಹನ ಮಾಲೆ, ಕಂಠೀ ಸರ, ಪುತ್ಥಳಿ ಸರ, ಕಾಸಿನ ಸರ, ಗುಂಡಿನ ಸರ, ಬ್ರಹ್ಮಮುಡಿ ಸರ, ಕೋಪಚೇನು, ಬೋರಮಾಳು, ನೆಲ್ಲಿಕಾಯಿ ಸರ, ಗೋಧಿ ಸರ, ಜೋಳದ ಸರ, ಮಾವಿನಕಾಯಿ ಸರ, ಮಲ್ಲಿಗೆ ಮೊಗ್ಗಿನ ಸರ ಇತ್ಯಾದಿಗಳಿಂದ ಅಲಂಕೃತಳೂ ಕಣ್ಮುಂದೆ ಬರುತ್ತಾಳೆ. ಕರ ಮತ್ತು ತೋಳಿನ ಆಭರಣಗಳಾದ ಕಡಗ, ಗೋಟು, ಪಾಟಲಿ, ತೋಡೆ, ಬಳೆ, ತೋಳಬಂದಿ, ವಂಕಿ, ನಾಗಮುರಿಗೆ, ಉಂಗುರ, ಸರಪಳಿ, ಸರಿಗೆ, ಅಸಲಿ ಇವುಗಳಿಂದಲೋ; ಸೊಂಟದ ಆಭರಣಗಳಾದ ಡಾಬು, ವಡ್ಯಾಣ, ಮೇಖಲೆ ಮೊದಲಾದುವುಗಳಿಂದಲೋ ಸಾಲಂಕಾರಿತ ವಧು ಕಾಣಿಸುವುದೂ ಇದೆ. ಗೆಜ್ಜೆ, ಪೈಜಣ, ರುಳೀ, ಕಡಗ, ಸರಪಳಿ, ಕಾಲುಂಗುರ ಮೊದಲಾದ ಪಾದಾಭರಣಗಳಿಂದ ಸುಶೋಭಿತಳು ಕಾಣುತ್ತಾಳೆ. ಆಭರಣ ಧರಿಸುವುದರಲ್ಲಿ ಪುರುಷನೇನೂ ಕಡಿಮೆಯಿಲ್ಲ. ತನ್ನ ಆಭರಣ ಪ್ರಿಯತೆಯನ್ನು ಮತ್ತು ಸಿರಿವಂತಿಕೆಯನ್ನು ತೋರಿಸಲು ಸಾಧ್ಯವಾದ ಆಭರಣಗಳೆಲ್ಲವನ್ನೂ ಪುರುಷನೂ ಧರಿಸುವನು. ಆದರೆ ಧರಿಸುವ ಆಭರಣಗಳೆಲ್ಲವೂ ಮನೆಯ ಆರ್ಥಿಕತೆಯನ್ನು ಅನುಸರಿಸಿರುತ್ತದೆ. ಬಡವರು ಆಭರಣಗಳ ಹೆಸರು ಹೇಳಬಹುದೇ ಹೊರತು ತುಟ್ಟಿಯಾದುದರಿಂದ ಪಡೆಯುವಂತಿಲ್ಲ.
ಆಭರಣಗಳಿಂದ ಅಲಂಕೃತಳಾಗಿ ತಮ್ಮ ಮುಂದೆ ಅಮ್ಮ ಕಾಣಿಸಿದಾಗ ಮಕ್ಕಳೂ ಅಭಿಮಾನ ಪಡುವುದಿದೆ. ಆದರೆ ಆಭರಣಗಳಿಂದ ಭೂಷಿತಳಾಗಿದ್ದರೂ, ಕೋಪಾಟೋಪಳಾದರೆ, ಅದೇ ಅಮ್ಮ ಮಕ್ಕಳಿಗೆ ಗುಮ್ಮನಂತೆಯೂ ಕಾಣಿಸುವಳು. ದೇಹದ ಹೊರಗಿನ ಆಭರಣಕ್ಕಿಂತ ಶ್ರೇಷ್ಠವಾದ ಆಭರಣ ಅಂತಃಕರಣದಲ್ಲಿರಬೇಕು. ಬಾಹ್ಯ ಆಭರಣಗಳಿಲ್ಲದಿದ್ದರೂ ಅಂತಃಕರಣದಲ್ಲಿ ಆಭರಣ ಸ್ವರೂಪಿಗಳಾಗಿರುವ ಸಹನೆ, ಪ್ರೀತಿ, ಕರುಣೆಗಳು ತುಂಬಿ ತುಳುಕುತ್ತಿದ್ದರೆ ಮಕ್ಕಳಿಗೆ ಆಗುವ ಆನಂದ ಅವರ್ಣನೀಯ. ಬೆಲೆ ಬಾಳುವ ಆಭರಣಗಳನ್ನು ಧರಿಸಿದರೆ ಸಿಗುವ ಮನ್ನಣೆಗಿಂತ ಹೆಚ್ಚಿನ ಮನ್ನಣೆ ಅಂತರಂಗದ ಆಭರಣಗಳಿಂದ ನಮಗೆ ಸಿಗುತ್ತದೆ. ಶುದ್ಧವಾದ ಅಂತಃಕರಣ ಹುಟ್ಟಿನಿಂದ ಚಟ್ಟದ ತನಕ ನಮಗೆ ಸಂಗಾತಿಯಾಗಿರಬೇಕು. ಅಂತರಂಗದ ಆಭರಣಗಳಿಂದ ಶೋಭಿತವಾದ ವ್ಯಕ್ತಿತ್ವಕ್ಕೆ ಮನ್ನಣೆ ಸಾರ್ವತ್ರಿಕವಾಗಿರುತ್ತದೆ. ಬಂಗಾರ, ಮುತ್ತು, ರತ್ನ, ವಜ್ರ, ವೈಢೂರ್ಯಗಳಂಹ ಬೆಲೆಬಾಳುವ ಆಭರಣಕ್ಕಿರುವ ಗೌರವ ಕ್ಷಣಿಕ. ಅವು ಕಳ್ಳಕಾಕರ ಸೊತ್ತೂ ಆಗಬಹುದು. ಅಂತಃಕರಣದ ಆಭರಣಗಳು ಜೀವನಪರ್ಯಂತ ಸುರಕ್ಷಿತ ಮತ್ತು ಮೌಲ್ಯದಾಯಕ.
ಅಂತಃಕರಣದ ಆಭರಣಗಳು ಲಭ್ಯವಾಗಲು ಸತ್ ಚಿಂತನೆ, ಸದ್ವರ್ತನೆ, ಸದಾಚಾರ, ಸತ್ಸಂಗ, ಸದ್ ಆಲೋಚನೆ, ಸದ್ಗ್ರಂಥಗಳ ಓದು ಮೊದಲಾದುವುಗಳ ಒಡನಾಡಿಗಳಾಗಬೇಕು. ಅಂತರಂಗದೊಳಗೆ ನಾವು ಧರಿಸಿದ ಆಭರಣಗಳಿಂದ ಅಲಂಕಾರ, ಅಂದ ಮತ್ತು ಸದಾನಂದವನ್ನು ನಮಗೆ ಅನುಭವಿಸಲು ಸಾಧ್ಯ. ಬಾಹ್ಯ ಆಭರಣಗಳು ಶೋಕಿಗೆ ಕಾರಣವೇ ಹೊರತು ಅವುಗಳಿಂದಾಗಿ ಗೌರವ ಏರದು. ಆದರೂ ಬಾಹ್ಯ ಅಂದಕ್ಕೆ ಸ್ವಲ್ಪ ಆಭರಣಗಳೂ ಇರಲಿ.
ಮುಖ ಮಾರ್ಜನ ಮಾಡಿ ಮುಖಕ್ಕೆ ನಾನಾ ವರ್ಣಿಕೆಗಳನ್ನು ಹಚ್ಚಿ ಮುಖಾಲಂಕಾರ ಮಾಡುವುದನ್ನು ನಿತ್ಯವೂ ನೋಡುತ್ತೇವೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಗಳಲ್ಲಿ ಅಲಂಕಾರ ಸಾಧನಗಳು ಲಭಿಸುತ್ತವೆ. ಆದರೆ ಮುಖವರ್ಣಿಕೆ ನೀಡುವುದಕ್ಕಿಂತ ನೂರು ಪಟ್ಟು ಅಲಂಕಾರವನ್ನು ಮುಖಕ್ಕೆ ಒದಗಿಸಿ; ರೂಪದರ್ಶಿಯನ್ನು ನಾಚುವಂತೆ ಮಾಡುವ ಶಕ್ತಿಯು ಮುಗುಳು ನಗುವಿಗಿದೆ. 'ಮುಗ್ಧ ಮುಗುಳು ನಗುವಿಗಿಂತ ಶ್ರೇಷ್ಠವಾದ ಆಭರಣ' ‘Single smile makes all curves straight.’ 'ಮುಗುಳು ನಗುವಿಗೆ ಎಲ್ಲ ವಕ್ರ ಮನಗಳನ್ನು ನೇರ್ಪಡಿಸುವ ಮಹಾಶಕ್ತಿಯಿದೆ.' ಮನುಷ್ಯನಿಗೆ ಇನ್ನೊಂದು ಬೆಲೆಬಾಳುವ ಆಭರಣ ಸೌಜನ್ಯ ಭರಿತ ವಿನಯದ ಮಾತು. ಮಾತೇ ಮಾಣಿಕ್ಯ
ಚಿನ್ನಾಭರಣಕ್ಕಿಂತ ಮಿಗಿಲಾದ ಆಭರಣಗಳಲ್ಲಿ ಸರಳತೆ ಮತ್ತು ಸ್ವಾವಲಂಬನೆ ಅಗ್ರಮಾನ್ಯವಾದುದು. ಕಳ್ಳರು ಅಪಹರಿಸದ, ಶಾಶ್ವತವಾಗಿ ನಮ್ಮೊಡನೆಯೇ ಉಳಿಯುವ ಸ್ವಚ್ಛವಾದ ಮನಸ್ಸು, ನಗುಮುಖ, ವಿನಯದ ಮಾತು, ಸರಳತೆ, ಸ್ವಾವಲಂಬನೆ ಮೊದಲಾದ ಶಾಶ್ವತ ಆಭರಣಗಳೇ ನಮಗಿರಲಿ ಅಲ್ಲವೇ?
ಮಕ್ಕಳೇ ನಮಸ್ಕಾರ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************