ಮಾರ್ಚ್ - 20 : ವಿಶ್ವ ಗುಬ್ಬಚಿ ದಿನ
Sunday, March 19, 2023
Edit
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಕಣ್ಣ ಮುಂದೆಯೇ ಕಣ್ಮರೆಯಾಗುತ್ತಿರುವ ಒಂದು ಪುಟ್ಟ ಪಕ್ಷಿ ಗುಬ್ಬಚ್ಚಿ. ಪುಟ್ಟ ಮಕ್ಕಳಿಗೆ ಕಥೆಯ ರೂಪದಲ್ಲಿ ಅಮ್ಮಂದಿರ ಬಾಯಿಯಲ್ಲಿ ಬರುತ್ತಿದ್ದ 'ಗುಬ್ಬಚ್ಚಿ' ಇತಿಹಾಸವಾಗುವ ಹಂತದಲ್ಲಿರುವುದು ಖೇದಕರ.
ಮನೆಯ ಮಾಡಿನ ಮೇಲೆ ಹುಲ್ಲು, ಕಡ್ಡಿ ಇಲ್ಲವೇ ಬಟ್ಟೆಯ ತುಂಡುಗಳನ್ನು ಬಳಸಿ ಗೂಡು ಕಟ್ಟಿ ಮರಿ ಇಡುವ ಈ ಗುಬ್ಬಚ್ಚಿಯ ದಿನಚರಿ ನೋಡುವುದೇ ಮನಸ್ಸಿಗೆ ಮುದ ನೀಡುತ್ತಿತ್ತು. ಕಪ್ಪು, ಬೂದು ಹಾಗೂ ಬಿಳಿ ಬಣ್ಣಗಳಿಂದ ಕೂಡಿದ ಈ ಪುಟ್ಟ ಹಕ್ಕಿ ಚೂಪಾದ ಕೊಕ್ಕು, ಸಣ್ಣ ಬಾಲ ಹೊಂದಿದ್ದು ನೋಡಲು ಮನಸ್ಸಿಗೆ ಹಿತವಾಗುತ್ತದೆ.
ಪ್ರಪಂಚದ ಬಹಳಷ್ಟು ರಾಷ್ಟ್ರಗಳಲ್ಲಿ ಜೀವಿಸುತ್ತಿರುವ ಈ ಹಕ್ಕಿ, ಪ್ರತ್ಯೇಕವಾಗಿ ಇಲ್ಲವೇ "ಹಿಂಡು" ಗಳಲ್ಲಿಯೂ ವಾಸಿಸುತ್ತಿರುತ್ತದೆ. ಹಣ್ಣು, ಕೀಟ, ಬೀಜ ಇಲ್ಲವೇ ಅನ್ನದ ಅಗಲುಗಳು ಗುಬ್ಬಚ್ಚಿಯ ಆಹಾರಗಳು. ಸಣ್ಣ ದೇಹದ ಈ ಮುಗ್ಧ ಪಕ್ಷಿ ಸುಮಾರು 5 ರಿಂದ 7 ವರ್ಷಗಳು ಬದುಕಬಲ್ಲವು.
ಮನಷ್ಯನ ಜಾತಿ ಕೇಳದೆ ಪ್ರತಿಯೊಬ್ಬರ ಮನೆ ಇಲ್ಲವೇ ಮಂದಿರ, ಮಸೀದಿ, ಬಸದಿ, ಚರ್ಚ್, ಗುರುದ್ವಾರಗಳೆಂದು ಭೇದ ತೋರದೆ ತನಗಿಷ್ಟ ಬಂದಲ್ಲಿ ಗೂಡು ಕಟ್ಟುವ ಈ ಹಕ್ಕಿ ಸೌಹಾರ್ದತೆಯ ಪ್ರತೀಕವಾಗಿದೆ. ತನ್ನ ಕಾಲುಗಳು ಬಲಿಷ್ಠವಿಲ್ಲದ ಕಾರಣ ಗುಬ್ಬಚ್ಚಿ ನಡೆಯುವುದು ವಿರಳ. ಅದು ಕುಪ್ಪಳಿಸುತ್ತಾ ಚಲಿಸುತ್ತದೆ ಇಲ್ಲವೇ ಹಾರಿ ಹೋಗುತ್ತದೆ.
ಇಂದು ನಾಶವಾಗುತ್ತಿರುವ ಪಕ್ಷಿಕುಲಗಳಲ್ಲಿ ಗುಬ್ಬಚ್ಚಿ ಸಂತತಿ ಮುಂಚೂಣಿಯಲ್ಲಿದೆ. ಪಕ್ಷಿಗಳ ನಾಶವು ಹಾಳಾಗುತ್ತಿರುವ ಪರಿಸರದ ಲಕ್ಷಣಗಳಾಗಿವೆ. ಪರಿಸರ ನಾಶದ ಮೊದಲ ಮುನ್ಸೂಚನೆಯೇ ಹಕ್ಕಿಗಳ ಕಣ್ಮರೆ. ಅದರಲ್ಲೂ ಮುಖ್ಯವಾಗಿ ಮೊಬೈಲ್ ಟವರ್ ಗಳು ಗುಬ್ಬಚ್ಚಿಗಳ ನಾಶಕ್ಕೆ ಬಹುಮುಖ್ಯ ಕಾರಣವಾಗಿದೆ.
ಪ್ರತಿಯೊಬ್ಬರ ಮನೆಯ ಮುಂದೆ ಗುಬ್ಬಚ್ಚಿಗಳ ಶಬ್ಧ ಇಂದು ಅಪರೂಪವಾಗಿದೆ. ಎಲ್ಲೋ ಒಂದೆರಡು ಮನೆಗಳಲ್ಲಿ ಮಾತ್ರ ಕಾಣ ಸಿಗುವ ಗುಬ್ಬಚ್ಚಿ ಮುಂದಿನ ದಿನಗಳಲ್ಲಿ ಕಥೆಗಳಲ್ಲಿ ಮಾತ್ರ ಉಳಿಯಬಹುದೇನೋ?. ಪ್ರಕೃತಿ ವೈಪರೀತ್ಯದಿಂದ ವಿನಾಶ ಸಂಭವಿಸುವಾಗ ಮೊದಲು ಹಕ್ಕಿಗಳೇ ಬಲಿಪಶುಗಳಾಗುತ್ತದೆ ಎಂದು ಹೇಳಲಾಗುತ್ತದೆ. ಹಕ್ಕಿಗಳ ನಾಶದ ನಂತರ ಮನುಷ್ಯರ ಅವನತಿ ಆರಂಭಗೊಳ್ಳುತ್ತದೆ ಎಂಬುವುದು ಹಿರಿಯರ ಮಾತು. ಮನುಷ್ಯನ ಉಳಿವಿಗಾಗಿ ಹಕ್ಕಿಗಳ ಸಂತತಿಯೂ ಉಳಿಯಲೇ ಬೇಕಿದೆ. ಇಂದು ಮಾರ್ಚ್ 20 ವಿಶ್ವ ಗುಬ್ಬಚ್ಚಿಗಳ ದಿನ. ಮುಗ್ಧ ಹಕ್ಕಿಗಳ ಸಂತತಿ ಮಕ್ಕಳ ಕಥೆಗಳಾಗದೆ ಮತ್ತಷ್ಟು ವೃದ್ಧಿಸಲಿ ಎಂಬುವುದೇ ಈ ದಿನದ ಹಾರೈಕೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************