ಪ್ರೀತಿಯ ಪುಸ್ತಕ : ಸಂಚಿಕೆ - 52
Friday, March 31, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 52
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ನಗರದಲ್ಲಿ ವಾಸಿಸುವ ಪುಟ್ಟಿ ಬೇಸಿಗೆಯ ರಜದಲ್ಲಿ ಹಳ್ಳಿಯಲ್ಲಿ ಇರುವ ಅಜ್ಜಿ ಮನೆಗೆ ಬರುತ್ತಾಳೆ. ಸುಂದರವಾದ ಪ್ರದೇಶ ಅದು. ಸುತ್ತಲೂ ಕಾಡು. ಹಕ್ಕಿ, ಪ್ರಾಣಿಗಳು ಓಡಿಯಾಡುತ್ತಿರುತ್ತವೆ. ಒಂದು ದಿನ ಅವರ ಮನೆ ಅಂಗಳಕ್ಕೆ ಒಂದು ಪುಟ್ಟ ಹಕ್ಕಿ ಬರುತ್ತದೆ. ಹೊಸಾ ಹಕ್ಕಿ. ಪುಟ್ಟಿ ಅಜ್ಜಿಯನ್ನು ಕೇಳಿ ಅದರ ಹೆಸರು ಅಂಬುಗ ಅಂತ ತಿಳಿದುಕೊಳ್ಳುತ್ತಾಳೆ. ಆ ಹಕ್ಕಿ ಅಲ್ಲಿಗೆ ಯಾಕೆ ಬರುತ್ತದೆ ಅಂತ ತಿಳಿದುಕೊಳ್ಳುತ್ತಾಳೆ. ಒಂದಲ್ಲ ಎರಡಲ್ಲ್ಲ ನೂರಾರು ಹಕ್ಕಿಗಳು ಬರುತ್ತಿರುತ್ತವೆ. ಪುಟ್ಟಿ ದಿನಾ ಆ ಹಕ್ಕಿಗಳು ಬರುವುದಕ್ಕೆ ಕಾಯುತ್ತಿರುತ್ತಾಳೆ. ಆ ಹಕ್ಕಿಗಳ ಸಹವಾಸದಲ್ಲಿ ಏನೋ ಸಂತಸ ಪಡುತ್ತಿರುತ್ತಾಳೆ. ಸ್ವಲ್ಪ ಸಮಯದ ನಂತರ ಹಕ್ಕಿಗಳು ಬರುವುದು ನಿಂತು ಹೋಗುತ್ತದೆ. ಹಕ್ಕಿಗಳು ಯಾಕೆ ಬರುತ್ತಿದ್ದವು? ಏನು ಮಾಡುತ್ತಿದ್ದವು? ಯಾಕೆ ಬರುವುದ ನಿಲ್ಲಿಸಿದವು? ಪುಟ್ಟಿಗೆ ಏನು ಉಡುಗೊರೆ ಕೊಟ್ಟು ಹೋದವು? – ಪುಸ್ತಕ ಓದಿ ತಿಳಿದುಕೊಳ್ಳಿ. ಚಂದ ಚಂದದ ಚಿತ್ರಗಳೂ ಇವೆ. ಅಂತೆಯೇ ನೀವು ಅಜ್ಜಿ ಮನೆಗೆ ಅಥವಾ ನೆಂಟರ ಮನೆಗೆ ಹೋದಾಗ ಆಗುವ ನಿಮ್ಮ ಅನುಭವಗಳನ್ನು ಬರೆದಿಡಿ.
ಲೇಖಕರು: ನಾ ಡಿಸೋಜಾ
ಚಿತ್ರಗಳು: ಉಮಾ ಕೃಷ್ಣಸ್ವಾಮಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.50/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************