-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 3

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 3

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 3
ಲೇಖಕರು : ಲೋಕೇಶ್ ಸರ್ಕುಡೇಲು
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಬಿಳಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
     


    ಶಾಲೆಯಲ್ಲಿ ಮಕ್ಕಳ ಜೊತೆ ಬೆರೆಯುವ ಕ್ಷಣಗಳು ಅದ್ಭುತ ಅನುಭವ. ಶಾಲೆಯಲ್ಲಿ ನಡೆಸುವ ವಿಭಿನ್ನ ಪ್ರಯೋಗಗಳು, ಸೃಜನಶೀಲ ಚಟುವಟಿಕೆಗಳು ನಮ್ಮಲ್ಲಿ ಅನುಭವದ ಬುತ್ತಿಯನ್ನು ಕಟ್ಟಿಕೊಡುತ್ತವೆ.... ಶಿಕ್ಷಕರ ನೆನಪಿನ ಡೈರಿಯಲ್ಲಿ ದಾಖಲಾಗಿರುವ ಸ್ಕೂಲ್ ಅನುಭವಗಳಿಗೆ ಅಕ್ಷರ ರೂಪ ಕಾಣುವ ಅಂಕಣ ಇದು. "ಶಿಕ್ಷಕರ ಸ್ಕೂಲ್ ಡೈರಿ"
               
               ಅವನ ಹೆಸರು ರಂಜನ್. ಮರೆತು ಹೋಗುವ ಹೆಸರಲ್ಲ. ಅವನು ತರಗತಿ ಒಂಭತ್ತು. ಆದರೆ ಒಂದು ವಾಕ್ಯದ ಒಂಭತ್ತು ಅಕ್ಷರವನ್ನೂ ಆತ ಬರೆಯಲಾರ. ಅವನನ್ನು ಗದರಿಸುವ ಹೆದರಿಸುವ ಮಾತು ಬಹಳ ದೂರ. ಮೊದಲೇ ಅಮ್ಮ ಸೂಚನೆ ಕೊಟ್ಟಿದ್ದಾರೆ, "ಅವನು ಬದುಕಿದ್ದೇ ಹೆಚ್ಚು. ಮನೆಯಲ್ಲಿ ಒಂದು ಮಾತೂ ಗಟ್ಟಿ ಧ್ವನಿಯಲ್ಲಿ ಹೇಳುವಂತಿಲ್ಲ." ಇನ್ನು ಶಿಕ್ಷಣದ ಹೆಸರಿನಲ್ಲಿ ನಾವು ಶಿಕ್ಷಿಸುವುದು ಎಷ್ಟು ಸರಿ..? ಅವನು ಓದಿದಷ್ಟೇ ಸಾಕು. ನಿರಂತರ ಶಾಲೆಗೆ ಬರುತ್ತಾನಲ್ಲಾ ದೊಡ್ಡ ಪುಣ್ಯ. ದೀರ್ಘ ಗೈರುಹಾಜರಿಯ ತೂಗುಗತ್ತಿಯಂದ ಪಾರಾದ ನೆಮ್ಮದಿ.
       ಅವನ ಬಗ್ಗೆ ಹೇಳಲು ಕಾರಣವಿದೆ. ಒಮ್ಮೆ ಶಾಲೆಯಲ್ಲೊಂದು ಪರಿಸರ ಸ್ಪರ್ಧೆ. ಸಸ್ಯದ ಎಲೆಗಳನ್ನು ಸಂಗ್ರಹಿಸಿ ತಂದು ಎಲ್ಲರೆದುರು ಗುರುತಿಸುವುದು ವಿಷಯ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾದ್ದರಿಂದ ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ಮರುದಿನ ಉತ್ಸಾಹಿ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಂದು ಪ್ರದರ್ಶಿಸತೊಡಗಿದರು. ಮೂವತ್ತು, ನಲವತ್ತು , ಐವತ್ತು , ಹೀಗೆ ಲೆಕ್ಕ ಸಾಗಿತ್ತು. ಕೊನೆಯವನಾಗಿ ಬಂದವನೇ ನಮ್ಮ ಕಥೆಯ ಹೀರೋ ರಂಜನ್. ಮುಕ್ಕಾಲು ಭಾಗ ತುಳು ಮತ್ತು ಕಾಲು ಭಾಗ ಕನ್ನಡದಲ್ಲಿ ಬರೋಬ್ಬರಿ ನೂರ ಮೂರು ಸಸ್ಯಗಳನ್ನು ಗುರುತಿಸಿ ಗೆಲುವಿನ ಪತಾಕೆ ಹಾರಿಸಿದ್ದ. ಎಲ್ಲರ ಹುಬ್ಬೇರುವಂತೆ ಮಾಡಿದ. ಅಕ್ಷರದ ಪರೀಕ್ಷೆಯಲ್ಲಿ ಸೋತವನು ಪ್ರಕೃತಿಯ ಅರಿವಿನ ಸ್ಪರ್ಧೆಯಲ್ಲಿ ಗೆದ್ದು ಬೀಗಿದ. ಎಲ್ಲರದೂ ಒಂದೇ ಪ್ರಶ್ನೆ - ಇಷ್ಟೊಂದು ಹೆಸರು ನೆನಪಿಡಬಹುದಾದರೆ ಅಕ್ಷರಗಳು ಮರೆಯುವುದು ಹೇಗೆ...?
      ಶಿಕ್ಷಕರಾಗಿ ಯಾವನೇ ವಿದ್ಯಾರ್ಥಿಯನ್ನು ಯಾವುದಕ್ಕೂ ಆಗದವನು ಎಂದು ತೀರ್ಪು ಕೊಡುವ ಮೊದಲು ಮತ್ತೊಮ್ಮೆ ಮಗದೊಮ್ಮೆ ಯೋಚಿಸಿದರೆ ಒಳಿತು. ಈ ಹುಡುಗನಂತೆ ಇನ್ನಾವುದೋ ಸಾಮರ್ಥ್ಯವನ್ನು ಒಡಲಲ್ಲಿ ಹುದುಗಿಸಿಟ್ಟು ಅವಕಾಶಕ್ಕಾಗಿ ಹಂಬಲಿಸುತ್ತಿರಬಹುದು. ಕುಶಲಕರ್ಮಿ, ಕಲಾವಿದ, ಕ್ರೀಡಾಳು, ಪಾಠದೊಳಗೆ ಹುಟ್ಟಿ ಬರಲಾರ. ಅವಕಾಶಗಳ ಬಾಗಿಲು ತೆರೆದಾಗ ನುಗ್ಗಿಬರುವ. ಈ ಘಟನೆ ಆಗಾಗ ನೆನಪಿನಂಗಳದಲ್ಲಿ ಮಿಂಚಿ ಮರೆಯಾಗುತ್ತದೆ.
............................... ಲೋಕೇಶ್ ಸರ್ಕುಡೇಲು
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಬಿಳಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99018 57627
******************************************


Ads on article

Advertise in articles 1

advertising articles 2

Advertise under the article