
ಸಂಚಾರಿಯ ಡೈರಿ : ಸಂಚಿಕೆ - 33
Thursday, March 23, 2023
Edit
ಸಂಚಾರಿಯ ಡೈರಿ : ಸಂಚಿಕೆ - 33
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಅದು ರಾತ್ರಿ 12-15ರ ಸಮಯ. ಭೂತ ಪ್ರೇತಾದಿ ಕಲ್ಪನಾ ಜೀವಿಗಳು ವಿಹರಿಸುವ ಸಮಯ. ಟ್ರೈನ್ ಮತ್ತೊಂದು ಟ್ರೈನ್‌ನ ಕ್ರಾಸಿಂಗ್‌ಗೋಸ್ಕರ ನಿಂತಿತ್ತು. ಆ ಸ್ಟೇಷನ್‌ನಲ್ಲಿ ಯಾವುದೇ ನಿಲುಗಡೆ ಇರದಿದ್ದರೂ ಅದು ನಿಂತಿತ್ತು.
ಅಂದಹಾಗೆ ಅಂದು ನಾನು ಹೊರಟಿದ್ದು ಶನಿಶಿಂಗಣಾಪುರ್ ದರ್ಶಿಸಲು. ಔರಂಗಾಬಾದ್ (ಈಗಿನ ಸಂಭಾಜಿನಗರ್) ರೈಲ್ವೆ ನಿಲ್ದಾಣದಿಂದ ಅಹ್ಮದ್‌ನಗರ್‌ಗೆ ಟಿಕೆಟ್ ಮಾಡಿಸಿದ್ದೆ. ಆದರೆ ಗೂಗಲ್ ಮ್ಯಾಪ್‌ನಲ್ಲಿ ರಾಹುರಿ ಎಂಬ ನಿಲ್ದಾಣದಿಂದ ಬರೀ 24 ಕಿಮೀ ಅಂತಾ ತೋರಿಸುತ್ತಿತ್ತು. ಆದರೆ ರಾಹುರಿ ನಿಲ್ದಾಣದಲ್ಲಿ ಟ್ರೈನ್‌ಗೆ ಸ್ಟಾಪ್ ಇರಲಿಲ್ಲ. ಜನಸ್ತೋಮದ ನಡುವೆ ಮೂಲೆಯಲ್ಲಿ ಸೀಟುಪಡೆದು ನಾನು ಕುಳಿತಿದ್ದೆ. ವೇಗವಾಗಿ ಮುನ್ನುಗ್ಗುತ್ತಿದ್ದ ರೈಲು ಕ್ರಾಸಿಂಗ್‌ಗಾಗಿ ನಿಂತಿದ್ದು ರಾಹುರಿಯಲ್ಲಿ. ಅತ್ತಿಂದಿತ್ತ ನೋಡದೇ ತತ್‌ಕ್ಷಣ ರಾಹುರಿಯಲ್ಲಿ ಇಳಿದೆ.
ರಾಹುರಿ ಅಂತಾ ದೊಡ್ಡ ನಿಲ್ದಣವೇನೂ ಆಗಿರಲಿಲ್ಲ. ಸರಿಯಾಗಿ ನೋಡಿದರೆ ಬೆಳಗ್ಗೆ ಮತ್ತು ರಾತ್ರಿ ಸಂಚರಿಸುವ ಒಂದು ಪ್ಯಾಸೆಂಜರ್ ಟ್ರೈನ್‌ಗೆ ನಿಲುಗಡೆ ಬಿಟ್ಟರೆ ಮತ್ಯಾವ ರೈಲಿಗೂ ನಿಲುಗಡೆ ಇದ್ದಿರಲಿಲ್ಲ. ನಾನು ಟ್ರೈನಿಂದ ಇಳಿದು ರೈಲ್ವೆ ಸ್ಟೇಷನ್‌ನ ಪಕ್ಕ ಬಂದಾಗ ಸ್ಟೇಷನ್ ಮಾಸ್ಟರ್ ಎಲ್ಲಿ ಹೋಗ್ತೀಯಾ? ಎಂದಾಗ ಶನಿಶಿಂಗಣಾಪುರ್‌ಗೆ ಹೊರಟಿದ್ದೆ ಇಲ್ಲಿಂದ ತುಂಬಾ ಹತ್ತಿರ ಅಲ್ವಾ ಅದಿಕ್ಕೆ ಇಲ್ಲೇ ಇಳಿದುಬಿಟ್ಟೆ ಅಂದಾಗ ಈ ಹೊತ್ತಿಗೆ ನೀನು ಯಾವ ಗಾಡಿಯಲ್ಲಿ ಹೋಗುವಿ ಎಂದು ಕೇಳಿದಾಗ, ಇಲ್ಲೇ ರೈಲ್ವೆ ಸ್ಟೇಷನ್ನಲ್ಲಿ ಕುಳಿತು ಬೆಳಗ್ಗಿನ ಜಾವ ಹೋಗುವೆ ಎಂದೆ. ಓ ಸರಿ ಅಂತಾ ಅಲ್ಲೇ ಇದ್ದ ಬೆಂಚಿನಲ್ಲಿ ಮಲಗುವ ಯೋಚನೆ ಮಾಡಿದೆ. ಥರಗಟ್ಟುವ ಚಳಿಗೆ ಉಕ್ಕಿನ ಬೆಂಚು ಕೂಡಾ ತಂಪು ಸೂಸಿತ್ತು. ಬರೀ ಶರ್ಟ್ ಪ್ಯಾಂಟ್ ಮಾತ್ರ ಉಟ್ಟಿದ್ದ ನನ್ನ ಕೈಯಲ್ಲಿ ಕಂಬಳಿ ಇದ್ದಿರಲಿಲ್ಲ. ಅಕ್ಕಪಕ್ಕದಲ್ಲಿ ನಾಯಿ ಬೊಗಳಿಕೆ ದೂರದಲ್ಲೆಲ್ಲೊ ಮೆಲುದನಿಯಲ್ಲಿ ಮರಾಠಿ ಅಭಂಗ್ ಕೇಳುತ್ತಿತ್ತು. ಗಡಗಡ ನಡುಗಿ ಎಷ್ಟೇ ಹೊರಳಾಡಿದರೂ ನಿದ್ದೆ ಬರಲಿಲ್ಲ. ಹಾಗೋ ಹೀಗೋ ಬೆಳಗ್ಗೆ ಏಳು ಗಂಟೆಗೆ ಎದ್ದು , ಆಟೋ ಸ್ಟ್ಯಾಂಡ್ ತೆರಳಿದೆ.
ರಾಹುರಿ ಬಸ್ ಸ್ಟಾಂಡ್ ಹೋಗ್ತಿರಾ ಅಂತಾ ಕೇಳಿ ಒಳಗೆ ಕುಳಿತೆ. ಅರ್ಧ ಗಂಟೆಯಾದರೂ ಆಟೋ ಮುಂದೆ ಸಾಗಲಿಲ್ಲ. ಅಣ್ಣಾ ನೀವ್ ಹೋಗಲ್ವಾ ಅಂದಾಗ, ಅಯ್ಯೋ ಜನ ಬರ್ಬೇಕಲ್ವಾ ? ಅಂತಂದಾಗ ನಾನು ಸೀದಾ ಇಳಿದು ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಒಂದಕ್ಕೆ ಕೈ ಹಿಡಿದು ಬಸ್ ಸ್ಟಾಂಡ್ ತಲುಪಿದೆ.
ಮಹಾರಾಷ್ಟ್ರ ಅಂದರೆ ಕೇಳಬೇಕಾ? ಕರಿಧೂಳು ತುಂಬಿದ್ದ ಬಸ್ ಸ್ಟಾಂಡ್‌ನಲ್ಲಿ ಕಾದು ಕಾದು ಕೊನೆಗೆ ಶನಿ ಶಿಂಗಣಾಪುರ್ ತೆರಳೋ ಬಸ್ ಏರಿ ಹೊರಟೆ. ಹೊಸ ಅನುಭವಕ್ಕೆ ಹೊಸದೊಂದು ಕಥೆ ತಯಾರಾಗಿತ್ತು. Once nomadic, always nomadic ಅನ್ನುವ ಮಾತಿಗೆ ಇನ್ನಷ್ಟು ಅರ್ಥ ತುಂಬಿತ್ತು.
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************