-->
ಸಂಚಾರಿಯ ಡೈರಿ : ಸಂಚಿಕೆ - 32

ಸಂಚಾರಿಯ ಡೈರಿ : ಸಂಚಿಕೆ - 32

ಸಂಚಾರಿಯ ಡೈರಿ : ಸಂಚಿಕೆ - 32

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ          
            ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನೋಡ್ತೀನಿ, ಜೇಬಿನಲ್ಲಿದ್ದ Purse, ಮೊಬೈಲ್ ಕಾಣುತ್ತಿಲ್ಲ. ಆ ಚಿಂತೆಯಲ್ಲಿ ಮನಸೆಲ್ಲಾ blank ಆಗ್ಹೋಗಿಬಿಟ್ಟಿತ್ತು. ನನ್ನ ಪಕ್ಕದ ಸೀಟ್‌ನಲ್ಲಿದ್ದವರು 'ಕ್ಯಾ ಹುವಾ' ಎಂದಾಗ ಅಣ್ಣಾ ನನ್ನ ಮೊಬೈಲ್ ಪರ್ಸ್ ಕಳುವಾಗಿದೆ ಎಂದೆ. ಅದಕ್ಕಾತ ನಿಮ್ಮ ನಂಬರ್ ಗೊತ್ತಾ...? ಕಾಲ್ ಮಾಡುತ್ತೇನೆ ಎಂದಾಗ ನಂಬರ್ ಹೇಳಿದೆ. ಕದ್ದಿರೋ ಕಳ್ಳ ಮೊಬೈಲ್ ಚಾಲೂ ಇಡುತ್ತಾನಾ ಹೇಳಿ...? ಸ್ವಿಚ್ ಆಫ್ ಆಗಿತ್ತು. ಏನೂ ಮಾಡೋದು ಈ ಹಿಂದೆ 2021 ಸೆಪ್ಟೆಂಬರ್ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಕಳುವಾಗಿದ್ದ ಮೊಬೈಲ್ ನನ್ನ ಕೈಗೆ ಸಿಕ್ಕಿದ್ದೇ ಇಲ್ಲ, ಇನ್ನು ಇಷ್ಟು ದೊಡ್ಡ ಟ್ರೈನ್‌ನಲ್ಲಿ ಸಿಗುತ್ತಾ...? ಟೈಟ್ ಆಗಿದ್ದ ಪ್ಯಾಂಟ್, ಮೇಲೆ ಹೊದ್ದುಕೊಂಡ ಕಂಬಳಿಯನ್ನೂ ತಪ್ಪಿಸಿ, ಆತ ಕದ್ದಿದ್ದು ಹೇಗೆ...? ಅಂತಾ ಯೋಚಿಸಿತೊಡಗಿದಾಗ ನನ್ನೆದುರಿಗಿದ್ದಾತ ತಕ್ಷಣ ಹೇಳಿದ್ದು ಹೀಗೆ, 'ಪಕ್ಕದ ಕೋಚ್‌ನಲ್ಲಿ ಕೂಡಾ ಮೊಬೈಲ್ ಕಳುವಾಗಿದೆಯಂತೆ, ಅಲ್ಲಿ ಕಳ್ಳನನ್ನ ಹಿಡಿದು, ಗೂಸಾ ಕೊಟ್ಟವ್ರೆ ಅಂತಂದ. ತಕ್ಷಣ ಆತನ ಜತೆಗೆ ನಾನು ಎಸ್ - 12 ಬೋಗಿಯತ್ತ ಓಡತೊಡಗಿದೆ. ಇನ್ನಾ ಮೂರು ಜನ ಪ್ರಯಾಣಿಕರು ಸಾರ್ ನಮ್ಮ ಮೊಬೈಲ್ ಕೂಡಾ ಕಳವಾಗಿದೆ ಅಂತಾ ಚಿಂತೆ ವ್ಯಕ್ತಪಡಿಸುತ್ತಿದ್ದರು. ಅಲ್ಲಿ ಕಳ್ಳ ಮಾತ್ರ ಪದೇಪದೇ ಅಸ್ಸಾಮಿ ಭಾಷೆಯಲ್ಲಿ ಸಾರ್! ಮೊಯಿ ಮೊಬೈಲ್ ಲುವಾ ನಾಯಿ ಸಾರ್' (ಸಾರ್ ! ನಾನು ಮೊಬೈಲ್ ತಗೊಂಡಿಲ್ಲ) ಅಂತಾ ಹುಸಿ ಬೇಸರ ವ್ಯಕ್ತಪಡಿಸುತ್ತಿದ್ದ. ಆತ ನನ್ನ ಮೊಬೈಲ್ ಎಸೆಯೋದನ್ನ ಕಂಡ ಮಹಿಳೆಯೋರ್ವಳು 'ಸುಳ್ಳು ಯಾಕೆ ಹೇಳ್ತೀಯಾ...? ನೀನು ಮೊಬೈಲ್ ಸೀಟಿನ ಕೆಳಗೆ ಎಸೆಯೋದನ್ನ ನಾನೇ ಕಂಡಿದ್ದೆ ಅಂತಾ ಬೈಯತೊಡಗಿದಳು. ಇತ್ತ ರೈಲ್ವೇ ಪೋಲಿಸರ ಕೈಯಲ್ಲಿ ಅದಾಗಲೇ ಒಂದು ಮೊಬೈಲ್ ಕಂಡೆ, ನೋಡಿದರೆ ಅದು ನನ್ನದೇ ಆಗಿತ್ತು..! ಪರ್ಸ್ ಹೋದರೆ ದೊಡ್ಡ ವಿಷಯ ಅಲ್ಲ...! ಮೊಬೈಲ್ ಸಿಕ್ಕಿತಲ್ಲ ಎಂಬ ಸಂತೃಪ್ತಿ. ಪೋಲಿಸ್ ನನ್ನಲ್ಲಿ ಮೊಬೈಲ್ ಪಾಸ್‌ವರ್ಡ್ ಕೇಳಿದರು, ನೀನು ಎಲ್ಲಿ ಹೋಗುತ್ತಿ? ಎಲ್ಲಿಂದ ಬಂದೆ? ಎಂದೆಲ್ಲಾ ಪ್ರಶ್ನಿಸಿ ನೀನು ಕಾಮಾಖ್ಯಾ ರೈಲ್ವೇ ಸ್ಟೇಷನ್‌ನಲ್ಲಿ ಇಳಿಯಬೇಕಾಗಬಹುದು, ಅಲ್ಲಿ ಕೆಲವು ಕಾನೂನಾತ್ಮಕ ಕೆಲಸಗಳಿವೆ ಎಂದರು. ಅದೇ ಹೊತ್ತಿಗೆ ಒಬ್ಬಾತ 'ಸಾರ್ ! ಬಾತ್‌ರೂಮ್‌ನಲ್ಲಿ ಒಂದು ಪರ್ಸ್ ಬಿದ್ದಿದೆ,' ಎಂದ. ತಕ್ಷಣ ನಾನು ಓಡಿಹೋಗಿ ನೋಡಿದರೆ ಆದು ನನ್ನದೇ ಪರ್ಸ್ ಆಗಿತ್ತು. ಆದರೆ ದುಡ್ಡೆಲ್ಲಾ ಎತ್ತಿಕೊಂಡಿದ್ದ. ಇತ್ತ ಕಳ್ಳನ ಜತೆ ಬಂದಿದ್ದ ಇತರರು ಉಳಿದ ಮೂವರ ಮೊಬೈಲ್ ಎತ್ತಿಕೊಂಡು ಓಡಿಹೋಗಿದ್ದರು. ಸಿಕ್ಕಿಬಿದ್ದಿದ್ದು ಮಾತ್ರ ಈ ಒಬ್ಬ ಕಳ್ಳ ಮಾತ್ರ. ಉಳಿದವರು ಓಡಿಹೋಗಿದ್ದರಂತೆ. ಅಲ್ಲಿಂದ ನಾನು, ಪೋಲಿಸ್ ಮತ್ತು ಕಳ್ಳನ ಜತೆ ಕಾಮಾಖ್ಯಾ ರೈಲ್ವೇ ನಿಲ್ದಾಣದಲ್ಲಿ ಇಳಿದು, ಕಛೇರಿಗೆ ಹೋದೆ. ಅಲ್ಲಿ ಪೋಲಿಸರು ಘಟನೆಯ ವಿವರ ಪಡೆದರು, ಆತನ ಪಾಕೆಟ್ ಚೆಕ್ ಮಾಡಿದಾಗ ದುಡ್ಡು ಕೂಡಾ ಪತ್ತೆಯಾಯಿತು. 
     ನೀವು ಕಂಪ್ಲೈಂಟ್ ಕೊಟ್ಟು FIR ಫೈಲ್ ಮಾಡೋದಾದ್ರೆ ಮತ್ತೆ ಮತ್ತೆ ಬರಬೇಕಾಗಬಹುದು, ಹಾಗಾಗಿ ಹೇಗೂ ಮೊಬೈಲ್ ಸಿಕ್ಕಿತಲ್ಲ ಅಂತಾ ಸಮಾಧಾನಪಡಿಸಿದರು. ನನಗೆ ಮಾತ್ರ ತೃಪ್ತಿ ಇರಲಿಲ್ಲ ಕಾರಣ ನನ್ನ ಕಣ್ಣೆದುರಿಗೆ ಆತ ಕದ್ದಿರೋ ಹಣ ಇದ್ದಾಗ ಅದನ್ನ ಬಿಟ್ಟು ಬರೋ ಮನಸ್ಸಾಗಲಿಲ್ಲ. ಆಗ ಒಬ್ಬ ಹಿರಿಯ ಅಧಿಕಾರಿಯೊಬ್ಬರು ನಿಮ್ಮ ಹಣ ಎಷ್ಟಿತ್ತು? ಎಂದು ಕೇಳಿದರು‌. ನಾನು 580₹ ಇತ್ತೆಂದೆ. ಸರಿ! ನೀವೊಂದು ಕಾಗದದಲ್ಲಿ ಪ್ರಕರಣ ಉಲ್ಲೇಖಿಸಿ ಬರೆಯಿರಿ ಹೇಗಿದ್ದರೂ ನೀವು ಸೌತ್‌ನವರಲ್ವಾ ಇಂಗ್ಲಿಷ್ ಚೆನ್ನಾಗೇ ಗೊತ್ತಿರುತ್ತೆ ಇಂಗ್ಲೀಷ್ ನಲ್ಲೇ ಬರೆಯಿರಿ ಎಂದು ಕಳೆದುಹೋದ ಮೊಬೈಲ್/ಪರ್ಸ್ ಮತ್ತೆ ಪಡೆದುಕೊಂಡೆ ಅಂತ ಬರೆಸಿಕೊಂಡರು. ಅಲ್ಲಿಂದ ರೈಲಿನಲ್ಲಿ ಸಿಕ್ಕ ಇಬ್ಬರು ಪೋಲಿಸರು ನೀನು ಎಲ್ಲಿ ನಲ್ಬಾರಿ ಹೋಗುತ್ತೀಯಾ, ನಮ್ಮ ಮನೆನೂ ಅಲ್ಲೇ ಬಾ ಚಹಾ ಕುಡಿದು ಬರೋಣ ಅಂದರು. ಅವರ ಜತೆ ಟೀ ಕುಡಿದು, ಅಲ್ಲಿಂದ ಅವರ ಜತೆಗೇನೆ ರಂಙಿಯಾ ನಿಲ್ದಾಣದವರೆಗೆ ರೈಲಿನಲ್ಲಿ ಬಂದೆ. ಪೋಲಿಸ್ ಸ್ಟೇಷನ್‌ನಲ್ಲಿ ನಾನು ಯೂಟ್ಯೂಬರ್ ಅಂದಾಗ, ಓ‌ ಹೌದಾ ನಮ್ಮ ಅಸ್ಸಾಂನಲ್ಲೂ ಡಿಂಪು ಬೊರೊವಾ ಎನ್ನುವ ಯೂಟ್ಯೂಬರ್ ಇದ್ದಾನೆ ಗೊತ್ತಾ ಎಂದಾಗ ನಾನೂ ಅಸ್ಸಾಮಿಯಲ್ಲೇ ಮಾತು ಮುಂದುವರಿಸಿದೆ. ಡಿಂಪು ಬೊರುವಾನ ಮನೆಯೂ ನಾಲ್ಬಾರಿಯಲ್ಲೇ, ಆತನ ಮನೆಗೆ ನಮ್ಮ ಮನೆಯಿಂದ ಒಂದು ಕಿಮೀ ಅಷ್ಟೇ, ನೀನು ಒಂದ್ಸಲಾ ಹೋಗಿ ಬಾ ಅಂತಂದರು. ನಾನು ಹೂಂ ಅಂದೆ. ಅದೇ ಹೊತ್ತು ಕೆಳಗೆ ಕೂತಿದ್ದ ಕಳ್ಳ‌ 'ಸಾರ್! ಮೊಯಿ ಮೊಬೈಲ್ ಲುವಾ ನಾಯಿ' ಅಂದಾಗ ಪೋಲಿಸರು 'ದೇಖೋ ! ಆಪ್ಕೋ ಬುಲಾರಹೇ ಹೇಂ' ಎಂದು ಹಾಸ್ಯ ಚಟಾಕಿ ಹಾರಿಸಿ ಒಂದು ಫೋಟೋ ಕ್ಲಿಕ್ಕಿಸಿಕೊಂಡರು. ನಾನು‌ 2014 ರಲ್ಲಿ ಶಿವಮೊಗ್ಗ ಬಂದಿದ್ದೆ ಅಂತ ನನ್ನ ಜತೆಗಿದ್ದ ಸಿ.ಕೆ ದಾಸ್ ಎಂಬ‌ ಪೋಲಿಸ್ ಆಫಿಸರ್ ಹೇಳಿದಾಗ ಮತ್ತೊಮ್ಮೆ ಬನ್ನಿ ಸಾರ್ ಎಂದೆ. ಇನ್ನೊಬ್ಬ ಪೋಲಿಸ್ ಅಧಿಕಾರಿ ಶ್ರೀ ಬೊಯಿಸ್ಯ ನನ್ನ ಅಣ್ಣನ ಮಕ್ಕಳು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ ಎಂದರು. ಏನೋ ಗೊತ್ತಿಲ್ಲ ಆವತ್ತು ನನ್ನ ಅದೃಷ್ಟ ಚೆನ್ನಾಗಿತ್ತು, ಕಳೆದು ಹೋದ ಮೊಬೈಲ್, ದುಡ್ಡು ಎಲ್ಲವೂ ಸಿಕ್ಕಿತ್ತು. ಅಸ್ಸಾಂನ ಪ್ರೀತಿ ಮತ್ತೆ ಅನುರಣಿಸಿತ್ತು 
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************

Ads on article

Advertise in articles 1

advertising articles 2

Advertise under the article