-->
ಅಕ್ಕನ ಪತ್ರ - 46ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 46ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 46 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1



    ನಮಸ್ತೆ ಅಕ್ಕ, ನಾನು ಶ್ರಾವ್ಯ. ಮಾನವರಾದ ನಮಗೆ ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಳ್ಳಲು ಮಾತು ಬಹು ಮುಖ್ಯ. ವ್ಯವಹಾರ ವಹಿವಾಟಿಗೆ ಮಾತೇ ಬಂಡವಾಳ ಎಂದರೆ ತಪ್ಪಾಗಲಾರದು.
     ಏನೋ ಒಂದು ಘಟನೆ ಅಥವಾ ಸಂದರ್ಭ ಸಿಕ್ಕರೆ ಸಾಕು ಮಾತಿಗೆ ಕೊನೆಯೇ ಇರುವುದಿಲ್ಲ. ಇನ್ನೂಬ್ಬರ ಬಗ್ಗೆ ಗಾಳಿಸುದ್ದಿ - ಕತೆ ಮಾತನಾಡುವ ಗೌಜಿಯೇ ಬೇರೆ.... ಚಿಕ್ಕ ಘಟನೆ ಸಂಭವಿಸಿದರೂ ಮಾತಿಗೆ ಮಾತು ಸೇರಿ ದೊಡ್ಡ ಗದ್ದಲ ಎಬ್ಬಿಸುವ ತಾಕತ್ತು ಮಾತಿಗಿದೆ.
      ಒಂದು ಒಳ್ಳೆಯ ಮಾತು ಎಂತಹ ವ್ಯಕ್ತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಆಡುವ ಮಾತು ಇನ್ನೊಬ್ಬರಿಗೆ ನೋವುಂಟು ಮಾಡುವಂತಿರಬಾರದು, ಇನ್ನೊಬ್ಬರ ಮನಸ್ಸು ಮುರಿಯುವಂತಿರಬಾರದು ಬದಲಿಗೆ ಇನ್ನೊಬ್ಬರಿಗೆ ಸಮಧಾನ ಪಡಿಸುವಂತಿರಬೇಕು, ತಪ್ಪನ್ನು ತಿದ್ದುವ ಒಂದು ಮಾರ್ಗದರ್ಶಕವಾಗಿ ಸ್ಪೂರ್ತಿ ನೀಡುವಂತಿರಬೇಕು. ಇನ್ನೊಬ್ಬರಿಗೆ ಖುಷಿ ನೀಡುವಂತಿರಬೇಕು. ಧನ್ಯವಾದ ಅಕ್ಕ
.................................................. ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************        


     ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ಅಕ್ಕ ನಿಮ್ಮ ಪತ್ರದಲ್ಲಿ ಓದಿ ವಾಸ್ತವಾಂಶವನ್ನು ಕಂಡುಕೊಂಡೆನು. ನಮ್ಮ ಜೀವನದಲ್ಲಿ ಎಷ್ಟೋ ಜನರು, ಅನಗತ್ಯವಾಗಿ ಏನೇನೋ ಹೇಳಿಕೊಂಡು ತಿರುಗಾಡುತ್ತಿರುತ್ತಾರೆ.
ಆ ಎಲ್ಲಾ ವಿಷಯಗಳನ್ನೂ ನಾವು ಮನಸ್ಸಿಗೆ ಹಚ್ಚಿಕೊಳ್ಳದೆ ಮುನ್ನಡೆಯಬೇಕು. ನಾವು ಹೇಗೆ ಇರುತ್ತೇವೆಯೋ ಹಾಗೆ ಇರಬೇಕು. ನಮ್ಮ ಜೀವನದಲ್ಲಿ ಬಂದಂತಹ ಊಹಿಸಲಾರದ ಘಟನೆಗಳನ್ನು ಮರೆತು ಸಾಗಬೇಕು. ಜೀವನವು ನಿಂತ ನೀರಾಗಬಾರದು. ಹರಿಯುವ ಕಡಲಿನಂತಿರಬೇಕು. ಧನ್ಯವಾದಗಳೊಂದಿಗೆ
...................................... ವೈಷ್ಣವಿ ಕಾಮತ್
6ನೇ ತರಗತಿ 
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



    ನಮಸ್ಕಾರಗಳು ನನ್ನ ಅಕ್ಕ. ನಾನು ನಿಮ್ಮ ಪ್ರೀತಿಯ ತಂಗಿ, ಸಿಂಚನ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿದ್ದೇನೆ. ನೀವು ಕೂಡ ಕ್ಷೇಮವಾಗಿರುವಿರಿ ಎಂದು ತಿಳಿಯುತ್ತೇನೆ. ಪ್ರೀತಿಯ ಪತ್ರ ನನಗೆ ತಲುಪಿತು. ಪ್ರತಿಯೊಂದು ಪತ್ರದಲ್ಲಿಯೂ ಒಂದೊಂದು ವಿಷಯಗಳನ್ನು ಅಳವಡಿಸುತ್ತಿದ್ದೀರಿ. ನನಗೆ ತುಂಬಾ ಸಂತೋಷವಾಯಿತು. ಅಕ್ಕ ನಮಗೆ ಪರೀಕ್ಷೆ ಪ್ರಾರಂಭವಾಗಿದೆ. ಶಿಕ್ಷಕರು ತುಂಬಾ ಚೆನ್ನಾಗಿ ಓದಿ ಎಂದು ಹೇಳಿದ್ದಾರೆ. ನಮ್ಮ ಕೈಲಾಗೋ ಪ್ರಯತ್ನ ನಾವು ಮಾಡುತ್ತಿದ್ದೇವೆ ಮುಂದೇನಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಮಗೆ ಏಪ್ರಿಲ್ ಒಂದು ಶನಿವಾರದಂದು ಸೆಂಡ್ ಅಪ್ ಇತ್ತು. ನಮಗೆ ಒಂದು ಒಳ್ಳೆಯ ಶಾಲೆ ಸಿಕ್ಕಿತ್ತು. ಇನ್ನು ನಾವು ಕಲಿತ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಹೋಗಲಿದ್ದೇವೆ. ಈ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರೂ ನಮ್ಮ ಶಿಕ್ಷಕಿಯರು ತುಂಬಾ ಚೆನ್ನಾಗಿ ಪಾಠವನ್ನು ಅರ್ಥೈಸುತ್ತಿದ್ದರು. ಈ ಪತ್ರಗಳು ಇನ್ನಷ್ಟು ಸ್ಪೂರ್ತಿಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಇನ್ನೊಮ್ಮೆ ಮತ್ತೊಂದು ಪತ್ರದಲ್ಲಿ ಸಿಗೋಣ. ಅಲ್ಲಿವರೆಗೆ ನನ್ನನ್ನು ಮರೆಯದಿರಿ.
....................................... ಸಿಂಚನಾ ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



      ಜಗಲಿಯ ಪ್ರೀತಿ ಅಕ್ಕನಿಗೆ ನಿಮ್ಮ ಅಕ್ಕರೆಯ ತಂಗಿ ಮಾಡುವ ನಮಸ್ಕಾರಗಳು. ನಾನು ಭವ್ಯಶ್ರೀ. ನೀವು ಹೇಳಿದ ಪ್ರತಿಯೊಂದು ಮಾತುಗಳು ನನಗೆ ಬಹಳ ವೇಗವಾಗಿ ಮನಸ್ಸಿಗೆ ಹತ್ತಿತು. ನಾವು ಏನೇ ಕೆಲಸ ಮಾಡಿದರೂ ಜನರು ಅದಕ್ಕೆ ಏನಾದರೂ ಒಂದು ಕೊಂಕು ನುಡಿ ಆಡುತ್ತಾರೆ. ಅದಕ್ಕೆಲ್ಲಾ ನಾವು ತಲೆಕೆಡಿಸಲು ಹೋದರೆ ನಾವು ಬದುಕಿನಲ್ಲಿ ಯಾವ ಹೆಜ್ಜೆ ಇಡಲು ಸಾಧ್ಯವಾಗದು ಅಲ್ವಾ. ಗುರುಹಿರಿಯರ ಮಾತುಗಳನ್ನು ನಿಷ್ಠೆಯಿಂದ ಆಲಿಸಿ ಉತ್ತಮ ಕೆಲಸಗಳನ್ನು ಮಾಡಲು ಸಿದ್ಧರಾಗೋಣ. ಹಾಗೆ ಮುಂದಿನ ರಜೆಯ ದಿನಗಳನ್ನು ಸದುಪಯೋಗಪಡಿಸಿಕೊಂಡು ಖುಷಿ ಪಡೋಣ. ನನ್ನ ಮಾತುಗಳನ್ನು ಕೊನೆಗೊಳಿಸುತ್ತೇನೆ. ಇನ್ನು ಮುಂದಿನ ಪತ್ರದಲ್ಲಿ ನಮ್ಮ ನಿಮ್ಮ ಭೇಟಿ... ನಮಸ್ಕಾರಗಳು...
................................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೋಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


    ನಮಸ್ತೆ ಅಕ್ಕಾ... ನಾನು ನಿಭಾ. ನಿಮ್ಮ ಪತ್ರ ಓದಿ ಸಂತೋಷವಾಯಿತು. ನೀವು ಹೇಳಿದ ಹಾಗೆ ಒಂದು ಸಂದರ್ಭದ ಮೇಲೆ ಅದೆಷ್ಟೋ ಸಂಗತಿಗಳು ಹುಟ್ಟಿಕೊಳ್ಳುತ್ತವೆ. ನೀವು ಹೇಳಿದಂತೆ ಕೆಲವು ವ್ಯಕ್ತಿಗಳಿಗೆ ದುಡುಕು ಸ್ವಭಾವದಿಂದ ಇನ್ನೊಬ್ಬರಿಗೆ ಏನಾದ್ರು ಹೇಳುತ್ತಾರೆ. ಆದರೆ ಆ ಮಾತು ಅವರಿಗೆ ಎಷ್ಟು ನೋವು ಕೊಡುತ್ತದೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಅರಿವೇ ಇರುವುದಿಲ್ಲ. ಹೀಗಿರುವಾಗ ನಮಗೆ ಅರಿವಿಲ್ಲದ ವಿಷಯದಲ್ಲಿ ಮೂಗು ತೂರಿಸುವುದು ತಪ್ಪಾಗುತ್ತದೆ. ಇನ್ನೊಬ್ಬರಿಗೆ ಸಲಹೆ ಕೊಡುವಾಗಲೂ ಹಾಗೆ ನಮ್ಮಲ್ಲಿ ಆ ಅಭ್ಯಾಸ ಇದ್ದರೆ ಮಾತ್ರ ಇನ್ನೊಬ್ಬರಿಗೆ ಆ ಅಭ್ಯಾಸದ ಸಲಹೆ ನೀಡಬಹುದು. ಹಾಗೆಯೇ ನಾವು ಇನ್ನೊಬ್ಬರಿಗೆ ಕಟುವಾಗಿ ಮಾತನಾಡುವ ಮುನ್ನ ಅವರು ಅದೇ ಮಾತನ್ನು ನಮಗೆ ಹೇಳಿದರೆ ಹೇಗಿರುತ್ತಿತ್ತು ಎಂಬ ಯೋಚನೆಯೂ ಬರಬೇಕು. ಒಳ್ಳೆಯ ಸಲಹೆ ನೀಡುವುದು ಉತ್ತಮ. ಆದರೆ ಇನ್ನೊಬ್ಬರ ಬಗ್ಗೆ ಹಿಂದಿನಿಂದ ಮಾತಾಡುವುದು ತಪ್ಪು. ನನ್ನ ಪ್ರಕಾರ ಇದೆಲ್ಲದರ ಬದಲು ನಮ್ಮಷ್ಟಕ್ಕೆ ನಾವಿರುವುದೇ ಉತ್ತಮ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳು
...................................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



     ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ ಜಿ. ಅಕ್ಕನ ಅಂದದ ಪತ್ರ ಓದಿ ಸಂತೋಷವಾಯಿತು. ಕಾರಣಾಂತರಗಳಿಂದ ಒಂದೆರಡು ವಾರ ಅಕ್ಕನ ಪತ್ರಗಳಿಗೆ ಪ್ರತಿಕ್ರಯಿಸಲಾಗಲಿಲ್ಲ. ಈ ವಾರವೂ ನಮಗೆ ಪಬ್ಲಿಕ್ ಪರೀಕ್ಷೆಗಳು ನಡೆಯುತ್ತಿರುವುದರಿಂದ ಹೆಚ್ಚೇನನ್ನೂ ಬರೆಯಲಾಗುತ್ತಿಲ್ಲ... ನಮ್ಮ ಬಗ್ಗೆ ನಮಗೆ ದೃಢತೆ ಇರಬೇಕು. ಯಾರೋ ಏನೋ ಅನ್ನುತ್ತಾರೆ, ಎನ್ನುವ ಕೀಳರಿಮೆ ಒಮ್ಮೆ ನಮ್ಮ ಮನದೊಳಗೆ ಹೊಕ್ಕರೆ ಸಾಕು. ನಮ್ಮಲ್ಲಿರುವ ಉತ್ಸಾಹವೆಲ್ಲಾ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಜಾಂಶ ನಮಗೆಲ್ಲಾ ತಿಳಿದಿದ್ದರೂ ಪ್ರತಿ ದಿನ ಪದೇ-ಪದೇ ಇಂತಹ ಸಂದರ್ಭಗಳಿಗೆ ಒಳಗಾಗುತ್ತಲೇ ಇರುತ್ತೇವೆ. ಒಳಗೊಳಗೆ ಸಂಕಟ ಪಡುತ್ತಿರುತ್ತೇವೆ. ಇದು ವಿಪರ್ಯಾಸ.
       ಇಂದಿನ ಪತ್ರದಲ್ಲಿ ಅಕ್ಕ ನೀಡಿರುವ ನೀತಿಪಾಠ  ಪರರ ಬಗ್ಗೆ ಮಾತನಾಡುವ ಮುನ್ನ ಕೊಂಚ ಯೋಚಿಸಬೇಕು. ನಮ್ಮಿಂದ ಬೇರೆಯವರಿಗೆ ಕಿರಿಕಿರಿಯುಂಟಾಗಬಾರದೆಂಬ ಸಲಹೆಯನ್ನು ನೀಡಿತು. ಇದನ್ನು  ಜೀವನದಲ್ಲಿ ಪಾಲಿಸುವವರಾಗೋಣ. ಎಂಬ ಆಶಯದೊಂದಿಗೆ..........
.............................................  .ಪ್ರಣಮ್ಯ ಜಿ.
10 ನೇ ತರಗತಿ
ಸಂತ ಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢ ಶಾಲೆ ನೆಲ್ಯಾಡಿ.
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



Ads on article

Advertise in articles 1

advertising articles 2

Advertise under the article