-->
ಓ ಮುದ್ದು ಮನಸೇ ...…...! ಸಂಚಿಕೆ - 28

ಓ ಮುದ್ದು ಮನಸೇ ...…...! ಸಂಚಿಕೆ - 28

ಓ ಮುದ್ದು ಮನಸೇ ...…...! ಸಂಚಿಕೆ - 28
                                      
             "ಒಂದ್ ಸಾರಿ ಹೇಳಿದ್ರೆ ಅರ್ಥ ಆಗಲ್ವಾ? ಮೊಬೈಲ್ ಬಿಟ್ಟು ಓದು. ನಾಳೆ ಎಗ್ಸಾಮ್ ಇದೆ ಅಂತೀಯಾ? ನಿನ್ನ ದೊಡ್ಡಪ್ಪನ ಮಗಳು ರಶ್ಮಿಯನ್ನು ನೋಡು ಎಷ್ಟು ಒಳ್ಳೆ ಮಾರ್ಕ್ಸ್ ತೆಗಿತಾಳೆ. ನೀನು ಇದ್ದೀಯಾ ದಂಡಪಿಂಡ...!" ಅಮ್ಮನ ನಿರಂತರ ಬೈಗುಳಗಳಿಂದ ಕೋಪಗೊಂಡ ಪ್ರೀತಮ್ ದಡಬಡನೆ ಎದ್ದು ಪಕ್ಕದಲ್ಲಿದ್ದ ನೋಟ್ ಬುಕ್ಕನ್ನು ಸೋಫಾ ಮೇಲೆ ಎಸೆದು ತನ್ನ ರೋಮಿನತ್ತ ನಡೆದ. ರೂಮಿನ ಬಾಗಿಲು "ದಬ್" ಎಂದು ಸದ್ದು ಮಾಡಿದ್ದನ್ನು ಕೇಳಿದ ಅಮ್ಮ ಅಡುಗೆ ಮನೆಯಿಂದ ಹೊರ ಬಂದು "ಇಂತ ಸಿಡುಕಿಗೇನು ಕಮ್ಮಿ ಇಲ್ಲ. ಇದನ್ನ ಓದಿನಲ್ಲಿ ತೋರಿಸಿದ್ರೆ ಉದ್ಧಾರ ಆಗ್ತಿದ್ದೆ" ಅಂದಳು. ಅಮ್ಮನ ಧ್ವನಿಯಲ್ಲಿ, ಮಗ ಇನ್ನು ಊಟ ಮಾಡದೆ ಹಾಗೇ ಮಲಗ್ತಾನೆ, ನಾನು ಬೈದದ್ದು ಸ್ವಲ್ಪ ಜಾಸ್ತಿ ಆಯ್ತು ಅನ್ಸತ್ತೆ ಎನ್ನುವ ನೋವಿನ ಜೊತೆ ಮಗನನ್ನು ಚೆನ್ನಾಗಿ ಓದಿಸಿ ಉದ್ಧಾರ ಮಾಡಬೇಕೆನ್ನುವ ಅವಳ ಪ್ರಯತ್ನದ ಹತಾಷೆ ಕಾಣುತ್ತಿತ್ತು.
      ತನ್ನ ಕೋಣೆಯ ಒಳಗೆ ಬಂದವನೇ ಹಾಸಿಗೆಯ ಮೇಲೆ ಮುಖ ಕೆಳಗೆ ಮಾಡಿ ದೊಪ್ ಎಂದು ಬಿದ್ದ. ದುಖಃ ಉಮ್ಮಳಿಸಿ ಬರುತ್ತಿದ್ದ ಕಣ್ಣುಗಳನ್ನು ತನ್ನ ತೋಳಿನಿಂದ ಒರೆಸಿಕೊಂಡ. ಅಮ್ಮ, ಅಪ್ಪ, ದೊಡ್ದಪ್ಪನ ಮಗಳು, ಶಿಕ್ಷಕರು ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ತಲೆಯಲ್ಲಿ ಸುತ್ತ ತೊಡಗಿದರು. ಅವರ ಮೇಲಿನ ಕೋಪವೋ ಹತಾಷೆಯೋ ಗೊತ್ತಿಲ್ಲ, ನಿಸ್ಸಹಾಯಕ ಪರಿಸ್ಥಿತಿ. ಎತ್ತ ಮಗ್ಗಲು ಬದಲಿಸಿದರೂ ತಲೆಯಲ್ಲಿ ಸುತ್ತುತ್ತಿದ್ದ ಯೋಚನೆಗಳು ದೂರವಾಗುವ ಸೂಚನೆ ಸಿಗಲಿಲ್ಲ. ಹೊರಗಿನಿಂದ ನಿರಂತರವಾಗಿ ಬರುತ್ತಿದ್ದ ಅಮ್ಮನ ಊಟದ ಕರೆಯೂ ನಿಂತಿತು. ಹೊಟ್ಟೆಗೆ ಇವನ ಮನಸ್ಸಿನ ವೇದನೆ ಅರ್ಥ ಆಗಬೇಕಲ್ಲಾ. ಹೊಟ್ಟೆ ಚುರುಗುಟ್ಟಿದಂತೆಲ್ಲಾ ಇನ್ನೊಮ್ಮೆ ಅಮ್ಮ ಕರೆದರೆ ಊಟ ಮಾಡಬಹುದಿತ್ತು ಎನ್ನುವ ಯೋಚನೆ. ಎದ್ದು ಒಂದು ಬಾಟಲಿ ನೀರು ಕುಡಿದ. ಅತ್ತಿಂದಿತ್ತ ಎರಡು ಬಾರಿ ಓಡಾಡಿದ. ಮೊಬೈಲ್ ಕೈಗೆತ್ತಿಕೊಂಡು ಮತ್ತೆ ಹಾಸಿಗೆ ಮೇಲೆ ಅಂಗಾತ ಒರಗಿದ. ಫೇಸ್-ಬುಕ್ ತೆರೆದ, ವಾಟ್ಸ್-ಆಪ್ ಓಪನ್ ಮಾಡಿದ, ಇನ್ಸ್ಟಾಗ್ರಾಮ್ ನಲ್ಲಿ ಇಣುಕಿದ, ಯೂಟೂಬ್ ನ ಯಾವ ವಿಡೀಯೋಗಳೂ ಅವನ ಮನಸ್ಸಿನ ತಳಮಳವನ್ನು ಕಡಿಮೆ ಮಾಡಲಿಲ್ಲ.
       ಬೆಳಿಗ್ಗೆ ಕಣ್ಣು ಬಿಡುವಾಗ ಏಳು ಮೂವತ್ತು. ಪ್ರತಿದಿನ ಮುಂಜಾನೆ ಐದು ಗಂಟೆಗೇ ಎದ್ದು ಕಿರಿ ಕಿರಿ ಮಾಡುತ್ತಿದ್ದ ಅಮ್ಮನ ಸುಳಿವಿಲ್ಲ. ಶಾಲೆಗೆ ಬೇರೆ ಟೈಮ್ ಆಗಿದೆ. ಅವಸರದಲ್ಲಿ ಅರ್ಧಂಬರ್ಧ ಹಲ್ಲುಜ್ಜಿ ನಿತ್ಯ ಕರ್ಮ ಮುಗಿಸಿದ ಪ್ರೀತಮ್ ಸಮವಸ್ತ್ರ ಧರಿಸುತ್ತಲೇ ಅಡುಗೆ ಮನೆಗೆ ಓಡಿದ. ರಾತ್ರಿ ಊಟ ಇಲ್ಲ. ಈಗಲೂ ಹೊಟ್ಟೆ ಚುರುಗುಟ್ಟುತ್ತಿದೆ. ಗಪ-ಗಪನೆ ಎರಡ್ಮೂರು ದೋಸೆ ಬಾಯಿಗೆ ತುರುಕಿಕೊಂಡು ಮನೆಯಿಂದ ಹೊರಬೀಳುವಷ್ಟರಲ್ಲಿ ಎಂಟು ಮೂವತ್ತು. ಮನೆಯಿಂದ ಶಾಲೆ ತಲುಪಲು ಏನಿಲ್ಲಾಂದ್ರೂ ಇಪ್ಪತ್ತು ನಿಮಿಷ ಬೇಕು. ಇವತ್ತೂ ಪೀ ಟೀ ಮಾಸ್ಟರ್ ಕಡೆಯಿಂದ ಪನಿಶ್ಮೆಂಟ್ ಗ್ಯಾರಂಟಿ. ಶಾಲೆಯ ಎಲ್ಲಾ ಕೊಠಡಿಯಲ್ಲಿರುವ ಮಕ್ಕಳಿಗೆ ಕಾಣುವಂತೆ ಕ್ರೀಡಾಂಗಣದಲ್ಲಿ ಏನಿಲ್ಲಾಂದ್ರೂ ಐದು ಸುತ್ತು ಓಡಬೇಕು. ಇದೇನು ಹೊಸತಲ್ಲ, ಆದರೂ ಎಷ್ಟು ದಿನಾಂತ ಈ ಮುಜುಗರ ಸಹಿಸಿಕೊಳ್ಳೋದು. ಶಾಲೆಗೆ ಚಕ್ಕರ್ ಹೊಡೆಯೋ ಮನಸ್ಸಾದರೂ ಧೈರ್ಯ ಮಾಡಿ ಅವಸರದಲ್ಲಿ ಶಾಲೆ ಕಡೆ ನಡೆದ. ಶಾಲೆ ತಲುಪುವಷ್ಟರಲ್ಲಿ ಪ್ರಾರ್ಥನೆ ಆರಂಭವಾಗಿಬಿಟ್ಟಿತ್ತು. ಇವನ ಗ್ರಹಚಾರಕ್ಕೆ ಪೀ ಟೀ ಮಾಸ್ಟರ್ ಬಾಗಿಲಲ್ಲೇ ನಿಂತಿದ್ದಾರೆ. ಬಿಳಿ ಪ್ಯಾಂಟು, ಅಚ್ಚಬಿಳಿ ಶರ್ಟು ಕುತ್ತಿಗೆಯ ಕೊಳೆ ಬಿಳಿ ಅಂಗಿಯನ್ನು ಗಲೀಜು ಮಾಡಬಾರದೆಂದು ಕಾಲರ್ನ ಹಿಂದೆ ಕರ್ಚಿಫ್ ಒಂದನ್ನು ಮಡಚಿ ಸಿಕ್ಕಿಸಿದ್ದ ಅವರ ಕೈಯ್ಯಲ್ಲಿ ವಯರಿನಾಕಾರದ ಹಗ್ಗವೊಂದು ನೇತಾಡುತ್ತಿತ್ತು. ವಿಸಿಲ್ ಅನ್ನು ಕುತ್ತಿಗೆಗೆ ನೇತು ಹಾಕಲು ಕಟ್ಟಿರುವ ಹಗ್ಗವದು, ಅದನ್ನು ನೋಡಿದಾಗೆಲ್ಲ ಅವನಿಗೆ ಅದರೇಟಿನ ರುಚಿ ನೆನಪಿಗೆ ಬರುತ್ತದೆ. ಭಯದಲ್ಲೇ ಅವರ ಪಕ್ಕ ಬಂದು ನಿಂತ.
       ಪೀ ಟೀ ಮಾಸ್ಟರ್ ಬೇರೆ ಶಿಸ್ತಿನ ಸಿಪಾಯಿ. ಪ್ರಾರ್ಥನೆಗೆ ಯಾರೇ ಲೇಟಾಗಿ ಬಂದರೂ ಅವರ ವಿಸಿಲ್ ಹಗ್ಗದ ರುಚಿ ನೋಡಿಯೇ ಮುಂದೆ ಹೋಗಬೇಕು. ಭುಜಕ್ಕೆ, ಕಾಲಿಗೆ ನಾಲ್ಕೈದು ಬಾರಿ ಅದೇ ಹಗ್ಗದಿಂದ ಬಾರಿಸಿದ ನಂತರ ಮೈದಾನದಲ್ಲಿ ಎಲ್ಲರ ಮುಂದೆ ಐದು ಸುತ್ತು ಓಡುವ ಆಜ್ಞೆ ಜಾರಿ ಮಾಡಿದರು. ಪ್ರೀತಮ್ ಎಷ್ಟೋ ಬಾರಿ ಪ್ರಾಮಾಣಿಕನಾಗಿರುವ ಪ್ರಯತ್ನ ಮಾಡಿದರೂ ಇವನ ಗ್ರಹಚಾರವೋ ಏನೋ ಗೊತ್ತಿಲ್ಲ ಅದು ಸಫಲವಾಗುವುದೇ ಇಲ್ಲ. ಒಂದೊಂದು ಸುತ್ತೂ ಸುಸ್ತು ಮಾಡಿಸುವ ಬದಲು ಕೋಪ ಉಕ್ಕಿಸಿದವು. ಯಾರ ಮೇಲೆ ಕೋಪ? ಅಮ್ಮನ ಮೇಲೋ? ಪೀ ಟೀ ಮಾಸ್ಟರ್ ಮೇಲೋ? ಉತ್ತರ ಸಿಗದ ಹುಡುಗ ಒತ್ತಡಕ್ಕೆ ಬಿದ್ದ. ಒತ್ತಡ ಇಡೀ ದಿನ ಅವನ ಉತ್ಸಾಹವನ್ನು ಕುಗ್ಗಿಸಿತು. ಬಿಸಿಯೂಟದ ರುಚಿ ನೋಡುವ ಮನಸ್ಸಿಲ್ಲದ ಹುಡುಗ ಶಾಲೆಯ ಬೇಲಿ ಜಿಗಿದು ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಸುಬ್ಬಣ್ಣನ ಬೀಡಾ ಅಂಗಡಿಯ ಹಿಂದೆ ನಿರ್ಮಿಸಿದ್ದ ಸೋಗೆ ಗುಡಿಸಲಿನಲ್ಲಿ ಬಂದು ಕೂತ. ಅಲ್ಲೇ ಕುಳಿತಿದ್ದ ಅಣ್ಣಂದಿರಿಬ್ಬರೂ ಇವನ ಬೆಪ್ಪು ಮೋರೆ ನೋಡಿ ಮಾತಿಗಿಳಿದರು.
      ಯಾಕಮ್ಮ ಏನಾಯ್ತು? ಒಬ್ಬ ಕೇಳಿದ. ಪೀ ಟೀ ಮಾಸ್ಟರ್ ಕೈಯ್ಯಲ್ಲಿ ಒದೆ ಬಿದ್ದಿರತ್ತೆ ಅಲ್ವೇನೋ? ಮತ್ತೊಬ್ಬ ನಕ್ಕ. ಅಷ್ಟರಲ್ಲೇ ಅಂಗಡಿಯೊಳಗಿಂದ ಹೊರಬಂದ ಮೂರನೆಯವ ಹುಡುಗನ ಬಳಿ ಬಂದು ಕುಳಿತು ತನ್ನ ಬಲಗಯ್ಯನ್ನು ಅವನ ಭುಜದ ಮೇಲೆ ಇಟ್ಟ. ಯಾಕ್ರೋ ರೇಗಿಸ್ತೀರಿ ಇವನ್ನ? ಪಾಪ ಏನೋ ಬೇಜಾರಲ್ಲಿ ಇರೋ ಹಾಗೆ ಕಾಣತ್ತೆ ಎನ್ನುತ್ತಾ ತನ್ನ ಜೇಬಿನಿಂದ ಚಾಕೋಲೆಟ್ ಒಂದನ್ನು ತೆಗೆದು ಹುಡುಗನ ಕೈಯ್ಯಲ್ಲಿಟ್ಟ. ಉಳಿದಿಬ್ಬರಿಗೂ ಒಂದೊಂದು ಚಾಕೋಲೇಟ್ ಕೊಟ್ಟ. ನನ್ನ ಅಪ್ಪ ದುಬೈನಿಂದ ಬರುವಾಗ ತಂದದ್ದು ತುಂಬಾ ಚೆನ್ನಾಗಿದೆ ಎನ್ನುತ್ತ ತಾನೂ ಒಂದನ್ನು ಮೆಲುಕಿದ.
       ಆಹಾ.... ಅದೆಂತಾ ನಿರಾಳತೆ, ಉತ್ಸಾಹ! ಚಾಕೋಲೇಟ್ ತಿಂದ ಹುಡುಗ ಎದ್ದು ನಿಂತ ನಾಳೆ ಸಿಗ್ತೀನಿ, ಕ್ಲಾಸ್ ಇದೆ ಎಂದವನೇ ಶಾಲೆ ಕಡೆ ಓಟ ಕಿತ್ತ. ಕ್ಲಾಸ್ ರೂಮಿಗೆ ಎಂಟ್ರಿ ಕೊಡುವ ಹೊತ್ತಿಗೇ ಇಂಗ್ಲೀಷ್ ಶಿಕ್ಷಕಿ ಎದುರಾದರು. ನನ್ನ ಕ್ಲಾಸಿಗೆ ಯಾಕೋ ಬರ್ಲಿಲ್ಲ? ಇವನು ಸುಮ್ಮನೆ ಮುಗುಳ್ನಕ್ಕ! ಅವರ ಕಣ್ಣುಗಳು ಕೆಂಪಾದವು. ತಾವೇ ಅವನ ಬಲಗೈಯ್ಯನ್ನು ಮುಂದೆಳೆದು ತಮ್ಮ ಕೈಯ್ಯಲ್ಲಿದ್ದ ಸ್ಕೇಲ್ ನಿಂದ ಜೋರಾಗಿ ಒಂದು ಏಟು ಕೊಟ್ಟರು. ಹುಡುಗನ ಮುಗುಳ್ನಗೆ ನಿಲ್ಲಲಿಲ್ಲ. ಗಲಿಬಿಲಿ ಗೊಂಡ ಶಿಕ್ಷಕಿ ಕೋಪದಲ್ಲೇ ತರಗತಿಗೆ ಹೋದರು. ಹುಡುಗನಿಗೆ ತನ್ನಲ್ಲಿ ಅದೇನೋ ಹೊಸ ಉತ್ಸಾಹ ಬಂದಂತೆ ಅನಿಸಿತು. ಇಂತಹದ್ದೊಂದು ಅನುಭವ ಅವನಿಗೆ ಹಿಂದೆಂದೂ ಆಗಿರಲಿಲ್ಲ.
      ಮಾರನೇ ದಿನವೂ ಸುಬ್ಬಣ್ಣನ ಬೀಡಾ ಅಂಗಡಿಯ ಬಳಿ ಬಂದ. ಅದೇ ಚಾಕೋಲೇಟ್, ಮತ್ತದೇ ಉತ್ಸಾಹ. ಪರೀಕ್ಷೆ ಹತ್ತಿರ ಬಂದಂತೆ ಇವನಲ್ಲಿ ಓದಿನ ಒತ್ತಡ ಹೆಚ್ಚಿತು, ಒಮ್ಮೊಮ್ಮೆ ಮುಂಗೋಪ, ಸಿಡುಕುತನ, ಅಥವಾ ಓದೋಕೆ ಕುಂತಾಗಲೆಲ್ಲಾ ನಿದ್ರೆಗೆ ಜಾರಿಬಿಡುತ್ತಿದ್ದ ಹುಡುಗ ಪ್ರತಿದಿನ ಅಂಗಡಿ ಬಳಿ ಅಣ್ಣಂದಿರನ್ನು ಭೇಟಿ ಮಾಡಲು ಕಾತೊರೆಯುತ್ತಿದ್ದ. ಅವರು ಸಿಕ್ಕಿಲ್ಲ, ಚಾಕೊಲೇಟ್ ತಿಂದಿಲ್ಲ ಅಂದರೆ ಅದೇನೋ ತಳ ಮಳ, ಭಯ ಏನನ್ನೋ ಕಳೆದುಕೊಂಡಂತಹ ಅನುಭವ. ಶಾಲೆಗೆ ಹೋಗಲೂ ಮನಸ್ಸಿಲ್ಲ. ಗೆಳೆಯರಿಂದಲೂ ದೂರಾದ ಹುಡುಗ ಯಾವಾಗಲೂ ಸುಬ್ಬಣ್ಣನ ಅಂಗಡಿಯ ಗುಡಿಸಿಲಿನಲ್ಲೇ ಕಾಲ ಕಳೆಯುತ್ತಿದ್ದ.
        ಅವತ್ತು ಏನೋ ವಿಚಾರಕ್ಕೆ ಅಮ್ಮನೊಂದಿಗೆ ಜಗಳ ಆಡಿ ಮನೆಯಿಂದ ಹೊರಬಂದಿದ್ದ ಪ್ರೀತಮ್ ಅಣ್ಣಂದಿರಿಗಾಗಿ ಅಂಗಡಿಯಲ್ಲಿ ಕಾಯುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಬಂದ ಅವರನ್ನು ಕಂಡ ಹುಡುಗನಿಗೆ ಖುಷಿ ಉಕ್ಕಿತು. ಚಾಕೋಲೇಟ್ ತಂದಿದ್ದೀರಾ? ಇನ್ನು ಈ ಚಾಕೋಲೇಟ್ ಬೇಕಂದ್ರೆ ದುಡ್ಡು ಕೊಡ್ಬೇಕಾಗತ್ತೆ ಅಂದ ಒಬ್ಬ. ಇವನಿಗೆ ಗಲಿಬಿಲಿಯಾಯಿತು ಅಣ್ಣ ಇವತ್ತು ಒಂದು ಇದ್ರೆ ಕೊಡಿ ನಾಳೆ ದುಡ್ಡು ಕೊಡ್ತೀನಿ ಅಂದ. ಕೂಡಿಟ್ಟಿದ್ದ ಪಾಕೇಟ್ ಮನಿ ಖಾಲಿಯಾಯಿತು. ಅಮ್ಮನ ಸಾಸಿವೆ ಡಬ್ಬದ ಹಣವೂ ಮುಗಿಯಿತು. ಅಪ್ಪನ ಅಂಗಿ ಕಿಸೆಯಿಂದ ದುಡ್ದು ತೆಗೆಯುವಾಗ ಸಿಕ್ಕಿಬಿದ್ದು ಏಟು ತಿಂದದ್ದೂ ಆಯಿತು. ಅಮ್ಮ ಕಷ್ಟಪಟ್ಟು ದುಡಿದ ದುಡ್ದನ್ನು ಕೂಡಿಟ್ಟು ಖರೀದಿ ಮಾಡಿದ್ದ ಚಿನ್ನದ ಸರವನ್ನು ಕದ್ದೊಯ್ದು ಮಾರಿದ್ದೂ ಆಯಿತು. ಚಾಕೋಲೇಟ್ ತಿನ್ನುವ ಚಟಕ್ಕೆ ಬಿದ್ದಿದ್ದ ಹುಡುಗ ಕಳ್ಳತನದ ದಾಸನಾದ. ಎಲ್ಲಾ ಹಣದ ಮೂಲಗಳು ಖಾಲಿಯಾದಾಗ ಅಣ್ಣಂದಿರು ಅಂದರು ಹತ್ತು ಚಾಕೋಲೇಟ್ ಮಾರಿದ್ರೆ ನಿಂಗೆ ಒಂದು ಫ್ರೀ ಕೊಡ್ತೀವಿ. ಹುಡುಗನಿಗೆ ಬೇರೆ ದಾರಿಯಿಲ್ಲ. ತನ್ನ ತರಗತಿಯ ಹುಡುಗರನ್ನು ಪುಸಲಾಯಿಸಿ ಅವರಿಂದ ದುಡ್ಡು ಪಡೆದು ಚಾಕೋಲೇಟ್ ಮಾರಿದ. ರಸ್ತೆ ಬದಿಗೆ, ಕ್ರೀಡಾಂಗಣದ ಮೂಲೆಯಲ್ಲಿ, ಊರ ಹೊರಗಿನ ಬಸ್-ಸ್ಟಾಂಡ್ ನಲ್ಲಿ ಶಾಲಾ-ಕಾಲೇಜಿನ ಹುಡುಗರೇ ಇವನ ಟಾರ್ಗೆಟ್. ಶೋಕಿ ಬಯಸುವ ಶ್ರೀಮಂತರ ಮಕ್ಕಳು, ಮನೆಯವರ ಮೇಲೆ ಮುನಿಸಿಕೊಂಡವರು, ಟೀಚರ್ ಕೈಯ್ಯಿಂದ ಏಟು ತಿಂದವರೇ ಇವರ ಚಾಕೋಲೇಟ್ ಮಾರಾಟದ ಟಾರ್ಗೆಟ್.
       ಇಂತದ್ದೇ ಪ್ರಯತ್ನ ಒಂದರಲ್ಲಿ ಹುಡುಗ ಪೋಲೀಸರಿಗೆ ಸಿಕ್ಕಿಬಿದ್ದ! ಅಪ್ಪನಿಗೆ ಪೋನ್ ಕಾಲ್ ಬಂತು "ನಿಮ್ಮ ಮಗ ಡ್ರಗ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ. ಕೂಡಲೇ ಸ್ಟೇಶನ್ನಿಗೆ ಬನ್ನಿ" ಅಪ್ಪ ಒಮ್ಮೆ ಗದ್ಗದಿತರಾದರು, ಅಮ್ಮನ ಕಣ್ಣುಗಳಲ್ಲಿ ದುಖಃ ಉಮ್ಮಳಿಸಿ ಬಂತು. ಮಾಡುತ್ತಿದ್ದ ಕೆಲಸವನ್ನು ಅರ್ದದಲ್ಲೇ ಬಿಟ್ಟು ಇಬ್ಬರೂ ಹತ್ತಿರದ ಪೋಲಿಸ್ ಸ್ಟೇಶನ್ನಿಗೆ ದೌಡಾಯಿಸಿದರು. ಸ್ಟೇಶನ್ನಿನ ಮೂಲೆಯೊಂದರಲ್ಲಿ ನೆಲಕ್ಕೆ ಮುಖಮಾಡಿ ತುದಿಗಾಲಿನಲ್ಲಿ ಕುಳಿತಿದ್ದ ಮಗನನ್ನು ನೋಡಿ ಅಮ್ಮನ ಎದೆಯಲ್ಲಿ ಮರುಕ ಹುಟ್ಟಿತು.
       "ಅವತ್ತು ನಾನು ಚೆಕ್-ಅಪ್ ಗೆ ಅಂತ ಆಸ್ಪತ್ರೆಗೆ ಹೋಗಿದ್ದಾಗ ಡಾಕ್ಟರ್ ಅಂದರು ’ನಿಮಗೆ ಎರಡು ತಿಂಗಳು ತುಂಬುತ್ತಿದೆ, ನೀವು ಪ್ರೆಗ್ನೆಂಟ್ ಆಗಿದ್ದೀರಿ’ ಪಕ್ಕದಲ್ಲೇ ಕೂತಿದ್ದ ಗಂಡನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದೆ ನಮ್ಮಿಬ್ಬರ ಕಣ್ಣುಗಳಲ್ಲಿ ಆನಂದ ಭಾಷ್ಪ ಹರಿಯಿತು. ’ಇನ್ನುಮುಂದೆ ಸ್ವಲ್ಪ ಹುಶಾರಾಗಿರಬೇಕು, ನಿಮ್ಮ ಆರೋಗ್ಯ ತುಂಬಾ ಮುಖ್ಯ, ನೀವು ಚೆನ್ನಾಗಿದ್ರೆ ಹುಟ್ಟುವ ಮಗು ಚೆನ್ನಾಗಿರತ್ತೆ’ ಡಾಕ್ಟರ್ ಮಾತುಗಳು ಇಬ್ಬರ ತಲೆಯಲ್ಲೂ ಗಟ್ಟಿಯಾಗಿ ಕೂತವು. ಈ ಸಂತೋಷಕ್ಕೆ ಮನೆಯ ವಾತಾವರಣವೇ ಬದಲಾಯಿತು. ಹೊಟ್ಟೆಯಲ್ಲಿರೋ ಮಗುವಿಗೆ ತೊಂದರೆ ಆಗಬಾರದು ಅಂತ ನನ್ನ ಪ್ರತೀ ಕೆಲಸದಲ್ಲೂ ಗಂಡ ಕೈ ಜೋಡಿಸುತ್ತಿದ್ದರು. ಪ್ರತಿ ದಿನ ಮಲಗೋ ಮುಂಚೆ ಕೇಸರಿ ಬೆರೆಸಿದ ಹಾಲು ಕುಡಿಬೇಕಿತ್ತು ನಾನು. ನನಗೆ ಹಾಲಂದ್ರೆ ಅಷ್ಟೇನು ಇಷ್ಟ ಇಲ್ಲ ಆದ್ರೂ ಕುಡಿಯಲೇ ಬೇಕು, ಗಂಡನ ತಾಕೀತು. ಇನ್ನು ಬೆಳಿಗ್ಗೆ ಎದ್ದು ವಾಕಿಂಗಿಗೆ ಹೋಗೋದು. ನನಗೆ ಒಮ್ಮೊಮ್ಮೆ ಸುಸ್ತು ಕಾಣಿಸಿಕೊಂಡಾಗ ತಮ್ಮ ಕೆಲಸಗಳ ಒತ್ತಡದ ನಡುವೆಯೂ ಒಮ್ಮೊಮ್ಮೆ ನೆಲವರೆಸೋದರಿಂದ ಹಿಡಿದು ಪಾತ್ರೆ ತೊಳೆಯೋದರವರೆಗೆ ಅವರೇ ಎಲ್ಲಾ ಮಾಡಿ ಮುಗಿಸುತ್ತಿದ್ದರು. ಹೀಗೆ ಕಷ್ಟ ಪಡುತ್ತಿದ್ದ ಅವರನ್ನು ನೋಡಿದಾಗೆಲ್ಲ ನನಗೇ ಒಂತರ ಬೇಜಾರು. ಒಟ್ಟಾರೆ ನಮ್ಮಿಬ್ಬರ ಕಾಳಜಿ ಒಂದೇ, ಅದು ನಮಗೆ ಹುಟ್ಟಲಿರೋ ಮಗು. ಆ ಒಂಬತ್ತು ತಿಂಗಳು ನಾ ಪಟ್ಟ ಸಂಕಟ ನನಗೇ ಗೊತ್ತು. ಕಷ್ಟದಲ್ಲೇ ಒಂತರಾ ಆನಂದ. ಪ್ರತಿ ದಿನ ಕಳೆದಂತೆ ಮಗುವಿಗೆ ಜನ್ಮ ನೀಡುವ ಆತುರ ಹೆಚ್ಚುತ್ತಿತ್ತು. 
        ಹೆಚ್ಚು ನಿಲ್ಲೋಕಾಗಲ್ಲ, ಕೂರೋಕಾಗಲ್ಲ. ಇಷ್ಟ ಪಟ್ಟ ಬಟ್ಟೆ ಹಾಕೋ ಹಾಗಿಲ್ಲ, ತಿಂಡಿ ತಿನ್ನೋಹಾಗಿಲ್ಲ. ಪ್ರಯಾಣ ನಿಷಿದ್ದ. ಕಾರ್ಯಕ್ರಮಗಳಿಗೆ ಹೋಗೋದು ಸಂಪೂರ್ಣ ಬಂದ್ ಆಯಿತು. ಆರೋಗ್ಯದ ದೃಷ್ಟಿಯಿಂದ ಡಾಕ್ಟರ್ ಕೊಡುತ್ತಿದ್ದ ಔಷಧಿ, ಮಾತ್ರೆ ತಿನ್ನುವಾಗ ವಾಕಳಿಕೆ ಬರುತ್ತಿತ್ತು ಆದರೂ ಸಹಿಸಿಕೊಂಡೆ. ಇನ್ನು ಮಗುವಿಗೆ ಜನ್ಮ ನೀಡುವ ಆ ಕ್ಷಣ ಅನುಭವಿಸಿದವರಿಗೇ ಗೊತ್ತು. ತಾಯ್ತನ ಎಂದರೆ ಏನು ಎನ್ನೋದನ್ನು ಅರ್ಥಮಾಡಿಸಿದ ಕ್ಷಣ ಅದು. ನೋವಂದರೆ ಅಂತಿಂತಾ ನೋವಲ್ಲ ಸಾವಿನ ಅಂಚನ್ನು ಮುಟ್ಟಿಬರುವಂತಹ ಅನುಭವದ ನೋವು. ಮಗುವಿಗೆ ಜೀವ ನೀಡಲು ತಮ್ಮ ಜೀವವನ್ನು ಪಣಕ್ಕಿಡುವ ತಾಯಂದಿರಿಗೆ ಅದೆಷ್ಟು ನಮಸ್ಕರಿಸಿದರೂ ಸಾಲದು. ಇಷ್ಟೆಲ್ಲಾ ನೋವಿನ ನಡುವೆಯೂ ಆ ಪುಟ್ಟ ಕಂದಮ್ಮನ ಅಳುವನ್ನು ಕೇಳಿದಾಗ ನನಗೆ ಆದ ರೋಮಾಂಚನವೇ ಅದ್ಭುತ. ಬೆಳೆದು ಶಾಲೆಗೆ ಹೋಗೋ ತನಕ ಪ್ರತೀ ಹಂತವೂ ಸೂಕ್ಷ್ಮ. ಅದೆಷ್ಟು ಬಾರಿ ನನ್ನ ಮಗ ನನ್ನ ತೋಳುಗಳ ಮೇಲೆ ಮಲ ಮೂತ್ರ ಮಾಡಿಲ್ಲ. ನನಗೆ ಅದೆಂದೂ ಹೇಸಿಗೆ ಎನಿಸಿಲ್ಲ. ಅವನ ಬಾಯಿಯ ಜೊಲ್ಲು ಒರೆಸಿ ನನ್ನ ಸೆರಗಿನ ಬಣ್ಣವೇ ಮಾಸಿತ್ತು. ನಿದ್ರೆ ಇಲ್ಲದೆ ನಾವಿಬ್ಬರೂ ಅದೆಷ್ಟು ರಾತ್ರಿಗಳನ್ನು ಕಳೆದಿದ್ದೇವೋ ಗೊತ್ತಿಲ್ಲ. ನಮ್ಮ ಬದುಕಿನ, ಸಂತೋಷದ ಕೇಂದ್ರಬಿಂದುವೇ ಇವನು. ಇವನು ಮನೆಯಲ್ಲಿಲ್ಲ ಅಂದ್ರೆ ಒಂದು ಕ್ಷಣವೂ ನೆಮ್ಮದಿಯಿಲ್ಲ.
      ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಿ ಬೆಳೆಸಿದ ಮಗನನ್ನು ಇವತ್ತು ಡ್ರಗ್ ಕೇಸ್ ನಲ್ಲಿ ನೋಡಿದ ತಾಯಿಗೆ ತಾನೇ ತಪ್ಪುಮಾಡಿಬಿಟ್ಟೆನೇನೋ ಎನ್ನುವ ಗೊಂದಲ ಮೂಡಿತು. ಛೆ..! ಹಾಗೇನಿಲ್ಲಾ ನಾನು ಯಾವಾಗಲೂ ಅವನಿಗೆ ಬೈತಿದ್ದದ್ದು ಅವನ ಮೇಲಿನ ಕಾಳಜಿ ಪ್ರೀತಿಯಿಂದಲೇ ಹೊರತು ದ್ವೇಷದಿಂದಲ್ಲ. ಅಷ್ಟಾಗಿಯೂ ತಾಯಿಯಾದವಳಿಗೆ ಮಗನಮೇಲೆ ಅದೆಂತಹ ದ್ವೇಷವಿರಲು ಸಾಧ್ಯ? ಆಗಿದ್ದು ಆಗಿ ಹೋಗಿದೆ ದೇವರೆ ನನ್ನ ಮಗನನ್ನು ಈ ಸಂಕಷ್ಟದಿಂದ ಪಾರು ಮಾಡು.. ಮನಸಲ್ಲೇ ಎಲ್ಲಾ ದೇವರುಗಳಲ್ಲಿ ಪ್ರಾರ್ಥಿಸಿದಳು. ಅದಕ್ಕೆ ತಾನೆ ಹೇಳೋದು ಹೆತ್ತ ತಾಯಿಗೆ ಹೆಗ್ಗಣಾನೂ ಮುದ್ದು ಅಂತ.
     ನೆಲಕ್ಕೆ ಮುಖ ಮಾಡಿ ಕುಳಿತಿದ್ದ ಮಗ ತಲೆ ಮೇಲಕ್ಕೆತ್ತಿ ಅಪ್ಪ ಅಮ್ಮನ ಮುಖ ನೋಡಿದ. ಮೌನಿಯಾದ.. 
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************

Ads on article

Advertise in articles 1

advertising articles 2

Advertise under the article