-->
ಅಕ್ಕನ ಪತ್ರ - 44 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 44 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 44 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1

    ನಮಸ್ತೆ ಅಕ್ಕ.... ನಾನು ಶ್ರಾವ್ಯ. ಗೌತಮ ಬುದ್ಧ ಅವರ ಚರಿತ್ರೆ ನಮಗೆ ಯಾವಾಗಲೂ ಶಾಂತಿ, ತಾಳ್ಮೆಯ ಸಂದೇಶ ನೀಡುತ್ತದೆ. ನಾವು ಅದೆಷ್ಟೋ ಬಾರಿ ಬೇರೆ ಬೇರೆ ರೀತಿಯಲ್ಲಿ ಸಹನೆ, ತಾಳ್ಮೆ, ಶಾಂತಿಯ ಬಗ್ಗೆ ತಿಳಿದುಕೊಂಡರೂ ಕೆಲವು ಪರಿಸ್ಥಿತಿ ಎದುರಾದಾಗ ಇವುಗಳ ಕೊರತೆ ನಮ್ಮಲ್ಲಿ ಖಂಡಿತಾ ಕಾಡುತ್ತದೆ. ಸಿಟ್ಟು ಕೋಪ ದುಡುಕುತನ, ಮನುಷ್ಯರಾದ ನಮ್ಮಲ್ಲಿ ಹೆಚ್ಚೇಇದೆ.
         ನೀವು ನಮ್ಮೊಂದಿಗೆ ಚರ್ಚಿಸಿರುವ ಬುದ್ಧನ ಕತೆ ಓದುವಾಗ ನನಗೆ ನನ್ನ  ಪ್ರೈಮರಿ ಶಾಲೆಯಲ್ಲಿ ಸವಿತಾ ಎಂಬ ಶಿಕ್ಷಕಿ ಹೇಳುತ್ತಿದ್ದ ಮಾತು ನೆನಪಿಗೆ ಬಂತು. ಅವರು ಇದೇ ರೀತಿ ಹೇಳುತ್ತಿದ್ದರು. ನಮ್ಮ ತಪ್ಪಿಲ್ಲದಿದ್ದರೂ, ನಮ್ಮನ್ನು ಬೈಯುತ್ತಾ ಇದ್ದಾರೆ ಅಂದರೆ ಅಂತಃ ಮಾತಿಗೆ ಒಂದೂ ಎದುರಾಡದೆ ಸುಮ್ಮನಿರಬೇಕು. ಆಗ ಅವರು ಆಡಿದ ಮಾತು ಅವರಲ್ಲೇ ಉಳಿದು ಬಿಡುತ್ತೆ ಎಂದು ಮತ್ತೂ ಒಂದು ಮಾತು ಹೇಳಿದ್ದರು ಅವರು ಬೈದ ಮಾತಲ್ಲಿ ಯಾವುದಾದರೂ ನಮ್ಮನ್ನು ತಿದ್ದಿಕೊಳ್ಳಬೇಕಾದ ವಿಚಾರವಿದ್ದರೆ ಮೌನವಾಗಿದ್ದುಕೊಂಡೇ ಸ್ವೀಕರಿಸಿ, ಅದು ನಿಮಗೆ ಒಳಿತು ಎಂದು. ಈ ರೀತಿ ಮಾಡಿದಲ್ಲಿ ಘರ್ಷಣೆಗೆ ಅವಕಾಶವಿರುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಮಾತಿಗೆ ಮಾತು ಕೊಟ್ಟರೆ ಸಮಯವೂ ಹಾಳು, ಮನಸ್ಸಿನ ನೆಮ್ಮದಿಯೂ ಹಾಳು.
     ಇನ್ನೊಂದು ವಿಚಾರ ನನಗೆ ನೆನಪಾಗಿದ್ದು ಸ್ವರೂಪದ ಗೋಪಡ್ಕರ್ ಸರ್ ಅವರ ಮಾತು. ಒಮ್ಮೆ ನಮ್ಮ ಶಾಲೆಯ ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಇವರು ತಮ್ಮ ಭಾಷಣದಲ್ಲಿ ಒಂದು ಮಾತು ಹೇಳಿದ್ದರು, ಮನೆಯಲ್ಲಿ ನಮ್ಮ ಅಕ್ಕ, ತಂಗಿ, ಅಣ್ಣ, ತಮ್ಮ ಅಥವಾ ಕೆಲವೂಮ್ಮೆ ಅಮ್ಮನ ಜೊತೆಗೇ ಕೆಲವು ವಿಚಾರಕ್ಕೆ ಗಲಾಟೆ, ಜಗಳ ಮಾಡಿಕೊಂಡಾಗ ಅವರೊಂದಿಗೆ ಮಾತಿಗೆ ಮಾತು ಬೆಳಸಿ ಅವರಿಗೆ ನೋವು ನೀಡಬೇಡಿ. ಬದಲಿಗೆ ನಿಮ್ಮ ಸಿಟ್ಟನ್ನು ದೀರ್ಘ ಕೆಲಸ ಮಾಡುತ್ತಾ ಕಳೆಯಿರಿ. ನಿಮ್ಮ ಕಪಾಟಿನ ಎಲ್ಲಾ ಬಟ್ಟೆ ಕೆಡವಿ, ನಿಧಾನವಾಗಿ ಜೋಡಿಸಿ ಅಥವಾ ಮೂಲೆಯಲ್ಲಿರುವ ಪೊರಕೆ ಹಿಡಿದು ಅಂಗಳ ಪೂರ ಗುಡಿಸಿ ನಿಮ್ಮ ಕೋಪ ಶಾಂತವಾಗುತ್ತದೆ ಎಂದಿದ್ದರು. ಕೋಪಕ್ಕೆ ಕೋಪ, ದ್ವೇಷಕ್ಕೆ ದ್ವೇಷಕ್ಕೆ ಉತ್ತರವಾಗದೆ, ಮೌನವೂ ಒಂದು ಉತ್ತಮ ಉತ್ತರ ಎನ್ನುವುದು ನಾವು ತಿಳಿದುಕೊಳ್ಳಬೇಕಾದ ವಿಚಾರ. ಅಕ್ಕ ನಿಮ್ಮ ಪತ್ರದ ಮೂಲಕ ಶಾಲೆಯ ಗುರುಗಳು ಹೇಳಿದ ಮಾತು ಮೆಲುಕು ಹಾಕುವಂತೆ ಮಾಡಿದಿರಿ. ಸದಾ ನಿಮ್ಮ ನೀತಿ ಪಾಠದ ನಿರೀಕ್ಷೆ ಯಲ್ಲಿ. ಧನ್ಯವಾದಗಳು ಅಕ್ಕ...

.................................................. ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************        

ಅಕ್ಕನ ಪತ್ರ 44ಕ್ಕೆ ಶಿಶಿರನ ಉತ್ತರ
   ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನಿಮ್ಮಪತ್ರದಲ್ಲಿ    ಉತ್ತಮ ಸಂದೇಶ ಸಾರುವ ಬುದ್ಧನ  ಕತೆ ಓದಿ ಸಂತಸವಾಯಿತು.
          ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿನಂತೆ ನಾವು ಏನ್ನನ್ನಾದರೂ ಕತ್ತರಿಸುವಾಗ ಅಜಾಗರೂಕತೆಯಿಂದ ನಮ್ಮ ಕೈ ಬೆರಳಿಗೆ ತಾಗಿಸಿದರೆ ಕೈ ಬೆರಳಿಗೆ ಗಾಯವಾಗುತ್ತದೆ. ಆ ಗಾಯ ವಾಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಒಂದು ಕ್ಷಣದ ಮೈಮರೆವಿನಿಂದ ಕೈ ಬೆರಳಿಗೆ  ನೋವಾಗುತ್ತದೆ. ಅದೇ ರೀತಿ ಕೋಪದಿಂದ ಆಡುವ ಮಾತುಗಳೂ ಕೂಡ. ನಾವು ಯೋಚಿಸದೆ ಕೋಪದಿಂದ ಆಡಿದ ಮಾತು ಇನ್ನೊಬ್ಬರ ಮನಸ್ಸನ್ನು ಮತ್ತು ನಮ್ಮ ಮನಸ್ಸನ್ನು ಕೊರೆಯುತ್ತಿರುತ್ತದೆ. ಈ ರೀತಿ ಆಗಬಾರದೆಂದರೆ ಮಾತನಾಡುವಾಗ  ಸಮಾಧಾನದಿಂದ ಯೋಚಿಸಿ ಶಾಂತ ಚಿತ್ತದಿಂದ ಮಾತನಾಡುವುದನ್ನು  ರೂಢಿಸಿಕೊಳ್ಳೋಣ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಾ ಅಕ್ಕ ನಿಮಗೆ ಕೃತಜ್ಞತೆಗಳು.

............................................. ಶಿಶಿರ್ ಎಸ್
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ  ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
******************************************

    ಪ್ರೀತಿಯ ಅಕ್ಕನಿಗೆ, ತಂಗಿಯಾದ ಹೃದ್ವಿ ಮಾಡುವ ನಮಸ್ಕಾರಗಳು.... ನೀವು ಹೇಳಿರುವಂತೆ ಕೋಪ ನಮಗೆ ತುಂಬಾ ಅಪಾಯವನ್ನು ಉಂಟುಮಾಡುವ ಗುಣ. ಒಮ್ಮೆ ಚಾಣಕ್ಯನಲ್ಲಿ ಯಾರೋ ಕೋಪ ಎಂದರೇನು? ಎಂದು ಕೇಳಿದರು. ಆಗ ಅವರು . "ನಮ್ಮ ನಿಯಂತ್ರಣದಾಚೆ ವಿಷಯಗಳನ್ನು ಒಪ್ಪದಿರುವುದು ಅದು" ಎಂದು ಒಪ್ಪಿಕೊಂಡರು. ಅದು ಸಹಿಷ್ಣುತೆ ಎನಿಸುತ್ತದೆ ಎಂದರು. ನನಗೆ ಅಮ್ಮ ಯಾವಾಗಲೂ ಹೇಳುವ ಮಾತೆಂದರೆ ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದಿಲ್ಲ. ನೀವು ಹೇಳಿದಂತೆ ಕೋಪದಲ್ಲಿ ಮಾಡಿದ ಕೆಲಸ ಯಾವತ್ತೂ ಸರಿಯಾಗುವುದಿಲ್ಲ. ಇದು ನಮಗೆ ಯಾವಾಗಲೂ ನೆನಪಿನಲ್ಲಿ ಇರಬೇಕಾದ ವಿಷಯವಾಗಿದೆ. ನೀವು ಕ್ಷೇಮ ಎಂದು ತಿಳಿಯುತ್ತೇನೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ವಂದನೆಗಳು ಅಕ್ಕಾ ......

............................................. ಹೃದ್ವಿ ಕೆ.
8ನೇ ತರಗತಿ
ಸೈಂಟ್ ಜೋಸೆಫ್ ಇಂಗ್ಲಿಷ್
ಮೀಡಿಯಂ ಸ್ಕೂಲ್ ಕುಲಶೇಖರ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
  

      ಎಲ್ಲರಿಗೂ ಸಿಂಚನಳಾ ನಮಸ್ಕಾರಗಳು. ನಾನು ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಅಕ್ಕನ ಪ್ರೀತಿಯ ಪತ್ರ ನನಗೆ ತಲುಪಿತು. ಈ ಪತ್ರವನ್ನು ಓದಿ ನನಗೆ ತುಂಬಾ ಸಂತೋಷವಾಯಿತು. ಅಕ್ಕ...  ಗೌತಮ ಬುದ್ಧನ ಕಥೆ ತುಂಬಾ ಚೆನ್ನಾಗಿತ್ತು.  ನಿಮ್ಮ ಒಂದೊಂದು ಪತ್ರದಲ್ಲೂ ಒಂದೊಂದು ವಿಷಯವನ್ನು ನನಗೆ ಏನನ್ನಾದರೂ ಒಂದು ಹೇಳಿಕೊಡುತ್ತದೆ. ಇಂತಹ ಪತ್ರವನ್ನು ಓದಲು ನನಗೆ ತುಂಬಾ ಇಷ್ಟವಾಗುತ್ತದೆ. ದಿನಗಳು ಒಂದೊಂದು ಸೆಕೆಂಡ್ ಹಾಗೆ ಉರುಳುತ್ತಿವೆ. ನಮಗೆ ಮಾರ್ಚ್ 15ರಿಂದ ಮಾರ್ಚ್ 18ರವರೆಗೆ ಪಬ್ಲಿಕ್ ಎಕ್ಸಾಮ್. ನಾವು ಓದುತ್ತಿದ್ದೇವೆ. ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಾ ಬಿಡಿಸುತ್ತಾ ಇದ್ದೇವೆ. 10 ಸಲ ಓದುವುದಕ್ಕಿಂತ ಒಂದು ಸಲ ಬರೆಯುವುದೆ ಮೇಲು. ಎಲ್ಲರಿಗೂ ಒಳ್ಳೆಯ ಅಂಕ ಬರಲಿ ಎಂದು ಆಶಿಸುತ್ತೇನೆ. ಅಕ್ಕ ನಾನು ಮೊನ್ನೆ ಪೇಟೆಗೆ ಹೋಗಿದ್ದೆ. ಅಲ್ಲಿ ಒಬ್ಬರು ಸರ್ ಬಂದು ಕೇಳಿದರು ನೀನು ಮಕ್ಕಳ ಜಗಲಿಯ ಸಿಂಚನ ಅಲ್ಲವೇ? ಎಂದು ಕೇಳಿದರು. ನನಗೆ ತುಂಬಾ ಆಶ್ಚರ್ಯವಾಯಿತು. ಮಾತನಾಡಿ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ನಿಮ್ಮ ಪ್ರೀತಿಯ ತಂಗಿ ಸಿಂಚನಾಳ ನಮನಗಳು. ಧನ್ಯವಾದಗಳು

....................................... ಸಿಂಚನಾ  ಶೆಟ್ಟಿ
5ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
******************************************

     ನಮಸ್ತೆ ಅಕ್ಕಾ ನಾನು ನಿಭಾ.... ನಿಮ್ಮ ಪತ್ರಕ್ಕಾಗಿಯೇ ಕಾಯುತ್ತಿದ್ದೆ. ನೀವು ಹೇಳಿದ ಕಥೆ ತುಂಬಾ ಅದ್ಭುತವಾಗಿತ್ತು. ಬುದ್ಧನ ಅದೆಷ್ಟೋ ಕಥೆಗಳನ್ನು ಕೇಳಿದ್ದೆ ಆದರೆ ಈ ಕಥೆಯನ್ನು ಇದೆ ಮೊದಲು ಕೇಳಿದ್ದು. ಆದರೂ ತುಂಬಾ ಚೆನ್ನಾಗಿ ಅರ್ಥವಾಯಿತು. 'ಕೋಪದಿಂದ ಕೊಯ್ದ ಮೂಗು ಮತ್ತೆ ಬಂದೀತೇ?' ಎನ್ನುವಂತೆ ಕೋಪ ಎನ್ನುವುದು ಕ್ಷಣಿಕ. ಆ ಕೋಪದ ಸಂದರ್ಭದಲ್ಲಿ ಮಾತನಾಡುವುದಕ್ಕಿಂತ ಸುಮ್ಮನೆ ಏನು ಅರಿಯದಂತೆ ಕೂರುವುದೇ ಉತ್ತಮ. ಹಾಗೆಯೇ 'ತಾಳಿದವನು ಬಾಳಿಯಾನು' ಎಂಬಂತೆ ತಾಳ್ಮೆ ಎಂಬುವುದು ಕೋಪವನ್ನು ಎದುರಿಸಬಲ್ಲ ಏಕೈಕ ಅಸ್ತ್ರ. ಆ ಒಂದು ಅಸ್ತ್ರ ನಮ್ಮಲ್ಲಿದ್ದರೆ ಮುಂದೆ ಜೀವನ ನಡೆಯುತ್ತದೆ. ಕೋಪ ಎನ್ನುವುದು ಅನಾಹುತದ ಮೂಲ ಆದ್ದರಿಂದಲೇ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರು ಹೇಳಿದ್ದಾರೆ. ಹೀಗೆಂದು - control your ANGER because it is just one letter away from 'D' ANGER ಹಾಗೆಯೇ ನೀವು ಹೇಳಿದ ಕಥೆಯಿಂದ ನಾನು ಕೂಡ ಇನ್ನೂ ಮುಂದಕ್ಕೆ ಕೋಪವನ್ನು ಸಹಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳು ಅಕ್ಕಾ....

...................................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

     ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು. ನಾನು ಪ್ರಿಯ...
ಅಕ್ಕಾ ನನಗೆ ನಿಮ್ಮ ಇಂದಿನ ಪತ್ರದಲ್ಲಿ ಭಗವಾನ್ ಬುದ್ಧರ ಒಂದು ಒಳ್ಳೆಯ ಸಂದೇಶವನ್ನು ಸಾರುವ ಕಥೆ ತುಂಬಾ ಇಷ್ಟವಾಯ್ತು. ಭಗವಾನ್ ಬುದ್ಧನನ್ನು ಶಾಂತಿ ದೂತ ಎಂದೆಲ್ಲಾ ಕರೆಯುತ್ತಾರೆ ಎಂದು ತಿಳಿದಿತ್ತು. ಆದರೂ ಮನದೊಳಗೆ ಏಕೆ...? ಏತಕ್ಕಾಗಿ...? ಕರೆಯುತ್ತಾರೆ ಎಂಬ ಕೆಲ ಪ್ರಶ್ನೆಗಳು ಓಡುತ್ತಿದ್ದವು. ನಿಮ್ಮ ಈ ಪತ್ರದ ಮೂಲಕ ಅವರ ತಾಳ್ಮೆಯ ಬಗ್ಗೆ ಇನ್ನಷ್ಟು ಹೆಚ್ಚು ತಿಳಿಯುವಂತಾಯ್ತು. ತಾಳ್ಮೆಯ ಮಹತ್ವದ ಬಗೆಯೂ ಅರಿವಾಯ್ತು. ನಮ್ಮಲ್ಲಿ ತಾಳ್ಮೆ , ಸಹನೆ  ಇವು ಬಹಳ ಮುಖ್ಯವಾದವುಗಳು. ಅದರಂತೆಯೇ ಕೋಪವನ್ನು ನಾವು ಗೆಲ್ಲಬಹುದು ಎಂಬ ಒಳ್ಳೆಯ ಸಂದೇಶವನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಅಕ್ಕ. ನಿಮ್ಮ ಮುಂದಿನ ಪತ್ರದಲ್ಲಿ ವಿಜ್ಞಾನಿಯೊಬ್ಬರ ಬಗ್ಗೆ ತಿಳಿಸಿ ಕೊಡಿ ಎಂದು ಕೇಳುತ್ತಾ.... ಸದಾ ಒಳ್ಳೆಯ ಸಂದೇಶವನ್ನು ಸಾರುವ ನಿಮ್ಮ ಪತ್ರಗಳ ಸರಮಾಲೆಗಳಿಗಾಗಿ ಧನ್ಯವಾದಗಳು......

...................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ
ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

      ಪ್ರೀತಿಯ ಅಕ್ಕನಿಗೆ ಶ್ರಾವ್ಯ ಮಾಡುವ ನಮಸ್ಕಾರಗಳು.. ಅಕ್ಕನ ಪತ್ರದಲ್ಲಿ ಪ್ರಕಟಿಸಲಾದ ಬುದ್ಧನ ಕಥೆಯ ಕಿರು ಅನಿಸಿಕೆ. ಈ ಒಂದು ಕಥೆಯಿಂದ ಅನೇಕ ಮೌಲ್ಯಗಳನ್ನು ತಿಳಿದುಕೊಳ್ಳಬಹುದು. ನಮಗೆ ಯಾರಾದರೂ ಬೈದರೆ ನಾವು ಹಿಂತಿರುಗಿ ಬೈಯಬಾರದು. ಯಾಕೆಂದರೆ ಅದರಿಂದ ನಮ್ಮಲ್ಲಿ ಇದ್ದ ಒಳ್ಳೆಯ ಬಾಂಧವ್ಯ ಮುರಿದು ಹೋಗುತ್ತದೆ. ನಾವು ಎಷ್ಟು ತಾಳ್ಮೆಯಿಂದ ಇರುತ್ತೇವೆ ಅಷ್ಟು ನಮಗೆ ಒಳ್ಳೆಯದು. ನಮಗೆ ಯಾರಾದರೂ ಬೈದರೆ ಒಂದು ಕಿವಿಯಿಂದ ಕೇಳಿಸಿಕೊಂಡು ಮತ್ತೊಂದು ಕಿವಿಯಿಂದ  ಬಿಡಬೇಕು. ಬಯ್ಯುವುದರಿಂದ ಏನೇನು ಪ್ರಯೋಜನವಿಲ್ಲ. ಹೇಳುವವರು, ಬಯ್ಯುವವರು ಹಾಗೆ ಇರುತ್ತಾರೆ.  ಅದಕ್ಕೆ ನಾವು ಚಿಂತಿಸಬಾರದು.  ನಮಗೆ ತಾಳ್ಮೆ ಎನ್ನುವುದು ಬಹಳ ಮುಖ್ಯ. ತಾಳ್ಮೆ ಇದ್ದರೆ ಜೀವನದಲ್ಲಿ  ಏನು ಬೇಕಾದರೂ ಸಾಧಿಸಬಹುದು. ಧನ್ಯವಾದಗಳು ಅಕ್ಕ....

...................................................... ಶ್ರಾವ್ಯ.
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕರಾಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


      ಪ್ರೀತಿಯ ಅಕ್ಕನಿಗೆ ಭವ್ಯಶ್ರೀ  ಮಾಡುವ ನಮಸ್ಕಾರಗಳು.... ಪರೀಕ್ಷೆಯನ್ನು ಮುಗಿಸಿ ತಡವಾಗಿ ನಿಮ್ಮ ಪತ್ರಕ್ಕೆ ಅನಿಸಿಕೆ ಬರೆದಿರುವೆ....
ಗೌತಮ ಬುದ್ಧನೆಂದರೆ ಆತನ ಶಾಂತ ಕಿರುನಗೆ ಮುಖದಿಂದ ತಪಸ್ಸಿಗೆ ಕುಳಿತ ಚಿತ್ರಣವೇ ಕಣ್ಮುಂದೆ ಪ್ರತ್ಯಕ್ಷವಾಗುತ್ತದೆ.
      ಮೂರ್ಖರೊಂದಿಗೆ ವಾದಿಸುವುದು ಕೆನ್ನೆ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸುವಂತಿದೆ ಎಂದು ಹೇಳಿದ್ದಾನೆ. ನಮಗೆ ಅಗತ್ಯವಿಲ್ಲದವರ ಜೊತೆ ಹಾಗೂ ದುರ್ಗಣವುಳ್ಳವರ ಜೊತೆ ಸಂಘರ್ಷಿಸುವುದು ಸೂಕ್ತವಲ್ಲ ಎಂದು ನಿಖರವಾಗಿ ಹೇಳಿದ್ದಾನೆ. ಬುದ್ಧ ತನ್ನ ಧರ್ಮೋಪದೇಶ ಸಮಯದಲ್ಲಿ ಯಾವುದೇ ಪವಾಡಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಲಿಲ್ಲ. ಬದಲಾಗಿ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ... ಸತ್ಯ, ದುಃಖ, ಶಾಂತಿ, ನೆಮ್ಮದಿ, ಮೋಕ್ಷದ ದಾರಿ ತೋರಿಸಿದನು. ಬುದ್ಧ ಕಳಂಕಿತರನ್ನು, ಕ್ರೂರರನ್ನು ಸಹಜ ಮುಖಿಗಳಾಗಿ ಬದಲಾಯಿಸಿದನು. ಅದಕ್ಕೆ ಉದಾಹರಣೆ ಎಂಬಂತೆ ವೈಶಾಲಿ ನಗರದ ವೈಶ್ಯ ಆಮ್ರ ಪಾಲು ತನ್ನ ಆಸ್ತಿಯನ್ನೆಲ್ಲ ದಾನ ಮಾಡಿ ಬುದ್ಧನ ಶಿಷ್ಯ ಆದಳು. ಬುದ್ಧನನ್ನು ಕೊಲ್ಲಲು ಬಂದ ಅಂಗುಲಿಮಾಲ ಎಲ್ಲ ಬಿಟ್ಟು ಬುದ್ಧನ ಶಿಷ್ಯರಾಗಿದ್ದ. ಬುದ್ಧನು ಸಮಾಜದ ಉದ್ಧಾರ ಮಾಡಿದ್ದಾನೆ. ಒಂದು ದಿನ ಬುದ್ಧ ಧರ್ಮೋಪದೇಶ ಮಾಡುವಾಗ ಒಬ್ಬಳು ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸುವಂತೆ ಬೇಡಿಕೊಂಡಳು. ಆದರೆ ಅದು ಅಸಾಧ್ಯವಾಗಿತ್ತು.
ಏಕೆಂದರೆ ಸಾವಿನಿಂದ ಪಾರಾಗಲು ಸ್ವತಹ ಬುದ್ಧನಿಗೂ ಕೂಡ ಸಾಧ್ಯವಿರಲಿಲ್ಲ. ಅದಕ್ಕಾಗಿ ಆತ ಆಕೆಗೆ ವಾಸ್ತವವನ್ನು ಅರ್ಥ ಮಾಡಿಸಲು ಸಾವಿಲ್ಲದ ಮನೆಯ ಸಾಸಿವೆಕಾಳನ್ನು ತೆಗೆದುಕೊಂಡು ಬಾ ಎಂದು ಕಳುಹಿಸಿದನು. ಆಕೆಗೆ ಸಾವಿಲ್ಲದ ಮನೆಯ ಸಾಸಿವೆ ದೊರೆಯದೆ ವಾಸ್ತವದ ಅರಿವಾಗುತ್ತದೆ. ಹೀಗೆ ಬುದ್ಧನು ತನ್ನ ಜೀವನದ ಹಾದಿಯಲ್ಲಿ ಲೋಕದ ಜನತೆಗೆ ಜೀವನ ಮೌಲ್ಯಗಳು ಬಿತ್ತುತ್ತಾ ಹೋಗಿದ್ದಾನೆ. ಆಧುನಿಕ ಜಗತ್ತಿನ ಜನರಿಗೆ ಬುದ್ಧನ ಶಾಂತಿ ಸಹನೆ ಅಹಿಂಸೆಯ ಸದ್ಗುಣವು ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ. ಮುಂದಿನ ಪತ್ರದಲ್ಲಿ ಇನ್ನಷ್ಟು ಹೊಸ ವಿಷಯದೊಂದಿಗೆ ಭೇಟಿಯಾಗೋಣ ಅಕ್ಕ
ನಮಸ್ಕಾರಗಳು....

................................................... ಭವ್ಯಶೀ
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಕೋಣಾಲು
ಕಡಬ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ.
******************************************

        

         ನಮಸ್ತೇ ಅಕ್ಕಾ.... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು. ನಾವು ಕ್ಷೇಮವಾಗಿರುವೆವು. ನೀವೂ ಕೂಡಾ ಕ್ಷೇಮವೆಂದು ಭಾವಿಸುತ್ತೇನೆ.   ನಿಮ್ಮ ಪತ್ರವನ್ನು ಓದಿದೆನು. ನಿಮ್ಮ ಪತ್ರದಿಂದ ಒಳ್ಳೆಯ ವಿಷಯವನ್ನು ತಿಳಿಯಲು ಸಹಾಯವಾಗುತ್ತದೆ. ನಮ್ಮನ್ನು ಯಾರಾದರೂ ಸುಮ್ಮನೇ  ಅನಗತ್ಯವಾಗಿ ಏನಾದರೂ ಹೇಳಿದಾಗ ಅದನ್ನು ಕಿವಿಗೆ ಹಾಕಿಕೊಳ್ಳದೇ ನಾವು ಸುಮ್ಮನೆ ಇದ್ದರೆ ನಮಗೆ ಒಳ್ಳೆಯದು ಎಂಬುದನ್ನು ತಿಳಿಯಬಹುದು. ಇನ್ನೊಬ್ಬರ ಬೇಡದ ಮಾತಿನಿಂದ ಸಿಟ್ಟುಗೊಂಡರೆ ನಮ್ಮ ಜ್ಞಾನ (ಬುದ್ಧಿ) ವೂ ನಾಶವಾಗಬಹುದು ಮತ್ತು ನಮ್ಮ ಆರೋಗ್ಯವೂ ಹಾಳಾಗಬಹುದು. ನಾವು ಇನ್ನೊಬ್ಬರ ಬೇಡದ ಮಾತನ್ನು ಕೇಳದೇ ಶಾಂತವಾಗಿದ್ದರೆ ಪರಿಶುದ್ದ ಮಾನವನಾಗಿ ಬಾಳಬಹುದು. ಅಪ್ಪ ಅಮ್ಮ , ಗುರು ಹಿರಿಯರು ಜೋರು ಮಾಡಿದಲ್ಲಿ ಕೋಪಿಸಿಕೊಳ್ಳದೆ ಅದು "ನಮ್ಮ ಒಳಿತಿಗೆ" ಎಂದು ನಾವು ಯೋಚಿಸಿದಲ್ಲಿ ನಮ್ಮ ಮನದಲ್ಲಿ ಖಂಡಿತವಾಗಿಯೂ ಬೇಸರ, ಕೋಪ ಬರುವುದಿಲ್ಲ. ಧನ್ಯವಾದಗಳು ಅಕ್ಕಾ,

........................................ ಸಾತ್ವಿಕ್ ಗಣೇಶ್
8ನೇ ತರಗತಿ
ಸರಕಾರಿ ಪದವಿ ಪೂರ್ವ
ಕಾಲೇಜು , ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************  
         

      ಅಕ್ಕಾ, ನಿಮ್ಮ ಪ್ರೀತಿಯ ತಂಗಿ ಸಾನ್ವಿ ಸಿ ಎಸ್ ಮಾಡುವ ನಮಸ್ಕಾರಗಳು... ನಾನು ಚೆನ್ನಾಗಿದ್ದೇನೆ. ನಿಮ್ಮ ಪತ್ರ ತಲುಪಿತು. 'ಮಿಂಚಿ ಹೋದದಕ್ಕೆ ಚಿಂತಿಸಿ ಫಲವಿಲ್ಲ' ಎಂಬಂತೆ ನಮಗೆ ಕೋಪ ಬಂದಾಗ ನಮಗೆ ನಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ. ಕೋಪದಲ್ಲಿ ಏನೇನೋ ಮಾತನಾಡುತ್ತೇವೆ. ಆ ಕೋಪವನ್ನು ತಡೆದುಕೊಳ್ಳುವುದೇ ನಮಗೆ ಕಷ್ಟ ಅನ್ನಿಸುತ್ತದೆ. ಅಂತಹುದರಲ್ಲಿ ಗೌತಮ ಬುದ್ಧ ಅದೇ ರೀತಿ ಗಾಂಧೀಜಿ ಮುಂತಾದ ಮಹನೀಯರು ನಮಗೆ  ಪ್ರೇರಣೆ. ನಾವು ಕೋಪ ಬಂದರೆ ಒಂದರಿಂದ ನೂರರವರೆಗೆ ಇಲ್ಲವೇ ಒಂದು ಲೋಟ ನೀರು ಕುಡಿಯಬೇಕು ಎಂದು ಹಿರಿಯರು ಹೇಳುತ್ತಾರೆ. ಕೋಪದಿಂದ ಎಷ್ಟೋ ಅನಾಹುತಗಳು ನಡೆಯುತ್ತದೆ. ಅತಿಯಾದ ಕೋಪದಿಂದ ಆರೋಗ್ಯವೂ ಕೆಡುತ್ತದೆ. ಕೋಪ ಯಾವುದಕ್ಕೂ ಪರಿಹಾರವಲ್ಲ. ಆದ್ದರಿಂದ ನಾವು ಆದಷ್ಟು ಕೋಪವನ್ನು ತಡೆಯಲು ಪ್ರಯತ್ನಿಸಬೇಕು. ಧನ್ಯವಾದಗಳು... ಅಕ್ಕಾ....

............................................. ಸಾನ್ವಿ ಸಿ ಎಸ್
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************  

      ಅಕ್ಕನಿಗೆ ನನ್ನ ನಾಮಸ್ಕಾರಗಳು....  ನಾನು ಪೂಜಾ..... ಹೇಗಿದ್ದೀರಿ ಅಕ್ಕಾ...? ನಾನು ಚೆನ್ನಾಗಿದ್ದೇನೆ.... ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ... ನೀವು ಪತ್ರದಲ್ಲಿ ಬರೆದ ಕತೆ ತುಂಬಾ ಚೆನ್ನಾಗಿತ್ತು. ನೀವು ಹೇಳಿದ ಹಾಗೆ ಕೋಪ ಬೇರೆ ಬೇರೆ ಅನಾಹುತಗಳಿಗೆ ಕಾರಣವಾಗುತ್ತದೆ. ನಮಗೆ ಯಾರೇ ಎಷ್ಟೇ ಬೈದರು ನಾವು ಸುಮ್ಮನಿರಬೇಕು... ಬೈದು ನಮ್ಮ ಜೀವನವನ್ನು ಹಾಳು ಮಾಡುವುದು ಬೇಡ ಎಂದು ಹೇಳುತ್ತಾ ಅಕ್ಕನ ಪತ್ರಕ್ಕೆ ನನ್ನ ನಮಸ್ಕಾರಗಳು.....

............................................... ಪೂಜಾ
8ನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನಾನು ಕ್ಷೇಮ, ನೀವು ಕ್ಷೇಮವೆಂದು ಭಾವಿಸಿದ್ದೇನೆ. ನಾವು ಯಾವತ್ತೂ ಒಳ್ಳೆಯ ಆಚಾರ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ಅಪ್ಪ ಅಮ್ಮ ನಮಗೆ ಕಲಿಸಿಕೊಟ್ಟ ಹಾದಿಯಲ್ಲೇ ನಾವು ಸಾಗಬೇಕು. ನಮ್ಮ ಅಪ್ಪ ಅಮ್ಮ ಬೈದಾಗ ಕೋಪ ಬರುವುದು ಸಹಜ. ಆ ಕೋಪವನ್ನು ತೋರ್ಪಡಿಸದೆ ತಾಳ್ಮೆಯಿಂದ ವರ್ತಿಸುವುದು ನಮ್ಮಲ್ಲಿ ಬೆಳೆದು ಬರಬೇಕು. ನಮ್ಮ ಹೆತ್ತವರು ನಮ್ಮ ಭವಿಷ್ಯವನ್ನು ರೂಪಿಸುವ ರೂವಾರಿಗಳು. ತಾಳ್ಮೆ, ಸಹನೆ ಈ ಎಲ್ಲಾ ಗುಣಗಳು ನಮ್ಮಲ್ಲಿ ಯಾವಾಗಲೂ ಇರಬೇಕು. ಆವಾಗಲೇ ನಮಗೆ ಗೆಲುವು ನಿಶ್ಚಿತ. ಧನ್ಯವಾದಗಳೊಂದಿಗೆ,

...................................... ವೈಷ್ಣವಿ ಕಾಮತ್
6ನೇ ತರಗತಿ
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



Ads on article

Advertise in articles 1

advertising articles 2

Advertise under the article