-->
ಜೀವನ ಸಂಭ್ರಮ : ಸಂಚಿಕೆ - 77

ಜೀವನ ಸಂಭ್ರಮ : ಸಂಚಿಕೆ - 77

ಜೀವನ ಸಂಭ್ರಮ : ಸಂಚಿಕೆ - 77
                       
                 ಮಕ್ಕಳೇ, ನಾವು ಈಗಾಗಲೇ ಮನಸ್ಸು, ಮನಸ್ಸಿನ ದೌರ್ಬಲ್ಯ ಮತ್ತು ಮನಸ್ಸಿನ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಸುಖಕ್ಕೂ ದುಃಖಕ್ಕೂ ಮನಸ್ಸು ಹೇಗೆ ಕಾರಣ ನೋಡೋಣ. ಈ ಎರಡು ಘಟನೆ ಓದಿ.
       ನಾನು ಒಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕನಾಗಿದ್ದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗಿತ್ತು. ವಿದ್ಯಾರ್ಥಿ ವೇತನ ಶಾಲೆಯ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು. ಬ್ಯಾಂಕಿನಿಂದ ಹಣ ಡ್ರಾ ಮಾಡಿ ಪ್ಯಾಂಟಿನಲ್ಲಿ ಇಟ್ಟಿದ್ದೆ. ಆ ಪ್ಯಾಂಟನ್ನು ಮನೆಯ ಒಂದು ರೂಮಿನ ಬಾಗಿಲಿಗೆ ನೇತುಹಾಕಿದ್ದೆ. ನನ್ನ ಪತ್ನಿ ಮತ್ತು ಮಗನೊಂದಿಗೆ ತನ್ನ ತಾಯಿ ಮನೆಗೆ ಹೋಗಿದ್ದರು. ಬಾಗಿಲು ತೆರೆದಿತ್ತು. ಹೊರಗಡೆ ಕುಳಿತುಕೊಳ್ಳಲು ಕಲ್ಲನ್ನು ಹಾಸಿದ್ದರು. ಅದು ಬಾಡಿಗೆ ಮನೆ. ಆ ಮನೆಯ ಯಜಮಾನನ ಅಳಿಯ ಕುಡುಕನಾಗಿದ್ದ. ನಾನು ಕಲ್ಲಿನ ಮೇಲೆ ಕುಳಿತು ಓದುವುದರಲ್ಲಿ ಮಗ್ನನಾಗಿದ್ದೆ. ಆ ಮನೆ ಪಕ್ಕದಲ್ಲಿ ಮನೆಯ ಮಾಲೀಕನು ವಾಸವಿದ್ದ. ಒಂದೇ ಕಾಂಪೌಂಡ್ ಆ ಎರಡು ಮನೆಗೆ. ಆ ಮನೆಗೆ ಹಿಂದೆ ಮತ್ತು ಮುಂದೆ ಬಾಗಿಲು ಇತ್ತು. ಎರಡು ಬಾಗಿಲು ತೆರೆದಿದ್ದವು. ಆ ಮನೆಯ ಅಳಿಯ ನೇರವಾಗಿ ಹಿಂದಿನ ಬಾಗಿಲಿನ ಮೂಲಕ ಒಳ ಹೋಗಿ ಪ್ಯಾಂಟ್ ಸಮೇತ ಹಣ ತೆಗೆದುಕೊಂಡು ಹೋಗಿದ್ದ.
       ಇನ್ನೊಂದು ಪತ್ರಿಕೆಯಲ್ಲಿ ಬಂದ ಪ್ರಕರಣ. ಮುಂಬಯಿಯಲ್ಲಿ ನಡೆದಿದ್ದು. ಗಂಡ, ಹೆಂಡತಿ ಮತ್ತು ಸಣ್ಣ ಮಗು ಟೀವಿ ನೋಡುವುದರಲ್ಲಿ ಮಗ್ನರಾಗಿದ್ದರು. ಅದು ವಿಶೇಷ ಕಾರ್ಯಕ್ರಮ. ಅವರಿಗೆ ಬೇರೆ ಕಡೆ ಗಮನವಿರಲಿಲ್ಲ. ಆಗ ಕಳ್ಳ ತೆರೆದಿದ್ದ ಬಾಗಿಲಿನ ಮೂಲಕ ಒಳ ಬಂದು, ಅವರಿದ್ದಾಗಲೇ ಕೊಠಡಿ ಪ್ರವೇಶಿಸಿ, ಕಳ್ಳತನ ಮಾಡಿಕೊಂಡು ಅವರ ಸಮೀಪವೇ ಹೊರ ಹೋಗಿದ್ದನು.
       ಈ ಎರಡು ಘಟನೆ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಈ ಎರಡು ಘಟನೆಯಲ್ಲಿ ಕಣ್ಣು ತೆರೆದಿದ್ದೇವೆ, ಕಿವಿ ತೆರೆದೇ ಇದೆ. ಆದರೆ ಅರಿವಿಗೆ ಬರಲಿಲ್ಲ. ಏಕೆಂದರೆ ಮನಸ್ಸು ಒಂದು ವಿಷಯದಲ್ಲಿ ತಲ್ಲೀನವಾಗಿತ್ತು. ಇದರಿಂದ ತಿಳಿದು ಬರುವುದು ಏನೆಂದರೆ.....
▪️ಕಣ್ಣು ನೋಡುತ್ತದೆ ಎಂದು ತಿಳಿದಿದ್ದೇವೆ, ಆದರೆ ಕಣ್ಣು ನೋಡಲು ಸಹಾಯ ಮಾಡುತ್ತದೆ ವಿನಃ ನೋಡುವುದು ನಮ್ಮ ಮನಸ್ಸೇ.
▪️ ಕಿವಿ ಕೇಳಲು ಸಹಾಯಮಾಡುತ್ತದೆ ವಿನಃ ನಿಜವಾಗಿ ಕೇಳುವುದು ನಮ್ಮ ಮನಸ್ಸೆ.
▪️ ವಾಸನೆ ಸವಿಯಲು ಮೂಗು ಸಹಾಯ ಮಾಡುತ್ತದೆ ವಿನಃ ವಾಸನೆ ಅನುಭವಿಸುವುದು ನಮ್ಮ ಮನಸ್ಸೇ.
▪️ ರುಚಿ ಸವಿಯಲು ನಮ್ಮ ನಾಲಿಗೆ ಸಹಾಯ ಮಾಡುತ್ತದೆ ವಿನಹ ರುಚಿ ಅನುಭವಿಸುವುದು ನಮ್ಮ ಮನಸ್ಸೆ.
▪️ ಸ್ಪರ್ಶ ಸುಖ ಅನುಭವಿಸಲು ಚರ್ಮ ಸಹಾಯ ಮಾಡುತ್ತದೆ ವಿನಹ ನಿಜವಾಗಿ ಸ್ಪರ್ಶ ಅನುಭವಿಸುವುದು ನಮ್ಮ ಮನಸ್ಸೇ. 
      ಇದು ಕೆಲವು ಸಂದರ್ಭಗಳಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ನೆಗಡಿ ಆದಾಗ ವಾಸನೆ ಗೊತ್ತಾಗೋದಿಲ್ಲ. ಅದೇ ರೀತಿ ಜ್ವರ ಬಂದು ನಾಲಿಗೆ ಕಹಿ ಇದ್ದಾಗ ರುಚಿ ಅನುಭವ ಆಗುವುದಿಲ್ಲ. ಚರ್ಮ ಮರಗಟ್ಟಿದ್ದರೆ ಸ್ಪರ್ಶ ಅನುಭವ ಆಗುವುದಿಲ್ಲ. ಇದರ ಅರ್ಥ ಪಂಚೇಂದ್ರಿಯಗಳು ಆರೋಗ್ಯವಾಗಿರಬೇಕು, ಮನಸ್ಸು ಆ ವಸ್ತುವಿನಲ್ಲಿ ಬೆರೆಯಬೇಕು, ಆಗ ಮಾತ್ರ ಆ ವಸ್ತುವಿನ ಅನುಭವ ಆಗುತ್ತದೆ. ಆ ಅನುಭವ, ಭಾವನೆಗಳನ್ನು ಅವಲಂಬಿಸಿದೆ.
      ಒಂದು ವಸ್ತುವನ್ನು ಪ್ರೀತಿಯಿಂದ ನೋಡಿದರೆ ಒಂದು ರೀತಿ, ದ್ವೇಷದಿಂದ ನೋಡಿದರೆ ಮತ್ತೊಂದು ರೀತಿ ಕಾಣುತ್ತದೆ. ಮನಸ್ಸು ಸಂತೋಷ ಪಡಬೇಕಾದರೆ ಪ್ರೇಮ ಭಾವನೆ ಅಗತ್ಯ. ನಮಗೆ ಪ್ರೇಮಭಾವನೆ ಬರಬೇಕಾದರೆ ಒಳ್ಳೆಯದನ್ನು ಮತ್ತು ಸುಂದರವಾದದ್ದನ್ನು ಮನಸ್ಸಿಟ್ಟು ನೋಡಬೇಕು. ಆಗ ಸೌಂದರ್ಯದ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಒಳ್ಳೆಯದನ್ನು ಮತ್ತು ಮಧುರವಾದದ್ದನ್ನು ಮನಸ್ಸಿಟ್ಟು ಕೇಳಬೇಕು, ಆಗ ಮಾಧುರ್ಯ ಮನಸ್ಸಿನಲ್ಲಿ ತುಂಬುತ್ತದೆ. ಒಳ್ಳೆಯ ವಿಚಾರ ಮಧುರ ಚಿತ್ರ ಮನಸ್ಸಿನಲ್ಲಿ ತುಂಬುತ್ತದೆ ಹಾಗೆ ಒಳ್ಳೆಯ ವಾಸನೆ ಅಂದರೆ ಸುವಾಸನೆ ಮತ್ತು ಸುರುಚಿ ಹಾಗೂ ಹಿತಕರ ಸ್ಪರ್ಶವನ್ನು ಮನಸ್ಸಿಟ್ಟು ಅನುಭವಿಸಿದಾಗ ಮನಸ್ಸಿನಲ್ಲಿ ಸುವಾಸನೆ ಸುರುಚಿ ಮತ್ತು ಹಿತಕರ ಸ್ಪರ್ಶದ ಅನುಭವ ತುಂಬುತ್ತದೆ. ಆಗ ಮನಸ್ಸಿನಲ್ಲಿ ಸಂತೋಷ ತನಗೆ ತಾನೇ ತುಂಬಿರುತ್ತದೆ. ಆಗ ನಾವು ಸಂತೋಷ ಅನುಭವಿಸುತ್ತೇವೆ. ಆಗ ಪ್ರೇಮ ಭಾವ ತನಗೆ ತಾನೇ ಮೂಡುತ್ತದೆ.
         ಕುರೂಪ, ಕೆಟ್ಟ ದೃಶ್ಯವನ್ನು ಮನಸ್ಸಿಟ್ಟು ನೋಡಿದಾಗ, ಕೆಟ್ಟ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಕೆಟ್ಟ, ಕರ್ಕಶ ಶಬ್ದ, ಕೆಟ್ಟ ವಿಚಾರ ಮನಸ್ಸಿಟ್ಟು ಕೇಳಿದಾಗ ಮನಸ್ಸಿನಲ್ಲಿ ಕೆಟ್ಟ ವಿಚಾರ ತುಂಬುತ್ತದೆ. ಹಾಗೆಯೇ ದುರ್ವಾಸನೆ, ಕೆಟ್ಟ ರುಚಿ ಮತ್ತು ಅಹಿತಕರ ಸ್ಪರ್ಶ ಮನಸ್ಸಿಟ್ಟು ಅನುಭವಿಸಿದಾಗ, ಮನಸ್ಸಿನಲ್ಲಿ ಅದೇ ತುಂಬುತ್ತದೆ. ಅಂತ ಮನಸ್ಸು ದುಃಖ ಅನುಭವಿಸುತ್ತದೆ, ದ್ವೇಷದ ಭಾವ ತಾನಾಗೇ ಮಾಡುತ್ತದೆ.
       ಮಕ್ಕಳೇ ತಿಳಿಯಿತೇ, ನಾವು ನಮ್ಮ ಮನಸ್ಸನ್ನು ಸುಂದರಗೊಳಿಸಿ, ಸಂತೋಷಪಡಬಹುದು ಹಾಗೆ ನಮ್ಮ ಮನಸ್ಸನ್ನು ಕುರೂಪಗೊಳಿಸಿ ದುಃಖ ಪಡಬಹುದು. ಈ ಎರಡು ನಮ್ಮ ಕೈಯಲ್ಲಿದೆ ಅಲ್ಲವೇ. ಈ ಜಗತ್ತಿನಲ್ಲಿ ಸೌಂದರ್ಯ ವಸ್ತು, ಕುರೂಪ ವಸ್ತು ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಇದೆ. ಕುರೂಪ ವಸ್ತುವನ್ನು ಜಗತ್ತಿನಿಂದ ತೆಗೆದುಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯದು ಕೆಟ್ಟದ್ದು ಎರಡು ಇದೆ. ನಾವು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದರ ಕಡೆ ಗಮನಹರಿಸಿದರೆ ಪ್ರೀತಿ ಮತ್ತು ಸಂತೋಷ ಉಂಟಾಗುತ್ತದೆ. ಹಾಗಾಗಿ ನಾವು ನಮ್ಮ ಮನಸ್ಸು ಭಾವನೆಗಳು ಮತ್ತು ಪಂಚೇಂದ್ರಿಯಗಳನ್ನು ಯಾವುದಕ್ಕೆ ಬಳಸಬೇಕು ಎಂಬ ವಿವೇಕ ಇರಬೇಕು ಅಲ್ಲವೆ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article