-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 2

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 2

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 2
ಲೇಖಕರು : ಪ್ರಜ್ವಲಾ ಶೆಣೈ, ಕಾರ್ಕಳ
ಸಹಶಿಕ್ಷಕಿ
ದ.ಕ ಜಿ.ಪಂ. ಹಿ. ಪ್ರಾ.ಶಾಲೆ ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
     
    ಶಾಲೆಯಲ್ಲಿ ಮಕ್ಕಳ ಜೊತೆ ಬೆರೆಯುವ ಕ್ಷಣಗಳು ಅದ್ಭುತ ಅನುಭವ. ಶಾಲೆಯಲ್ಲಿ ನಡೆಸುವ ವಿಭಿನ್ನ ಪ್ರಯೋಗಗಳು, ಸೃಜನಶೀಲ ಚಟುವಟಿಕೆಗಳು ನಮ್ಮಲ್ಲಿ ಅನುಭವದ ಬುತ್ತಿಯನ್ನು ಕಟ್ಟಿಕೊಡುತ್ತವೆ.... ಶಿಕ್ಷಕರ ನೆನಪಿನ ಡೈರಿಯಲ್ಲಿ ದಾಖಲಾಗಿರುವ ಸ್ಕೂಲ್ ಅನುಭವಗಳಿಗೆ ಅಕ್ಷರ ರೂಪ ಕಾಣುವ ಅಂಕಣ ಇದು. "ಶಿಕ್ಷಕರ ಸ್ಕೂಲ್ ಡೈರಿ"        
   
         ಯಾವುದೇ ಒಂದು ವಿದ್ಯಾಲಯಕ್ಕೆ ಹೋದಾಗ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ" ಎನ್ನುವ ಧ್ಯೇಯ ವಾಕ್ಯ ಸದಾ ನಮ್ಮೊಳಗೆ ಸುಪ್ತವಾಗಿರುವ ಪ್ರಜ್ಞೆಯನ್ನು  ಜಾಗೃತಗೊಳಿಸುತ್ತಿರುತ್ತದೆ. ಹೇಗೆ ದೇವಾಲಯದ ಒಳಗೆ ಪಾದರಕ್ಷೆ ಧರಿಸುವುದಿಲ್ಲವೊ ಹಾಗೆಯೇ ಪವಿತ್ರವಾದ ವಿದ್ಯಾಲಯದ ಒಳಗೂ ಪಾದರಕ್ಷೆ ಪ್ರವೇಶಿಸುವುದಿಲ್ಲ. ಗುರುವಿನ ಸ್ಥಾನಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಸಮಾಜದಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿರಲಿ, ಸಿರಿವಂತನಾಗಿರಲಿ, ಉನ್ನತ ಸ್ಥಾನಕ್ಕೆ ಏರಲಿ ಆದರೆ ಆ ವ್ಯಕ್ತಿ ತನಗೆ ವಿದ್ಯೆ ಕಲಿಸಿದ ಗುರುವನ್ನು ಸ್ಮರಿಸದೆ ಇರುವುದಿಲ್ಲ. ಅದು ಗುರುವಿನ ಸ್ಥಾನಕ್ಕಿರುವ ಮಹತ್ವ. ಅಂತಹ ಒಂದು ಉನ್ನತ ಸ್ಥಾನದಲ್ಲಿ ನಾನಿರುವೆನೆಂಬ ಅಭಿಮಾನ ಸದಾ ನನ್ನಲ್ಲಿ ಸಂತಸದ ಅಲೆಗಳನ್ನು ಉಕ್ಕಿಸುತ್ತಿರುತ್ತದೆ.
ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿ ಕೊಳ್ಳುವುದಾದರೆ, ಸುಂದರವಾದ ಪ್ರಕೃತಿಯ ತಪ್ಪಲಿನಲ್ಲಿರುವ ಗೊಲ್ಲರಹಟ್ಟಿ ಎನ್ನುವ ಪುಟ್ಟ ಹಳ್ಳಿ. ಅಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸಣ್ಣನಪಾಳ್ಯವೆಂಬ ವಿದ್ಯಾ ದೇಗುಲ. ಹಳ್ಳಿಯ ಸೊಗಡಿನ ಅಚ್ಚ ಜನಪದೀಯ ಪರಿಸರ. ಗೊಲ್ಲ ಹಾಗೂ ಕುರುಬ ಸಮುದಾಯವೆ ಹೆಚ್ಚಾಗಿ ಇರುವ ಜನಾಂಗದ ಆಚಾರ ವಿಚಾರಗಳು, ಸಂಪ್ರದಾಯಗಳು ವಿಶಿಷ್ಟ ರೀತಿಯಿಂದ ಕೂಡಿದೆ. ಹೆಚ್ಚೇನೂ ಆಧುನಿಕತೆಗೆ ಒಳಪಡದ ಗ್ರಾಮೀಣ ಕನ್ನಡ ಭಾಷೆ, ಸುತ್ತಲೂ ಮಾವಿನ ತೋಪು, ಬಗೆ ಬಗೆಯ ಹೂವಿನ ತೋಟ. ಗುರುಗಳ ಮೇಲೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರ ಮನದಲ್ಲಿ ಪುಟಿಯುತ್ತಿರುವ ಗೌರವ ಭಾವನೆ. ವೃತ್ತಿ ಜೀವನದ ಆರಂಭದ ದಿನಗಳು ಇಷ್ಟು ಸುಂದರವಾಗಿ ಇರಬಹುದೆಂಬ ಕಲ್ಪನೆಯು ಇರಲಿಲ್ಲ. ವಿದ್ಯೆ ಕಲಿಸುವುದೆಂದರೆ ಅದೊಂದು ಶಿಕ್ಷೆಯಲ್ಲ ಅದೊಂದು ಪವಿತ್ರವಾದ ರಕ್ಷೆ ಎಂದು ನಂಬಿರುವವಳು ನಾನು. ವಿದ್ಯಾರ್ಥಿಗಳೊಂದಿಗೆ ನಾನೂ ಮಗುವಾದ ದಿನಗಳವು. ಶಿಕ್ಷಿಸದೆ ಪ್ರೀತಿಯಿಂದಲೂ ವಿದ್ಯಾರ್ಥಿಗಳನ್ನು ತಿದ್ದಬಹುದು ಎನ್ನುವ ಪರಿಕಲ್ಪನೆ ಮೂಡಿದ್ದೆ ಇಲ್ಲಿ. ಯಾವುದೇ ಮಗು ಗುರುಗಳು ಕಲಿಸುವ ಪಾಠ ಆಸಕ್ತಿಯುತವಾಗಿ ಕಲಿಯಬೇಕಾದರೆ ಮೊದಲು ಆ ಶಿಕ್ಷಕರನ್ನು ಇಷ್ಟ ಪಡಬೇಕು. ಶಿಕ್ಷಕರನ್ನು ಇಷ್ಟಪಡಬೇಕಾದರೆ ಮಗುವನ್ನು ಸ್ನೇಹಿತನಂತೆ ಪ್ರೀತಿಸಬೇಕು. ಹಾಗೂ ಪುಟ್ಟ ಮಗುವನ್ನು ಕೂಡ ಗೌರವದಿಂದ ಕಾಣಬೇಕು. ಮಗುವಿಗೆ ಆಸಕ್ತಿಯಿರುವ ವಿಚಾರದ ಬಗ್ಗೆ ಶಿಕ್ಷಕ ಒಲವು ತೋರಿಸಬೇಕು. ಇತ್ಯಾದಿ ಮನೋವೈಜ್ಞಾನಿಕ ತಳಹದಿಯನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳೊಂದಿಗೆ ಬೆರೆತೆ. ಪುಟ್ಟ ಮಕ್ಕಳಿಂದಲೂ ನಾನು ಕಲಿಯುವುದು ಬಹಳ ಇದೆ ಎಂದೆನಿಸಿತು. ಕೃಷಿ ಹಿನ್ನೆಲೆಯಿಂದ ಬಂದ ಪುಟ್ಟ ಮಕ್ಕಳು, ತೋಟಗಾರಿಕೆಯ ಬಗ್ಗೆ ಹೊಂದಿರುವ ಜ್ಞಾನ ಅನುಭವ ಕಂಡು ನಾನು ಎಷ್ಟು ಚಿಕ್ಕವಳೆಂಬ ಪರಿವೆ ನನಗಾಯಿತು. ಚಿಕ್ಕವರಾದರು ಕೃಷಿಯಲ್ಲಿ ಅವರಿಗಿರುವ ಅಪಾರ ನೈಪುಣ್ಯತೆ ಮೆಚ್ಚುವಂತದ್ದು. ಅಕ್ಷರದ ಪಾಠ ನಾನು ಕಲಿಸಿದರೆ ಕೃಷಿಯ ಪಾಠ ವಿದ್ಯಾರ್ಥಿಗಳು ನನಗೆ ಕಲಿಸಿದರು. ಮುಗ್ದ ಮಕ್ಕಳೊಂದಿಗೆ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ. ಸಮಯ ಸಿಕ್ಕಾಗೆಲ್ಲಾ ಮಾವಿನ ತೋಪಲ್ಲಿ ಆಡಿದ ಆಟಗಳು, ವಿವಿಧ ಹಣ್ಣು, ತರಕಾರಿ, ಸೊಪ್ಪುಗಳನ್ನು ಹೇಗೆ ಬೆಳೆಯುವರೆಂದು ವಿದ್ಯಾರ್ಥಿಗಳಿಂದ ಕಲಿಯುವ ಸದವಕಾಶ ದೊರೆಯಿತು. ಸೇವಂತಿಗೆ, ಚೆಂಡು, ಗುಲಾಬಿ ಹೂವಿನ ತೋಟದೊಳಗೆ ವಿದ್ಯಾರ್ಥಿಗಳೊಂದಿಗೆ ಸುತ್ತಾಡಿದ ಕ್ಷಣಗಳು, ಮೊಬೈಲ್ ಎಂಬ ಮಾಯಾಪೆಟ್ಟಿಗೆಯಲ್ಲಿ ಸೆರೆ ಹಿಡಿದ ಭಾವಚಿತ್ರಗಳನ್ನು ನೋಡುವಾಗ ಆ ದಿನಗಳು ಎಷ್ಟೊಂದು ಸುಂದರ.
           ಮತ್ತೆ ಹಿಂದಕ್ಕೆ ಹೋಗೋಣ ಎನಿಸುತ್ತದೆ. ದಿನವೂ ತನ್ನ ನೆಚ್ಚಿನ ಶಿಕ್ಷಕಿಗಾಗಿ ತನ್ನ ಚೀಲದಲ್ಲಿ ತುಂಬಿ ತರುವ ಮಾವು, ಸೀಬೆ ಹಣ್ಣುಗಳು, ವರ್ಷಪೂರ್ತಿ ಎನ್ನುವಂತೆ ತಂದು ಕೊಡುವ ಹಲಸಿನ ಹಣ್ಣುಗಳು ನೆನೆಯುವಾಗೆಲ್ಲ ಕಣ್ಣು ತುಂಬಿ ಬರುತ್ತದೆ. ಯುಗಾದಿ, ದೀಪಾವಳಿಯ ಸಂಭ್ರಮಕೆ ಮಾಡುವ ಒಬ್ಬಟ್ಟು ಪಾಯಸದ ಹಬ್ಬದಡುಗೆಗೆ ಪ್ರೀತಿಯ ಆಹ್ವಾನ. ಇದ್ಯಾವ ಜನುಮದ ಅನುಬಂಧ ಎಂದೆನಿಸುವುದು. ತಂದೆಯಂತೆ ಅಕ್ಕರೆಗೈಯುವ ಮುಖ್ಯಗುರುಗಳು. ನೆರೆಹೊರೆಯ ಗ್ರಾಮಸ್ಥರ ಸಹೃದಯತೆ ಎಷ್ಟು ಕೊಂಡಾಡಿದರು ಸಾಲದು. .ಆಗಾಗ ಶಾಲೆಯ ಮಕ್ಕಳೊಂದಿಗೆ ಸವಿದ ಕ್ಯಾಂಡಿಯ ಸಿಹಿಇನ್ನೂ ಹಚ್ಚ ಹಸಿರಾಗಿದೆ.ಇದೆಲ್ಲಾ ಅದೆಷ್ಟೋ ವರ್ಷದ ಹಿಂದಿನ ಮಾತು. ಈಗ ಅದೇ ಮಕ್ಕಳು ನನಗಿಂತಲೂ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಈಗಲೂ ಆಗಾಗ ಕರೆ ಮಾಡಿ ತನ್ನ ಪ್ರೀತಿಯನ್ನು ತೋರ್ಪಡಿಸುತ್ತಾರೆ. ಮುಗ್ಧತೆ ಮಾಸದ ಮುದ್ದು ಮಕ್ಕಳ ಪ್ರೀತಿ ಗೌರವ ಪಡೆದ ನಾನೇ ಧನ್ಯಳು.
............................... ಪ್ರಜ್ವಲಾ ಶೆಣೈ, ಕಾರ್ಕಳ
ಸಹಶಿಕ್ಷಕಿ
ದ.ಕ ಜಿ.ಪಂ. ಹಿ. ಪ್ರಾ.ಶಾಲೆ ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article