ಅಕ್ಕನ ಪತ್ರ - 45 ಕ್ಕೆ ಮಕ್ಕಳ ಉತ್ತರ : ಸಂಚಿಕೆ -1
Saturday, March 18, 2023
Edit
ಅಕ್ಕನ ಪತ್ರ - 45 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಜಗಲಿಯ ಪ್ರೀತಿಯ ಅಕ್ಕನಿಗೆ ಭವ್ಯಶ್ರೀ ಮಾಡುವ ನಮಸ್ಕಾರಗಳು....
ನಾನು ಕ್ಷೇಮವಾಗಿದ್ದೇನೆ ನೀವು ಕೂಡ ಕ್ಷೇಮವಾಗಿರುವಿರಿ ಎಂದುಕೊಂಡಿರುವೆ. ನಿಮ್ಮ ಪತ್ರ ತಲುಪಿತು... ಈ ಸಂಚಿಕೆಯನ್ನು ಹಲವು ಬಾರಿ ಕುತೂಹಲ ಹಾಗೂ ಹೆಮ್ಮೆಯಿಂದ ಓದಿದ್ದೇನೆ. ಒಬ್ಬ ಹೆಣ್ಣುಮಗಳ ಸಾಧನೆಯ ಕುರಿತು ತಿಳಿಸಿದ್ದೀರಿ. ಸೋಲು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಂಡುಬರುತ್ತದೆ.
ಈ ಸೋಲೇ ವ್ಯಕ್ತಿಯ ಭವಿಷ್ಯದಲ್ಲಿ ಮುನ್ನಡೆಯಲು ಉತ್ತಮ ಮಾದರಿಯಾಗಲೂಬಹುದು. ಎಲ್ಲರಿಗೂ ವಿಶೇಷ ಪ್ರತಿಭೆ ಎನ್ನುವುದು ಇರುತ್ತದೆ.
ಆದರೆ ಅದು ವಿಭಿನ್ನವಾಗಿರುತ್ತದೆ.
ಒಬ್ಬರು ಹಾಡುಗಾರಿಕೆಯಲ್ಲಿ ಪ್ರವೀಣರಾಗಿದ್ದರೆ, ಮತ್ತೊಬ್ಬರು ನೃತ್ಯ, ವ್ಯವಹಾರ, ಕೃಷಿ, ದುಡಿಮೆ, ಸಾಹಿತ್ಯ, ಹೀಗೆ ಹಲವು ಕ್ಷೇತ್ರಗಳಲ್ಲಿ ಒಂದಲ್ಲ ಒಂದು ರೀತಿಯ ವಿಭಿನ್ನ ಸಾಮರ್ಥ್ಯ ಹೊಂದಿರುತ್ತಾರೆ.
ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಅಂದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉನ್ನತ ಹುದ್ದೆ ಹೊಂದಿದರೆ, ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಇರಲು ಸಾಧ್ಯವಿಲ್ಲ. ಕೆಲವರಿಗೆ ಕಡಿಮೆ ಅಂಕಗಳು ಬರಬಹುದು, ಇನ್ನೂ ಕೆಲವರಿಗೆ ಓದಲು ಸಾಧ್ಯವಾಗದೇ ಇರಬಹುದು. ಹಾಗಾದರೆ ಜೀವನದಲ್ಲಿ ಮುನ್ನಡೆಯಲು ಸಾಧ್ಯವಿಲ್ಲವೆಂದು ಕೊರಗುವ ಅಗತ್ಯವಿಲ್ಲ ಯಾವುದಾದರೂ ಒಂದು ಅವಕಾಶ ನಮಗೆ ಲಭಿಸುತ್ತದೆ. ಸಿಕ್ಕಿದ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಕಾರ್ಯ ಪ್ರವೃತ್ತರಾದಾಗ ಯಶಸ್ಸು ಖಂಡಿತ ನಮ್ಮದಾಗುತ್ತದೆ. ಪರೀಕ್ಷೆಯೊಂದೇ ಜೀವನದ ಗುರಿಯಲ್ಲ ಜೀವನ ಸಾಗಿಸಲು ಹಲವಾರು ದಾರಿಗಳಿವೆ. ಇಲ್ಲಿ ಅತಿಯಾದ ಶ್ರಮ ಮಾತ್ರ ಅತ್ಯಗತ್ಯವಾಗಿರುತ್ತದೆ. ಪತಿಯ ಆಶ್ರಯವು ಇಲ್ಲದೆ ತಾಯಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಮಗುವಿನೊಡನೆ ಜೀವನದಲ್ಲಿ ಹೋರಾಡಿದ Rowling ಅವರು ನಮಗೆಲ್ಲ ಮಾದರಿಯಾಗಿದ್ದಾರೆ. 12 ಜನ ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟರೂ ಕೊನೆಗೊಂದು ದಿನ ಜಗತ್ತಿನ ಪ್ರಸಿದ್ಧ ಲೇಖಕಿಯಾಗಿ ಹೊರಹೊಮ್ಮಿದ್ದಾರೆ. ಅವರಂತೆ ನಾವುಗಳು ಮುನ್ನಡೆಯುವುದನ್ನು ಕಲಿಯಬೇಕು ಯಾವುದಕ್ಕೂ ಅಂಜದೆ ಅಳುಕದೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸದಾ ಸಿದ್ಧರಾಗಿರಬೇಕು.
ಸದಾ ಓದುವಿಕೆ ಹಾಗೂ ಬರೆಯುವಿಕೆಗೆ ಅವಕಾಶ ನೀಡಿದ ಜಗಲಿಗೆ ವಂದಿಸುತ್ತೇನೆ....
ಇನ್ನಷ್ಟು ಹೊಸ ವಿಷಯದೊಂದಿಗೆ ಮುಂದಿನ ಪತ್ರದಲ್ಲಿ ಭೇಟಿಯಾಗಿ.. ಅಕ್ಕ..
ನಮಸ್ಕಾರಗಳು..
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಕೋಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಅಕ್ಕನ ಪತ್ರ 45ಕ್ಕೆ ಶಿಶಿರನ ಉತ್ತರ
ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನಿಮ್ಮ ಪತ್ರ ಓದುತ್ತಿರುವಾಗ ನಮಗೆಲ್ಲರಿಗೂ ತಿಳಿದಿರುವ ಮೊಸರಿನ ಗಡಿಗೆಯೊಳಗೆ ಬಿದ್ದ ಕಪ್ಪೆಗಳ ಕತೆ ನೆನಪಾಯಿತು. ಗಡಿಗೆಯೊಳಗೆ ಬಿದ್ದ ಕಪ್ಪೆಗಳು ಹೊರ ಬರಲು ಪ್ರಯತ್ನಿಸುತ್ತಿದ್ದವು. ಅದರಲ್ಲಿ ಒಂದು ಕಪ್ಪೆಯು ಒಂದೆರಡು ಬಾರಿ ಪ್ರಯತ್ನಿಸಿ ನನ್ನಿಂದಾಗದು ಎಂದು ಮೊಸರಿನ ಒಳಗೆ ಮುಳುಗಿ ತನ್ನ ಪ್ರಾಣವನ್ನು ಕಳೆದುಕೊಂಡಿತು. ಆದರೆ ಎರಡನೇಯ ಕಪ್ಪೆಯು ನಿರಂತರವಾಗಿ ಮೊಸರಿನಲ್ಲಿ ಈಜುತ್ತಾ, ಜಿಗಿಯುತ್ತಾ ಗಡಿಗೆಯಿಂದ ಹೊರ ಬರುವ ಪ್ರಯತ್ನವನ್ನು ಮುಂದುವರಿಸಿತು. ನಿರಂತರವಾದ ಈಜಿನಿಂದಾಗಿ ಮೊಸರು ಗಟ್ಟಿಯಾದ ಬೆಣ್ಣೆ ಮುದ್ದೆಯಾಯಿತು. ಅದರ ಸಹಾಯದಿಂದ ಗಡಿಗೆಯಿಂದ ಹೊರಗೆ ಜಿಗಿದು ಪಾರಾಯಿತು.
ಕತೆಯಲ್ಲಿ ಸಹನೆ ಮತ್ತು ನಿರಂತರವಾದ ಪ್ರಯತ್ನದಿಂದ ಕಪ್ಪೆ ಗಡಿಗೆಯಿಂದ ಪಾರಾಯಿತು. ಅದೇ ರೀತಿ ವ್ಯಂಗ್ಯ, ಅವಮಾನಗಳ ಗಡಿಗೆಯೊಳಗಿದ್ದ J K Rowling ಅವರು ತಮ್ಮ ಸಹನೆ ಹಾಗೂ ನಿರಂತರವಾದ ಪರಿಶ್ರಮದಿಂದ ಯಶಸ್ಸಿನತ್ತ ತಮ್ಮ ಕಾಲು ಚಾಚಿ ವಿಶ್ವದ ಪ್ರಖ್ಯಾತ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ.
ಆಗದು ಎಂದು, ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ
ಸಾಗದು ಕೆಲಸವು ಮುಂದೆ
ಮನಸ್ಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆಯಿರ ಬೇಕೆಂದೂ...
ಕೆಚ್ಚೆದೆಯಿರಬೇಕೆಂದೆಂದೂ...
ಎಂಬ 'ಬಂಗಾರದ ಮನುಷ್ಯ' ಚಲನಚಿತ್ರದ ಹಾಡಿನಲ್ಲಿ ಹೇಗೆ ಪರಿಶ್ರಮದಿಂದ ಬರಡಾಗಿದ್ದ ಭೂಮಿಯನ್ನು ಬಂಗಾರ ಬೆಳೆಯುವ ಭೂಮಿಯನ್ನಾಗಿಸಿದರೋ ಅದೇ ರೀತಿ ಪ್ರಯತ್ನದಿಂದ ಕಷ್ಟಕರ ಬದುಕನ್ನು ಸುಂದರವಾದ ಬದುಕ್ಕನಾಗಿಸಬಹುದೆಂಬುದು ಮನವರಿಕೆಯಾಯಿತು.
ಹ್ಯಾರಿ ಪಾಟರ್ ಸರಣಿಗಳ ಹಿಂದೆ J K Rowling ಅವರ ಅಗಾಧ ಪರಿಶ್ರಮವಿದೆ ಎಂಬುವುದು ನಿಮ್ಮ ಪತ್ರದಿಂದ ತಿಳಿದೆ. ಇಂತಹ ಜೀವನ ಪಾಠ ಕಲಿಸುವ ವಿಷಯವನ್ನು ತಿಳಿಸಿಕೊಟ್ಟ ನಿಮಗೆ ನನ್ನ ಅನಂತ ಕೃತಜ್ಞತೆಗಳು. ಮುಂದಿನ ಪತ್ರದಲ್ಲಿ ಭೇಟಿಯಾಗೋಣ ಧನ್ಯವಾದಗಳು ಅಕ್ಕ.
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ.... ನಾನು ಶ್ರಾವ್ಯ. ಸೋಲು ಗೆಲುವಿನ ಮೆಟ್ಟಿಲು ಎಂಬ ಮಾತು ನಾವು ಕೇಳಿಯೇ ಇದ್ದೇವೆ. 100 ಬಾರಿ ಸೋತರೂ ಪ್ರಯತ್ನ ನಿಲ್ಲಿಸದೆ, ಮುನ್ನಡೆಯುವವರು ನಿಜವಾಗಿಯೂ ಗೆಲುವಿಗೆ ಅರ್ಹರು, ಹಾದಿ ಕಠಿಣವಿರಬಹುದು, ಆದರೆ ಕೊನೆಗೆ ಸಿಗುವ ಸನ್ಮಾನ, ಪ್ರಯತ್ನಕ್ಕೆ ಸಲ್ಲುವ ಮೆಚ್ಚುಗೆಯಾಗುತ್ತದೆ.
J.K Rowling ಅವರ ಕಥೆ ಕೇಳಿದಾಗ ನನಗನಿಸಿದ್ದು 12 ಬಾರಿ ಸೋತು, ಅವಮಾನಕ್ಕೆ ಒಳಗಾದರೂ ತನ್ನ ಬರೆಯುವ ಹವ್ಯಾಸವನ್ನು ಹಿಂಪಡೆಯದೆ, ದಿಟ್ಟತನದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಬಗೆ, ಅವರಿಗೆ ಅವರ ಬರವಣಿಗೆಯ ಮೇಲಿದ್ದ ನಂಬಿಕೆಯನ್ನು ಎತ್ತಿಹಿಡಿಯುತ್ತದೆ. ಟೀಕೆಗಳಿಗೆ ಕುಗ್ಗದೆ, ಟೀಕಿಸಿದವರ ಮುಂದೆ ತಾನು ತಲೆ ಎತ್ತಿ ನಿಲ್ಲುವಂತೆ ಸಾಧಿಸಿ, ತನ್ನ ಸಾಧನೆಯ ಮೂಲಕ ಉತ್ತರ ಕೊಟ್ಟ ಬಗೆ ನನ್ನ ಮನ ಮುಟ್ಟಿತು. ಪ್ರಯತ್ನಕ್ಕೆ ಪ್ರತಿಫಲ ಇದ್ದೇ ಇರುತ್ತವೆ. ಆದರೆ ಪರಿಶ್ರಮ ಪಡದೆ ಪ್ರತಿಫಲ ಅಪೇಕ್ಷಿಸುವುದು ಸರಿಯಲ್ಲ. ಗೆಲವು ನಮ್ಮದಾಗಿದೆ ಎಂದರೆ ಆ ಗೆಲುವಿನ ಹಿಂದೆ ಹಂತ ಹಂತವಾಗಿ ಮಾಡಿದ ತಯಾರಿ, ಶ್ರಮವೂ ಅರ್ಥಪೂರ್ಣ ಎಂದೆನಿಸಿಕೊಳ್ಳಬೇಕು. ನ್ಯಾಯಯುತ ಗೆಲುವಿಗೆ ಸತ್ ಮಾರ್ಗ ನಮ್ಮ ಆಯ್ಕೆಯಾಗಿರಲಿ......
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು.... ನಾನು ಪ್ರಿಯ....
ಕೆಲವೊಂದು ಘಟನೆಗಳ ನೆನಪುಗಳನ್ನು ನಾವುಗಳು ಮೆಲುಕು ಹಾಕುತ್ತಾ ಹೋದಂತೆ..! ಹಿರಿಯರ ಅನುಭವದ ಕಿವಿಮಾತುಗಳು ನಮ್ಮ ಹಿಂದಿನ ಎಡರು- ತೊಡರುಗಳಿಂದ ನಾವು ಬೆಳೆದು ಬಂದ ರೀತಿಗೆ ಅನ್ವಯವಾಗುತ್ತವೆ. ಆ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಡಿಗ್ರಿ Certificate ಹಿಡಿದು ಅಲೆದಾಡಿದರೂ ಕೆಲಸ ಸಿಗದೆ ನಂತರ ಪಂಚರ್ ಅಂಗಡಿ ತೆರೆದು 10 ರೂಪಾಯಿ ಯಿಂದ ಶುರುವಾದ ವ್ಯಾಪಾರ ದಿನಕ್ಕೆ 20 ಸಾವಿರ ಆದಾಯದ ಗಳಿಕೆ ಹಾಗೂ ನಾಲ್ಕು ಹಾರ್ಡ್ವೇರ್ ಅಂಗಡಿಗಳ ಮಾಲೀಕರ ಕಥೆಯನ್ನು ಓದಿದಾಗ ನನಗೆ "ಹನಿ ಹನಿ ಕೂಡಿದರೆ ಹಳ್ಳ" ಎಂಬ ಹಿರಿಯರ ಅನುಭವದ ಒಂದು ಒಳ್ಳೆಯ ಮಾತು ಮರುಕಳಿಸಿತು. ನಾವು ಯಾವುದೇ ಕೆಲಸವನ್ನು ಮೇಲೂ ಕೀಳೆಂದು ತೋರ್ಪಡಿಸದೆ ಅದನ್ನು ಶ್ರದ್ಧೆಯಿಂದ ಮಾಡಿದಾಗ ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂಬ ಸಂದೇಶವೂ ನನಗೆ ತಿಳಿಯಿತು.
J.K Rowling ರವರ ಜೀವನದ ಘಟ್ಟಗಳ ವಿಸ್ತಾರವು ನಮಗೆ ಮತ್ತಷ್ಟು ಹೊಸತನದ ಹುರುಪನ್ನು ಬಿಂಬಿಸುತ್ತದೆ. ಅವರ ತಾಯಿ ಅನಾರೋಗ್ಯದಿಂದ ಮೃತ ಪಟ್ಟರೂ.. ತನ್ನ ಸಾಧನೆಯ ಗುರಿಯತ್ತ ಇರುವ ಚಿತ್ತವನ್ನು ಬದಲಾಯಿಸದೆ.. ನಂತರ ಮದುವೆಯಾಗಿ ಗಂಡನಿಂದ ಶೋಷಣೆಗೆ ಒಳಗಾದ ಬಳಿಕವೂ ತನ್ನ ಮಗುವಿನೊಂದಿಗೆ ಆ ಸಾಧನೆಯತ್ತ ಇರುವ ಕನಸುಗಳೆಂಬ ಹೂವಿನ ಮೊಗ್ಗುಗಳನ್ನು ಅರಳಿಸುವ ಹುಮ್ಮಸ್ಸಿನಲ್ಲಿ ಅನೇಕ ಪ್ರಕಾಶಕರು ಅವರ ಲೇಖನವನ್ನು ತಿರಸ್ಕರಿಸಿದರೂ ಅದರ ಬಗ್ಗೆ ಪರಿವೇ ಇಲ್ಲದಂತೆ ಕೊನೆಗೂ ತನ್ನ ಸಾಧನೆಗಳ ಕನಸಿನ ಹೂವಿನ ಮೊಗ್ಗನ್ನು ನನಸಾಗಿಸುವ ಮೂಲಕ ಹೂವನ್ನು ಅರಳಿಸಿ ಕೊನೆಗೂ ತನ್ನ ಸಾಧನೆಗಳ ಹಿಂದಿರುವ ಎಡರು ತೊಡರುಗಳನ್ನು ಮೆಟ್ಟಿ ನಿಂತು ಆ ಹೂವಿನ ಸುಗಂಧವನ್ನು ಸುವಾಸಿಸುತ್ತ ತನ್ನ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ದ ಇವರ ಸಾಧನೆಯ ವಿಸ್ತಾರವೂ ನನಗೆ ಹಾಗೂ ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು ಎಂದು ಹೇಳುತ್ತಾ ಪ್ರತಿಯೊಂದು ಪತ್ರದಲ್ಲೂ ಸಧ್ಭರಿತ ನುಡಿಗಳೊಂದಿಗಿನ ನಿಮ್ಮ ಪತ್ರಕ್ಕಾಗಿ ವಂದನೆಗಳು ಅಕ್ಕಾ.........
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ
ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕಾ.... ನಾನು ರಮ್ಯ. ನಾವು ಚೆನ್ನಾಗಿದ್ದೇವೆ. ನೀವು ಖುಷಿಯಾಗಿರುವಿರಿ ಎಂದು ಭಾವಿಸುತ್ತೇವೆ. ಇದೇ ಮೊದಲ ಬಾರಿ ನಿಮ್ಮ ಪತ್ರಕ್ಕೆ ಅತ್ಯಂತ ಉತ್ಸುಕಳಾಗಿ ಪತ್ರ ಬರೆಯುತ್ತಿದ್ದೇನೆ.
ಪರೀಕ್ಷೆಯ ತಯಾರಿಯಂತು ಸುಗಮವಾಗಿ ನಡೆದಿದೆ. ಕೆಲವು ವಿಷಯಗಳು ಮುಗಿದವು. ಇನ್ನೆರಡು ವಿಷಯಗಳ ಪರೀಕ್ಷೆಯ ತಯಾರಿಯಲ್ಲಿದ್ದೇನೆ. ಈ ನಿಮ್ಮ ಪತ್ರ ತುಂಬಾ ಪ್ರಿಯವಾಯಿತು. ಬದುಕಿಗೊಂದು ಗುರಿ ಖಂಡಿತ ಮುಖ್ಯ. ಜೊತೆಗೆ ಗುರಿ ತಲುಪಲು ಬೇಕಾದ ಸಿದ್ಧತೆ, ಪ್ರೋತ್ಸಾಹ ಕೂಡ ಮುಖ್ಯ.
ಅಂತಹ ಗುರಿ ಸಾಧಿಸಿದವರಲ್ಲಿ ನಾನು ಒಬ್ಬಳಾಗಬೇಕು ಎನ್ನುವುದು ನನ್ನ ಕನಸು. ನನಗಾಗಿ, ನನ್ನವರಿಗಾಗಿ ನಾನು ಓದಬೇಕು ಎನ್ನುವ ಹಂಬಲ ನನ್ನದು. ನನ್ನ ಮೇಲೆ ನನ್ನ ಮನೆಯವರಿಗೆ, ನನ್ನ ಗುರುಗಳಿಗೆ ಇರುವ ಭರವಸೆಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿದ್ದೇನೆ. ನೀವು ಹೇಳಿದ J.K. Rowling ಅವರ ಜೀವನ ಕಥನದಿಂದ ಮತ್ತಷ್ಟು ಪ್ರೇರಣೆ ದೊರೆಯಿತು. ಮೊನ್ನೆ ನನ್ನ ಆತ್ಮೀಯರೊಬ್ಬರು "ಸ್ವಲ್ಪ ನಗಪ್ಪ" ಎಂದರು. ಅದಕ್ಕೆ ನಾನು "ಇಲ್ಲ, ಯಾಕೋ ನಗುವುದಕ್ಕೆ ಆಗುತ್ತಿಲ್ಲ...., ಪರೀಕ್ಷೆಯ ಫಲಿತಾಂಶ ಬಂದಾಗ ನಗುತ್ತೇನೆ" ಎಂದಿದ್ದೇನೆ. ಫಲಿತಾಂಶ ಬಂದಾಗ ನಗುತ್ತೇನೆಯೋ ಇಲ್ಲವೋ ತಿಳಿದಿಲ್ಲ. ಆದರೆ, ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ನಾನು ಖಂಡಿತಾ ನಗುತ್ತೇನೆ ಎಂಬ ಭರವಸೆ ಮೂಡಿದೆ. ಜೊತೆಗೆ 'ಮಕ್ಕಳ ಜಗಲಿ' ನನಗೆ ಒಂದು ಹೊಸ ಅನುಭವವನ್ನು ನೀಡಿತು. ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ನನ್ನ ವಂದನೆಗಳು
ಅಕ್ಕ ನಿಮ್ಮ ಪತ್ರಗಳು ಹೀಗೆ ಮುಂದುವರೆಯಲಿ. ನನ್ನ ಮಾತು ಹೆಚ್ಚಾಯಿತು ಎಂದು ಭಾವಿಸುತ್ತೇನೆ.. ನಿಮ್ಮ ಪತ್ರಗಳು ನಮಗೆಲ್ಲರಿಗೂ ಹೀಗೆ ಸ್ಪೂರ್ತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ, ಧನ್ಯವಾದಗಳು.
ದ್ವಿತೀಯ ಪಿಯುಸಿ
ಸೈನ್ಸ್ ಅಕಾಡೆಮಿ ಪಿ ಯು ಕಾಲೇಜು
ದಾವಣಗೆರೆ.
******************************************
ಅಕ್ಕನ ಪತ್ರ ಸಂಚಿಕೆ 45 : ಮಕ್ಕಳ ಉತ್ತರ
ನಮಸ್ತೆ ಅಕ್ಕ.... ನಾನು ಅಕ್ಷರ ಪಟ್ವಾಲ್. J K Rowling ಒಬ್ಬರು ಪ್ರಸಿದ್ಧ ಲೇಖಕರು. ಇವರು ಬರೆದ ಹ್ಯಾರಿ ಪಾಟರ್ ಸರಣಿ ಕಥೆಗಳು 12 ಜನ ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟಿತು. ಕೊನೆಗೆ ಒಬ್ಬ ಪ್ರಕಾಶಕರಿಗೆ ಪುಸ್ತಕವನ್ನು ಒಪ್ಪಿಸಿದರು. ಅವರ ಮಗ ಪುಸ್ತಕ ಓದುವುದನ್ನು ನೋಡಿ ಪ್ರಕಾಶಕರಿಗೆ ಆಶ್ಚರ್ಯವಾಯಿತು. ಅವರು ಪುಸ್ತಕ ಪ್ರಕಟಣೆಯ ಹಕ್ಕನ್ನು ಪಡೆದರು. JK Rowling ಒಂದು ಪುಸ್ತಕದಿಂದ 4000 ಡಾಲರ್ ಹಣ ಪಡೆದರು. ಮುಂದೆ ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಹ್ಯಾರಿ ಪಾಟರ್ ಕಥಾ ಸರಣಿಯನ್ನು ಮೆಚ್ಚಿಕೊಂಡರು. ಲೇಖಕಿ ಹೈಯೆಸ್ಟ್ ಪೇಡ್ ಲೇಖಕಿ ಎಂದು ಗುರುತಿಸಿಕೊಂಡರು. ಇಂದು ವಿಶ್ವ ಪ್ರಸಿದ್ಧಿ ಲೇಖಕಿ.
ಈ ಲೇಖನದಿಂದ ಜೀವನದಲ್ಲಿ ಸೋಲು ಗೆಲುವು ಇರುತ್ತದೆ, ಸ್ವೀಕರಿಸುವ ತಾಳ್ಮೆ ಸಾಧಿಸುವ ಉತ್ಸಾಹ ನಮಗಿರಬೇಕು ಎನ್ನುವುದನ್ನು JK Rowling ಅವರಿಂದ ತಿಳಿಯಬಹುದು. ಅವರಿಂದ ಪ್ರೇರಣೆ ಪಡೆದು ಮುಂದೆ ಜೀವನದಲ್ಲಿ ಯಶಸ್ಸು ಪಡೆಯಲು ಸಹಕಾರಿ. ಪ್ರತಿ ಹಂತದ ಸೋಲು ಅವಮಾನಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳೋಣ.
6ನೇ ತರಗತಿ
ಸರಕಾರಿ ಮಾದರಿಯ ಹಿರಿಯ
ಪ್ರಾಥಮಿಕ ಶಾಲೆ ಬೈಂದೂರು
ಉಡುಪಿ ಜಿಲ್ಲೆ
******************************************
ಪ್ರೀತಿಯ ಅಕ್ಕನಿಗೆ, ನಿಮ್ಮ ಅಕ್ಕರೆಯ ತಂಗಿಯ ನಮಸ್ಕಾರಗಳು. ನಾನು ಹೃದ್ವಿ.
ನೀವು ಹೇಳುವಂತೆ ಸೋಲೇ ಗೆಲುವಿನ ಮೆಟ್ಟಿಲು. ಸೋಲಿನಿಂದ ನಮಗೆ ಜೀವನಾನುಭವ ಸಿಗುತ್ತವೆ. ಇಂತಹ ಅನುಭವಗಳಿಂದ ನಾವು ಮುಂದೆ ಜೀವನದಲ್ಲಿ ಗೆಲುವನ್ನು ಕಾಣಬಹುದು. ಆದರೆ ಸೋಲನ್ನು ಸಹಿಸುವ ತಾಳ್ಮೆ ಆತ್ಮಸ್ಥೈರ್ಯ ನಮ್ಮಲ್ಲಿ ಇರಬೇಕು. ಹಾಗಾದರೆ ಮಾತ್ರ ನಾವು ಜೀವನದಲ್ಲಿ ಮುಂದೆ ಬರುತ್ತೇವೆ. ಹೀಗೆ ಹೇಳುತ್ತಾ ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
ವಂದನೆಗಳು ಅಕ್ಕಾ.
8ನೇ ತರಗತಿ
ಸೈಂಟ್ ಜೋಸೆಫ್ ಇಂಗ್ಲಿಷ್
ಮೀಡಿಯಂ ಸ್ಕೂಲ್ ಕುಲಶೇಖರ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ ಅಕ್ಕ ನಾನು ಧನ್ವಿ ರೈ ಪಾಣಾಜೆ.
ಮಕ್ಕಳ ಜಗಲಿಯ ಮೂಲಕ ನಿಮ್ಮ ಪತ್ರವನ್ನು ನಾವು ಓದಿದೆವು. ಬಹಳ ಸುಂದರವಾಗಿ ಬರೆದಿದ್ದೀರಿ ಅಕ್ಕ. ಈವಾಗ ನಮಗೆ ಪರೀಕ್ಷೆಯು ನಡೆಯುವ ಸಮಯ. ಹೀಗಿರುವಾಗ ಇಂತಹ ಸಮಯದಲ್ಲಿ ಈ ಒಂದು ಪತ್ರ ನಮ್ಮೆಲ್ಲರ ಪಾಲಿಗೆ ಒಂದು ವಿಟಮಿನ್ ಇದ್ದಂತೆ. ಸೋಲು ಗೆಲುವು ಎರಡು ಒಂದೇ ನಾಣ್ಯದ ಮುಖದಂತೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಇರಬೇಕಿದೆ. ವಿದ್ಯಾರ್ಥಿಗಳಾದ ನಮ್ಮಲ್ಲಿ ಅಂಕಗಳು ಜಾಸ್ತಿ, ಕಡಿಮೆ ಆದರೂ ಎದೆಗುಂದದೆ ಮುಂದಿನ ಹಂತಕ್ಕೆ ತಯಾರಾಗಬೇಕು. ಹಾಗಾಗಿ ಶ್ರಮ ಪಟ್ಟು ಓದಿ ವಿದ್ಯಾವಂತರಾಗಿ, ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ವನ್ನು ರೂಪಿಸುವ ಗುಣ ನಮ್ಮ ನಿಮ್ಮೆಲ್ಲರದ್ದಾಗಲಿ ಎಂಬುದೇ ನಮ್ಮ ಶುಭ ಹಾರೈಕೆಗಳು. ಈ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿ ಮಿತ್ರರಿಗೆ ಶುಭ ವಾಗಲಿ. ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ ಅಕ್ಕ. ಧನ್ಯವಾದಗಳು ಅಕ್ಕಾ......
7 ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ತಂಗಿ ಸಿಂಚನಾ ಮಾಡುವ ನಮಸ್ಕಾರಗಳು. ನಾನು ಚೆನ್ನಾಗಿದ್ದೇನೆ. ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಪ್ರೀತಿಯ ಪತ್ರ ಓದಿದ ಮೇಲೆ ನನಗೆ ತುಂಬಾ ಸಂತೋಷವಾಯಿತು. ಮೊದಲನೆಯದಾಗಿ ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. ಮಹಿಳೆಯರು ಕೆಲಸದಲ್ಲೂ ಸ್ಟ್ರಾಂಗ್ ಆಗಿ ಇರುತ್ತಾರೆ. ತಾಯಿಯಾಗಿ ಹೆಂಡತಿಯಾಗಿ ಶಿಕ್ಷಕಿಯಾಗಿ ಸೈನಿಕರಾಗಿ ದೇಶವನ್ನು ಕಾಪಾಡುತ್ತಿದ್ದಾರೆ. ಮಹಿಳೆಯರಿಗೆ ಆಗದ ಒಂದು ಕೆಲಸವೂ ಇಲ್ಲ. ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಈ ಗಾದೆ ಮಾತಿನ ಹಾಗೆ ಎಲ್ಲವು ಈ ಜಗತ್ತಿನಲ್ಲಿ ನಡೆಯುತ್ತಿದೆ. ಮಾತನಾಡಿ ಮಾತನಾಡಿ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಮತ್ತೊಮ್ಮೆ ಭೇಟಿಯಾಗೋಣ ಅಲ್ಲಿವರೆಗೆ ಸಿಂಚನ ಮಾಡುವ ನಮಸ್ಕಾರಗಳು. ಧನ್ಯವಾದಗಳು
5ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕಾ.... ನಾನು ನಿಭಾ. ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ನೀವು ಹೇಳಿದ ಕಥೆ ಅದ್ಭುತವಾಗಿ ಹಾಗು ಆದರ್ಶವಾಗಿಯೂ ಇತ್ತು. ನೀವು ಹೇಳಿದಂತೆ ಆಕೆ ತಾಯಿಯ ಸಾವಿಗೆ ಅಥವಾ ಗಂಡನ ಶೋಷಣೆಗೆ ಹೆದರಿ ಅಥವಾ ಅವಳ ಪತ್ರಿಕೆ ಪ್ರಕಟಿಸಲು ಅಷ್ಟೊಂದು ಜನ ತಿರಸ್ಕರಿಸಿದರೆಂದು ಆಕೆ ಅಲ್ಲೇ ಪ್ರಯತ್ನ ಬಿಡುತ್ತಿದ್ದರೆ, ಇಂದು ಇಷ್ಟು ದೊಡ್ಡ ಲೇಖಕಿಯಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ. ಸೋಲು ಗೆಲುವು ಎಂಬುದು ನಡೆಯುತ್ತಿರುವ ಕಾಲಿನಂತೆ. ಒಂದು ಕಾಲು ಮುಂದೆ ಹೋಗುವಾಗ ಇನ್ನೊಂದು ಕಾಲು ಹಿಂದಿರುತ್ತದೆ. ಹಾಗೆಂದು ಮುಂದಿರುವ ಕಾಲು ಮುಂದೆಯೇ ಇರುವುದಿಲ್ಲ ಹಿಂದಿರುವ ಕಾಲು ಹಿಂದೆಯೇ ಉಳಿಯುವುದಿಲ್ಲ. ಹಾಗೆಯೇ ಸೋಲು ಎಂಬುದು ಶಾಶ್ವತವಲ್ಲ. ಹಾಗೆಂದು ಗೆಲುವು ಎಂಬುದು ಕೂಡ ಶಾಶ್ವತವಲ್ಲ. ಮೊದಲೇ ಗೆಲ್ಲುವುದಕ್ಕಿಂತ ಸೋತು ಗೆದ್ದರೆ ಕಷ್ಟದ ಬೆಲೆ ತಿಳಿಯುತ್ತದೆ. ಸೋತರು ಗೆದ್ದರೂ ಪ್ರಯತ್ನವೊಂದು ಜೊತೆಗಿರಬೇಕು ಅಷ್ಟೇ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕಾ. ಮುಂದಿನ ಸಲ ಇನ್ನೊಂದು ಕುತೂಹಲಕಾರಿ ಕಥೆಯನ್ನು ಹೇಳಿ ಅಕ್ಕಾ..... ಧನ್ಯವಾದಗಳು
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ ಅಕ್ಕಾ, ನಾನು ಧೀರಜ್.ಕೆ.ಆರ್.
ಪತ್ರ ಓದಿ ತುಂಬಾ ಸಂತೋಷ ಆಯಿತು ಅಕ್ಕಾ.. ನಾನು ಕೂಡ 10 ನೆಯ ತರಗತಿಯ ಕೊನೆಯ ಪರೀಕ್ಷೆಗೆ ಚೆನ್ನಾಗಿ ತಯಾರಾಗುತ್ತಿದ್ದೇನೆ. ನೀವು ಹೇಳಿದ ರೀತಿಯಲ್ಲಿ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂದರೆ ಅದು ಅಂಕ ಪಡೆದೇ ಆಗಬೇಕೆಂದಿಲ್ಲ. ನಮ್ಮ ಸ್ವಂತ ಬುದ್ಧಿವಂತಿಕೆಯಿಂದಲೂ, ಪ್ರಯತ್ನದಿಂದಲೂ ಸಾಧ್ಯವಿದೆ. ನೀವು ಹೇಳಿರುವ ಕಥೆಯು ಯುವ ಜನತೆಗೆ ಪ್ರೇರಕವಾಗಿದೆ. ಜೀವನದಲ್ಲಿ ಮುಂದುವರೆಯುತ್ತಿರುವಾಗ ಹಲವಾರು ಜನರು ಕೈ ಬಿಡುತ್ತಾರೆ. ಹಲವಾರು ಜನರು ಅಡ್ಡಿ ಉಂಟು ಮಾಡುತ್ತಾರೆ. ಆದರೆ ಅದನ್ನು ಮೆಟ್ಟಿ ನಿಂತು ಮುಂದೆ ಸಾಗಿ ನಮ್ಮ ಗುರಿಯನ್ನು ತಲುಪಿ ಸಾಧನೆ ಮಾಡಬೇಕು ಎಂಬುದನ್ನು ಈ ಕಥೆಯು ಬಹಳ ಅರ್ಥಪೂರ್ಣವಾಗಿ ಹೇಳುತ್ತದೆ. ಇನ್ನೂ ಇಂತಹ ಪ್ರೇರಕ ಕಥೆಗಳನ್ನು ನಿಮ್ಮ ಮುಂದಿನ ಪತ್ರಗಳಲ್ಲಿ ಓದಲು ನಾನು ಕಾತುರದಿಂದ ಕಾಯುತ್ತಿರುತ್ತೇನೆ.
ಧನ್ಯವಾದಗಳು ಅಕ್ಕ..
10ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ
ಪ್ರೌಢಶಾಲೆ , ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿ..... ಅಕ್ಕನ ಪತ್ರ-45
ಪ್ರೀತಿಯ ಅಕ್ಕ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು. ನಮಗೆ ಪತ್ರದ ಮೂಲಕ ಒಳ್ಳೆ ಒಳ್ಳೆ ಕಥೆಯೊಂದಿಗೆ ಜೀವನ ಕಟ್ಟುವ ದಾರಿಯನ್ನು ತಿಳಿಸಿ ಕೊಡುತ್ತಿರುವಿರಿ... ಇದಕ್ಕಾಗಿಯೇ ನಿಮ್ಮ ಪತ್ರವನ್ನು ಓದಲು ನಾನು ಬಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಉತ್ತರಿಸಲು ಸಾಧ್ಯವಾಗುವುದಿಲ್ಲ ಕ್ಷಮಿಸಿ ಅಕ್ಕ. ನಿಮ್ಮ ಪತ್ರ ಓದಿದೊಡನೆ ಏನೋ ಒಂದು ಹುಮ್ಮಸ್ಸು , ಓದಲು ಆಸಕ್ತಿ ಹೆಚ್ಚಾಗುವುದು ಸತ್ಯ. ಈ ಸಲದ ನಿಮ್ಮ ಕಥೆಗಳು ತುಂಬಾ ಕುತೂಹಲಕಾರಿಯಾಗಿತ್ತು. ಶ್ರಮಪಟ್ಟರೆ ನಮ್ಮ ಜೀವನವನ್ನು ಸುಗಮಗೊಳಿಸುವುದು ಕಷ್ಟವೇನಲ್ಲ ಎನ್ನುವುದು ತಿಳಿಯಿತು.. ಧನ್ಯವಾದಗಳು ಅಕ್ಕ... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆನು.
8ನೇ ತರಗತಿ,
ತುಂಬೆ ಆಂಗ್ಲ ಮಾಧ್ಯಮ ಶಾಲೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************