-->
ಅಂತಾರಾಷ್ಟ್ರೀಯ ಚಿತ್ರ ಕಲಾವಿದ : ಡಾ. ಬಿ ಕೆ ಎಸ್ ವರ್ಮಾ

ಅಂತಾರಾಷ್ಟ್ರೀಯ ಚಿತ್ರ ಕಲಾವಿದ : ಡಾ. ಬಿ ಕೆ ಎಸ್ ವರ್ಮಾ

ಲೇಖನ : ಪ್ರತೀಕ್ಷಾ ಮರಕಿಣಿ 
ಬಿ ವಿ ಎ ಫೌಂಡೇಶನ್
ಕಾಲೇಜ್ ಆಫ್ ಫೈನಾರ್ಟ್ಸ್
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
          
               ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಡಾ. ಬಿ ಕೆ ಎಸ್ ವರ್ಮಾ ಅವರು ಸೃಷ್ಟಿಯ ನೈಜತೆ, ಪ್ರಾಕೃತಿಕ ಸೌಂದರ್ಯವನ್ನು ತೈಲವರ್ಣದಲ್ಲಿ ನೋಡುಗರಿಗೆ ಆಕರ್ಷಕವಾಗಿ ಕಾಣುವಂತೆ ರಚಿಸುವಲ್ಲಿ ಎತ್ತಿದ ಕೈ. ಚಿತ್ರಕಲೆಗೆ ಸಂಗೀತದ ನಂಟು ಬೆಸೆದ ಕಲಾವಿದ ಡಾ. ವರ್ಮಾ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ, ರಾಘವೇಂದ್ರ ಸ್ವಾಮಿ, ಗಣಪತಿ, ಸರಸ್ವತಿ ಸೇರಿದಂತೆ ಹಲವಾರು ದೇವಾನುದೇವತೆಗಳ ವರ್ಣ ಚಿತ್ರಗಳು ನೈಜತೆಯನ್ನು ನಾಚುವಂತಿತ್ತು. ಅವರ ಕಲಾ ಕೃತಿಗಳು ಪರಿಸರ ಸಂರಕ್ಷಣೆ, ವನದೇವತೆ, ಸಾಮಾಜಿಕ ಅರಿವು, ಜಾಗೃತಿ ಮೂಡಿಸುವಂತವಾಗಿದ್ದವು. 
     ಬಿ. ಕೆ.ಎಸ್. ವರ್ಮಾರವರು ಬೆಂಗಳೂರು ಸಮೀಪದ ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ್ದರು. ತಂದೆ ಕೃಷ್ಣಮಾಚಾರ್ಯರು, ಸಂಗೀತಗಾರರಾಗಿದ್ದರೆ, ತಾಯಿ ಜಯಲಕ್ಷ್ಮಿ ಚಿತ್ರ ಕಲಾವಿದರಾಗಿದ್ದರು. ಈ ಹಿನ್ನಲೆಯಲ್ಲಿ ಸಂಗೀತ ಮತ್ತು ಚಿತ್ರಕಲೆ ಅವರ ಆಸಕ್ತಿಯಾಗಿದ್ದುದು ಸಹಜವೇ ಸರಿ. ಅವರ ಬಾಲ್ಯದ ಹೆಸರು ಬುಕ್ಕ ಸಾಗರ ಕೃಷ್ಣಯ್ಯ ಶ್ರೀನಿವಾಸ. ಅವರು ತಮ್ಮ 6ನೇ ವಯಸ್ಸಿಲ್ಲಿಯೇ ರೇಖಾಚಿತ್ರ ಪ್ರಾರಂಭಿಸಿ ನಂತರ ಎ ಎನ್ ಸುಬ್ಬರಾವ್ ಕಲಾಮಂದಿರದಲ್ಲಿ ತಮ್ಮ ಚಿತ್ರಕಲಾಭ್ಯಾಸ ಮಾಡಿದರು. ಕೆಲಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. 
     ಮೈಸೂರು ಅರಮನೆಯಲ್ಲಿ ರಾಜಾ ರವಿವರ್ಮರವರ ಕಲಾಕೃತಿಗಳಿಂದ ಪ್ರೇರಣೆಗೊಂಡು ತಮ್ಮ ಹೆಸರಿನ ಜೊತೆಗೆ 'ವರ್ಮಾ' ಎಂದು ಸೇರಿಸಿಕೊಂಡರು. ಎಂಬೋಸಿಂಗ್, ಥ್ರೆಡ್ ಪೇಯಿಂಟಿಂಗ್, ತಮ್ಮ ಎರಡೂ ಕೈಗಳನ್ನು ಬಳಸಿ ಚಿತ್ರ ರಚಿಸುವುದರಲ್ಲಿ ಪರಿಣಿತರು. 
       ನಾಟಕ, ನೃತ್ಯ, ಕವಿತೆ ಪ್ರದರ್ಶನವಾಗುವಾಗ ಸ್ಥಳದಲ್ಲಿಯೇ ಅತಿ ವೇಗವಾಗಿ ಚಿತ್ರ ರಚಿಸುವುದರಲ್ಲಿ ವರ್ಮಾರವರು ಪ್ರಖ್ಯಾತರಾಗಿದ್ದರು. ಒಮ್ಮೆ ಕೊಳಲುವಾದನ ಕಾರ್ಯಕ್ರಮದಲ್ಲಿ ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಚಿತ್ರ ರಚಿಸಿ ಎಲ್ಲರ ಗಮನ ಸೆಳೆದರು. ಶತಾವಧಾನಿ ಗಣೇಶ್ ಅವರ ಹಾಡುಗಳಿಗೆ, ಸೂಕ್ತ ಚಿತ್ರ ರಚಿಸಿ ಸೈ ಎನಿಸಿದ್ದರು. ಮೈಸೂರು ಮಹಾರಾಜರ ಭಾವಚಿತ್ರವನ್ನು ಎರಡೇ ಎರಡು ನಿಮಿಷಗಳಲ್ಲಿ ಬರೆದು ಮೆಚ್ಚುಗೆಗೆ ಪಾತ್ರರಾಗಿದ್ದರು. ಭಾಗವತ, ಪುರಾಣ ಕಥೆಗಳಿಗೆ ವರ್ಮಾರವರು ತಮ್ಮ ಚಿತ್ರಗಳ ಮೂಲಕ ಜೀವ ತುಂಬುತ್ತಿದ್ದರು. 
       ಬಿ. ಕೆ. ಎಸ್. ವರ್ಮಾ ಅವರ ಕಲಾ ಸೇವೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ 2011ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ರಾಜ್ಯ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಅವರಿಗೆ ಲಭಿಸಿದ್ದವು. 
        ಬಿ.ಕೆ.ಎಸ್ ವರ್ಮ ಅವರು ಸರ್ವಪಳ್ಳಿ ರಾಧಾಕೃಷ್ಣನ್, ಜಯಚಾಮರಾಜೇಂದ್ರ ಒಡೆಯರ್, ಶಿವರಾಮ ಕಾರಂತ, ಕುವೆಂಪು, ಡಾ.ರಾಜ್ ಕುಮಾರ್, ಅಮಿತಾಬ್ ಬಚ್ಚನ್, ರಜನೀಕಾಂತ ಮುಂತಾದ ಗಣ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು. 
     ಅವರು ರಚಿಸಿದ ಪ್ರತಿಯೊಂದು ಕಲಾಕೃತಿಯೂ ಜೀವ ಮೈದಾಳಿ ಬಂದಂತೆ ಕಾಣುತ್ತಿತ್ತು. ವಿಶ್ವಮಟ್ಟದಲ್ಲಿಯೇ ಪ್ರಸಿದ್ಧಿ ಪಡೆದಿದ್ದ ಡಾ. ವರ್ಮಾ, ಎಂದಿಗೂ ಅಹಂ ಪಡೆಯದೇ, ಕಲೆಯ ಸಾಕಾರ ಮೂರ್ತಿಯಾಗಿದ್ದರು. ಪ್ರತಿಯೊಬ್ಬ ಕಲಾವಿದರಿಗೂ ಇವರು ಆದರ್ಶಪ್ರಾಯರಾಗಿದ್ದರು. 
ಕಲೆಯ ಮೇರು ಪರ್ವತದಂತಿದ್ದ 74 ವಯಸ್ಸಿನ ವರ್ಮಾರವರು, 6 ಫೆಬ್ರವರಿ 2023ರಂದು ಹೃದಯಾಘಾತದಿಂದ ನಿಧನರಾದರು. 
ಇನ್ನು ಮಂದೆ ಕಲಾಕೃತಿಗಳಲ್ಲಿಯೇ ನಾವು ಬಿ. ಕೆ. ಎಸ್. ವರ್ಮಾರವರನ್ನು ಕಾಣಬಹುದು.
...................................... ಪ್ರತೀಕ್ಷಾ ಮರಕಿಣಿ 
ಬಿ ವಿ ಎ ಫೌಂಡೇಶನ್
ಕಾಲೇಜ್ ಆಫ್ ಫೈನಾರ್ಟ್ಸ್
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
********************************************


Ads on article

Advertise in articles 1

advertising articles 2

Advertise under the article