-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                        
            ದಿಗ್ಗಜ ಪದವನ್ನು ‘ದಿಕ್’ ‘ಗಜ’ ಎಂದು ವಿಂಗಡಿಸಿದರೆ ಅರ್ಥೈಸಲು ಸುಲಭ. ಭೂಮಿಗೆ ಎಂಟು ದಿಕ್ಕುಗಳಿವೆ. ‘ಗಜ’ ಎಂದರೆ ಆನೆ. ನಮ್ಮ ಪುರಾಣಗಳ ಪ್ರಕಾರ ನಮ್ಮ ಮಹಾ ಭೂಮಿಯನ್ನು ಎಂಟು ದಿಕ್ಕುಗಳಲ್ಲೂ ಎಂಟು ಬಲಿಷ್ಠ ಆನೆಗಳು ಆಧರಿಸಿವೆ. ಆ ಆನೆಗಳನ್ನು ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಮತ್ತು ಸುಪ್ರತೀಕ ಎಂಬುದಾಗಿ ಕರೆಯಲಾಗಿದೆ. ಪುರಾಣಗಳು ನಿರ್ದಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಪರಂಪರೆಗೆ ಸೇರಿದವುಗಳಾಗಿರುವುದರಿಂದ ಎಲ್ಲರ ನಂಬುಗೆಯನ್ನೇ ಆಧರಿಸಿರುತ್ತವೆ.   
        ಸಾಮಾನ್ಯವಾಗಿ ಸಾಹಿತ್ಯದ ದಿಗ್ಗಜ, ಗಾಯನ ದಿಗ್ಗಜ, ನಟ ದಿಗ್ಗಜ, ರಾಜಕೀಯ ದಿಗ್ಗಜ ಮುಂತಾಗಿ ವ್ಯಕ್ತಿ ವಿಶೇಷಣಗಳನ್ನು ಬಳಸುತ್ತೇವೆ. ಈ ಸಂದರ್ಭಗಳಲ್ಲಿ ಬಳಸಿದ ‘ದಿಗ್ಗಜ’ ಪದವು ವ್ಯಕ್ತಿಯಲ್ಲಿ ಸಂಬಂಧಿಸಿದ ಕ್ಷೇತ್ರದಲ್ಲಿರುವ ಪರಿಣತಿಯನ್ನು ಅಥವಾ ಸಾಮರ್ಥ್ಯವನ್ನು ಬಿಂಬಿಸಲಾಗುತ್ತದೆ. ಸಂಸ್ಕೃತ ದಿಗ್ಗಜ ಯಾ ಸಂಸ್ಕೃತ ದಿಗ್ಗಜೆ ಎಂದಾಗ ಆ ಪುರುಷ ಅಥವಾ ಮಹಿಳೆಯಲ್ಲಿ ಸಂಸ್ಕೃತ ಭಾಷೆಯ ಬೃಹತ್ತಾದ ಪಾಂಡಿತ್ಯವಿದೆ ಎಂದು ತಿಳಿಯುತ್ತೇವೆ. ದಿಗ್ಗಜ ಪದದ ಬದಲಾಗಿ ದುರಂಧರ, ಪಟು, ಕೋವಿದ, ತಜ್ಞ, ಚಕ್ರವರ್ತಿ...... ಹೀಗೆ ಅನ್ಯಪದಗಳನ್ನೂ ಬಳಸುವರು. ಸಂವಿಧಾನ ತಜ್ಞ ಅಂಬೇಡ್ಕರ್ ಅವರನ್ನು ಸಂವಿಧಾನ ದಿಗ್ಗಜ ಎಂದೂ ಹೇಳಬಹುದಲ್ಲವೇ? ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಮಾತನಾಡುವಾಗ ನಮ್ಮಲ್ಲಿ ಅಭಿಮಾನ ಪುಟಿದೇಳುತ್ತದೆ. ಅದರಲ್ಲೂ ಕೃಷ್ಣದೇವರಾಯರೆಂದರೆ ಕನ್ನಡಿಗರ ಕಣ್ಮಣಿ. ಇವರು 1509ರಿಂದ 1529ರ ತನಕ ವಿಜಯನಗರವನ್ನಾಳಿದ ದಿಗ್ಗಜ. ಅವರ ಆಸ್ಥಾನದಲ್ಲಿ ಎಂಟು ಮಂದಿ ಮಹಾಕವಿಗಳಿದ್ದರು. ಅವರೆಲ್ಲರೂ ತೆಲುಗು ಕವಿಗಳೆಂಬುದು ವಿಶೇಷ. ಅಲ್ಲಸಾನಿ ಪೆದ್ದನ, ನಂದಿ ತಿಮ್ಮನ, ಮಾದಯ್ಯಗಿರಿ ಮಲ್ಲನ, ಧೂರ್ಜತಿ, ಅಯ್ಯಲರಾಜು ರಾಮ ಭದ್ರುಡು, ಪಿಂಗಳಿ ಸುರನ, ರಾಮರಾಜ ಭೂಷಣ ಮತ್ತು ತೆನಾಲಿ ರಾಮಕೃಷ್ಣ ಇವರೇ ಆ ಕವಿ ಕಲಿಗಳು. ಈ ಕವಿಗಳನ್ನು ಒಟ್ಟಾಗಿ ಅಷ್ಟ ದಿಗ್ಗಜರು ಎಂದು ಕರೆಯಲಾಗಿದೆ. ತೆನಾಲಿ ರಾಮಕೃಷ್ಣನ ಕಥೆಗಳೆಂದರೆ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬಹಳ ಆಪ್ತ.
        ಒಬ್ಬನ ಪರಿಣತಿಯನ್ನು ಕುರಿತು ಹೇಳುವಾಗ ‘ದಿಗ್ಗಜ’ ಎಂದೇ ಹೇಳುತ್ತೇವೆ. ನಾವು ಶತಾವಧಾನಿ ಆರ್ ಗಣೇಶ್ ಅವರ ಹೆಸರನ್ನು ಕೇಳಿದ್ದೇವೆ. ಅವರು ಅಷ್ಠಾವಧಾನದ ದಿಗ್ಗಜ. ಶಿಶುಗೀತೆಗಳ ಜನಕ ಎಂದು ನಾವು ಕರೆಯುವ ಪಂಜೆಯವರು ಸಾಹಿತ್ಯ ದಿಗ್ಗಜ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದಿಗ್ಗಜ. ‘ದಿಗ್ಗಜ’ ಎಂದು ಗುರುತಿಸಲ್ಪಟ್ಟವರು ಸತ್ತಮೇಲೂ ಉಳಿಯುತ್ತಾರೆ. ಅವರ ಪರಿಣತಿಗಳು, ಸಾಧನೆಗಳು, ಮಾಡಿದ ಮಹಾ ಕೆಲಸಗಳು ಅವರನ್ನು ನಿರಂತರವಾಗಿ ಜೀವಂತವಾಗಿರಿಸುತ್ತವೆ. ನಮಗೂ ದಿಗ್ಗಜರಾಗಲು ಕೋಟ್ಯಂತರ ಅವಕಾಶಗಳಿವೆ. ಅವಕಾಶಗಳಲ್ಲಿ ಒಂದು ಕ್ಷೇತ್ರವನ್ನು ಆಯ್ದು ಹೆಜ್ಜೆಯನ್ನು ಎತ್ತಿಟ್ಟರೆ ನಾವೂ ದಿಗ್ಗಜರಾಗುತ್ತೇವೆ. ಇಟ್ಟ ಹೆಜ್ಜೆ ಪ್ರಕೃತಿ, ಎತ್ತಿಟ್ಟ ಹೆಜ್ಜೆ ಪ್ರಗತಿ ಎಂಬ ಮಾತಿದೆ. ನಮ್ಮ ಹೆಜ್ಜೆಗಳನ್ನು ಎತ್ತಿಡೋಣ. ಕೃಷಿ ದಿಗ್ಗಜರೋ, ಕಲಾ ದಿಗ್ಗಜರೋ. ಚಿತ್ರ ದಿಗ್ಗಜರೋ, ಅಕ್ಷರ ದಿಗ್ಗಜರೋ, ಸೇವಾ ದಿಗ್ಗಜರೋ..... ಆಗಲು ಕ್ರಿಯಾ ಬದ್ಧರಾಗೋಣ. ಮಕ್ಕಳೇ, ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article