-->
ಜೀವನ ಸಂಭ್ರಮ : ಸಂಚಿಕೆ - 71

ಜೀವನ ಸಂಭ್ರಮ : ಸಂಚಿಕೆ - 71

ಜೀವನ ಸಂಭ್ರಮ : ಸಂಚಿಕೆ - 71                                 
               ಮಕ್ಕಳೇ, ಇಂದು ನಾವು ಹಣಕ್ಕೆ ಮಹತ್ವ ನೀಡಿದ್ದೇವೆ. ಹಣ ನಮಗೆ ಸಂತೋಷ ಕೊಡಬೇಕೇ ವಿನಃ ಅಪಾಯ ನೀಡಬಾರದು. ಈ ಕಥೆ ಓದಿ..... ಸ್ವಾಮಿ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದಂತಹ ಕಥೆ.
      ಇದು ಹಳ್ಳಿಗಳಲ್ಲಿ ನಡೆಯುವ ಘಟನೆಗಳು, ಒಬ್ಬ ತರುಣ ನದಿ ಸಮೀಪಕ್ಕೆ ಬಂದಿದ್ದನು. ಅವನು ತನ್ನಲ್ಲಿದ್ದ ಕಡಿಮೆ ಬೆಲೆಯ ಕಾಸನ್ನು ನದಿಗೆ ಎಸೆಯುತ್ತಿದ್ದ. ಹಾಗೆ ಎಸೆಯುವಾಗ ಕಣ್ಣು ತಪ್ಪಿ ಹೆಚ್ಚು ಬೆಲೆಯ ಕಾಸನ್ನು ನದಿಗೆ ಎಸೆದ. ಹೇಗೆ ಎಸೆದನೆಂದರೆ, ಜೋರಾಗಿ, ಯಾರಿಗೂ ಸಿಗಬಾರದೆಂದು ಎಸೆದಿದ್ದ. ನಂತರ ಗಮನಿಸಿದಾಗ, ಹೆಚ್ಚಿನ ಬೆಲೆಯ ಕಾಸನ್ನೂ ಎಸೆದಿದ್ದ. ಆಗ ಆತ, ಆ ಕಾಸನ್ನು ಹುಡುಕಬೇಕೆಂದು ತೀರ್ಮಾನಿಸಿದನು. ಆತ ಶ್ರೀಮಂತನೆ... ಆ ಹಣ ಹೋದರೆ ನಷ್ಟ ಇರಲಿಲ್ಲ. ಆದರೆ ಆ ಕಾಸು ಹೋಗಿದ್ದು ಆತನನ್ನು ಕಾಡುತ್ತಿತ್ತು. ತಕ್ಷಣ ತನ್ನ ಬಟ್ಟೆ ತೆಗೆದು, ನೀರಿನಲ್ಲಿ ಈಜುತ್ತಾ ಹೋಗಿ ಮುಳುಗಿ ಹುಡುಕಿದ, ಎರಡು ನಾಣ್ಯಗಳು ಸಿಕ್ಕಿತು. ಆತನಿಗೆ ಬಲು ಸಂತೋಷವಾಯಿತು. ಆ ಎರಡು ನಾಣ್ಯ ತಂದು ದಡದಲ್ಲಿ ಒಂದು ಕಡೆ ಇಟ್ಟನು. ಆಸೆ ಹೆಚ್ಚಾಯಿತು. ಮತ್ತೊಮ್ಮೆ ಹುಡುಕಲು ಹೋದನು. ಎರಡನೇ ಬಾರಿ ಮುಳುಗಿದಾಗ, ಮತ್ತೊಂದು ನಾಣ್ಯ ಸಿಕ್ಕಿತು. ಅದನ್ನು ತಂದು ದಡದಲ್ಲಿ ಇಟ್ಟನು. ಜೀವನದ ಚಟಗಳು ಬೆಳೆಯುವುದು ಹೀಗೆಯೆ. ಯಾವುದೇ ಜೂಜಿನ ಆಟದಲ್ಲಿ, ಪ್ರಾರಂಭದಲ್ಲಿ ಹೆಚ್ಚು ದೊರಕುತ್ತದೆ. ಹೀಗೆ ದೊರಕುತ್ತೆ ಎಂದು ಅದರಲ್ಲಿ ಮುಳುಗುತ್ತಾನೆ. ಕೊನೆಗೆ ಎಲ್ಲಾ ಕಳೆದುಕೊಳ್ಳುತ್ತಾನೆ. ಆಗ ಆತನಿಗೆ ಅನಿಸಿತು. ಈ ನದಿಯಲ್ಲಿ ಬಹಳ ಹಣ ಇದೆ ಎಂದುಕೊಂಡನು. ಮುಳುಗುವುದು, ಹಣ ಹುಡುಕುವುದು, ಹೀಗೆ ಮಾಡುತ್ತಲೇ ಇದ್ದನು. ಪ್ರತಿ ಬಾರಿ ಒಂದೊಂದೇ ನಾಣ್ಯ ಸಿಗುತ್ತಿತ್ತು. ಸಾಕಷ್ಟು ಬಾರಿ ಮುಳುಗಿ, ಹುಡುಕಿ, ನಾಣ್ಯಗಳನ್ನು ಸಂಗ್ರಹಿಸಿದ್ದನು. ಇದನ್ನು ಇನ್ನೊಂದು ಹುಡುಗ ಮರೆಯಾಗಿ ಕುಳಿತು ನೋಡುತ್ತಿದ್ದನು. ಈ ಬಾರಿ ನೀರಿನಲ್ಲಿ ಮುಳುಗಿದಾಗ, ಆ ಹುಡುಗ ಬಂದು, ಇಟ್ಟಿದ್ದ ಹಣ ತೆಗೆದುಕೊಂಡು ಹೋದನು. ಈತ ನೀರಿನಲ್ಲಿ ಮುಳುಗಿ, ಹುಡುಕಿ, ನಾಣ್ಯ ತೆಗೆದುಕೊಂಡು ಬರುತ್ತಾನೆ, ಅಲ್ಲಿ ಉಳಿದ ನಾಣ್ಯಗಳು ಇರಲಿಲ್ಲ. ಆಗ ಆತನಿಗೆ ದುಃಖವಾಗುತ್ತದೆ. ಇಂದು ನಾಣ್ಯ ಸಂಗ್ರಹಿಸಿಯೆ ಮನೆಗೆ ಹೋಗೋದು ಎಂದು ನಿರ್ಧರಿಸಿದನು. ಊಟ ತಿಂಡಿ ಮರೆತು, ಹಣ ಹುಡುಕುವುದರಲ್ಲಿ ನಿರತನಾದನು. ಸಾಕಷ್ಟು ಸಂಗ್ರಹಿಸಿದ. ಇದೇ ಹುಮ್ಮಸ್ಸಿನಲ್ಲಿ, ಇನ್ನಷ್ಟು ಸಂಗ್ರಹಿಸಬೇಕೆಂದು ಮತ್ತೆ ನೀರಿಗೆ ಹೋದನು. ಮುಳುಗಿದ, ಸುಸ್ತಾಗಿತ್ತು, ಹಣ ಹುಡುಕಿ ಉಸಿರಾಡಲಾಗದೆ ಮುಳುಗಿ ಸತ್ತಿದ್ದನು.
      ಇನ್ನೊಂದು ಕಥೆ.... ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಆತ ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದನು. ಡಂಗೂರ ಸಾರಿಸಿದ. ನಾಳೆ ರಾಜನ ಹುಟ್ಟುಹಬ್ಬವಿದೆ. ಹುಟ್ಟು ಹಬ್ಬದ ಪ್ರಯುಕ್ತ ಸ್ಪರ್ಧೆ ಇದೆ. ಸ್ಪರ್ಧೆ ಏನೆಂದರೆ ರಾಜ್ಯದ ಪಕ್ಕದಲ್ಲೇ ವಿಶಾಲವಾದ ನದಿ ಹರಿಯುತ್ತಿತ್ತು. ಯಾರು ಈ ಕಡೆಯಿಂದ ನದಿಯ ಆ ತಟ ಮುಟ್ಟಿಸಿ ವಾಪಸು ಈ ನದಿ ತಟ ಸೇರುತ್ತಾರೆ, ಅವರಿಗೆ ಒಂದು ಚಿನ್ನದ ನಾಣ್ಯ, ಎಂದು ಡಂಗೂರ ಸಾರಿಸಿದನು. ಬೆಳಿಗ್ಗೆ ಆರು ಗಂಟೆಗೆ ಸ್ಪರ್ಧೆ ಇದೆ ಎಂದು ಘೋಷಿಸಲಾಯಿತು. ಊರಿನ ಪಾಲಕರು, ಯುವಕರು, ತರುಣರು ಸೇರಿದಂತೆ ಸಾಕಷ್ಟು ಜನ ಬಂದರು. ಅದರಲ್ಲಿ ಒಬ್ಬ ಅರವತ್ತು ವರ್ಷದ ಮುದುಕ ಬಂದಿದ್ದನು. ಆತನಿಗೆ ಸಾಕಷ್ಟು ಜಮೀನು ಇತ್ತು. ಮಕ್ಕಳಿಗೆ ಮದುವೆಯಾಗಿತ್ತು. ಆ ಮುದುಕನಿಗೆ ಜಮೀನು ಸಾಕು ಎನಿಸಿರಲಿಲ್ಲ. ಆತ ಒಳ್ಳೆಯ ಈಜುಗಾರನಾಗಿದ್ದನು. ಈಗ ಗಳಿಸಿ ಮತ್ತಷ್ಟು ಜಮೀನು ಮತ್ತು ಆಸ್ತಿಯನ್ನು ಖರೀದಿಸಬಹುದೆಂದು ಈಜಲು ಬಂದಿದ್ದನು. ಆರು ಗಂಟೆಗೆ ಸ್ಪರ್ಧೆ ಪ್ರಾರಂಭವಾಯಿತು. ಎಲ್ಲರೂ ಸ್ಪರ್ಧೆಗೆ ಧುಮುಕಿದರು. ಕೆಲವರು ಅರ್ಧ ದಾರಿಯಿಂದ ವಾಪಸ್ ಬಂದರು. ಇನ್ನು ಕೆಲವರು ಒಂದು ಸುತ್ತು ಮತ್ತೆ ಕೆಲವರು ಎರಡು ಸುತ್ತು ಹೀಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಈಜಿ ಬಹುಮಾನ ಪಡೆದಿದ್ದರು. ಆದರೆ ಮುದುಕ ಈಜುವುದು ನಿಂತಿರಲಿಲ್ಲ. ರಾಜ ಹೇಳಿದ ನಿನಗೆ ಸಾಕು ಅನಿಸುವಷ್ಟು ಈಜು ಎಂದಿದ್ದನು. ಊಟ, ತಿಂಡಿ ಮರೆತು, ಚಿನ್ನದ ನಾಣ್ಯಕ್ಕಾಗಿ ಈಜುತ್ತಲೇ ಇದ್ದನು ಆ ಮುದುಕ. ಇದೊಂದು ಸುವರ್ಣ ಅವಕಾಶ, ಇಂತಹದನ್ನು ಬಿಟ್ಟರೆ ಮತ್ತೆ ಗಳಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದ. ಸಾಕಷ್ಟು ಸಂಪಾದಿಸಿದನು. ಆದರೆ ಕೊರತೆ ಇನ್ನೂ ಇತ್ತು. ಆ ಕೊರತೆ ಪೂರ್ಣಗೊಳಿಸಬೇಕೆಂದು ಊಟ, ತಿಂಡಿ, ನೀರು ಎಲ್ಲವನ್ನು ಬಿಟ್ಟಿದ್ದನು. ಸಾಕಷ್ಟು ದೇಹ ದಣಿವಾಗಿತ್ತು. ಇನ್ನೇನು ಸೂರ್ಯ ಮುಳುಗುತ್ತಾನೆ ಅಷ್ಟರಲ್ಲಿ ಕಡೆಯದಾಗಿ ಈಜ ಬೇಕೆಂದು ತೀರ್ಮಾನಿಸಿದನು. ನಮ್ಮ ಮನಸ್ಸು ಹೀಗೆ ಕೆಲಸ ಮಾಡುವುದು. ಸಾಕಷ್ಟು ದಣಿದಿದ್ದ, ಆಯಾಸವಾಗಿತ್ತು , ಸುಸ್ತಾಗಿತ್ತು. ಕೊನೆ ಸುತ್ತು ಹೋಗಿ ವಾಪಸ್ ಬಂದು ಊಟ ಮಾಡುವುದೆಂದು ತೀರ್ಮಾನಿಸಿ, ಈಜಲು ಹೋದ. ಆ ದಡ ತಲುಪಿ ವಾಪಸು ಬರುವಾಗ, ಅರ್ಧ ದಾರಿಯಲ್ಲಿ ಕೈಕಾಲು ನಿಂತಿತ್ತು. ಮೊದಲೇ ಆಯಾಸ, ಸುಸ್ತು ಆಗಿತ್ತು. ದಡ ಸೇರದೆ ಪ್ರಾಣ ಬಿಟ್ಟಿದ್ದ. ಈ ಗಳಿಸಿದ್ದ ಹಣವನ್ನು ಮಕ್ಕಳು ತೆಗೆದುಕೊಂಡು ಹೋದರು. ತಾನು ಏನು ಗಳಿಸಬೇಕೆಂಬ ಆಸೆ ಇತ್ತು ಅದನ್ನು ಪೂರೈಸಲಿಲ್ಲ. ಗಳಿಸುವ ಆಸೆಯಲ್ಲಿ ಜೀವವನ್ನೇ ಕಳೆದುಕೊಂಡಿದ್ದನು.
       ಈ ಎರಡು ಘಟನೆ ನೋಡಿ. ಇಬ್ಬರೂ ಸಾಕಷ್ಟು ಇದ್ದವ್ರೆ, ಆದರೆ ಹಣದ ಆಸೆಗೆ ಜೀವ ಕಳೆದುಕೊಂಡವರು. ಅವರಿಗೆ ಹಣ ಸಂಪತ್ತಾಗಿತ್ತು. ದೇಹ ಸಂಪತ್ತು ಆಗಿರಲಿಲ್ಲ. ಈ ಹಣ ಅನುಭವಿಸಲು ದೇಹ ಬೇಡವೇ...? ಹಣ ಏತಕ್ಕಾಗಿ ಬೇಕು...? ನಮ್ಮ ಸಂತೋಷಕ್ಕಾಗಿ ಹಣಬೇಕು. ನಮ್ಮ ದೇಹವೇ ಹೋದ, ಮೇಲೆ ಸಂತೋಷ ಪಡುವುದು ಯಾವುದರಿಂದ...? ಈ ಹಣದಿಂದ ಆಗುವ ಲಾಭ ಏನು....? ಮಕ್ಕಳೇ ನಮ್ಮ ಜೀವನವೇ ಶ್ರೇಷ್ಠ. ನಮ್ಮ ದೇಹವೇ ಶ್ರೇಷ್ಠ. ಇದಕ್ಕಿಂತ ಬೆಲೆ ಬಾಳುವ ವಸ್ತು ಪ್ರಪಂಚದಲ್ಲಿ ಇಲ್ಲ. ಹಣದ ಹಿಂದೆ ಬಿದ್ದವರಿಗೆ ಈ ಕಥೆ. ಮಕ್ಕಳೇ, ಗಳಿಸುವುದು ಏತಕ್ಕೆ.....? ಬಳಸಿ ಆನಂದ ಪಡುವುದಕ್ಕೆ. ಬಳಸಿ ಆನಂದ ಪಡಲು ಈ ದೇಹವೇ ಇಲ್ಲದಿದ್ದ ಮೇಲೆ ಗಳಿಕೆಗೆ ಏನು ಅರ್ಥ...? ನಾವು ಗಳಿಸಬೇಕು, ಎಷ್ಟು ಬೇಕೋ ಅಷ್ಟು. ಜೀವನವನ್ನ ಅಪಾಯಕ್ಕೆ ತಳ್ಳಿ ಸಂಪಾದಿಸುವುದಲ್ಲ. ಮಕ್ಕಳೇ, ಹಣ ಇರುವುದು ಜೀವನಕ್ಕೆ ವಿನಹ, ಜೀವನ ಇರುವುದು ಹಣಕ್ಕಲ್ಲ, ಅಲ್ಲವೇ ಮಕ್ಕಳೆ...
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article