-->
ಪರೀಕ್ಷೆ : ಒಂದು ಚಿಂತನೆ - ನಾರಾಯಣ ರೈ ಕುಕ್ಕುವಳ್ಳಿ

ಪರೀಕ್ಷೆ : ಒಂದು ಚಿಂತನೆ - ನಾರಾಯಣ ರೈ ಕುಕ್ಕುವಳ್ಳಿ

ಲೇಖಕರು : ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

       
         ನಮ್ಮ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮನೆ ಮಂದಿಗೆಲ್ಲ ಪರೀಕ್ಷೆ ಎಂದಾಗ ಏಕೋ ಒಂದು ರೀತಿಯ ಭಯ, ಆತಂಕ, ಕಳವಳ. ಪರೀಕ್ಷೆ ಅಂದರೆ ನಮ್ಮ ಕಲಿಕೆಯ ಒಂದು ಅಮೂಲ್ಯ ಭಾಗ. ನಾವು ಯಾರೂ.. ಭಯಪಡಬೇಕಾದ ಅಗತ್ಯವಿಲ್ಲ. ಆತ್ಮವಿಶ್ವಾಸ , ದೃಢವಾದ ನಂಬಿಕೆ, ಕ್ರಿಯಾಶೀಲತೆ ಇದ್ದರೆ ಪರೀಕ್ಷೆ ಒಂದು ಸಮಸ್ಯೆಯೇ ಅಲ್ಲ... ಯಾರೋ ಏನೇನೋ ಹೇಳುವ ಮಾತನ್ನು ಕೇಳಿ ಗಲಿಬಿಲಿಗೊಂಡಾಗ ಒಂದು ರೀತಿಯ ಆತಂಕ ಮನೆ ಮಾಡುತ್ತದೆ. ನಮ್ಮ ಶಾಲಾರಂಭದಿಂದಲೇ ಅಭ್ಯಾಸದಲ್ಲಿ ತೊಡಗಿದರೆ ವಿಷಯವಾರು ಅಧ್ಯಾಪಕರ ಪಾಠಗಳನ್ನು ಗಮನವಿಟ್ಟು ಶ್ರವಣ ಮಾಡಿದರೆ... ನಾಳೆ... ನಾಳೆ ಎಂಬುದನ್ನು ಬಿಟ್ಟು ಇಂದಿನ ಕೆಲಸ ಇಂದೇ ಮಾಡುವೆ ಎಂಬ ಸಂಕಲ್ಪ ಮಾಡಿಕೊಂಡಾಗ ನಾಳೆಯ ದಿನ ನಮಗೆ ಆನಂದದ ದಿನವಾಗುತ್ತದೆ
     ಆ ಕಾರಣದಿಂದಾಗಿ ನಮ್ಮ ವಿದ್ಯಾರ್ಥಿಗಳು ಆರಂಭದಿಂದಲೇ ನಾಳೆ... ನಾಳೆ ಎನ್ನುವ- ಜಪದೊಂದಿಗೆ ಮುಂದೆ ಮುಂದೆ ಹೋಗುತ್ತಾರೆ. ನಾಳೆ ಓದಿದರಾಯಿತು.. ಬರೆದರಾಯಿತು ಪರೀಕ್ಷೆ ಬಂದಾಗಲ್ವ... ನೋಡೋಣ... ಇನ್ನೂ ಸಮಯವಿದೆ....ಅಲ್ಲವೇ!!!
      ಎಂಬ ತಾತ್ಸಾರದ ಮಾತುಗಳಿಂದ, ಭಾವನೆಗಳಿಂದ ಬರೆಯುವುದನ್ನು , ಅಭ್ಯಾಸ ಮಾಡುವುದನ್ನು , ಮನನ ಮಾಡುವುದನ್ನು ಬಿಟ್ಟಾಗ ಎಲ್ಲ ವಿಷಯ- ವಿಚಾರಗಳ ರಾಶಿ ತುಂಬಿದಾಗ, ತಲೆನೋವು, ಜ್ವರ, ನಿತ್ರಾಣ ಇತ್ಯಾದಿ ಆಗುತ್ತದೆ.
      ನಮ್ಮ ಮಕ್ಕಳಿಗೆ ಒಂದು ಕಿವಿ ಮಾತು:- ಮೊದಲನೆಯದಾಗಿ (ಇನ್ನು ಮುಂದೆ ಮಾಡಬೇಕಾಗಿರುವುದು... ಈಗ ಕಾಲ ಸರಿದಿದೆ.. ತುಂಬಾ ದೂರ ಬಂದು ಆಗಿದೆ...)
     ಈ ಬಾರಿಯ ಪರೀಕ್ಷೆಗೆ... ಓದುವ ಬರೆಯುವ ಕೆಲಸ ನೀವೆಲ್ಲ ಮಾಡುತ್ತಾ ಇದ್ದೀರಿ. ಸಂತೋಷ ಇದನ್ನೇ ಮುಂದುವರಿಸಿ, ಆದರೆ ಯಾರೂ.. ಪರೀಕ್ಷೆ ಬಂತಲ್ಲ... ಹೇಗೆ ಬರೆಯುವುದು ? ಪಾಸ್ ಆಗಬಹುದೇ... ಎನ್ನುವ ಆತಂಕದಿಂದ ಕೂಡಿರುವ ನಮ್ಮ ಮಕ್ಕಳು ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಬೇಕು.     
     ಮೊದಲನೆಯದಾಗಿ ಶಾಲಾರಂಭದ ದಿನದಿಂದಲೇ ಓದುವ ಬರೆಯುವ ಕೆಲಸ ಆರಂಭ ಮಾಡಬೇಕು ಗುರುಗಳು ಮಾಡುವ ಕನ್ನಡ , ಇಂಗ್ಲಿಷ್, ಹಿಂದಿ, ತುಳು , ಸಂಸ್ಕೃತ ಇತ್ಯಾದಿ ಭಾಷಾ ಪಾಠ , ಸಮಾಜ, ವಿಜ್ಞಾನ , ಗಣಿತ.. ವಿಷಯಗಳು ಅವುಗಳ ಸೂತ್ರ, ಪ್ರಯೋಗಗಳು.. ಇತ್ಯಾದಿ ಮುಖ್ಯಾಂಶಗಳು. ರೇಖಾಂಶ- ಅಕ್ಷಾಂಶ ನಕ್ಷೆಗಳು ಪ್ರಪಂಚದ ಭೂಪಟಗಳು ಭಾರತದ ನಕ್ಷೆ ಬಿಡಿಸುವುದು... ಗಣಿತದ ಸೂತ್ರಗಳನ್ನು ಬರೆದಿಟ್ಟುಕೊಳ್ಳುವುದು ಅವುಗಳನ್ನು ಓದಿ ಗುರುಗಳು ಹೇಳಿದಂತೆ ಅರ್ಥ ಮಾಡಿ ಅಭ್ಯಾಸ ಮಾಡುವುದು.
      ಇನ್ನು ಕನ್ನಡ ಭಾಷೆಯಲ್ಲಿ ಶುದ್ಧವಾದ, ಸ್ಪಷ್ಟವಾದ ಬರಹ, ವ್ಯಾಕರಣ - ಛಂದಸ್ಸು ಅಲಂಕಾರಗಳು, ಪ್ರಬಂಧ, ಗಾದೆಯ ಮಾತುಗಳು ಪದ್ಯದ ಸಾರಾಂಶ... ಪ್ರಶ್ನೆಗಳಿಗೆ ಉತ್ತರ ಬರೆಯುವ ರೀತಿ ಎಷ್ಟು ಸಾಲುಗಳಿಗೆ ಮೀರದಂತೆ ಬರೆಯಬೇಕು.
       ಇದೇ... ರೀತಿ ಆಯಾಯ ಪಾಠ ವಿಷಯಗಳಿಗೆ ಪ್ರಾಮುಖ್ಯತೆಯನ್ನು ಕೊಡಬೇಕಾದುದು ಮುಖ್ಯ. ಅಂದರೆ ಓದುವಾಗ ಸ್ಪಷ್ಟ ಉಚ್ಚಾರಣೆ, ಬರೆಯುವಾಗ ಸುಲಭವಾಗುವುದು. ಇನ್ನು ಪರೀಕ್ಷೆ ಹತ್ತಿರವಾಗುವಾಗ , ನಿದ್ರೆ ಗೆಟ್ಟು... ಊಟ ಬಿಟ್ಟು... ಗಡಿಬಿಡಿಯಿಂದ ಓದಿ ಮುಗಿಸುವುದು ಒಳ್ಳೆಯದಲ್ಲ.
      ನಮ್ಮ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರಂಭದಿಂದಲೇ ಅಭ್ಯಾಸದಲ್ಲಿ ತೊಡಗಿರುತ್ತಾರೆ. ನಮ್ಮ ಎಲ್ಲ ಪಾಠ ವಿಷಯಗಳು ಸುಲಭವೇ. ಕಷ್ಟ ಎಂದು ಭಾವಿಸಿದರೆ, ಸುಲಭವೂ ಕಷ್ಟವಾಗುವುದು.
        ನಮ್ಮ ಮನಸ್ಸು ಬಹಳ ಸೂಕ್ಷ್ಮವಾದದ್ದು. ಆದ್ದರಿಂದ ನಾವು ನಮ್ಮ ಮನಸ್ಸಿಗೆ ಯಾವುದೇ ಒತ್ತಡಕೊಡದೆ, ಆರಾಮವಾಗಿ ಸಂತೋಷದಿಂದ ಬರೆಯುವ, ಓದುವ ಅಭ್ಯಾಸ ಮಾಡಬೇಕು. ಇನ್ನು ಪರೀಕ್ಷೆಯ ಬಗ್ಗೆ ಒಂದು ಮಾತು, ಬೇಡ ಮನದಿ ನೂರು ಚಿಂತೆ, ಪರೀಕ್ಷೆ ನಮಗೆ ಸ್ನೇಹಿತನಂತೆ... ಪರೀಕ್ಷೆ ವೈರಿ... ಅಲ್ಲ ನಮ್ಮ ಸ್ನೇಹಿತ...
        ನಾವು ಕಲಿತಿರುವುದನ್ನು, ಓದಿದ್ದನ್ನು , ಅಭ್ಯಾಸ ಮಾಡಿದ್ದನ್ನು , ಪ್ರಶ್ನೆಗಳ ಮೂಲಕ ನಮ್ಮನ್ನು ಪರೀಕ್ಷಿಸುವುದೇ... ಪರೀಕ್ಷೆ , ಶಿಕ್ಷಣದ ಒಂದು ಅಂಶ ಅಷ್ಟೆ. ಯಾವುದೇ ಆತಂಕಪಡಬಾರದು. ಅಡ್ಡ ದಾರಿಯಲ್ಲಿ, ಅಂಕ ಗಳಿಸುವ ಹುಚ್ಚು ಸಾಹಸ... ಆತುರ ಬೇಡ. ಕೆಲವರು ಕೈಯಲ್ಲಿ, ಬೂಟ್ಸ್ ನಲ್ಲಿ , ಸ್ಕೇಲ್ ನಲ್ಲಿ ಚೀಟಿಯಲ್ಲಿ, ಬರೆದುಕೊಂಡು ಬರುವುದೂ ಇದೆ. ಸಿಕ್ಕಿ ಬಿದ್ದರೆ ಡಿಬಾರ್ ಶಿಕ್ಷೆ. ಪರೀಕ್ಷೆಯ ಟೇಬಲ್ ನ ಮೇಲೆಯೂ ಸೂಕ್ಷ್ಮ , ಸೂಕ್ಷ್ಮ ಕೋಡ್- ವರ್ಡ್ಸ್ ಇರುತ್ತವೆ. ಈ ಎಲ್ಲಾ ಅತಿ ಬುದ್ಧಿವಂತಿಕೆಯ ಕೆಲಸ ಬಿಟ್ಟು , ಆತ್ಮವಿಶ್ವಾಸದಿಂದ ನಾನು ಪದ್ಯ ಕಲಿಯುತ್ತೇನೆ, ಪಾಠ ಓದಿದ್ದೇನೆ , ವ್ಯಾಕರಣ- ಛಂದಸ್ಸು ಅಭ್ಯಾಸ ಮಾಡಿದ್ದೇನೆ.... ಎಂದು ಧೈರ್ಯ ಪಟ್ಟರೆ ಭಯಪಡುವ ಪ್ರಮೇಯವೇ ಇರಲಾರದು. ಪಾಠದ ವಿಷಯಗಳನ್ನು, ವಿಜ್ಞಾನದ ಪ್ರಯೋಗಗಳನ್ನು.. ಗಣಿತದ ಸೂತ್ರಗಳನ್ನು ಅಭ್ಯಾಸ ಮಾಡಿದ್ದೇನೆ... ಸಮಾಜದ ವಿಷಯಗಳನ್ನು, ಇಸವಿ, ಮ್ಯಾಪು- ನಕ್ಷೆ ಬಿಡಿಸುವುದು ಇದನ್ನೆಲ್ಲಾ ಚೆನ್ನಾಗಿ ಕಲಿತಿದ್ದೇನೆ ಎನ್ನುವ ಆತ್ಮ ವಿಶ್ವಾಸದ, ಅಭ್ಯಾಸದಲ್ಲಿ ತೊಡಗಿದರೆ ಪರೀಕ್ಷೆ ಎಂದೂ ನಮಗೆ ಒಂದು ಹೊರೆಯೇ... ಅಲ್ಲ. ವರ್ಷವಿಡೀ ಕಲಿತ ವಿಷಯಗಳಲ್ಲಿ ಎರಡು ಎರಡೂವರೆ ಮೂರು ಗಂಟೆಗಳ ಪರೀಕ್ಷೆ ನಡೆಯುತ್ತದೆ. ಅಧ್ಯಾಪಕರು , ಅವರವರ ವಿಷಯಗಳಲ್ಲಿ , ಈ ಹಿಂದಿನ ಪ್ರಶ್ನೆಗಳ ಆಧಾರದಲ್ಲಿ ಇಂಥ ಪ್ರಶ್ನೆಗಳು ಬಹಳ ಮುಖ್ಯ, ಓದಿಕೊಳ್ಳಬೇಕು, ಮರೆಯಬಾರದು, ಚೆನ್ನಾಗಿ ಅಭ್ಯಾಸ ಮಾಡಬೇಕು.. ಇತ್ಯಾದಿ ವಿಚಾರಗಳ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ನಮ್ಮ ವಿದ್ಯಾರ್ಥಿಗಳು ನಾನು ಐದು ಸಲ ಓದಿದೆ 10 ಸಲ ಓದಿದೆ, 20 ಸಲ ಓದಿದೆ, ಎಂಬ ಅಂಕಿ ಅಂಶಗಳನ್ನು ಹೇಳುತ್ತಾರೆ. ಇಲ್ಲಿ ನೀವು ಎಷ್ಟು ಸಲ ಓದಿದ್ದೀರಿ ಎನ್ನುವುದು ಮುಖ್ಯ ಅಲ್ಲ ಹೇಗೆ ಓದಿದ್ದೀರಿ??ಓದಿದ್ದನ್ನು, ಮುಖ್ಯಾಂಶಗಳನ್ನು ಬರೆದಿಟ್ಟಿದ್ದೀರಾ..? ಸೂತ್ರಗಳನ್ನು ಅಭ್ಯಾಸ ಮಾಡಿದ್ದೀರಾ? ನಕ್ಷೆ, ಸ್ಥಳಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದೀರಾ? ಇವು ಮುಖ್ಯವಾಗುತ್ತವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಈ ರೀತಿಯ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡವರು.
        ಇನ್ನು ಪರೀಕ್ಷೆಯ ಸಮಯ ಬಂದಾಗ ನಿಮಗೆ ನಿಗದಿ ಪಡಿಸಿದ ಶಾಲಾ-ಕಾಲೇಜುಗಳಲ್ಲಿ ಬೇಕಾದ ವ್ಯವಸ್ಥೆಗಳನ್ನು ಮಾಡಿರುತ್ತಾರೆ, ನಿಮಗೆ ನಿಮ್ಮದೇ ಆದ ಪ್ರವೇಶ ಪತ್ರ ಕೊಟ್ಟಿರುತ್ತಾರೆ. ಅದರಲ್ಲಿ ನಿಮ್ಮ ಕ್ರಮ ಸಂಖ್ಯೆ- ರಿಜಿಸ್ಟರ್ ನಂಬರ್, ವಿಷಯ ಎಲ್ಲವೂ ಸರಿಯಾಗಿರುತ್ತದೆ. ದಿನಾಂಕ ವಾರಗಳೂ ಇರುತ್ತವೆ. ಪರೀಕ್ಷಾ ಮೇಲ್ವಿಚಾರಕರು ಅದನ್ನು ಪರಿಶೀಲಿಸಿ, ನಿಮಗೆ ಬರೆಯಲು ಸುಗಮದಾರಿ ಮಾಡಿಕೊಡುತ್ತಾರೆ.
       ಆ ಮೇಲೆ ಆ ದಿನ ಯಾವ ಪರೀಕ್ಷೆ? ಆ ವಿಷಯದ ಪ್ರಶ್ನಾ ಪತ್ರಿಕೆಗಳ ಬಂಡಲ್- ಕಟ್ಟುಗಳನ್ನು , ನಿಮ್ಮ ಎದುರೇ ಸಹಿ ಪಡೆದು ತೆರೆಯುತ್ತಾರೆ. ನಿಮ್ಮ ನಿಮ್ಮ ಸ್ಥಳಕ್ಕೆ ಪ್ರಶ್ನಾ ಪತ್ರಿಕೆಗಳನ್ನು ಕೊಡುತ್ತಾ ಹೋಗುತ್ತಾರೆ. ನೀವು ಕೂಡಲೇ ಬರೆಯುವುದಲ್ಲ. ಕೆಲವು ಸೂಚನೆಗಳು ಇರುತ್ತವೆ. ಅವುಗಳನ್ನು ಗಮನವಿಟ್ಟು ನೀವು ಓದಲು ಸಮಯವಿರುತ್ತದೆ. ನಿಮ್ಮ... ನಿಮ್ಮ ರಿಜಿಸ್ಟರ್ ನಂಬರ್ ಗಳನ್ನು ತಪ್ಪಿಲ್ಲದೆ, ಚಿತ್ತಿಲ್ಲದೆ, ಮೊದಲು ಸರಿಯಾಗಿ ಬರೆಯಬೇಕು.
         ಕೆಲವು ಸಂದರ್ಭಗಳಲ್ಲಿ ನಿಮ್ಮ ಸಹಿ ಕೂಡಾ ಬೇಕಾಗುತ್ತದೆ. ಆದರೆ ನೀವು ಸಹಿ ಹಾಕಿರುವಿರೋ ಎಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಿಮಗೆ ಕೊಟ್ಟಿರುವ ಸಮಯದೊಳಗೆ ಆಯಾಯ ದಿನದ ವಿಷಯಗಳನ್ನು, ಅವುಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದರ ಮೂಲಕ ನೀವು ಅದನ್ನು ಮೇಲ್ವಿಚಾರಕರಿಗೆ ಕೊಡಬೇಕು. ಆಮೇಲೆ ಹೊರಗೆ ಬಂದ ನಂತರ ನಿಮ್ಮ ಸ್ನೇಹಿತರೆಲ್ಲ ಸೇರಿ "ನಾನು ಹಾಗೆ ಬರೆದೆ...ನಾನು ಹೀಗೆ... ಬರೆದೆ... ಅಯ್ಯೋ ತಪ್ಪಾಯಿತಲ್ಲಾ.... ನನಗೆ ಗೊತ್ತಿತ್ತು... ಆದರೂ ಬರೆದೆ.. ತಪ್ಪಾಗಿ ಹೋಯಿತಲ್ಲ...!!!" ಎಂದು ಇಲ್ಲಸಲ್ಲದ ಚರ್ಚೆಗಳನ್ನು ಮಾಡುವುದು ಬೇಡ. ಆ ದಿನದ ಪರೀಕ್ಷೆ ಮುಗಿದಾದ ಮೇಲೆ, ನೀವು ನೇರವಾಗಿ ನಿಮ್ಮ ನಿಮ್ಮ ಮನೆ, ಹಾಸ್ಟೆಲ್ ಗಳಿಗೆ ಹೋಗಿ... ಸಮವಸ್ತ್ರ ಬದಲಾಯಿಸಿ, ಕೈಕಾಲು ಮುಖ ತೊಳೆದು ಇನ್ನು ಕೆಲವರು ಸ್ನಾನ ಮಾಡುವವರೂ ಇರಬಹುದು. ಊಟ ಮಾಡಿ ಕೂಡಲೇ ನಾಳಿನ ಪರೀಕ್ಷೆಗೆ ಓದಲು ತೊಡಗುವುದಲ್ಲ ಸ್ವಲ್ಪ ವ್ಯಾಯಾಮ, ಧ್ಯಾನ.. ಹೀಗೇ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗುವುದು ಉತ್ತಮ. ಒತ್ತಡ ರಹಿತ, ಆರಾಮದಾಯಕ ಓದು ಮುಖ್ಯ. ಒಂದು ಓದು ಮತ್ತು ಇನ್ನೊಂದು ಭಾಗದ ಓದಿನ ನಡುವೆ... ವಿಶ್ರಾಂತಿ ತೆಗೆದುಕೊಳ್ಳಬೇಕು, ರೇಡಿಯೋ ಸಂಗೀತ ಆಲಿಸಬಹುದು.  
       ಒಂದುಮಾತು : ನಮ್ಮ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕ್ರಿಕೆಟ್, ಕಬಡ್ಡಿ.. ಮೊದಲಾದ ಮ್ಯಾಚ್ ಇರಬಹುದು. ಬ್ರೇಕಿಂಗ್ ನ್ಯೂಸ್ ಅಲ್ಲಿ ಅಷ್ಟು ಜನ ಗೈರು ಹಾಜರಿ. ಇಲ್ಲಿ ಅಷ್ಟು ಜನ ಸಿಕ್ಕಿ ಬಿದ್ರು. ಎನ್ನುವ ವಿಚಾರದ ಕಡೆಗೆ ಗಮನ ಕೊಡಬೇಡಿ. ಮತ್ತೆ ಮುಂದಿನ ವಿಷಯಕ್ಕೆ ತೊಡಗಿ..... ಓದುತ್ತಾ... ಓದುತ್ತಾ ಹೋಗಿ. ಗೊತ್ತಿಲ್ಲದ ವಿಷಯಗಳನ್ನು ನಿಮ್ಮ ಗುರುಗಳಲ್ಲಿ ಅಥವಾ ವಿಷಯ ತಜ್ಞರಲ್ಲಿ ಕೇಳಿ ತಿಳಿದುಕೊಳ್ಳಿ. ಆಮೇಲೆ ಸ್ನಾನ ಮಾಡಿ, ಅನ್ನ- ಆಹಾರ ಸೇವಿಸಿ ನಿರಾಳವಾಗಿ ನಿದ್ರೆ ಮಾಡಿ. ಬೆಳಿಗ್ಗೆ ಬಹಳ ಬೇಗ ಅಂದ್ರೆ 3 -4 ಗಂಟೆಗೆಲ್ಲ ಏಳ ಬೇಡಿ. ನಿದ್ರೆ ಬಹಳ ಮುಖ್ಯ. ಇನ್ನು ಪರೀಕ್ಷಾ ಕೇಂದ್ರಕ್ಕೆ ಎಲ್ಲರಿಗಿಂತ ಮೊದಲು ನೀವು ಹೋಗುವುದಲ್ಲ. ಅದಕ್ಕೆಲ್ಲ ವ್ಯವಸ್ಥೆ ಮಾಡಿರುತ್ತಾರೆ.
       ಹಿಂದಿನ ದಿವಸದ ಕೊಠಡಿಯ ಬದಲು ಬೇರೆ ಕೊಠಡಿ ಸಿಗಬಹುದು. ವಿವರಗಳನ್ನು ಸೂಚನಾ ಫಲಕದಲ್ಲಿ ಸ್ಪಷ್ಟವಾಗಿ ಹಾಕಿರುತ್ತಾರೆ ಕೆಲವು ಕಡೆ ಧ್ವನಿ ವರ್ಧಕಗಳಲ್ಲೂ ಸ್ಪಷ್ಟ ಮಾಹಿತಿ ನೀಡುತ್ತಾರೆ. ಆತಂಕ ಪಡಲೇ ಬಾರದು. ಅಲ್ಲಿ ನಿಮ್ಮ ನಂಬರ್ ಇರುತ್ತದೆ. ಸಮಯದ ಮಿತಿಯೊಳಗೆ ನಿಮ್ಮ ಕೇಂದ್ರದ ಪರೀಕ್ಷಾ ಕೊಠಡಿಗೆ ಹೋಗಿ ಕುಳಿತುಕೊಂಡು ಆಯಾ ವಿಷಯದ ಪ್ರಶ್ನಾ ಪತ್ರಿಕೆಗಳಿಗೆ ಈ ಹಿಂದಿನಂತೆ ಬರೆಯಲು ತೊಡಗುವುದು. ನಿಮಗೆ ಬೇಕಾದರೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ನೀವು ಮನೆಯಿಂದಲೇ ಬಾಟಲಿಯಲ್ಲಿ ನೀರು ತಂದರೂ ಆಗಬಹುದು. ಕಾರಣ ಕೊಠಡಿಯೊಳಗೆ ಪರೀಕ್ಷಾ ಸೆಖೆಯಾದರೆ... ಹೊರಗೆ ಸೂರ್ಯನ ಬಿಸಿಲ ತಾಪ... ಧೈರ್ಯದಿಂದ ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಬರೆಯಿರಿ. ಹೀಗೆ ಒಂದು, ಎರಡು, ಮೂರು, ನಾಲ್ಕು... ಹೀಗೇ ದಿನಗಳು ಕಳೆದು ಕೊನೆಯ ಪರೀಕ್ಷೆಯ ದಿವಸ ಮುಗಿದ ಕ್ಷಣ... ತುಂಬಾ ಸಂತೋಷವಾಗಿರುತ್ತೀರಿ. ಕೆಲವರು ಪೇಟೆ ಸವಾರಿ ಮಾಡುವುದು.... ಸ್ನೇಹಿತರೊಟ್ಟಿಗೆ ಸೈಕಲ್ ಸವಾರಿ, ಬೈಕ್ ಸವಾರಿ, ಕಾರು ಸವಾರಿ ಎಲ್ಲ ಮಾಡೋದಿದೆ ಆದರೆ ನಿಮ್ಮ ನಿಮ್ಮ ಜಾಗೃತಿ ನಿಮ್ಮ ನಿಮ್ಮ ಹಿಡಿತದಲ್ಲಿರಲಿ... ನೀವು ನಿಮ್ಮ ನಿಮ್ಮ ಮನೆಗೆ ಹೋಗಿ ಸುರಕ್ಷಿತವಾಗಿ ನಿರಾಳವಾಗಿ. ಆ ದಿವಸ ಸಂತೋಷಪಡುವುದು ಮುಖ್ಯ. ಇನ್ನು ಫಲಿತಾಂಶಕ್ಕಾಗಿ ನೀವು ಕಾಯುತ್ತಾ ಇರುತ್ತೀರಿ. ಪರೀಕ್ಷೆ ಮುಗಿದ ಕೂಡಲೇ ಫಲಿತಾಂಶ ಬರುವುದಿಲ್ಲ. ಕಾಯಬೇಕು ತಾಳ್ಮೆಬೇಕು, ಆತಂಕ ಬೇಡ. ನೀವು ಚೆನ್ನಾಗಿ ಬರೆದಿದ್ದೀರಿ ಎನ್ನುವ ವಿಶ್ವಾಸ ನಿಮಗಿದೆ. ನಿಮಗೆ ಉತ್ತಮ ಫಲಿತಾಂಶ ಬರಲಿದೆ.
       ಮಾತು ಮುಗಿಸುವ ಮುನ್ನ ಒಂದು ವಿಚಾರ : ಪರೀಕ್ಷೆ ಕೇವಲ ಅಂಕ ಗಳಿಸಲು ಅಲ್ಲ... ಕಡಿಮೆ ಅಂಕ ಬರಬಹುದು, ಅಥವಾ ಬಾರದೆ ಇರಬಹುದು ಹೆಚ್ಚು ಅಂಕ ಬರಬಹುದು , ಅಥವಾ ನೂರಕ್ಕೆ ನೂರು ಅಂಕಗಳು ಬರಬಹುದು. ಆದರೆ ಬದುಕಿಗೆ ಅಂಕಗಳೇ ಮುಖ್ಯ ಅಲ್ಲ. ನಮಗೆ ನಿಮ್ಮ ಭವಿಷ್ಯ, ಬದುಕು ಬಹಳ ಮುಖ್ಯ. ಇಂದು ಸೋತವರು, ನಾಳೆ ಗೆಲ್ಲುವರು. ಒಂದು ವೇಳೆ ಪರೀಕ್ಷೆಯಲ್ಲಿ ಅನ್ನುತೀರ್ಣರಾದೆವು ಎಂದು ಇಟ್ಟುಕೊಳ್ಳೋಣ ಆಗುವುದಿಲ್ಲ.... ಆದರೂ ಹೆದರಬಾರದು, ಬದುಕನ್ನು ಸಂಭ್ರಮಿಸಬೇಕು. ನಾಳೆಯೂ ಪರೀಕ್ಷೆ ಇದೆ ಅದರಲ್ಲಿ ನಾನು ಸಾಧನೆ ಮಾಡಿ ತೋರಿಸುತ್ತೇನೆ" ಎಂದು ದೃಢ ಸಂಕಲ್ಪ ಮಾಡಿ. 
     ಈಗ ಮೂರು R,R,R ಮತ್ತು W ಇವುಗಳ ಬಗ್ಗೆ ತಿಳಿಯೋಣ. : ಮೊದಲನೆಯ R ಎಂದರೆ ರೀಡಿಂಗ್ , ಓದೋದು ಎರಡನೆಯ R ಅಂದರೆ ರಿಮೆಂಬರ್, ನೆನಪಿಟ್ಟುಕೊಳ್ಳುವುದು. ಮೂರನೆಯ R ಅಂದರೆ ರಿಕಾಲ್, ಸ್ಮರಿಸುವುದು ಇನ್ನು, W ಅಂದರೆ - ರೈಟಿಂಗ್ ಬರೆಯುವುದು. ಇಲ್ಲಿಗೆ ಪರೀಕ್ಷೆಯ ತಯಾರಿಯ ಮತ್ತು ಪರೀಕ್ಷೆಗೆ ಬರೆಯುವ ಕೆಲಸ ಮುಗಿಯುತ್ತದೆ.
    ಇನ್ನು ಮುಂದಿನ ನಿಮ್ಮ ಪಲಿತಾಂಶ, ನಿಮಗೆ ಅನುಕೂಲಕರವಾಗಿಯೇ ಇರುವುದೆಂಬ ಆತ್ಮವಿಶ್ವಾಸವಿರಲಿ. ದೃಢವಾದ ನಂಬಿಕೆ ಇರಲಿ ಪರೀಕ್ಷೆಯಲ್ಲಿ ಉತ್ತರೋತ್ತರ, ಜಯ ಲಭಿಸಲಿ.     
     ಪರೀಕ್ಷೆಗೆ ತಯಾರಿ: ಸಮಯಕ್ಕೆ ಸರಿಯಾಗಿ ಹೊರಡುವುದು. ಅಂದಿನ ವಿಷಯ, ಬೇಕಾದ ಸರಿಯಾಗಿ ಬರೆಯುವ ಪೆನ್ನು, ಪೆನ್ಸಿಲು, ಸ್ಕೇಲು, ಕಟ್ಟರ್ , ರಬ್ಬರ್.. ಎಲ್ಲಕ್ಕಿಂತಲೂ ಮೊದಲು ಹಾಲ್ ಟಿಕೆಟ್, ಪ್ರವೇಶ ಪತ್ರ ಬಿಟ್ಟು ಹೋಗಬೇಡಿ... ನಿಮ್ಮ ಮೇಲೆ ನಿಮಗೆ ತುಂಬು ಭರವಸೆ ಇರಲಿ. ನಿಮಗೆ ಶುಭವಾಗಲಿ.
............................ ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 90719 64152
*******************************************

Ads on article

Advertise in articles 1

advertising articles 2

Advertise under the article