-->
ಜೀವನ ಸಂಭ್ರಮ : ಸಂಚಿಕೆ - 74

ಜೀವನ ಸಂಭ್ರಮ : ಸಂಚಿಕೆ - 74

ಜೀವನ ಸಂಭ್ರಮ : ಸಂಚಿಕೆ - 74
                   
             ಮಕ್ಕಳೇ, ಈ ಕಥೆಯನ್ನು ಓದಿ. ಒಮ್ಮೆ ಭಗವಾನ್ ಬುದ್ಧ ಒಂದು ರಾಜ್ಯಕ್ಕೆ ಬಂದಿದ್ದನು. ಆತನ ಪ್ರವಚನ ಕೇಳಲು ಜನ ಧಾವಿಸುತ್ತಿದ್ದರು. ಆತನ ಪ್ರವಚನ ಮಧುರ, ಪ್ರಶಾಂತ. ಇದನ್ನು ಕೇಳಿ ಆ ರಾಜ್ಯದ ನರ್ತಕಿಯೂ ಪ್ರವಚನ ಕೇಳಲು ಹೋದಳು. ಪ್ರವಚನ ಮುಗಿಯಿತು. ಜನರೆಲ್ಲ ತಮ್ಮ-ತಮ್ಮ ಮನೆಗೆ ಹಿಂತಿರುಗಿದರು. ಈ ನರ್ತಕಿ ಕುಳಿತ ಜಾಗ ಬಿಟ್ಟು ಕದನಲಿಲ್ಲ. ಆಕೆಯೇ ಬುದ್ಧನ ಬಳಿ ಹೋಗಿ ನಿವೇದಿಸಿಕೊಂಡಳು. ಭಗವಾನ್ ಬುದ್ಧರೆ "ನಾನು ಈ ರಾಜ್ಯದ ನರ್ತಕಿ, ನನಗೀಗ 35 ವರ್ಷ, ನನ್ನ ಸೌಂದರ್ಯ ಮತ್ತು ನನ್ನ ಧ್ವನಿಯಿಂದ ಈ ರಾಜ್ಯದ ಅನೇಕ ತರುಣರ ಮನಸ್ಸನ್ನು ಹೊಲಸು ಮಾಡಿದ್ದೇನೆ. ಅದು ನನ್ನನ್ನು ಕಾಡುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ" ಎಂದಳು.
ಬುದ್ಧ ತನ್ನ ಸೇವಕನನ್ನು ಕರೆದು, ಕಿವಿಯಲ್ಲಿ ಸೇವಕನಿಗೆ ಹೇಳಿದನು, "ಒಂದು ಗಡಿಗೆಯಲ್ಲಿ ಕೆಸರು ಮಿಶ್ರಿತ ನೀರನ್ನು ತೆಗೆದುಕೊಂಡು ಬಾ" ಎಂದು. ಸೇವಕ ಗಡಿಗೆಯಲ್ಲಿ ಕೇಸರು ಮಿಶ್ರಿತ ನೀರನ್ನು ತಂದನು, ಬುದ್ಧನ ಮುಂದಿಟ್ಟನು. ಆ ನರ್ತಕಿಯನ್ನು ಕರೆದು, "ಅದೇನು ನೋಡು" ಎಂದನು. ನರ್ತಕಿ "ಅದು ಕೆಸರಿನಿಂದ ಕೂಡಿದ ನೀರು" ಎಂದಳು. ಸ್ವಲ್ಪ ಸಮಯಾವಕಾಶ ಬಿಟ್ಟು ಪುನಹ ಈಗ ನೀರು ನೋಡು ಎಂದರು ಬುದ್ದ. ನೀರು ತಿಳಿಯಾಗಿತ್ತು. ಈಗ ನೀರು ತಿಳಿಯಾಗಿದೆ ಎಂದಳು ನರ್ತಕಿ. ಆಗ ಬುದ್ಧ ಹೇಳಿದ, "ನೋಡು ನಿನ್ನ ಮನಸ್ಸು ಕೆಸರಿನಂತೆ ಹೊಲಸಾಗಿದೆ. ಅದಕ್ಕೆ ಕೆಲವು ಕಾಲ ಅಲುಗಿಸದೆ ಹಾಗೆ ಇಟ್ಟರೆ, ಹೇಗೆ ನೀರು ತಿಳಿಯಾಗುತ್ತದೆ, ಹಾಗೆ ನೀನು ನಿನ್ನ ಹಿಂದಿನ ವಯಸ್ಸಿನ ಘಟನೆಯನ್ನು ನೆನೆಯದೇ ಹಾಗೇ ಬಿಟ್ಟರೆ, ನೀರು ತಿಳಿಯಾದಂತೆ ಮನಸ್ಸು ಸ್ವಚ್ಛವಾಗುತ್ತದೆ. ಹಾಗಾಗಿ ಹಿಂದಿನದನ್ನು ಮರೆತು ಬಿಡು. ನಾಳೆ ಬಗ್ಗೆ ಚಿಂತೆ ಬೇಡ. ನಾಳೆಯ ಬಗ್ಗೆ ಚಿಂತಿಸಿದರೆ ಭಯ ದುಃಖವಾಗುತ್ತದೆ. ಆದ್ದರಿಂದ ವರ್ತಮಾನದಲ್ಲಿ ಬದುಕು. ಈ ಕ್ಷಣ ನಿನ್ನದು. ಈ ಕ್ಷಣದಲ್ಲಿ ಸುಂದರ ಕೆಲಸ ಮಾಡುತ್ತಾ ಹೋಗು, ಜೀವನ ಮಧುರವಾಗುತ್ತದೆ, ಎಂದರು. 
      ಈ ಕ್ಷಣ ನಮ್ಮದು. ಈ ಕ್ಷಣವನ್ನು ಅನುಭವಿಸಬೇಕು. ಅನುಭವಿಸುವುದು ಎಂದರೆ ಸಂತೋಷ ಪಡುವುದು. ಸಂತೋಷದ ಅನುಭವವಾಗಬೇಕಾದರೆ ಪ್ರೇಮ ಭಾವ ಅತಿಮುಖ್ಯ. ಪ್ರೇಮ ಭಾವ ಇಲ್ಲದಿದ್ದರೆ ಸಂತೋಷ ಪಡಲು ಸಾಧ್ಯವಿಲ್ಲ. ನಮ್ಮಲ್ಲಿ ಕೆಲವರು ಏಕಾಗ್ರತೆ ಇಲ್ಲ ಎನ್ನುತ್ತಾರೆ. ಯಾವ ವಸ್ತುವಿನ ಬಗ್ಗೆ ಪ್ರೀತಿ ಇಲ್ಲವೋ ಆ ವಸ್ತುವಿನ ಮೇಲೆ ಏಕಾಗ್ರತೆ ಸಾಧ್ಯವಿಲ್ಲ. ಯಾವ ವಸ್ತುವಿನ ಬಗ್ಗೆ ಪ್ರೀತಿ ಇದೆಯೋ ಆಗ ತನ್ನಿಂತಾನೇ ಏಕಾಗ್ರತೆ ಮೂಡುತ್ತದೆ.
      ಜ್ಞಾನ ಇರೋದು ಬದುಕು ಕಟ್ಟಿಕೊಳ್ಳಲು ಮತ್ತು ಜಗತ್ತನ್ನು ಅನುಭವಿಸಲು. ಜ್ಞಾನ ಬೇಕಾಗಿದ್ದರೆ ಏಕಾಗ್ರತೆ ಅಗತ್ಯ. ಏಕಾಗ್ರತೆಗೆ ಪ್ರೀತಿ ಅಗತ್ಯ. ಜ್ಞಾನವೇ ಇಲ್ಲದಿದ್ದರೆ ಅನುಭವ ಇಲ್ಲ. ವಸ್ತು ಇಲ್ಲದಿದ್ದರೆ ಅನುಭವವಿಲ್ಲ. ಜಗತ್ತನ್ನು ಅನುಭವಿಸಲು ಜ್ಞಾನ ಅಗತ್ಯ. ಸ್ವರೂಪ ತಿಳಿದು ಅನುಭವಿಸಬೇಕಾಗುತ್ತದೆ. ಜಗತ್ತಿನಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಈ ಜಗತ್ತು ಪ್ರತಿಕ್ಷಣ ಬದಲಾಗುತ್ತದೆ. ಹಾಗಾಗಿ ಪ್ರತಿದಿನ ಹೊಸತು ಹೊಸತು ಅನುಭವಿಸಲು ನಿಸರ್ಗದಲ್ಲಿ ಸಿಗುತ್ತದೆ. ಪ್ರತಿದಿನ ಸೂರ್ಯೋದಯ, ಸೂರ್ಯಾಸ್ತ, ಹೊಸ ಹೂವು, ಹಣ್ಣು ಮತ್ತು ಚಿಗುರು ಹೀಗೆ ಪ್ರತಿದಿನ ಹೊಸದು ಹೊಸದು ದೊರಕುತ್ತದೆ.
      ಒಂದೇ ವಸ್ತುವನ್ನು ಬೇರೆ ಬೇರೆಯವರು ನೋಡಿದಾಗ, ಅನುಭವ ಬೇರೆ ಬೇರೆ ಇರುತ್ತದೆ. ಉದಾಹರಣೆಗೆ ಒಂದು ಹೂವಿದೆ ಎಂದಿಟ್ಟುಕೊಳ್ಳೋಣ. ಒಬ್ಬ ಆ ಹೂವನ್ನು ಹಣದ ಲಾಭದ ದೃಷ್ಟಿಯಲ್ಲಿ ನೋಡುತ್ತಾನೆ. ವಿಜ್ಞಾನಿ ಅದರ ಪ್ರತಿಯೊಂದು ರಚನೆ ಮತ್ತು ಒಳ ರಚನೆ ತಿಳಿಯುತ್ತಾನೆ. ಒಬ್ಬ ಅದರ ಮಕರಂದ ಸವಿಯುತ್ತ ಇರುತ್ತಾನೆ. ಮತ್ತೊಬ್ಬ ಅದರ ಆಕಾರ ನೋಡುತ್ತಾನೆ. ಹೀಗೆ ವಸ್ತುವು ಒಂದೇ ಇದ್ದರು, ಅವರವರ ಅನುಭವ ಬೇರೆ ಬೇರೆಯಾಗಿರುತ್ತದೆ. ವಸ್ತು ಒಂದೇ ಆದರೂ ನೋಡುವ ಮನಸ್ಸು ಬೇರೆ ಬೇರೆ. 
       ಕೆಲವರು ಹೇಳುತ್ತಾರೆ ಜಗತ್ತು ಕೆಟ್ಟಿದೆ ಎಂದು. ಜಗತ್ತು ಕೆಟ್ಟಿಲ್ಲ. ನೋಡುವ ಮನಸ್ಸೇ ಕೆಟ್ಟಿರುವುದು. ಜಗತ್ತು ಕನ್ನಡಿಯಂತೆ, ನಗುತ್ತಾ ನೋಡಿದರೆ ನಗು. ಅಳುತ್ತಾ ನೋಡಿದರೆ ಅಳು. ಇಲ್ಲಿ ವಸ್ತುವನ್ನು ಹೇಗೆ ನೋಡಿದಿಯಾ ಅನ್ನೋದು ಮುಖ್ಯ. ಇದ್ದಂತೆ ನೋಡಿದರೆ ತತ್ವಜ್ಞಾನಿ. ಸುಂದರ ಅಂತ ನೋಡಿದರೆ ಕವಿ. ನಾವು ಯಾವುದೇ ವಸ್ತುವಿನ ಜ್ಞಾನ ಮಾಡಿಕೊಳ್ಳಬೇಕಿದ್ದರೆ, ಅದನ್ನು ಕೂಲಂಕುಶವಾಗಿ ನೋಡಬೇಕು. ಅದರಲ್ಲಿ ಮನಸ್ಸು ತಲ್ಲಿನವಾಗಬೇಕು, ಬೆರೆಯಬೇಕು, ಮಗ್ನವಾಗಬೇಕು, ನಾವೇ ಆ ವಸ್ತುವಾಗಬೇಕು. ಆ ಚಿತ್ರ ನಮ್ಮ ಕಣ್ತುಂಬಬೇಕು. ಮನಸ್ಸಿನಲ್ಲಿ ಆ ಚಿತ್ರ ಮೂಡಬೇಕು. ಆಗ ವಸ್ತುವಿನ ಜ್ಞಾನವಾಗಿದೆ ಎಂದರ್ಥ. ಅದೇ ರೀತಿ ಯಾವುದೇ ಗಾಯನ, ಸಂಗೀತ, ರಾಗ ಕೇಳಿದಾಗ ಅದರಲ್ಲಿ ತಲ್ಲೀನರಾಗಬೇಕು. ವಾಸನೆ, ರುಚಿ, ಸ್ಪರ್ಶ ಯಾವುದಾದರೂ ಸರಿ ಅದರಲ್ಲಿ ಮಗ್ನರಾಗಬೇಕು. ಆ ಸುಂದರ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಆಗ ನಮಗೆ ಅರಿವಿಲ್ಲದಂತೆ ಸಂತೋಷವಾಗುತ್ತದೆ. ಹೀಗೆ ಪ್ರತಿಕ್ಷಣ ಅನುಭವಿಸುವುದು ಕಲಿತರೆ, ಜೀವನ ಸ್ವರ್ಗ. 
      ಮನಸ್ಸಿಗೆ ಒಳ್ಳೆಯ ಚಿತ್ರ ಮೂಡಿದರೆ, ಅದು ಸ್ವರ್ಗ, ಇಲ್ಲದಿದ್ದರೆ ನರಕ. ಹೀಗೆ ಸುಂದರ ಅನುಭವ ಹೆಚ್ಚಾದಂತೆ ಜೀವನ ಮಧುರವಾಗುತ್ತದೆ. ಪ್ರತಿ ಕ್ಷಣ ಈ ರೀತಿ ಜಗತ್ತನ್ನು ಅನುಭವಿಸುವುದೇ ಸುಂದರ ಜೀವನ. ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article