-->
ಫೆಬ್ರವರಿ - 28 : ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರವರಿ - 28 : ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರವರಿ - 28 : ರಾಷ್ಟ್ರೀಯ ವಿಜ್ಞಾನ ದಿನ 
ವಿಶೇಷ ಲೇಖನ : ವಿ ಶ್ರೀ ರಾಮಮೂರ್ತಿ
             
          ಜಗಲಿಯ ಎಲ್ಲರಿಗೂ ವಿಜ್ಞಾನ ದಿನಾಚರಣೆಯ ಶುಭಾಶಯಗಳು. ಮಕ್ಕಳೇ, ಪ್ರತಿ ವರ್ಷ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಯಾಕೆ ಈ ದಿನವನ್ನು ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ? ಏನಿದರ ಮಹತ್ವ? ಈ ಕುರಿತಾಗಿ ಕೆಲವೊಂದಷ್ಟು ವಿಚಾರಗಳನ್ನು ತಿಳಿಯೋಣ.
     ಸರ್. ಸಿ.ವಿ. ರಾಮನ್ ರವರು ಭಾರತದ ಶ್ರೇಷ್ಟ ವಿಜ್ಞಾನಿಗಳಲ್ಲಿ ಒಬ್ಬರು. ಇವರಿಗೆ 1930 ರಲ್ಲಿ "ರಾಮನ್ ಪರಿಣಾಮ" ವನ್ನು ಕಂಡು ಹಿಡಿದದ್ದಕ್ಕಾಗಿ ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದು ಭಾರತಕ್ಕೆ ಲಭಿಸಿದ ಮೊದಲ ನೋಬೆಲ್ ಪ್ರಶಸ್ತಿ ಕೂಡ ಹೌದು. ಇದರ ಸವಿನೆನಪಿಗಾಗಿ ಭಾರತ ಸರ್ಕಾರವು ಪ್ರತಿ ವರ್ಷ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತದೆ.                 ಸಿ.ವಿ.ರಾಮನ್ ರವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ಇವರು 7 ನವೆಂಬರ್ 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಚಂದ್ರಶೇಖರ ಐಯ್ಯರ್ ಮತ್ತು ಪಾರ್ವತಿ ಅಮ್ಮಳ್ ರವರ ಪುತ್ರನಾಗಿ ಜನಿಸಿದರು. ಇವರ ತಂದೆಯವರು ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿದ್ದರು. ಸಿ.ವಿ. ರಾಮನ್ ರವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಕೊಲ್ಕತ್ತದಲ್ಲಿ ಆಕೌಂಟೆಂಟ್ ಜನರಲ್ ಆಗಿ ಸರ್ಕಾರಿ ಉದ್ಯೋಗಕ್ಕೆ ಸೇರಿದರು. ಅವರಿಗೆ ವಿಜ್ಞಾನದಲ್ಲಿರುವ ಆಸಕ್ತಿಯ ಕಾರಣದಿಂದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಬೆಂಗಳೂರು ಇಲ್ಲಿ ಸೇರಿ ಕೊನೆ ತನಕ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
     ಭಾರತದ ನ್ಯಾಶನಲ್ ಕೌನ್ಸಿಲ್ ಫಾರ್ ಸೈನ್ಸ್ ಎಂಡ್ ಟೆಕ್ನೋಲಜಿ ಕಮ್ಯುನಿಕೇಶನ್ ಇವರು ನೋಬೆಲ್ ಪುರಸ್ಕಾರಕ್ಕೆ ಕಾರಣವಾದ ರಾಮನ್ ಪರಿಣಾಮದ ಆವಿಷ್ಕಾರದ ಸವಿನೆನಪಿಗಾಗಿ 1986ರಲ್ಲಿ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲು ಕೇಂದ್ರ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿತು. ಸರಕಾರವು 1987ರಲ್ಲಿ ಈ ಬೇಡಿಕೆಯನ್ನು ಪುರಸ್ಕರಿಸಿ ಫೆಬ್ರವರಿ 28ರ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲು ನಿರ್ಧರಿಸಿತು. ನಂತರ ಪ್ರತಿ ವರ್ಷ ಫೆಬ್ರವರಿ 28ರಂದು ಮಹಾನ್ ವಿಜ್ಞಾನಿಯಾದ ಸಿ.ವಿ. ರಾಮನ್ ರವರ "ರಾಮನ್ ಪರಿಣಾಮ" ಸಂಶೋಧನೆಗೋಸ್ಕರ ಹಾಗೂ ಅವರ ಸವಿನೆನಪಿಗೋಸ್ಕರ ಈ ದಿನವನ್ನು ರಾಷ್ಟ್ರದಾದ್ಯಂತ "ರಾಷ್ಟ್ರೀಯ ವಿಜ್ಞಾನ ದಿನ" ವಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳನ್ನು ನಡೆಸಿ ಎಲ್ಲರಲ್ಲೂ ವೈಜ್ಞಾನಿಕ ಮನೋಭಾವ ಮೂಡಿಸುವುದು ಮುಖ್ಯ ಉದ್ದೇಶ. ಪ್ರತಿ ವರ್ಷ ವಿಜ್ಞಾನ ದಿನಾಚರಣೆಯು ಹೊಸ ವಿಷಯಗಳನ್ನು ಹೊಂದಿರುತ್ತದೆ. 2023ರ ವಿಜ್ಞಾನ ದಿನಾಚರಣೆಯ ಪ್ರಮುಖ ವಿಷಯ - ಜಾಗತಿಕ ಹಿತಕ್ಕಾಗಿ ಜಾಗತಿಕ ವಿಜ್ಞಾನ (Global Science for Global Wellbeings) ಎಂಬುದಾಗಿದೆ.
      ನಮ್ಮ ನಿತ್ಯ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿ ಬೆಳೆದಿದೆ. ನಾವು ಬಳಸುವ ವಸ್ತುಗಳಿಂದ ಹಿಡಿದು ನಾವು ಮಾಡುವ ಕೆಲಸದಲ್ಲೂ ವೈಜ್ಞಾನಿಕತೆ ಇದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ನಮ್ಮಲ್ಲರ ಅದರಲ್ಲೂ ಶಿಕ್ಷಕರ ಜವಾಬ್ದಾರಿಯಾಗಿದೆ. ಎಲ್ಲರೂ ವಿಜ್ಞಾನವೆಂಬ ವಿಶೇಷ ಜ್ಞಾನವನ್ನು ಹೊಂದಿ ನಮ್ಮ ದೇಶದ ಪ್ರಗತಿಗೆ ಕೈ ಜೋಡಿಸೋಣ. "ಜೈ ವಿಜ್ಞಾನ್ ".
........................................ ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
********************************************

Ads on article

Advertise in articles 1

advertising articles 2

Advertise under the article