-->
ಹಕ್ಕಿ ಕಥೆ : ಸಂಚಿಕೆ - 86

ಹಕ್ಕಿ ಕಥೆ : ಸಂಚಿಕೆ - 86

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
                              
              ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಪ್ರತಿದಿನ ಮಧ್ಯಾಹ್ನ ಊಟ ಆದ ನಂತರ ನನ್ನ ಕುರ್ಚಿಯಲ್ಲಿ ಕುಳಿತು ಏನನ್ನಾದರೂ ಓದುವುದು ನನ್ನ ಅಭ್ಯಾಸ. ಹೀಗೆ ಓದುತ್ತಾ ಹೊರಗಡೆ ಕಿಟಕಿಯ ಆ ಕಡೆ ಏನಾದರೂ ಹಕ್ಕಿ ಓಡಾಡಿದ ಹಾಗೆ ಕಂಡರೆ ಆ ಕಡೆ ನನ್ನ ಗಮನ ಹೋಗುತ್ತಿತ್ತು. ನನಗೆ ಮಧ್ಯಾಹ್ನದ ಮೊದಲನೆಯ ಅವಧಿ ಬಿಡುವು ಇದ್ದುದರಿಂದ ಇನ್ನೂ ನಾನು ಪುಸ್ತಕ ಓದುತ್ತಾ ಕುಳಿತಿದ್ದೆ. ತರಗತಿಗಳಲ್ಲಿ ಉಳಿದ ಶಿಕ್ಷಕರು ಮಕ್ಕಳಿಗೆ ಏನೋ ಬರೆಯಲು ಕೊಟ್ಟಿದ್ದರಿಂದ ಎಲ್ಲ ತರಗತಿಗಳೂ ನಿಶಬ್ದವಾಗಿದ್ದವು. ನಾನೂ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತಿದ್ದೆ.
        ಅಷ್ಟರಲ್ಲಿ ಮೈನಾ ಗಾತ್ರದ ಹಕ್ಕಿಯೊಂದು ನಿಧಾನವಾಗಿ ಬಹಳ ಜಾಗರೂಕತೆಯಿಂದ ಕುಪ್ಪಳಿಸುತ್ತಾ ಓಡಾಡುವುದು ಕಾಣಿಸಿತು. ನೋಡಲಿಕ್ಕೆ ಮೈನಾ ಹಕ್ಕಿಯಂತೆಯೇ ಇದ್ದರೂ ಏನೋ ವ್ಯತ್ಯಾಸ ಇತ್ತು. ಕಣ್ಣಿನ ಕೆಳಗೆ ಮೈನಾ ಅಥವಾ ಗೊರವಂಕ ಹಕ್ಕಿಗೆ ಇರುವಂತೆ ಹಳದಿ ಬಣ್ಣದ ಪಟ್ಟಿ ಇರಲಿಲ್ಲ. ಗೊರವಂಕ ಸಾಮಾನ್ಯವಾಗಿ ಜೋಡಿಯಾಗಿ ಓಡಾಡುತ್ತದೆ, ಮಾತ್ರವಲ್ಲ ಅವುಗಳು ಸುಮ್ಮನೆ ಮೌನವಾಗಿ ಓಡಾಡುವ ಹಕ್ಕಿಗಳಲ್ಲ. ಕಿರುಚಾಡುತ್ತಾ ಸದ್ದುಮಾಡುತ್ತಾ ಗಲಾಟೆ ಎಬ್ಬಿಸುತ್ತವೆ. ಈ ಹಕ್ಕಿ ಮೌನವಾಗಿ ಎಲ್ಲೋ ಹೊಸ ಊರಿಗೆ ಬಂದವರಂತೆ ಆಕಡೆ ಈಕಡೆ ನೋಡುತ್ತಾ ಓಡಾಡುತ್ತಿತ್ತು. ಕಣ್ಣಿನ ಸುತ್ತಲೂ ಹಳದಿ ಬಣ್ಣದ ಕಾಡಿಗೆ ಹಚ್ಚಿದಂತೆ ಕಾಣುತ್ತಿದ್ದ ಹಕ್ಕಿಯ ದೇಹ ಬೂದು ಮಿಶ್ರಿತ ಕಂದುಬಣ್ಣ ಇತ್ತು. ತಲೆ ಮತ್ತು ರೆಕ್ಕೆಯ ಭಾಗ ಸ್ವಲ್ಪ ಹೆಚ್ಚೇ ಕಪ್ಪು ಬಣ್ಣ. ಹಾರಿದರೆ ಮೈನಾ ಹಕ್ಕಿಗೆ ಇರುವಂತೆ ರೆಕ್ಕೆಯ ಕೆಳಗೆ ಬಿಳೀ ಬಣ್ಣ ಇರಲಿಲ್ಲ. ಅರೆ ಇದ್ಯಾವ ಹಕ್ಕಿ ಅಂತ ಸಂಶಯ ಆಗಿ ಇದರದ್ದೊಂದು ಫೋಟೋ ತೆಗೆಯೋಣ ಅಂತ ನನ್ನ ಬ್ಯಾಗಿನಿಂದ ಕ್ಯಾಮರಾ ತೆಗೆದು ನೋಡಿದರೆ ಹಕ್ಕಿ ಹಾರಿ ಹೋಗಿದೆ. ಛೇ ಅಂದುಕೊಂಡು ಮುಂದಿನ ಅವಕಾಶಕ್ಕಾಗಿ ಕಾದೆ. ಮರುದಿನ ಹಕ್ಕಿ ಬಂದರೆ ಫೋಟೋ ತೆಗೆಯಲೇ ಬೇಕು ಎಂದು ಕ್ಯಾಮರಾ ತಯಾರು ಮಾಡಿ ಇಟ್ಟುಕೊಂಡೇ ಕುಳಿತೆ. ನನ್ನ ಅದೃಷ್ಟ ಎಂಬಂತೆ ಮರುದಿನವೂ ಅದೇ ಸಮಯಕ್ಕೆ ಹಕ್ಕಿ ಪ್ರತ್ಯಕ್ಷವಾಗಿತ್ತು. ಮಕ್ಕಳು ತಟ್ಟೆ ತೊಳೆಯುವಲ್ಲಿ ಬಿದ್ದ ಅನ್ನವನ್ನು ಆರಿಸುತ್ತಾ ತಿನ್ನತೊಡಗಿತು. ಬೇರೆ ಹಕ್ಕಿಗಳು ಆಗಲೇ ತಿಂದು ಹೋದದ್ದರಿಂದ ಆರಾಮವಾಗಿ ನಿಧಾನವಾಗಿ ತಿನ್ನುತ್ತಿತ್ತು. ಬಹಳ ನಿದಾನವಾಗಿ ಕ್ಯಾಮರಾವನ್ನು ಅದರತ್ತ ಹಿಡಿದು ಸ್ವಲ್ಪವೂ ಅಲುಗಾಡದೇ ಹಕ್ಕಿಯನ್ನು ದಿಟ್ಟಿಸಿ ನೋಡದೇ ಒಂದಷ್ಟು ಫೋಟೋ ತೆಗೆದುಕೊಂಡೆ.
           ಚಿತ್ರಗಳನ್ನು ಪಕ್ಷಿವೀಕ್ಷಕ ಬಳಗದಲ್ಲಿ ಹಂಚಿಕೊಂಡೆ. ಒಂದಿಬ್ಬರು ಪಕ್ಷಿತಜ್ಞರು ಇದನ್ನು ಮೈನಾ ಅಲ್ಲ Black Bird ಎಂದು ಗುರುತಿಸಿದರು. ಇದು ಚಳಿಗಾಲದಲ್ಲಿ ಪಶ್ಚಿಮ ಘಟ್ಟದ ಶೋಲಾ ಕಾಡುಗಳ ಕಡೆಗೆ ವಲಸೆ ಬರುತ್ತವಂತೆ ಎಂಬ ಮಾಹಿತಿ ಹೇಳಿದರು. ನಮ್ಮ ಪಕ್ಷಿವೀಕ್ಷಕರ ಬಳಗದಲ್ಲಿ ಹಲವರು ತಮ್ಮ ಆಸುಪಾಸಿನಲ್ಲಿ ಈ ಹಕ್ಕಿ ಕಂಡಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪರೂಪದ ಹಕ್ಕಿಯೊಂದನ್ನು ನೋಡಿ ದಾಖಲಿಸುವ ಅವಕಾಶ ಸಿಕ್ಕಿದ್ದು ನನಗೂ ಸಂತೋಷ ಕೊಟ್ಟಿತು. 
ಕನ್ನಡ ಹೆಸರು: ಕಪ್ಪು ಹಕ್ಕಿ
ಇಂಗ್ಲೀಷ್ ಹೆಸರು: Indian Blackbird
ವೈಜ್ಞಾನಿಕ ಹೆಸರು: Turdus simillimus
ಚಿತ್ರ ಕೃಪೆ: ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article