ಹಕ್ಕಿ ಕಥೆ : ಸಂಚಿಕೆ - 85
Tuesday, February 7, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಇದು ಹಲವು ವರ್ಷಗಳ ಹಿಂದಿನ ಕಥೆ. ನನಗಾಗ ಹಕ್ಕಿ ವೀಕ್ಷಣೆಯ ಆಸಕ್ತಿ ಪ್ರಾರಂಭವಾಗಿ ಒಂದೆರಡು ವರ್ಷ ಆಗಿತ್ತಷ್ಟೇ. ಹಕ್ಕಿ ಫೋಟೋ ತೆಗೆಯಲು ಹೊಸ ಕ್ಯಾಮರಾ ಮತ್ತು ಅದಕ್ಕೊಂದು ಒಳ್ಳೆಯ ಲೆನ್ಸ್ ಖರೀದಿಸಿಕೊಂಡಿದ್ದೆ. ಎಲ್ಲಿ ಹಕ್ಕಿ ಕಂಡರೂ ಫೋಟೋ ತೆಗೆಯಬೇಕು ಎಂದು ಸದಾ ಕ್ಯಾಮರಾವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡೇ ತಿರುಗಾಡುತ್ತಿದ್ದೆ. ಹೀಗಿರುವಾಗ ಮೈಸೂರಿನ ಮಿತ್ರ ಡಾ. ಅಭಿಜಿತ್ ಒಂದು ದಿನ ಫೋನ್ ಮಾಡಿದರು. ಅರವಿಂದ್ ಫೆಬ್ರವರಿ ತಿಂಗಳು ವಲಸೆ ಹಕ್ಕಿಗಳ ವೀಕ್ಷಣೆಗೆ ಒಳ್ಳೆಯ ಸಮಯ. ಹೇಗೂ ಹೊಸ ಲೆನ್ಸ್ ಖರೀದಿ ಮಾಡಿದ್ದೀಯ, ಮೈಸೂರಿಗೆ ಬಂದುಬಿಡು. ಭಾನುವಾರ ನನಗೂ ಕ್ಲಿನಿಕ್ ಇರುವುದಿಲ್ಲ. ಒಂದು ದಿನ ಪೂರ್ತಿ ನಮ್ಮ ಮನೆಯ ತೋಟದ ಆಸುಪಾಸಿನಲ್ಲಿ ಸುತ್ತಮುತ್ತಲಿನ ಕೆರೆಗಳಲ್ಲಿ ಪಕ್ಷಿವೀಕ್ಷಣೆ ಮಾಡೋಣ ಎಂದು ಕರೆದರು. ಸಿಕ್ಕಿದ ಅವಕಾಶ ಬಿಡುವುದುಂಟೇ ಎಂದು ಹೊರಟೆ. ಬೆಳಗ್ಗೆ ಆರೂವರೆ ಏಳು ಗಂಟೆಗೆ ಉಪಾಹಾರ ಮುಗಿಸಿ ಡಾಕ್ಟ್ರ ಬೈಕ್ ಹತ್ತಿ ಹೊರಟೆವು. ಅಲ್ಲೇ ಪಕ್ಕದಲ್ಲಿರುವ ಕೆರೆಯ ಕಡೆಗೆ ಹೋದೆವು. ಕೆರೆಯ ಸುತ್ತಮುತ್ತ ಪಕ್ಷಿಗಳನ್ನು ವೀಕ್ಷಿಸುತ್ತಿರುವಾಗ ಗಿಡುಗನ ಹಾಗೆ ಕಾಣುವ ಹಕ್ಕಿಯೊಂದು ಹಾರುತ್ತ ಬರುವುದು ಕಾಣಿಸಿತು. ಕೆರೆಯ ಹತ್ತಿರ ನೆಲದಲ್ಲಿ ಹಲವು ಬಗೆಯ ಹಕ್ಕಿಗಳು ಆಹಾರ ಹುಡುಕುತ್ತಿದ್ದವು. ಹಾರುತ್ತ ಬಂದ ಈ ಗಿಡುಗನ ಗಾತ್ರದ ಹಕ್ಕಿ ನೆಲಮಟ್ಟಕ್ಕೆ ಹತ್ತಿರವಾಗುತ್ತಿದ್ದಂತೆ ನೆಲದ ಮೇಲಿನ ಹಕ್ಕಿಗಳೆಲ್ಲ ಒಮ್ಮೆಲೆ ಹಾರಿ ಅಲ್ಲಿಂದ ಜಾಗ ಖಾಲಿ ಮಾಡಿದವು. ಮಾಮೂಲಿ ಗಿಡುಗನಿಗೆ ಇತರೆ ಹಕ್ಕಿಗಳು ಇಷ್ಟೊಂದು ಹೆದರುವುದನ್ನು ನಾನೆಂದೂ ನೋಡಿರಲಿಲ್ಲ. ಹಳೆಯ ಹಿಂದಿ ಸಿನೆಮಾಗಳಲ್ಲಿ ಯಾರೋ ರೌಡಿ ಬಂದಾಗ ಎಲ್ಲರೂ ಹೆದರಿಕೆಯಿಂದ ಪಲಾಯನ ಮಾಡುವಂತೆ ಎಲ್ಲ ಸಣ್ಣ ಹಕ್ಕಿಗಳು ಒಮ್ಮೆಲೇ ಅಲ್ಲಿಂದ ಜಾಗ ಖಾಲಿ ಮಾಡಿದ್ದವು.
ಹಕ್ಕಿ ಅತ್ಯಂತ ಸಮೀಪ ಇದ್ದರೂ ಸೂರ್ಯನ ಬೆಳಕಿಗೆ ಎದುರಾಗಿ ಇದ್ದುದರಿಂದ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಅಲ್ಲಿಂದ ಇನ್ನೊಂದು ಕಡೆ ಹೋಗುವಾಗ ಪಕ್ಕದ ಹೊಲಗಳ ನಡುವೆ ಮತ್ತೆ ಅದೇ ಗಿಡುಗ ಕಾಣಿಸಿತು. ನಮ್ಮ ಅದೃಷ್ಟವೋ ಎಂಬಂತೆ ರಾಗಿ ಹೊಲಗಳ ಮಧ್ಯೆ ತಗ್ಗಿನಲ್ಲೇ ಹಾರಾಟ ಮಾಡುತ್ತಿತ್ತು. ಹಾರುತ್ತಾ ಬಂದು ನಮಗೆ ಕಾಣುವಂತೆ ಹುಲ್ಲಿನ ನಡುವೆ ನೆಲದಲ್ಲೇ ಬಂದು ಕುಳಿತಿತು. ನಿಧಾನವಾಗಿ ಅದರ ಒಂದೆರಡು ಚಿತ್ರ ತೆಗೆದು ನೋಡಿದಾಗ ತಿಳಿದದ್ದು ಇದು ಮಾಮೂಲಿ ಗಿಡುಗ ಅಲ್ಲ.
ಇದರ ಬಾಲ ಹಾರುವಾಗಲೂ ಮಾಮೂಲಿ ಗಿಡುಗದಂತೆ v ಆಕಾರದಲ್ಲಿ ಇರದೆ ತುಸು ನೇರವಾಗಿ ಇರುತ್ತದೆ. ಹೊಲಗಳ ಮೇಲೆ, ಕೆರೆಗಳ ಮೇಲೆ ತಗ್ಗಿನಲ್ಲೇ ಹಾರಾಟ ಮಾಡಿದರೂ ಹೆಚ್ಚಾಗಿ ರೆಕ್ಕೆ ಬಡಿಯುವುದಿಲ್ಲ. ಹಾರುತ್ತಾ ನೆಲದ ಮೇಲೆ ಹಲ್ಲಿ, ಕಪ್ಪೆ, ಜೀರುಂಡೆ ಮಾತ್ರವಲ್ಲ ಹಕ್ಕಿ ಮರಿಗಳು ಮತ್ತು ಅಂಗವಿಕಲ ಹಕ್ಕಿಗಳನ್ನೂ ಹಿಡಿದು ತಿನ್ನುತ್ತದೆ ಎಂದು ಸಲೀಂ ಅಲಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆಗ ನಮಗೆ ಅರ್ಥವಾದದ್ದು ಇತರೆ ಹಕ್ಕಿಗಳು ಇದನ್ನು ಕಂಡರೆ ಅಷ್ಟೊಂದು ಹೆದರುವುದು ಏಕೆ ಎಂದು. ನಾವು ನೋಡಿದ ಕಂದುಬಣ್ಣದ ಗಿಡುಗವನ್ನು ಹೋಲುವ ಈ ಹಕ್ಕಿ ಹೆಣ್ಣು ಎಂಬುದು ನಮಗೆ ತಿಳಿದದ್ದು ಪುಸ್ತಕ ನೋಡಿದಾಗಲೇ. ಗಂಡು ಹಕ್ಕಿ ನೋಡಲು ಬೂದುಮಿಶ್ರಿತ ಬಿಳಿ ಬಣ್ಣ ಇರುತ್ತದೆ.
ಈ ಹಕ್ಕಿ ಮೂಲತಃ ಯುರೋಪ್ ಮತ್ತು ಮಧ್ಯ ಏಷ್ಯಾದಿಂದ ಚಳಿಗಾಲಕ್ಕೆ ವಲಸೆಬರುವ ಹಕ್ಕಿ. ಚಳಿಗಾಲದಲ್ಲಿ ಭಾರತದಾದ್ಯಂತ ಇದು ಕಾಣಲು ಸಿಗುತ್ತದೆಯಂತೆ. ಹುಲ್ಲುಗಾವಲು, ಹೊಲಗದ್ದೆಗಳ ಆಸುಪಾಸಿನಲ್ಲಿ ಇವುಗಳನ್ನು ನೋಡಬಹುದು ಎನ್ನುತ್ತಾರೆ. ಆದರೆ ಇತರೆ ಬೇಟೆಗಾರ ಹಕ್ಕಿಗಳಿಗಿಂತ ಭಿನ್ನವಾಗಿ ಇದು ನೆಲದಮೇಲೆ ಬಂದು ಕುಳಿತುಕೊಳ್ಳುತ್ತದೆ ಮತ್ತು ನೆಲಕ್ಕೆ ಹತ್ತಿರದಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಈ ಹಕ್ಕಿಗೆ ಇದೆ. ಇದು ತನ್ನ ಮೂಲ ನೆಲೆಯಾದ ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಹೊಲಗಳ, ಹುಲ್ಲುಗಾವಲುಗಳ ಮಧ್ಯೆ ನೆಲದಲ್ಲಿ ಹುಲ್ಲು ಮತ್ತು ತರಗೆಲೆಗಳ ಹಾಸಿಗೆ ನಿರ್ಮಿಸಿ ಮೊಟ್ಟೆ ಇಟ್ಟು ಮರಿಮಾಡುತ್ತದೆಯಂತೆ. ಆ ದಿನ ಸಂಜೆವರೆಗೂ ಪಕ್ಷಿವೀಕ್ಷಣೆ ಮಾಡಿದ ನಮಗೆ ಹಲವು ಬಾರಿ ಈ ಹಕ್ಕಿ ಮತ್ತೆ ನೋಡಲು ಸಿಕ್ಕಿತು. ನಿಮ್ಮೂರಿನ ಹೊಲಗದ್ದೆಗಳ ಆಸುಪಾಸಿನಲ್ಲಿ ಈ ಹಕ್ಕಿ ಇರಬಹುದು.
ಕನ್ನಡ ಹೆಸರು: ಸೆಳೆವ
ಇಂಗ್ಲೀಷ್ ಹೆಸರು: Pallid Harrier
ವೈಜ್ಞಾನಿಕ ಹೆಸರು: Circus macrourus
ಚಿತ್ರ ಕೃಪೆ: ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************