ಬದಲಾಗೋಣವೇ ಪ್ಲೀಸ್ - 85
Wednesday, February 15, 2023
Edit
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
"ಕಾಗದದಲ್ಲಿ ಬಿಡಿಸಿದ ಮಾವಿನ ಮರ ಮಾವಿನಕಾಯಿ ನೀಡದು. ಕಾಗದದಲ್ಲಿ ಮಾಡಿದ ನವಿಲು ಎಂದೂ ಕುಣಿಯದು. ಕಾಗದದಲ್ಲಿ ಮಾಡಿದ ದೋಣಿಯಲ್ಲಿ ಪಯಣವೆಂದೂ ಸಾಗದು. ಅದರರ್ಥ ಅವುಗಳು ನಿಜವಾದ ಮರ , ನವಿಲು , ದೋಣಿಗಳಿಗಿಂತಲೂ ಬಣ್ಣಮಯ ಹಾಗೂ ಆಕರ್ಷಣೀಯವಾಗಿದ್ದರೂ ನಕಲಿಯಾಗಬಹುದಷ್ಟೇ ಹೊರತು ಅಸಲಿಯಾಗಲು ಸಾಧ್ಯವಿಲ್ಲ. ಅವು ಕಲ್ಪನೆಗಳೇ ಹೊರತು ನಿಜವಾಗಲು ಸಾಧ್ಯವಿಲ್ಲ" ಎಂದು ಹಿರಿಯರೊಬ್ಬರು ನುಡಿದ ಮಾತುಗಳು ಅಕ್ಷರಶಃ ಸತ್ಯ.
ಇತ್ತೀಚೆಗೆ ಸಂವಹನ ಎಂಬುದು ಕೃತಕವಾಗಿ ಸಾಗುತ್ತಿದೆ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಮೊದಲೆಲ್ಲ ತಮ್ಮ ತಮ್ಮ ನೋವು-ನಲಿವು, ದುಃಖ-ದುಮ್ಮಾನ, ಸೋಲು- ಗೆಲುವು ಅಥವಾ ಮನದ ಅಭಿಪ್ರಾಯಗಳನ್ನು ಮುಖಾಮುಖಿ ಭೇಟಿಯಾಗಿ ವ್ಯಕ್ತಪಡಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಪ್ರತಿಕ್ರಿಯಿಸುತ್ತಿದ್ದ ನೇರವಾದ ನಡೆ - ನುಡಿಗಳ ರೀತಿಯಿಂದ ಹಾಗೂ ಭಾವಪೂರ್ಣ ಅಭಿವ್ಯಕ್ತಿಗಳಿಂದ ಪರಿಣಾಮಕಾರಿ ಸಂವಹನ ಉಂಟಾಗುತ್ತಿದ್ದವು. ಇಂಥಹ ಪರಸ್ಪರ ಮುಖಾಮುಖಿ ಸಂವಹನವು ಮಾನವೀಯ ಸಂಬಂಧಗಳಿಗೆ ಬೆಸುಗೆಯನ್ನು ಹಾಕಿ ಬದುಕಿನಲ್ಲಿ ಜೀವಂತಿಕೆಯನ್ನು ಹೆಚ್ಚಿಸುತ್ತಿದ್ದವು.
ಆದರೀಗ ಕಾಲ ಬದಲಾಗಿದೆ. ಪರಸ್ಪರ ಸಂವಹನ ಎಂಬುದು ಮರುಭೂಮಿಯ ಓಯಸಿಸ್ ನಂತಾಗಿದೆ. ಕಾರ್ಯಕ್ರಮಗಳಲ್ಲಿ ಪರಸ್ಪರ ಎದುರಿಗಿದ್ದರೂ... ಒಟ್ಟು ಸೇರಿದರೂ ಪರಸ್ಪರ ಮುಖಾಮುಖಿ ಸಂವಹನ ನಡೆಸದೆ ಮೊಬೈಲ್ ನಲ್ಲಿಯೇ ಕಾಲಕಳೆಯುತ್ತಿರುವ ಅಂದರೆ ಸಮೂಹ ಮಾಧ್ಯಮಗಳ ಮೂಲಕವೇ ಸಂವಹನ ನಡೆಸುವ "ಮೊಬೈಲ್ ಸಂವಹನ" ಚಟಕ್ಕೆ ಬಲಿಯಾಗಿದ್ದೇವೆ. ಇಲ್ಲಿ ನಡೆಯುವ ಸಂವಹನವು ಕೇವಲ ಚಿತ್ರದಲ್ಲಿನ ಮಾವಿನಮರದಂತೆ. ಕಾಗದದಲ್ಲಿನ ನವಿಲು-ದೋಣಿಗಳಂತೆ ಕೇವಲ ತೋರಿಕೆಗೆ ಔಪಚಾರಿಕವಾಗಿದೆಯೆ ಹೊರತು ಭಾವ ಸ್ಪರ್ಶರಹಿತವಾಗಿದೆ. ಅಲ್ಲಿ ನಿಜವಾದ ಕಾಳಜಿಯು ಕಂಡು ಬರುತ್ತಿಲ್ಲ. ಇದು ಕೇವಲ ಮೇಲ್ನೋಟಕ್ಕೆ ಮಾತ್ರ ತೋರ್ಪಡಿಕೆಯ ಸಂವಹನ ಮಾದರಿಯಾಗಿ ಮಾತ್ರ ಕಂಡು ಬರುತ್ತಿದೆ. ಇತ್ತೀಚೆಗೆ ಕೇವಲ ಮೊಬೈಲ್ ಮಾಧ್ಯಮಗಳ ಮೂಲಕ ಮಾತುಕತೆಗಳು ಹಾಗೂ ಭಾವನೆಗಳ ಹಂಚಿಕೆಯು ಹೆಚ್ಚಾಗಿ ಕಂಡು ಬರುತ್ತಿದೆ. ಪರಿಚಯಸ್ಥರು ಪ್ರತ್ಯಕ್ಷವಾಗಿ ಎದುರೆದುರು ಸಿಕ್ಕಾಗ ಅಪರಿಚಿತರಂತೆ ವರ್ತಿಸುವ, ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆಯೂ ವ್ಯವಹರಿಸುವ ಮೊಬೈಲ್ ಮಂದಿಗಳೇ ಹೆಚ್ಚಾಗಿ ಕಾಣಸಿಗುತ್ತಾರೆ. ಸಮೂಹ ಮಾಧ್ಯಮದಲ್ಲಿ ಎಲ್ಲದಕ್ಕೂ ಶುಭಾಶಯ ಕೋರುವವರು ಅಥವಾ ಪ್ರತಿಕ್ರಿಯಿಸುವರು, ಬಣ್ಣ ಬಣ್ಣದ ಸಂದೇಶಗಳನ್ನು ಕಳುಹಿಸುವವರು ಪ್ರತ್ಯಕ್ಷವಾಗಿ ಮುಖಾಮುಖಿಯಾದಾಗ ಏನೂ ಗೊತ್ತಿಲ್ಲದಂತೆ ಅಪರಿಚಿತರಂತೆ ನಟಿಸುತ್ತಾರೆ. ಈ ರೀತಿ ಮುಂದುವರೆದರೆ ಪರಸ್ಪರ ಸಂಪರ್ಕ- ಸಂವಹನ ಎಂಬುದು ಯಾಂತ್ರಿಕವಾಗಿ ಜೀವಂತಿಕೆಯನ್ನು ಕಳೆದುಕೊಳ್ಳುವುದಂತು ನಿಸ್ಸಂದೇಹ.
ಹಾಗಾದರೆ ಪರಸ್ಪರ ಸಂವಹನ - ಸಂಪರ್ಕಗಳಲ್ಲಿ ಜೀವಂತಿಕೆಯನ್ನು ಮೂಡಿಸುವುದು ಹೇಗೆ...? ಅದರ ತಾಜಾತನವನ್ನು ಉಳಿಸುವುದು ಹೇಗೆ...? ಮೊಬೈಲ್ ಸಂವಹನದ ಧನಾತ್ಮಕ ಬಳಕೆ ಹೇಗೆ....? ಹೀಗೆ ಹತ್ತಾರು ಪ್ರಶ್ನೆಗಳು ನಮ್ಮಲ್ಲಿ ಉದ್ಭವವಾಗಬೇಕಾಗಿದೆ. ಪ್ರತಿ ಪ್ರಶ್ನೆಗಳಿಗೆ ಉತ್ತರಗಳಂತೂ ಇದ್ದೇ ಇರುತ್ತದೆ. ಆ ಉತ್ತರಗಳನ್ನು ಎಲ್ಲಿಯೂ ಹುಡುಕದೆ ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕಾಗಿದೆ. ಇದಕ್ಕೆಲ್ಲಾ ಧನಾತ್ಮಕ ಉತ್ತರಗಳನ್ನು ಕಂಡುಕೊಳ್ಳುವ ಪಥದಲ್ಲಿ ಪಥಿಕರಾಗೋಣ. ಸಂವಹನದ ಜೀವಂತಿಕೆಯನ್ನು ಉಳಿಸಿ-ಬೆಳೆಸಲು ಬದಲಾಗಬೇಕಾಗಿದೆ. ಬನ್ನಿ .... ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99802 23736
********************************************