
ಹಕ್ಕಿ ಕಥೆ : ಸಂಚಿಕೆ - 84
Wednesday, February 1, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ದಸರಾ ರಜೆಯಲ್ಲಿ ಒಂದು ದಿನ ಜೋಗ ಜಲಪಾತ ನೋಡಲು ಹೋಗಿದ್ದೆ. ಜೋಗದ ನೀರು ಮಳೆಗಾಲದ ಅಬ್ಬರ ಕಡಿಮೆಯಾಗಿ ಶಾಂತವಾಗಿ ಧುಮುಕುತ್ತಿತ್ತು. ಎಲ್ಲಿ ಹೋದರೂ ಹಕ್ಕಿ ಹುಡುಕುವ ಹುಚ್ಚಿನ ನನಗೆ ಅಲ್ಲೂ ಒಂದು ವಿಶಿಷ್ಟವಾದ ಹಕ್ಕಿ ಕಾಣಿಸಿತು. ಆದರೆ ಇವುಗಳು ಒಂದು ಎರಡು ಇರಲಿಲ್ಲ. ನೂರಾರು ಹಕ್ಕಿಗಳು ದೊಡ್ಡ ಮೋಡದಂತೆ ಜೋಗ ಜಲಪಾತದ ಬಂಡೆಯಿಂದ ಒಮ್ಮೆಲೇ ಮೇಲೆದ್ದು ಆಕಾಶಕ್ಕೆ ಹಾರಿದವು. ಗುಬ್ಬಚ್ಚಿ ಗಾತ್ರದ ಪುಟಾಣಿ ಹಕ್ಕಿಗಳು ಅವು. ನನಗೆ ತಕ್ಷಣ ಅವತಾರ್ ಎಂಬ ಹಾಲಿವುಡ್ ಸಿನೆಮಾ ನೆನಪಾಯಿತು. ಹಾರಿದ ಹಕ್ಕಿಗಳು ಒಂದಷ್ಟು ಹೊತ್ತು ಹಾರಾಡಿ ಬಂಡೆಯ ಎಡೆಗಳಿಗೆ ಹೋಗಿ ಮತ್ತೆ ಅಡಗಿಕೊಂಡವು. ಮತ್ತೆ ಕೆಲವು ಹಕ್ಕಿಗಳು ಆಗಾಗ ಹಾರುತ್ತಲೇ ಇದ್ದವು. ಚಿಕ್ಕ ಹಕ್ಕಿಗಳಾದರೂ ಅವುಗಳ ಹಾರಾಟ ಬಹಳ ಚುರುಕು. ಅವುಗಳನ್ನೇ ನೋಡುತ್ತಾ ಕುಳಿತರೆ ಯಾವುದೋ ರೇಸಿಂಗ್ ಗೇಮ್ ನಲ್ಲಿ ಕಾರ್ ಓಡಿಸಿದಂತೆ ವೇಗವಾಗಿ ಹಾರುತ್ತಾ ಬೇಕಾದಾಗ ಎಲ್ಲೆಂದರಲ್ಲಿ ತಿರುಗಿ ಕೀಟಗಳನ್ನು ಹುಡುಕುತ್ತಿದ್ದವು, ಹಿಡಿದು ತಿನ್ನುತ್ತಿದ್ದವು.
ಮೊನ್ನೆ ಒಂದು ದಿನ ಸ್ನೇಹಿತರಾದ ಚಂದ್ರಣ್ಣನ ಮನೆಯಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದಾಗ ಅವರ ಮನೆಮುಂದೆ ಒಂದು ತಾಳೆ ಮರ ಕಾಣಿಸಿತು. ಕರಾವಳಿಯಲ್ಲಿ ಈ ಮರದಿಂದ ಶೇಂದಿಯನ್ನು ತೆಗೆಯುವ ಕ್ರಮ ಹಿಂದೆ ಎಲ್ಲ ಕಡೆಗೂ ಇತ್ತು. ಇದರಲ್ಲಾಗುವ ಪುಟ್ಟ ತೆಂಗಿನಕಾಯಿ ಗಾತ್ರದ ಹಣ್ಣನ್ನು ಕತ್ತರಿಸಿ ಒಳಗಿನ ತಿರುಳು ತಿನ್ನಬಹುದು. ಈಗ ಅಲ್ಲಲ್ಲಿ ಈ ಹಣ್ಣು ಮಾರಾಟ ಆಗುತ್ತಿದ್ದುದನ್ನೂ ನೋಡಿದ್ದೆ. ಇದಕ್ಕೆ ನಮ್ಮೂರಿನಲ್ಲಿ ಇರೋಳು ಎಂದು ಕರೆಯುತ್ತಾರೆ. ಆ ತಾಳೆ ಮರದ ಎಲೆಗಳ ಎಡೆಯಿಂದ ಒಂದು ಪುಟಾಣಿ ಹಕ್ಕಿ ಹಾರುವುದು ಕಾಣಿಸಿತು. ಹಾರುತ್ತಾ ಅದೇ ಜೋಗದಲ್ಲಿ ನೋಡಿದ ಹಕ್ಕಿಯಂತೆ ವೇಗವಾಗಿ ಏನನ್ನೋ ಹಿಂಬಾಲಿಸುತ್ತಿರುವಂತೆ ಕಾಣಿಸಿತು. ನೋಡಲು ಬೂದು ಮಿಶ್ರಿತ ಕಂದು ಬಣ್ಣ, ಪುಟಾಣಿ ಕೊಕ್ಕು, ಹಾರುವಾಗ ಯುದ್ಧವಿಮಾನದಂತೆ ಚೂಪಾದ ತುದಿಯ ರೆಕ್ಕೆಯನ್ನು ಬೇಕಾದಂತೆ ಬಗ್ಗಿಸಿ ವೇಗವಾಗಿ ಹಾರುತ್ತಿತ್ತು. ಬಾಲ ಇಂಗ್ಲೀಷ್ ನ V ಅಕ್ಷರದಂತೆ ಬಿಡಿಸಿಕೊಂಡು ಹಾರಲು ಪೂರ್ತಿ ಬೆಂಬಲವಾಗಿತ್ತು. ಹಾರಿ ಏನಾದರೂ ಸಿಕ್ಕಿದರೆ ಮತ್ತೆ ತಾಳೆ ಮರದ ಎಲೆಯ ಅಡಿಯಲ್ಲಿ ಮರಕ್ಕೆ ಅಂಟಿಕೊಂಡಂತೆ ಕುಳಿತುಕೊಂಡು ಇರುತ್ತಿತ್ತು. ಮತ್ತೆ ದಣಿವಾರಿಸಿಕೊಂಡು ಹಾರುತ್ತಿತ್ತು.
ತಾಳೆ ಮರದ ಎಲೆಯ ಕೆಳಗಡೆ ಗರಿ ಮತ್ತಿತರ ವಸ್ತುಗಳನ್ನು ತನ್ನ ಎಂಜಲಿನಿಂದ ಅಂಟಿಸಿ ಪುಟ್ಟ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ ಎಂದು ಪರಿಣತ ಪಕ್ಷಿವೀಕ್ಷಕರು ಹೇಳುತ್ತಾರೆ. ಈ ಹಕ್ಕಿ ಆಹಾರಕ್ಕಾಗಲೀ ಇತರೆ ಯಾವುದೇ ಕೆಲಸಕ್ಕಾಗಲೀ ಯಾವತ್ತೂ ನೆಲಕ್ಕೆ ಬರುವುದೇ ಇಲ್ಲ. ಜೋಗದಲ್ಲಿ ಕಂಡ ಹಕ್ಕಿ ಮತ್ತು ತಾಳೆ ಮರದಲ್ಲಿ ನೋಡಲು ಸಿಕ್ಕ ಹಕ್ಕಿ ಎರಡೂ ಒಂದೇ ಹಕ್ಕಿಯ ಉಪಜಾತಿಗಳು. ಈ ಹಕ್ಕಿಯ ಇಂಗ್ಲೀಷ್ ಹೆಸರನ್ನು ಒಂದು ಕಾರು ತಯಾರಿಕಾ ಕಂಪೆನಿ ತನ್ನ ಒಂದು ಕಾರಿಗೆ ಇಟ್ಟಿದೆ. ಸದಾ ಬಾನಿನಲ್ಲೇ ಬದುಕುವ, ಬಾನಿನಲ್ಲೇ ಜೀವಿಸುವ ಈ ಬಾನಾಡಿ ನಿಮ್ಮ ಮನೆಯ ಆಸುಪಾಸಿನ ತಾಳೆ ಮರದಲ್ಲಿ ಗೂಡು ಕಟ್ಟಿರಬಹುದು..
ಕನ್ನಡದ ಹೆಸರು: ತಾಳೆ ಬಾನಾಡಿ '
ಇಂಗ್ಲೀಷ್ ಹೆಸರು: Asian Palm Swift
ವೈಜ್ಞಾನಿಕ ಹೆಸರು: Cypsiurus
ಚಿತ್ರ ಕೃಪೆ : ಶಿವಶಂಕರ್ ಮತ್ತು ಪ್ರಸಾದ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************