-->
ಬದಲಾಗೋಣವೇ ಪ್ಲೀಸ್ - 83

ಬದಲಾಗೋಣವೇ ಪ್ಲೀಸ್ - 83

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು     
             "ಕಲಿಯುವ ವಿದ್ಯೆ ಹಾಳಾದರೆ ಜೀವನವೇ ನಷ್ಟ" ಎಂಬ ಅಬ್ದುಲ್ ಕಲಾಂರ ಹೇಳಿಕೆ ಬಾಲ್ಯದಲ್ಲಿ ಮಕ್ಕಳಿಗೆ ಬೇಕಾದ ಕಲಿಕೆಯ ಅಗತ್ಯತೆಯನ್ನು ವಿವರಿಸುತ್ತದೆ. "ಶಿಕ್ಷಣವೆಂದರೆ ಮಕ್ಕಳ ತಲೆಗೆ ವಿಷಯಗಳನ್ನು ತುಂಬುವುದಲ್ಲ. ಅವರಲ್ಲಿ ಕುತೂಹಲವನ್ನು ಜಾಗೃತಗೊಳಿಸುವುದು" ಎಂಬ ನೊಬೆಲ್ ಪ್ರಶಸ್ತಿ ವಿಜೇತ ಅಲ್ಬರ್ಟ್ ಐನ್ ಸ್ಟೀನ್ ರವರ ಅನುಭವದ ಮಾತು ಮಕ್ಕಳಿಗೆ ಕಲಿಸಬೇಕಾದ ನಿಜವಾದ ಕಲಿಕೆಯ ಮಾರ್ಗವನ್ನು ತೋರಿಸುತ್ತದೆ. "ಹಿರಿಯರ ಪ್ರಪಂಚವು ಬಾಲ್ಯದ ಕೀಲಿಕೈಗಳಾದ ಸೃಜನಶೀಲ ಚೈತನ್ಯ ಮತ್ತು ಧಾರಾಳ ಸಂತಸಗಳನ್ನು ಸ್ವಲ್ಪವೂ ಯೋಚಿಸದೇ ಹಾಳುಗೆಡವಬಹುದಾದ ಸಾಧ್ಯತೆಗಳಿವೆ" ಎಂಬ ರವೀಂದ್ರನಾಥ ಟಾಗೋರರ ಎಚ್ಚರಿಕೆಯ ಮಾತು, ಮಕ್ಕಳ ಕಲಿಕೆಯಲ್ಲಿ ಹಿರಿಯರ ಹಸ್ತಕ್ಷೇಪದಿಂದಾಗುವ ಕೆಟ್ಟ ಪರಿಣಾಮದ ಬಗ್ಗೆ ನಮ್ಮೆಲ್ಲರನ್ನು ಎಚ್ಚರಿಸುತ್ತದೆ. 
      ಇತ್ತೀಚೆಗೆ ನಾನು ಸ್ವಕಲಿಕೆ ಹಾಗೂ ಅನುಭವ ಕೇಂದ್ರಿತ ಕಲಿಕೆಗೆ ಪೂರಕವಾಗಿರುವ ಕಲಿಕಾ ಮಾರ್ಗವನ್ನು ಹೊಸ ದೃಷ್ಟಿಕೋನದಲ್ಲಿ ಪರಿಚಯಿಸುವ ಮಕ್ಕಳ ಕಲಿಕಾ ಹಬ್ಬ ಎಂಬ ಹೊಸ ಚಟುವಟಿಕೆಯನ್ನು ನೋಡಿದೆ. "ಬಲ್ಲವನೇ ಬಲ್ಲ - ಬೆಲ್ಲದ ರುಚಿಯ" ಎಂಬ ಮಾತಿನಂತೆ ಈ ಹಬ್ಬದ ಬಗ್ಗೆ ತಿಳಿದವರಿಗೆ ಇದೊಂದು ಅದ್ಭುತವಾದ ಚಟುವಟಿಕೆ ಎಂಬ ಅಭಿಪ್ರಾಯ ವ್ಯಕ್ತವಾಗುವುದರಲ್ಲಿ ಎರಡು ಮಾತಿಲ್ಲ. ಅಪರಿಮಿತ ಸ್ವಾತಂತ್ರ್ಯ ಹಾಗೂ ಸಂತೋಷ ಕೊಟ್ಟರೆ ಮಾತ್ರ ಮಗುವಿಗೆ ಕಲಿಕೆಯನ್ನು ಹಬ್ಬದಂತೆ ಆಚರಿಸಲು ಸಾಧ್ಯವಾಗುವುದು. ಈ ಹಬ್ಬದ ಆಚರಣೆಯಲ್ಲಿ ಹಿರಿಯರು ವಿನಾ ಕಾರಣ ಮೂಗು ತೂರಿಸಿದರೆ ಬಾಲ್ಯವು ಆನಂದದಾಯಕವಾಗದು. ಅದು ಮಗುವನ್ನು ಕೇವಲ ಕಲಿಕಾ ಭಾರವನ್ನು ಹೊರುವ ಯಂತ್ರವಾಗಿಸಬಹುದು.
        ಕಲಿಕಾ ಹಬ್ಬದಲ್ಲಿ ವಿಭಿನ್ನ ಸಾಮರ್ಥ್ಯದ ಎಲ್ಲಾ ಮಕ್ಕಳನ್ನು ಆಗಾಗ ಒಂದೆಡೆ ಸೇರಿಸಿ ಪರಸ್ಪರ ಸಮನ್ವಯಗೊಳಿಸಿದ ನಂತರ ಸಮಯಕ್ಕೆ ಸರಿಯಾಗಿ 4 ಕಾರ್ನರ್ ಗಳಿಗೆ ಕಳುಹಿಸಿ ಅಲ್ಲಿ ಅವರವರ ಕಲಿಕೆಯನ್ನು ಅನುಕೂಲಿಸುವ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಈ ಹಬ್ಬದ ಮೊದಲ ಕಾರ್ನರೇ                 
   ◾ಹಾಡು - ಆಡು : ಮಕ್ಕಳ ಭಾವನೆಗಳಿಗೆ ಪುಷ್ಠಿ ನೀಡಿ ಅವರ ಭಾಷಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತದೆ. ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಸ್ವತಂತ್ರವಾಗಿ ಮತ್ತು ಸಂತಸದಾಯಕವಾಗಿ ವ್ಯಕ್ತಪಡಿಸಲು ವಿವಿಧ ವೈವಿಧ್ಯಮಯ ಹಾಡು ಹಾಗೂ ಆಟಗಳನ್ನು ಇಲ್ಲಿ ನೋಡಬಹುದು.

   ◾ ಕಾಗದ - ಕತ್ತರಿ-ಬಣ್ಣ : ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ ಕಾರ್ನರೇ "ಕಾಗದ - ಕತ್ತರಿ-ಬಣ್ಣ". ಮೊಟ್ಟೆಯು ತಾನಾಗಿಯೇ ಒಡೆದರೆ ಸೃಷ್ಟಿ. ಬಲತ್ಕಾರವಾಗಿ ಒಡೆದರೆ ನಾಶ ಎಂಬ ಮಾತಿನಂತೆ ಮುಕ್ತ ಸ್ವಾತಂತ್ರ್ಯ ಸಿಕ್ಕಾಗ ಮಗುವಿನ ಸೂಕ್ಷ್ಮ ನೋಟ - ಏಕಾಗ್ರತೆ - ಹೊಸತರ ತುಡಿತದ ಸಾಮರ್ಥ್ಯವು ತಾನಾಗಿಯೇ ಹೊರಬಂದು ಸೃಜನಶೀಲ ಸಾಧನೆ ಸಾಧಿಸಲ್ಪಡುತ್ತದೆ. ಆ ನಿಟ್ಟಿನಲ್ಲಿ ಈ ಕಾರ್ನರ್ ನಲ್ಲಿ ಕಾಗದ - ಕತ್ತರಿ - ಬಣ್ಣಗಳಿಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಕಾಣಬಹುದು. 

   ◾ಮಾಡು - ಆಡು : ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವ ಕಾರ್ನ್ ರೇ "ಮಾಡು - ಆಡು". ಮಕ್ಕಳ ಮನದೊಳಗಿರುವ ನಿಸರ್ಗದ ಬಗೆಗಿರುವ ನೂರಾರು ಪ್ರಶ್ನೆಗಳಿಗೆ, ಸಾವಿರಾರು ಕುತೂಹಲಗಳಿಗೆ ಪ್ರಶ್ನಿಸಿ - ಉತ್ತರ ಪಡೆಯುವ ಚಟುವಟಿಕೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾಡುತ್ತಾ ಕಲಿಯುವ ಸಂತಸದ ಕಲಿಕೆ ಇಲ್ಲಿದೆ.
   ◾ಊರು ಸುತ್ತೋಣ : ಮಕ್ಕಳ ಸಂಶೋಧನಾತ್ಮಕ ಸೂಕ್ಷ್ಮ ಗ್ರಹಿಕೆಯನ್ನು ಅನಾವರಣಗೊಳಿಸುವ ಕಾರ್ನರೇ "ಊರು ಸುತ್ತೋಣ". ಕಲಿಕೆಯನ್ನು ತರಗತಿ ಕೋಣೆಯ ಆಚೆಗೆ ವಿಸ್ತರಿಸುವ ಚಟುವಟಿಕೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮುಂದಿನ ಬದುಕಿಗೆ ಅಗತ್ಯವಾದ ಪರಸ್ಪರ ಸಂವಾದ - ವ್ಯಕ್ತಿ ಸಂದರ್ಶನ - ಪರಿಸರದ ಒಡನಾಟವನ್ನು ಹೆಚ್ಚಿಸುವ ಚಟುವಟಿಕೆಗಳು ಇಲ್ಲಿದೆ.

      ಕಲಿಕಾ ಕಾರ್ನರ್ ಗಳಂತೆ ಪ್ರತಿನಿತ್ಯ ಕಲಿಕೆ ಸಾಗಿದರೆ ಮಗುವಿನಲ್ಲಿ ಸಂತಸದಾಯಕ ಸ್ವಕಲಿಕೆ ಉಂಟಾಗುವುದರಲ್ಲಿ ಸಂಶಯವಿಲ್ಲ. ಆಗ ಕಲಿಕೆಯು ಕಷ್ಟವಾಗದೆ ಇಷ್ಟವಾಗುತ್ತದೆ.
ಮಗುವೊಂದು ಸಹಜ ಬಾಲ್ಯವನ್ನು ಅನುಭವಿಸಿ ಅನುಭವದಾತನಾಗಿ, ಸ್ವಕಲಿಕೆ ಮೂಲಕ ಸಾಧಿಸಿ ಸಾಧಕನಾಗಿ, ಪ್ರಶ್ನಿಸುವ ಮೂಲಕ ಪ್ರಜ್ಞಾವಂತನಾಗಿ, ಪ್ರಯೋಗಶೀಲತೆ ಮೂಲಕ ಹೊಸತರ ಸೃಷ್ಟಿಸುವ ಸೃಷ್ಟಿವಂತನಾಗಿ, ಸಮಾಜಕ್ಕೆ ಬೆಳಕಾಗಬೇಕಾಗಿದೆ. ಈ ಬೆಳಕನ್ನು ಬೆಳಗಿಸುವ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಬಾಯಿಪಾಠದ - ಬಾಹ್ಯಶಿಸ್ತಿನ ಪಂಜರದ ಪಕ್ಷಿಯನ್ನಾಗಿಸದೇ ಸ್ವಯಂ ಶಿಸ್ತಿನ ಸ್ವತಂತ್ರ ಪಕ್ಷಿಯನ್ನಾಗಿಸಿ, ವಿಸ್ತಾರವಾದ ಜ್ಞಾನವೆಂಬ ಆಕಾಶದಲ್ಲಿ ವಿಹರಿಸುವಂತೆ ಮಾಡೋಣ. ಪರಿಸರದಲ್ಲಿರುವ ಎಲ್ಲವೂ - ಎಲ್ಲರೂ ನಮ್ಮದೆಂಬ ಜೀವ ಭಾವ ಮೂಡಿಸೋಣ. ಕಲಿಕೆಯನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article