ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು
Monday, January 30, 2023
Edit
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ದಹನ ಮತ್ತು ದಾಹ ಪರಸ್ಪರ ಸಂಬಂಧಿಗಳು. ದೇಹದೊಳಗೆ ಆಹಾರ ದಹನವಾಗುತ್ತಿದ್ದಂತೆ ದಾಹ ಉಂಟಾಗುವುದು ಸಹಜ. ದಾಹವನ್ನು ತೃಷೆ, ಬಾಯಾರಿಕೆ, ಆಸರು ಎಂಬಿತ್ಯಾದಿಯಾಗಿಯೂ ಹೇಳುವರು. ‘ದಾಹ’ ಎಂಬ ಪದವನ್ನು ಇತರ ಪದಗಳ ಜೊತೆಗೆ ಸಂಯೋಜಿಸಿ ಬಳಸಿದಾಗ ಕೆಲವೊಮ್ಮೆ ಅರ್ಥವ್ಯತ್ಯಾಸವಾಗುವುದೂ ಇದೆ. ಉದಾಹರಣೆಗೆ ಅಧಿಕಾರದ ದಾಹವನ್ನು ಅಧಿಕಾರದ ಬಾಯಾರಿಕೆ ಎನ್ನುವಂತಿಲ್ಲ. ಮೋಹ ಅಥವಾ ಬಯಕೆ ಎಂದೇ ‘ದಾಹ’ಕ್ಕೆ ಇಲ್ಲಿ ಸೂಕ್ತವಾದ ಅರ್ಥ. ಆದುದರಿಂದ ದಾಹವು ದೇಹಕ್ಕೂ ಭಾವನೆಗೂ ಸಂಬಂಧಿಸಿದೆ. ‘ದಾಹ’ ದ ಅತೀ ಹತ್ತಿರದ ನೆಂಟ ಸ್ವಾರ್ಥ. ಸ್ವಾರ್ಥ ಇರುವವರಿಗೆ ನಾನಾ ಬಗೆಯ ದಾಹಗಳಿರುತ್ತವೆ. ದಾಹ ಮತ್ತು ಸ್ವಾರ್ಥಗಳಿಗೆ ಮಿತಿಯಿಲ್ಲ. ದಾಹವೆನ್ನುವುದು ಒಂದು ವಿಕಲ ಮನೋಗುಣ. ನೀರು ಕುಡಿದಂತೆ ಬಾಯಾರಿಕೆ ಅಡಗುತ್ತದೆ. ಬಾಯಾರಿಕೆಯು ನಿರಂತರ ಅನುಭವಕ್ಕೆ ಬರುವುದಾದರೂ ಅದಕ್ಕೆ ಸೀಮಾರೇಖೆ ಅಥವಾ ಕೊನೆಯೆಂಬುದು ಇದೆ. ಬಾಯಾರಿಕೆಯು ಸ್ವಾರ್ಥದಿಂದ ಮುಕ್ತವಾಗಿದ್ದು ಅದು ದೇಹದ ಸಮಸ್ಥಿತಿಗೆ ಇರುವ ಅನಿವಾರ್ಯತೆ. ಬಾಯಾರಿದಾಗ ಅದನ್ನು ತಡೆಹಿಡಿಯಲೇ ಬಾರದು. ಬಾಯಾರಿಕೆಯನ್ನು ನಿಯಂತ್ರಿಸ ಹೊರಟರೆ ಜೀವಿಯ ಆರೋಗ್ಯವು ಏರುಪೇರಾಗುತ್ತದೆ. ಸಸ್ಯಗಳಿಗೂ ಬಾಯಾರಿಕೆ ಆಗುತ್ತದೆ, ನೀರುಣಿಸಿ ಅದರ ಜೀವಂತಿಕೆಯನ್ನು ಮುಂದುವರಿಸುತ್ತೇವೆ. ಮಾನವೇತರ ಜೀವಿಗಳು ಮತ್ತು ಸಸ್ಯಗಳಿಗೆ ಬಾಯಾರಿಕೆ ಹೊರತಾಗಿ ಯಾವುದೇ ‘ದಾಹ’ ಕಾಣಿಸದು. ಮಾನವನಲ್ಲಿ ಲಿಂಗ ಭೇದವಿಲ್ಲದೆ ಬಾಯಾರಿಕೆ ಹೊರತಾದ ಅಸಂಖ್ಯ “ದಾಹಗಳು’ ಬಲವಾಗಿಯೇ ನೆಲೆಯಾಗಿವೆ.
ದಾಹವನ್ನಡಗಿಸುವುದು ಹೇಗೆ...? ಎಂದು ಸಂಶೋಧನೆ ಮಾಡುವ ಅಗತ್ಯವಿಲ್ಲ. ಮನೋಗುಣವು ಸ್ವಾರ್ಥದೊಡನೆ ವಿಜಯಶಾಲಿಯಾಗಿ ವಿನಯಿಯಾದರೆ ದಾಹವು ಅಡಗುತ್ತದೆ. ವಿನಯಿ ಅಥವಾ ‘ವಿನಯ’ ಎನ್ನುವುದು “ಜೀವನ ಪಥ”ವೇ ಹೊರತು ಹೊಸತಾದ ಆವಿಷ್ಕಾರವಲ್ಲ. ನಮ್ಮ ಬದುಕು ಹೇಗಿರಬೇಕೆಂಬುದನ್ನು ಅರಿಯದವರು ಯಾರೂ ಇಲ್ಲ. ಆದರೆ ಆ ಅರಿವನ್ನು ಅನುಷ್ಠಾನಿಸದೇ ಇರುವ ದುರಂತದಿಂದಾಗಿ ಬದುಕಿನ ಪಥವು ವಕ್ರವಾಗಿಬಿಡುತ್ತದೆ. ದೇವರಲ್ಲಿ ಭಕ್ತಿ, ಹಿರಿಯರಲ್ಲಿ ಆದರ, ಗುರುಗಳಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ ಇರುವವರಿಗೆ ವಿನಯ ಒಲಿದು ಬರುತ್ತದೆ. ಅವರ ಬದುಕು ವಕ್ರೀಭವನಕ್ಕೊಳಪಡುವುದಿಲ್ಲ. ಅವರು ದಿಟ್ಟ, ನೇರ ಬದುಕನ್ನೇ ಅನುಭವಿಸುವರು.
ಶಾಲೆಯಲ್ಲಿ ಗುರುಗಳು right ಮತ್ತು wrong ಎಂಬುದಾಗಿ ವಿದ್ಯಾರ್ಥಿಗಳ ಬರವಣಿಗೆ, ಚಿತ್ರ ಅಥವಾ ಗಣಿತ ಚಟುವಟಿಕೆಗಳಿಗೆ ಗುರುತು ಮಾಡುತ್ತಾರೆ. ಸಣ್ಣ ದೋಷವಾದರೆ ಅಡಿಗೆರೆ ಹಾಕುವರು. ಕೆಂಪು ಶಾಯಿಯ ಅಡಿಗೆರೆಯಾದರೆ ದೋಷದ ಪ್ರಮಾಣ ಗಂಭೀರವಾದುದು ಎಂದೇ ಮನವರಿಕೆ ಮಾಡಿಕೊಳ್ಳುತ್ತೇವೆ. ಸರಿಯಾದರೆ ಯಾವ ಗೆರೆಯೂ ಬೀಳದು. ಕೆಂಪುಗೆರೆಯಿದ್ದರೆ ಅದು ಸರಿಪಡಿಸಲಿರುವ ಸೂಚನೆಯೇ ಹೊರತು ನಿಂದನೆಯಲ್ಲ. ತಪ್ಪಾದರೆ ಸರಿಪಡಿಸುವುದು ವ್ಯಕ್ತಿತ್ವವನ್ನು ಬೆಳೆಸುವ ಲಕ್ಷಣ. ಸರಿಪಡಿಸದಿರುವುದು ವಿನಯವಲ್ಲ, ಇಂಥಹವರ ಬದುಕು ಓರೆಯಾಗುತ್ತಾ ಮುಂದೊಂದು ದಿನ ಬಿದ್ದೇ ಹೋಗುತ್ತದೆ. ಸರಿ ಮತ್ತು ತಪ್ಪುಗಳನ್ನು ಪ್ರತೀ ಸಂದರ್ಭದಲ್ಲೂ ಗಮನಿಸಬೇಕು. ತಪ್ಪು ಎಂದು ಕಂಡುದನ್ನು ಕೈಬಿಡಬೇಕು. ಇದರಿಂದ ದಾಹವು ಸೋತು ವ್ಯಕ್ತಿತ್ವವು ಶಕ್ತವಾಗುತ್ತದೆ. ತಪ್ಪು ಮಾಡುವುದು ಸಹಜ. ತಪ್ಪುಗಳ ಅರಿವಾದೊಡನೆಯೇ ತಿದ್ದಿ ಸರಿಪಡಿಸಿದರೆ ಯಾವ ದಾಹವೂ ಬದುಕಿನಲ್ಲಿ ನಮ್ಮನ್ನು ವಿಮುಖಗೊಳಿಸದು.
ದಾಹಗಳಲ್ಲಿ ಉತ್ತಮ ದಾಹಗಳೂ ಇವೆ. ಉತ್ತಮ ದಾಹಗಳು ಮೆಚ್ಚುಗೆ, ಗೌರವ ಅಥವಾ ಪುರಸ್ಕಾರಗಳನ್ನು ನಮಗೆ ತರುತ್ತವೆ. ಜ್ಞಾನ ದಾಹ, ಸೇವಾ ದಾಹ, ಆತಿಥ್ಯ ದಾಹ, ಆರೋಗ್ಯ ದಾಹ, ಸತ್ಯದಾಹ, ದಾಸೋಹ ದಾಹ..... ಹೀಗೆ ಹಲವಾರು ಉತ್ತಮ ದಾಹಗಳು ನಮ್ಮಲ್ಲಿ ಬೆಳೆಯಲಿ; ಹಣ ದಾಹ, ಆಸ್ತಿದಾಹ, ಅಧಿಕಾರದಾಹ.... ಇಂತಹ ನೀಚ ದಾಹಗಳು ಅಳಿಯಲಿ.... ನಮಸ್ಕಾರ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************