-->
ಬದಲಾಗೋಣವೇ ಪ್ಲೀಸ್ - 84

ಬದಲಾಗೋಣವೇ ಪ್ಲೀಸ್ - 84

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

             ಧಗಧಗನೇ ಉರಿಯುವ ಬೆಂಕಿಯು ತಂಪಾದ ನೀರನ್ನು ಕುದಿಯುವಂತೆ ಮಾಡುತ್ತದೆ.  ಕುದಿಯುವ ನೀರು ಮತ್ತಷ್ಟೂ ಕುದಿಯುತ್ತಾ ಕೊನೆಗೆ ಆವಿಯಾಗ ತೊಡಗುತ್ತದೆ. ಕೊನೆಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕುದಿಯುವ ನೀರಿಗೆ ಉರಿಯುವ ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಅದರಲ್ಲಿಯೇ ಇದ್ದರೂ ದಾರಿ ಗೊತ್ತಾಗದೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ಬೆಂಕಿ ನಂದಿಸುವ ದಾರಿ ತೋರಿಸಲು  ಮಾಧ್ಯಮವೊಂದರ ಅಗತ್ಯವಿದೆ. ಆ ಮಾರ್ಗದರ್ಶನದ  ಮಾಧ್ಯಮವೇ ನಾವು - ನೀವಾಗಬೇಕಾಗಿದೆ.
        ಕುದಿಯುತ್ತಿರುವ ನೀರಿಗೆ ಯಾವುದೂ ಬಿದ್ದರೂ ಕರಗುವುದು ಅಥವಾ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಬೆಂದು ಹೋಗುವುದು ಖಂಡಿತಾ. ಆದರೆ ಕುದಿಯುತ್ತಿರುವ ನೀರನ್ನು ಬೆಂಕಿಯ ಸ್ಪರ್ಶದಿಂದ ಹೊರತೆಗೆದು ಆರಲು ಬಿಟ್ಟರೆ ಸ್ವಲ್ಪ ಸಮಯದಲ್ಲಿ ಬಿಸಿಯನ್ನು ಬಿಟ್ಟು ಮತ್ತೆ ಸಾಮಾನ್ಯ ಸ್ಥಿತಿಗೆ ಬಂದು ಬಳಕೆಗೆ ಯೋಗ್ಯವಾಗುವುದು. ಬೆಂಕಿಯ ಸ್ಪರ್ಶದಿಂದ ಹೊರ ತೆಗೆಯುವ ಕೆಲಸವನ್ನು ಮಾಡುವವರು ಬೇಕಾಗಿದ್ದಾರೆ. ಆ ಕೆಲಸಗಾರರೇ  ನಾವು - ನೀವಾಗಬೇಕಾಗಿದೆ.
        ಕುದಿಯುತ್ತಿರುವ ನೀರನ್ನು ಯಾರೂ ಬಳಸುವುದಿಲ್ಲ-ಬಯಸುವುದಿಲ್ಲ. ಅದನ್ನು ಸಾಮಾನ್ಯ ಸ್ಥಿತಿಗೆ ತಂದರೆ ಮಾತ್ರ ಬಳಕೆಗೆ ಯೋಗ್ಯವಾಗುವುದು. ಅದನ್ನು ತಂಪುಗೊಳಿಸುವ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ಮೈ ಮೇಲೆ ಬಿದ್ದು ಸುಟ್ಟ ಗಾಯಗಳಾಗಬಹುದು. ಒಮ್ಮೊಮ್ಮೆ ಪ್ರಾಣಕ್ಕೂ ಸಂಚಕಾರವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಪೂರ್ಣ ಏಕಾಗ್ರತೆ ಹಾಗೂ ಮುನ್ನೆಚ್ಚರಿಕೆಯಿಂದ ತಂಪುಗೊಳಿಸಬೇಕು. ಆ ಕೆಲಸವನ್ನು ಮಾಡುವವರು ನಾವು - ನೀವಾಗಬೇಕಾಗಿದೆ.
        ಕುದಿಯುತ್ತಿರುವ ನೀರಿಗೆ ತಣ್ಣೀರನ್ನು ಬೆರೆಸಿದಾಗ ಕೂಡಲೇ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಆಗ ಅದು ತನ್ನ ಬಿಸಿಯನ್ನು ಕಳೆದುಕೊಂಡು ಬಳಕೆಗೆ ಯೋಗ್ಯವಾಗುತ್ತದೆ. ಈ ತಣ್ಣೀರಾಗಿ ಕೆಲಸವನ್ನು ಮಾಡುವವರು ನಾವು - ನೀವಾಗಬೇಕಾಗಿದೆ.
        ತಣ್ಣೀರಿನಂತೆ ಶಾಂತವಾಗಿರುವ ನಮ್ಮ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿಸುವ ನೂರಾರು ವಿಚಾರಗಳು ಬೆಂಕಿಯಂತೆ ಉರಿಸಿ ಕುದಿಯುವಂತೆ ಮಾಡುತ್ತದೆ. ನಮ್ಮ ಜೀವನ ಶೈಲಿ - ಒತ್ತಡಗಳು - ಸಮಯದ ಅಭಾವ - ಮನೆಯ ಪರಿಸ್ಥಿತಿಗಳು - ಮಕ್ಕಳ ಬಗೆಗಿನ ಅತಿಯಾದ ಕಾಳಜಿ ಹಾಗೂ ನಿರೀಕ್ಷೆಗಳು - ಸ್ವಯಂ ಕಲ್ಪಿತ ನೇತ್ಯಾತ್ಮಕ ಭಾವಗಳು - ಸಾಮಾಜಿಕ ಬದಲಾವಣೆಗಳು - ಆರೋಗ್ಯ ಸ್ಥಿತಿ - ಒಂಟಿತನ..... ಹೀಗೆ ಹತ್ತು ಹಲವಾರು ವಿಷಯಗಳು ಮನಸ್ಸು ಹಾಗೂ ನಮ್ಮ ಬದುಕನ್ನು ಕುದಿಸುತ್ತಿದೆ. ಇದಕ್ಕೆ ಪರಿಹಾರವು ನಮ್ಮಲ್ಲೇ ಇದೆ.  ಆದರೆ ಅವುಗಳನ್ನು ಗುರುತಿಸಲು ಮಾಧ್ಯಮವೊಂದರ ಅಗತ್ಯವಿದೆ. ಈ ಕುದಿಯುತ್ತಿರುವ ಬದುಕನ್ನು ಅಂದರೆ ನೊಂದ - ಬೆಂದ ಮನಸ್ಸುಗಳನ್ನು ನೇತ್ಯಾತ್ಮಕ ಬೆಂಕಿಯ ಸ್ಪರ್ಶದಿಂದ ಹೊರ ತೆಗೆಯುವ ಕೆಲಸವನ್ನು ನಾವು ಮಾಡೋಣ. ಅಥವಾ ಅದನ್ನು ತಂಪುಗೊಳಿಸುವ ಕಾರ್ಯಕ್ಕೆ ಇಳಿಯೋಣ. ಅವರ ಬೆಂದ ಬದುಕನ್ನು ಬಂಗಾರಗೊಳಿಸೋಣ. ಬನ್ನಿ  ಧನಾತ್ಮಕ ಕೆಲಸಕ್ಕೆ ನಾವೇ ಸಾರಥಿಯಾಗೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article