-->
ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 44

ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 44

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 44

       ನಮಸ್ತೆ ಮಕ್ಕಳೇ... ಎಲ್ಲರೂ ಚೆನ್ನಾಗಿದ್ದೀರಿ ಅಲ್ವಾ..?
      ಬದಲಾಗದ ಬೆಳಕು.. ಬದಲಾಗದ ಅದೇ ಗಾಳಿ... ಬದಲಾಗದ ನೀರು... ಎಷ್ಟೇ ಸಂದರ್ಭಗಳಿಗೆ ಒಡ್ಡಿಕೊಂಡರೂ ಸಂಸ್ಕಾರ, ಬೆಳೆದು ಬಂದ ರೀತಿಯೊಂದಿಗೆ ಭಾವಗಳು ಬೆಸೆದಂತೆಲ್ಲಾ ಬದಲಾದಂತೆ ಕಂಡರೂ ನಮ್ಮೊಳಗಿನ ಅದೇ ನಾವು... ಆಗಾಗ ಪ್ರಕಟವಾಗುತ್ತಿರುತ್ತೇವೆ.
      ಒಂದು ಸಲ ಗೌತಮ ಬುದ್ಧ ಮತ್ತವನ ಶಿಷ್ಯ ಆನಂದ ಬೋಧಿ ಮರದ ಕೆಳಗೆ ಧ್ಯಾನಕ್ಕೆ ಕುಳಿತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಶ್ರೀಮಂತ ಅಲ್ಲಿಗೆ ಬಂದವನೇ ಬುದ್ಧನಿಗೆ, ಬಾಯಿಗೆ ಬಂದಂತೆ ಬೈದ. ಆನಂದನಿಗೆ ಕೋಪ ನೆತ್ತಿಗೇರಿತು. ಭಗವಾನ್ ಬುದ್ಧನಿಗೆ ಬಯ್ಯುವ ಇವನೆಂತಹ ಅವಿವೇಕಿ?ಎಂದೆನಿಸಿತವನಿಗೆ. ಆದರೆ ಬುದ್ಧ ಮಾತ್ರ ಏನೂ ಸಂಭವಿಸಿಯೇ ಇಲ್ಲ ಎನ್ನುವಂತೆ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದ. ಕುಳಿತಲ್ಲಿಂದಲೇ ಆನಂದನಿಗೆ ಕೋಪಗೊಳ್ಬೇಡ ಎಂದು ಸನ್ನೆ ಮಾಡ್ತಿದ್ದ. ಆ ಶ್ರೀಮಂತ ತನ್ನ ಕೆಲಸ ಮುಗಿಯಿತೆನ್ನುವಂತೆ ಹೊರಟು ಹೋದ.
      ಆನಂದನಿಗೆ ಬುದ್ಧನ ಮೌನ ಆಶ್ಚರ್ಯವನ್ನುಂಟುಮಾಡಿತು. "ಭಗವಾನ್... ಆ ಶ್ರೀಮಂತ ಅಷ್ಟು ಬೈದರೂ ನೀವ್ಯಾಕೆ ಸುಮ್ಮನಿದ್ರಿ?" ಎಂದು ಕೇಳಿದ. ಆಗ ಬುದ್ಧನು, "ನೋಡು ಆನಂದ... ನಮಗ್ಯಾರಾದರೂ ಇಷ್ಟವಿಲ್ಲದ ವಸ್ತುಗಳನ್ನು ಕೊಟ್ಟರೆ ನಾವೇನು ಮಾಡುತ್ತೇವೆ....?"   "ಅದನ್ನು ಸ್ವೀಕರಿಸುವುದೇ ಇಲ್ಲ" ಎಂದನು ಆನಂದ!. ಬುದ್ಧನು ಮರುನುಡಿದ.. "ಹಾಗೆ ಸ್ವೀಕರಿಸದಿದ್ದಾಗ ಆ ವಸ್ತು ಎಲ್ಲಿ ಉಳಿದುಕೊಳ್ಳುತ್ತದೆ?". ಆಗ ಆನಂದನು "ಕೊಟ್ಟವನ ಬಳಿಯೇ ಉಳಿದುಕೊಳ್ತದೆಯಲ್ಲಾ...!"
ಎಂದನು. "ನಾನೂ ಈ ದಿನ ಅದನ್ನೇ ಮಾಡಿದೆ" ಎಂದ ಬುದ್ಧ. ಆನಂದನಿಗೆ ಅರ್ಥವಾದರೂ ಹಾಗೆ ಹೇಳಿದನಲ್ವಾ ಎನ್ನುವ ಕೋಪ ಮನದ ಮೂಲೆಯಲ್ಲಿ ಉಳಿದುಕೊಂಡಿತ್ತು...!  
      ತಿರುಗಾಟದ ಹಾದಿಯ ನಡುವೆ ಮಧ್ಯಾಹ್ನವಾಯಿತು. ಬುದ್ಧನಿಗೆ ಬಾಯಾರಿಕೆಯಾಯಿತು. ಆನಂದನಲ್ಲಿ ನೀರು ತರಲು ಹೇಳಿದ. ಅಲ್ಲೇ ಪಕ್ಕದಲ್ಲಿದ್ದ ಹೊಳೆಯ ಬಳಿ ತೆರಳಿ ನೋಡಿದ.. ನೀರು ರಾಡಿಯಾಗಿತ್ತು. ಬುದ್ಧನ ಬಳಿ ಬಂದು, "ಸ್ವಾಮೀ.. ನೀರಿನಲ್ಲಿ ಯಾವುದೋ ಪ್ರಾಣಿಗಳು ಅಡ್ಡಾಡಿರಬೇಕು ನೀರು ಕದಡಿದೆ" ಎಂದ. ಆಗ ಬುದ್ಧನು, "ಸ್ವಲ್ಪ ಸಮಯದ ನಂತರ ಹೋಗು ನೀರು ತಿಳಿಯಾಗಬಹುದು" ಎಂದನು. ಎರಡು ಮೂರು ಬಾರಿ ಆನಂದ ನೋಡಿ ಬಂದರೂ ನೀರು ಪೂರ್ತಿ ತಿಳಿಯಾಗಿರಲಿಲ್ಲ. ಹಾಗಾದರೆ ಅಲ್ಲಿಯವರೆಗೂ ಕಾಯಬೇಕು ಎಂದು ಬುದ್ಧನು ನುಡಿದನು. ಕೊನೆಗೊಂದು ಸಲ ರಾಡಿಯೆಲ್ಲಾ ಕೆಳಗಡೆ ಉಳಿದು ನೀರು ತಿಳಿಯಾಗಿತ್ತು.....! ಪಾತ್ರೆಯೊಂದರಲ್ಲಿ ನೀರು ತುಂಬಿಕೊಂಡು ಬಂದು‌ ಬುದ್ಧನಿಗೆ ನೀಡಿದ. ಆಗ ಬುದ್ಧನು, "ಆನಂದ... ಈಗ ತಾನೆ ರಾಡಿಯಾಗಿತ್ತು ಅಂದೆಯಲ್ಲಾ... ಹೇಗೆ ತಿಳಿಯಾಯಿತು ನೀರು?" ಎಂದು ಕೇಳಿದ. ಆಗ ಆನಂದನು "ರಾಡಿಯಾಗಿ ಸ್ವಲ್ಪ ಸಮಯ ಹಾಗೆಯೇ ಬಿಟ್ಟೆವಲ್ಲಾ... ರಾಡಿಯೆಲ್ಲಾ ಕೆಳಗೆ ಉಳಿದು, ನೀರು ಮತ್ತೆ ತಿಳಿಯಾಯಿತು" ಎಂದ.
     ನಾನು ಬೆಳಗ್ಗೆ ಹೇಳಿದ್ದೂ ಇದನ್ನೇ... ಯಾರಾದರೂ ಬೈದಾಗ, ಬೇಡದ್ದನ್ನು ಹೇಳಿದಾಗ ಮನಸ್ಸನ್ನು ಶಾಂತವಾಗಲು ಬಿಡಬೇಕು... ಸುಮ್ಮನಿರಬೇಕು... ಕೋಪ, ದ್ವೇಷ, ಹತಾಷೆಯ ರಾಡಿಯೆಲ್ಲಾ ಕೆಳಗುಳಿದು ಮನಸ್ಸು ಪರಿಶುದ್ಧವಾಗುತ್ತದೆ ಎಂದ. ಯಾವತ್ತೋ ನಿಮ್ಮಲ್ಲಿ ಈ ವಿಷಯ ಮಾತನಾಡಿದ್ದೇನೆ ಅನ್ನಿಸ್ತಿದೆ... ಆದರೆ ಮೊನ್ನೆ ಹುಡುಗನೊಬ್ಬ ಇನ್ನೊಂದು ಹುಡುಗನಿಗೆ ಏನೋ ಸಣ್ಣ ವಿಷಯದ ಕುರಿತು ತಮಾಷೆ ಮಾಡಿದನಂತೆ... ಇವನು ಅವನನ್ನು ದೂಡಿ ಹಾಕಿದ... ಬಿದ್ದವನ ಎದುರಿನ ಹಲ್ಲು ಮುರಿಯಿತು... ದೂಡಿದವನ ಕೋಪ ಹೋಯಿತು. ಮುರಿದ ಹಲ್ಲು ಜೀವನ ಪೂರ್ತಿ ಮರೆಯಾಗದ ನೋವಿನ ಹಾಗೆ... ಅರ್ಧ ಉಳಿಯಿತು. ಕೋಪ ಏನೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತದೆ...! ನಮಗೆ ಯಾವುದಾದರೂ ಕಾರಣಕ್ಕಾಗಿ ಬೈದ ಅಪ್ಪ.. ಅಮ್ಮ... ಗುರುಹಿರಿಯರ ಮೇಲೆ, ಎರಡು ಪಟ್ಟು ಸಿಟ್ಟು ಹೆಚ್ಚಾಗ್ತದೆ ಅಲ್ವಾ? ಸುಮ್ಮನಾಗಬೇಕು...! ಕೋಪವನ್ನು ಗೆಲ್ಲಬಹುದು ಎನ್ನುವ ಅರಿವು ನನ್ನೊಳಗೂ ಮೂಡುತ್ತಿದೆ..!
     ಮೊನ್ನೆಯ ಪತ್ರಕ್ಕೆ 12 ಮನಸ್ಸು ಗಳ ಉತ್ತರ...! ಬರೆಯುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿರುವುದಂತೂ ಸತ್ಯ! ನಿಮ್ಮ ಉತ್ಸಾಹ, ಕಾಯುವಿಕೆಯೇ ನಿತ್ಯ ಸ್ಫೂರ್ತಿ...! ಡಾ.ಹಿನೋಹರಾ ರವರ ಜೀವನ ಪ್ರೀತಿಯ ಪತ್ರ ಬರೆದ ಶಿಶಿರ್, ಭವ್ಯಶ್ರೀ, ಶ್ರಾವ್ಯ, ಸಾನ್ವಿ ಸಿ.ಎಸ್, ಪೂಜಾ, ಸಿಂಚನಾ ಶೆಟ್ಟಿ, ಲಹರಿ ಜಿ.ಕೆ, ಪ್ರಣಮ್ಯಾ ಜಿ, ಧೀರಜ್ ಕೆ.ಆರ್, ಸ್ರಾನ್ವಿ ಶೆಟ್ಟಿ, ಪ್ರಣೀತ್ ಡಿ ಪೂಜಾರಿ, ನಿಭಾ... ಬರೆಯುತ್ತಾ ಬರೆಯುತ್ತಾ ನೀವೆಲ್ಲಾ ಹೆಚ್ಚು ಹೆಚ್ಚು ಬೆಳೆಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದೆ ನಮ್ಮ ಜಗಲಿ ಬಳಗ.
     ಭಾವಗಳಿಗೆ ಅಕ್ಷರ ರೂಪ ಪಡೆದ ನಿಮ್ಮ ಪತ್ರಗಳಿಗಾಗಿ ಕಾಯುತ್ತಿದ್ದೇನೆ. ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article