-->
ಜೀವನ ಸಂಭ್ರಮ : ಸಂಚಿಕೆ - 72

ಜೀವನ ಸಂಭ್ರಮ : ಸಂಚಿಕೆ - 72

ಜೀವನ ಸಂಭ್ರಮ : ಸಂಚಿಕೆ - 72
                        
                ಮಕ್ಕಳೇ, ನಾವು ಈ ಜಗತ್ತಿಗೆ ಅರ್ಜಿ ಹಾಕಿ, ಬೇಡಿ ಬಂದವರಲ್ಲ. ನಾವು ಇದೇ ಮನೆಯಲ್ಲಿ ಹುಟ್ಟಬೇಕು, ಇದೇ ಜಾತಿಯಲ್ಲಿ ಹುಟ್ಟಬೇಕು, ಹೆಣ್ಣಾಗಿ ಹುಟ್ಟಬೇಕು ಅಥವಾ ಗಂಡಾಗಿ ಹುಟ್ಟಬೇಕು ಎಂದು ಬೇಡಿ ಬಂದವರಲ್ಲ. ನಾವು ಈ ಜಗತ್ತಿಗೆ ಬಂದಿದ್ದೇವೆ, ನೂರು ವರ್ಷ ಆಯಸ್ಸು. ಈ ನೂರು ವರ್ಷ ಒಮ್ಮೆಲೇ ಬರುವುದಿಲ್ಲ, ಕ್ಷಣ ಕ್ಷಣವಾಗಿ ಬರುತ್ತದೆ. ಆದ್ದರಿಂದ ಪ್ರತಿಕ್ಷಣ ಬದುಕಬೇಕು. ಹೇಗೆ ಬದುಕಬೇಕೆಂದರೆ, ಸುಂದರವಾಗಿ, ಸಂತೋಷವಾಗಿ ಮತ್ತು ಶ್ರೀಮಂತವಾಗಿ ಬದುಕಬೇಕು. ಪ್ರತಿಕ್ಷಣ ಹೀಗೆ ಬದುಕಬೇಕು. ಶ್ರೀಮಂತ ಅಂದಾಗ ನಮ್ಮ ಮನಸ್ಸು ಹೀಗೆ ಆಲೋಚಿಸುವುದು.... ಶ್ರೀಮಂತಿಕೆ ಎಂದರೆ ಬಂಗಾರ, ಕಾರು ಮತ್ತು ಬಂಗಲೆ ಎಂದು. ನಮ್ಮಲ್ಲಿ ಬಂಗಲೆ ಇದ್ದರೆ ಬಂಗಲೆ ಶ್ರೀಮಂತವಾಗಿದೆ. ಆದರೆ ನಾವು ಶ್ರೀಮಂತರಲ್ಲ. ನಮ್ಮಲ್ಲಿ ನೂರು ಕೆಜಿ ಬಂಗಾರವಿದ್ದರೆ, ಬಂಗಾರ ಶ್ರೀಮಂತ ವಿನಹ ನಾವು ಶ್ರೀಮಂತರಲ್ಲ. ನಮ್ಮಲ್ಲಿ ದೊಡ್ಡ ಕಾರು ಇದ್ದರೆ ಕಾರು ಶ್ರೀಮಂತವೇ ವಿನಹ ನಾವು ಶ್ರೀಮಂತರಲ್ಲ. ಹಾಗಾದರೆ ಶ್ರೀಮಂತ ಬದುಕು ಎಂದರೇನು? ನೋಡೋಣ.
       ಬದುಕು ಅಮೂಲ್ಯ ಮತ್ತು ಒಂದು ಅವಕಾಶ. ಬದುಕು ಎಲ್ಲಾ ಕೊಡುತ್ತದೆ. ಇದನ್ನು ಸರಿಯಾಗಿ ಬಳಸಿದರೆ ಶ್ರೀಮಂತರು ಆಗ್ತೀವಿ ಮತ್ತು ಪ್ರಶಾಂತಿಯನ್ನು ಪಡೆಯುತ್ತೇವೆ. ಸರಿಯಾಗಿ ಬಳಸದಿದ್ದರೆ ಬಡವರು ಆಗ್ತೀವಿ. ಒಂದು ಮರ ಇದೆ ಎಂದು ಭಾವಿಸಿ, ಮರವಾಗಲು ಬೀಜವನ್ನು ಮಣ್ಣಿನಲ್ಲಿ ಹಾಕುತ್ತೇವೆ. ಅದಕ್ಕೆ ನೀರು ಗೊಬ್ಬರ ಹಾಕುತ್ತೇವೆ. ಬೀಜ ಮೊಳೆತು, ಚಿಗುರು ಬರುತ್ತದೆ. ಎಷ್ಟು ವೈಭವ ಅದು. ಮುಂದೆ ಬೆಳೆದು ಹೂವನ್ನು ನೀಡುತ್ತದೆ. ಆ ಹೂವು ಸೌಂದರ್ಯ ನೀಡುತ್ತದೆ, ಅದು ಜಗತ್ತನ್ನು ಸೌಂದರ್ಯದಿಂದ ಶ್ರೀಮಂತ ಮಾಡುತ್ತದೆ. ಅದೇ ಹೂವು ಪರಿಮಳ ನೀಡುತ್ತದೆ. ಸುತ್ತಮುತ್ತ ಪರಿಸರವನ್ನು ಸುವಾಸನೆಯಿಂದ ತುಂಬುತ್ತದೆ. ಅದೇ ಹೂವು ಮಕರಂದ ನೀಡುತ್ತದೆ. ಆ ಹೂವಿನ ಬಳಿ ದುಂಬಿಗಳು ಝೇಂಕಾರ ಮಾಡುತ್ತಾ ಸುಳಿದಾಡುತ್ತವೆ. ಎಂತಹ ವೈಭವ. ಆ ಹೂವು.... ನೋಡಿದವರ ಮನಸ್ಸನ್ನು ಅರಳಿಸುತ್ತದೆ ಮತ್ತು ಮನಸ್ಸಿನಲ್ಲಿ ಸೌಂದರ್ಯ ಹಾಗೂ ಮಾಧುರ್ಯ ತುಂಬುತ್ತದೆ. ಮುಂದೆ ಹೂವು ಹಣ್ಣಾಗಿ ಮಾರ್ಪಡುತ್ತದೆ. ಆ ಹಣ್ಣು ಪ್ರಾಣಿ, ಪಕ್ಷಿ, ನಮ್ಮಗಳ ದೇಹವನ್ನು ಪುಷ್ಟಿ ಮಾಡುತ್ತದೆ. ಆಗ ಆ ಮರದ ಸಾರ್ಥಕತೆಯಾಗುತ್ತದೆ. ಆ ಮರದ ಬದುಕು ಸಮೃದ್ಧ ಬದುಕಾಗುತ್ತದೆ. ನೋಡುವುದಕ್ಕೆ, ಕೇಳುವುದಕ್ಕೆ, ಬದುಕುವುದಕ್ಕೆ ಏನು ಬೇಕು ಅದೆಲ್ಲ ನಿಸರ್ಗ ನಮಗೆ ನೀಡಿದೆ. ಕಣ್ಣಿದ್ದ ಮೇಲೆ ಸುತ್ತಮುತ್ತ ನಿಸರ್ಗ ಇರಬೇಕು. ಆ ನಿಸರ್ಗ ನಮ್ಮ ಕಣ್ಣನ್ನು ಶ್ರೀಮಂತ ಮಾಡುತ್ತದೆ. ಆ ಕಣ್ಣಿನಲ್ಲಿ ಬಣ್ಣ, ಆಕಾರ, ವಿಶಾಲ ಜಗತ್ತು ತುಂಬಬೇಕು. ಆಗ ದೃಷ್ಟಿ ಸಾರ್ಥಕತೆಯಾಗುತ್ತದೆ. ಗಿಡಕ್ಕೆ ನಾವು ಬೇಡದ ಕಸವನ್ನು ಹಾಕುತ್ತೇವೆ. ಆ ಕಸವನ್ನು ಗಿಡ ರಸವಾಗಿ ಮಾರ್ಪಡಿಸಿ, ಹಣ್ಣಿನಲ್ಲಿ ತುಂಬುತ್ತದೆ. ಹಾಗೆ ನಾವು ಜೀವನವನ್ನು ರಸಗೊಳಿಸಬೇಕು, ಮಧುರ ಮಾಡಬೇಕು. ಕಿವಿ ಏನನ್ನು ಕೇಳಿದರೆ ಶ್ರೀಮಂತ ಆಗುತ್ತದೆಯೋ, ಅದನ್ನು ಕೇಳಬೇಕು. ಹಕ್ಕಿಗಳ ಹಾಡು, ಮಧುರ ಗೀತೆಗಳು, ಕೋಗಿಲೆಯ ಗಾನ, ಬಾನಕ್ಕಿ ಹಾಡು,ಗಿಳಿಯ ಮಾತು, ನಾವು ಮಾತನಾಡಬೇಕು, ಹಾಡು ಬೇಕು. ಅದನ್ನು ಕೇಳಿ ಕಿವಿ ಸಮೃದ್ಧವಾಗಬೇಕು, ಶ್ರೀಮಂತ ವಾಗಬೇಕು. ಕಿವಿಯಲ್ಲಿ ಮಾಧುರ್ಯ ತುಂಬಬೇಕು. ಕಣ್ಣು ಕಿವಿ ಇರೋದು ಸಮೃದ್ಧ ಜೀವನ ಸಾಗಿಸಲು. ಕಣ್ಣಿಲ್ಲ ಕಿವಿಯಿಲ್ಲ ಕಲ್ಪಿಸಿಕೊಳ್ಳಿ ಜೀವನ ಬರಡಾಗುತ್ತದೆ. ನೋಡೋದು, ಕೇಳೋದೇ ಜೀವನ. ಅವು ಬದುಕನ್ನ ಶ್ರೀಮಂತ ಮಾಡುತ್ತದೆ. ವಿಶಾಲವಾದ ಆಕಾಶ, ತಂಪಾದ ಬೆಳಕು, ಶಾಂತವಾದ ವಾತಾವರಣ.... ಇವೇ ಸಂಪತ್ತು. ಜೀವನ ಅನುಭವಿಸಿ, ಜೀವನ ಶ್ರೀಮಂತ ಮಾಡಿಕೊಳ್ಳಬೇಕು. 
     ಜಗತ್ತನ್ನು ಗ್ರಹಿಸುವುದೇ ಕಣ್ಣು. ಬಣ್ಣ, ಆಕಾರ ಕಣ್ಣಿನ ಮೂಲಕ ಬಂದು ಮನಸ್ಸನ್ನು ಶ್ರೀಮಂತ ಮಾಡುತ್ತದೆ. ಕಣ್ಣಿರುವಾಗ ಬಡವರು ಹೇಗೆ...? ವರ್ಷ ಪೂರ್ತಿ ತಿಪ್ಪೆಯನ್ನೇ ನೋಡುತ್ತಿದ್ದರೆ, ಕಣ್ಣಿನ ಸಾರ್ಥಕತೆ ಎಲ್ಲಿ...? ಜಗತ್ತಿನಲ್ಲಿ ಒಳ್ಳೆಯದು, ಸೌಂದರ್ಯವಾದುದು ಇಲ್ಲವೇ....? ಒಂದು ಊರಿನಲ್ಲಿ ತಿಪ್ಪೆ ಇತ್ತು. ಆ ತಿಪ್ಪೆಯಲ್ಲಿ ಒಂದು ಬಳ್ಳಿ ಬೆಳೆದು, ಸುಂದರ ಹೂವನ್ನು ನೀಡಿತ್ತು. ದಾರಿಯಲ್ಲಿ ಒಬ್ಬ ವ್ಯಕ್ತಿ ಹೋಗುತ್ತಿದ್ದ. ಆ ತಿಪ್ಪೆಯನ್ನು ನೋಡಿ, ಏನು ಹೊಲಸು ಎಂದನು. ಆಗ ಆ ಬಳ್ಳಿ ಹೇಳಿತು, ನಿನಗೆ ಕಾಣೋದು ಹೊಲಸು. ನನ್ನ ಮೇಲೆ ಹೂವಿದೆ. ಅದು ನಿನಗೆ ಕಾಣಿಸುತ್ತಿಲ್ಲವೆ. ನನ್ನ ಒಳಗಿಂದ ಒಂದು ಹೂ ಬಂದಿದೆ. ಅದನ್ನು ಕಾಣು. ನಾನು ಹೊಲಸಿರಬಹುದು. ನನ್ನಿಂದ ಸುಂದರವಾದ ಹೂ ಹೊರ ಬರುತ್ತದೆ ತಿಳಿದುಕೋ ಎಂದಿತು. 
      ನೋಡುವುದನ್ನು ಕಲಿ ಎಂದು ಹೇಳಿತು. ನಿಸರ್ಗ ಕಣ್ಣನ್ನು ಯಾಕೆ ಕೊಟ್ಟಿದ್ದು...? ಒಳ್ಳೆಯದನ್ನ ನೋಡೋಕ್ಕೆ. ಒಳ್ಳೆಯದನ್ನು ನೋಡಿ ಕಣ್ಣು ನಮ್ಮನ್ನು ಶ್ರೀಮಂತ ಮಾಡುತ್ತವೆ. ನೂರು ವರ್ಷ ನೋಡಿದರೂ ಮುಗಿಯಲಾರದಷ್ಟು ಸೌಂದರ್ಯ ಈ ನಿಸರ್ಗದಲ್ಲಿದೆ. ಏನು ವರ್ಣ....? ಏನು ವೈಭವ...? ಏನು ಆಕಾರ...? ನೋಡುವ ಸಾಮರ್ಥ್ಯ ಕಣ್ಣಿಗೆ. ಇದು ನಮ್ಮ ಹೃದಯವನ್ನು ಶ್ರೀಮಂತ ಮಾಡ್ತವೆ. ಆನಂದಕ್ಕೆ ಬೆಲೆ ಎಷ್ಟು...? ನಿಸರ್ಗದಿಂದ ಮನಸ್ಸು ಆನಂದ ತುಂಬಿ ನಲಿಯುತ್ತದೆ. ಕಣ್ಣು ತೆರೆದರೆ ಸಾಕು ಸೌಂದರ್ಯ ತುಂಬುತ್ತದೆ. ಆನಂದ ಉಕ್ಕುತ್ತದೆ. ಕಣ್ಣಿನಿಂದ ನೋಡಬೇಕು ಜಗತ್ತಿನ ವೈಭವವನ್ನು. ಕಿವಿಗಳಿಂದ ಕೇಳಬೇಕು, ಶಬ್ದ ಜಗತ್ತನ್ನು. ನಾದ, ಶಬ್ದ ಇವು ಸಂಪತ್ತು. ಕಣ್ಣು ಕಿವಿಗಳು ಸಾಧನಗಳು ಇದ್ದಂತೆ. ಇವನ್ನ ಚೆನ್ನಾಗಿ ಬಳಸಿ ಮನಸ್ಸನ್ನು ಶ್ರೀಮಂತ ಮಾಡಬೇಕು. ಇವೆರಡು ನಮ್ಮನ್ನ ಶ್ರೀಮಂತ ಮಾಡುತ್ತದೆ. ಏನು ನೋಡಿದರೆ ಹೃದಯ ಅರಳುತ್ತದೆ ಅದನ್ನು ನೋಡಬೇಕು. ಏನನ್ನ ಕೇಳಿದರೆ ಮನಸ್ಸು ಅಮೃತವರ್ಷಿಣಿ ಆಗುತ್ತದೆ ಅದನ್ನು ಕೇಳಬೇಕು. ಇವುಗಳನ್ನು ಬಳಸಿದರೆ ಸ್ವರ್ಗ. ಎಲ್ಲಿದ್ದೇವೆ ಅನ್ನುವುದು ಮಹತ್ವದಲ್ಲ. ಕಣ್ಣನ್ನು ಹೇಗೆ ಬಳಸುತ್ತೇವೆ ಅದು ಮಹತ್ವ. ಮನೆ ಬಾಗಿಲು ಹಾಕಿ ಬದುಕಿದರೆ ಏನು ಪ್ರಯೋಜನ. ಹೊರಗೆ ಬಂದು ಜಗತ್ತನ್ನು ನೋಡಬೇಕು. ಜೀವನ ಸ್ವರ್ಗ ಆಗ್ತದೆ. ಎಲ್ಲಿ ಸೌಂದರ್ಯವಿದೆಯೋ, ಪ್ರಕಾಶ ವಿದೆಯೋ, ವಿಸ್ತಾರವಿದೆಯೋ, ಮಾಧುರ್ಯವಿದೆಯೋ ಅಲ್ಲಿ ದೇವರನ್ನ ಕಾಣಬೇಕು. ಕಣ್ಣು, ಕಿವಿ, ಮನಸ್ಸನ್ನು ಬಳಸಿ ಜೀವ ಹೋಗುವುದರೊಳಗೆ ಅನುಭವಿಸಿ ಅನುಭವಿಗಳಾಗಬೇಕು. ನೋಡುವುದನ್ನು ಕಲಿಯಬೇಕು. ಕೇಳುವುದನ್ನು ಕಲಿಯಬೇಕು. ಏನನ್ನಾದರೂ ನೋಡಿ, ಕೇಳಿ ಕೆಡಿಸಬಾರದು. ಇರೋದ್ರಲ್ಲಿ ಆನಂದ ಪಡುವುದನ್ನು ಕಲಿಯಬೇಕು. 
      ಕೈಗಳು ಶ್ರೀಮಂತವಾಗಬೇಕು. ಕೈಗಳು ಇರುವುದು ಶೃಂಗಾರ ಮಾಡಿಕೊಳ್ಳಲು ಅಲ್ಲ. ಕೆಲಸ ಮಾಡಲು. ಪ್ರತಿ ಕ್ಷಣ ಕೆಲಸ ಮಾಡಬೇಕು. ಅದು ಸುಂದರವಾಗಿರಬೇಕು ಮತ್ತು ಸಂತೋಷವಾಗಿ ಮಾಡಬೇಕು. ಇದರಿಂದ ಕೈಗಳು ಶ್ರೀಮಂತ ವಾಗುತ್ತದೆ. ಕಾಲುಗಳು ಗಟ್ಟಿಯಾಗಿದ್ದರೆ ಬೆಟ್ಟವನ್ನು ಏರಬಹುದು. ಸಾಗರವನ್ನು ಈಜಬಹುದು. ಗಿರಿಯ ತುದಿಗೆ ಹೋಗಬಹುದು. ಕಾಲು ಗಟ್ಟಿಯಾಗಿದ್ದರೆ ಸಮೃದ್ಧವಾಗಿದ್ದರೆ ಅದು ಶ್ರೀಮಂತವಾದಂತೆ. ಹಾಗೆ ದೇಹವನ್ನ ಬಳಸಬೇಕು. ಆ ಬಳಕೆ ನನಗೂ ಸಮಾಜಕ್ಕೂ ಸಂತೋಷ ಕೊಡಬೇಕು. ಮನಸು, ಕೈ ಕಾಲು, ಕಣ್ಣು ಮತ್ತು ಕಿವಿ ಬಳಸಬೇಕು. ಮನಸ್ಸನ್ನು ಸಂತೋಷದಿಂದ, ಸೌಂದರ್ಯದಿಂದ, ಮಾಧುರ್ಯದಿಂದ ಶ್ರೀಮಂತ ಮಾಡುವುದು.
      ಬುದ್ಧಿಯಲ್ಲಿ ಸುಂದರ ಜ್ಞಾನ ಸಂಗ್ರಹಿಸಬೇಕು ಹಾಗೆ ಸುಂದರ ಆಲೋಚನೆ ಮಾಡಿದಾಗ ಬುದ್ಧಿ ಶ್ರೀಮಂತವಾಗುತ್ತದೆ. ಹೃದಯದಲ್ಲಿ ಸದ್ಭಾವ ತುಂಬಿದಾಗ ಹೃದಯ ಶ್ರೀಮಂತ ವಾಗುತ್ತದೆ. ಸಂತೋಷದಂತಹ ಸಂಪತ್ತು ಜಗತ್ತಿನಲ್ಲಿಲ್ಲ. ಆ ಸಂತೋಷ ಅನ್ನುವ ಸಂಪತ್ತು ಮನಸ್ಸಿನಲ್ಲಿದ್ದರೆ, ಅದೇ ಶ್ರೀಮಂತ ಬದುಕು. ಅದಕ್ಕಾಗಿ ನಾವು ಪ್ರತಿಕ್ಷಣ ನಮ್ಮ ಕಣ್ಣು , ಕಿವಿ, ಕೈ, ಕಾಲು, ಮನಸು, ಬುದ್ದಿ ಮತ್ತು ಹೃದಯವನ್ನು ಸಂದರ್ಭಾನುಸಾರ ಬಳಸಿ ಸಂತೋಷ ಪಡುವುದನ್ನು ಕಲಿಯಬೇಕು.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article