-->
ಸ್ಫೂರ್ತಿಯ ಮಾತುಗಳು (ಸಂಚಿಕೆ - 50) : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು (ಸಂಚಿಕೆ - 50) : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                       
  ಚಿಂತಾಯಾಶ್ಚ ಚಿತಾಯಾಶ್ಚ ಬಿಂದುರೇಕೋ
  ವಿಶಿಷ್ಯತೇ|
  ಚಿತಾ ದಹತಿ ನಿರ್ಜೀವಂ ಚಿಂತಾ ತು 
  ಸಜೀವಕಂ||
           ಬಹಳ ಅರ್ಥಪೂರ್ಣವಾದ ಮಾತು. ಚಿಂತೆ ಮತ್ತು ಚಿತೆಗಳ ನಡುವೆ ಬಿಂದು ಮಾತ್ರ ವಿಶೇಷ. ಚಿತೆಯು ನಿರ್ಜೀವಿಯನ್ನು ಸುಡುತ್ತದೆ. ಚಿಂತೆಯು ಸಜೀವಿಯನ್ನೇ ದಹಿಸುತ್ತದೆ ಎಂಬುದು ಸಾಮಾನ್ಯ ಅರ್ಥ. ಚಿಂತೆಯ ದಹನ ಶಕ್ತಿಯು ಚಿತೆಗಿಂತ ಅಧಿಕ. ನಾವು ಬದುಕಿನ ಕೊನೆಯಲ್ಲಿ ಒಮ್ಮೆ ಮಾತ್ರ ಚಿತೆಯ ಪಾಲಾಗುತ್ತೇವೆ. ಆದರೆ ಚಿಂತೆಯು ನಮ್ಮ ಬದುಕಿನುದ್ದಕ್ಕೂ ನಮ್ಮನ್ನು ದಹಿಸುತ್ತಿರುತ್ತದೆ. ಚಿಂತೆಗೆ ಕಾರಣ ಚಿಂತನೆಯ ಕೊರತೆ.
       ಹಿರಿಯರು ಗದರಿಸಿದರೆ ಮಕ್ಕಳು ಚಿಂತಿಸುತ್ತಾರೆ. ಚಿಂತೆಯ ಜೊತೆಗೆ ರೋಷವೂ ಸಂಗಮಿಸುತ್ತದೆ. ಕಠಿಣ ತರಹದ ನಿರ್ಧಾರ ಮಾಡುತ್ತಾರೆ. ಕೆಲವರು ಪ್ರತಿರೋಧ ಮಾಡುತ್ತಾರೆ. ಇನ್ನೂ ಕೆಲವರು ಸಿಟ್ಟಿನಲ್ಲಿ ಶಪಿಸುತ್ತಾರೆ. ಮನೆಯಿಂದ ದೂರ ಓಡಿ ಹೋಗುವವರೂ ಇದ್ದಾರೆ. ಆತ್ಮಹತ್ಯೆಗೆ ಯತ್ನಿಸುವವರೂ ಇರುತ್ತಾರೆ. ಇವೆಲ್ಲವೂ ಅತಿರೇಕದ ನಿರ್ಧಾರಗಳು. ಗದರಿದರೆ ಸಿಡುಕ ಬಾರದು, ತಮ್ಮ ತಪ್ಪುಗಳನ್ನು ಹುಡುಕ ಬೇಕು. ಗದರಿದ ಹೆತ್ತವರೊಡನೆ ತಾಳ್ಮೆಯಿಂದ ಮಾತುಕತೆ, ಗದರುವಿಕೆಗೆ ಇರಬಹುದಾದ ಸತ್ಯಾಂಶಗಳ ಶೋಧನೆ, ತಮ್ಮ ತಪ್ಪೊಪ್ಪುಗಳ ಅಂತರವಲೋಕನ ಮಾಡುವುದು ಹೀಗೆ, ನಾನಾ ದಾರಿಗಳ ಮೂಲಕ ಸರಿಯಾಗುವ ಅಥವಾ ಸರಿಪಡಿಸುವ ಚಿಂತನೆ ಚಿಂತೆಯ ಪರಿಮಾರ್ಜನೆಗೆ ಇರುವ ಸರಳೋಪಾಯ. ಆದರೆ ಚಿಂತನೆ ಮಾಡುವ ವ್ಯವಧಾನ ನಮಗಿರದೇ ಇರುವುದು, ತಾಳ್ಮೆಯನ್ನು ಬಹಳ ಬೇಗನೆ ಕಳೆದುಕೊಳ್ಳುವುದು ಎಲ್ಲ ದುರ್ಘಟನೆಗಳಿಗೆ ಕಾರಣವಾಗುತ್ತಲಿರುವುದು ದುರದೃಷ್ಟಕರ. ಇಲ್ಲಿ ವಿವರಿಸಿದ “ಗದರುವುದು” ಚಿಂತೆಯ ಮೂಲದ ಒಂದು ದೃಷ್ಟಾಂತ ಮಾತ್ರ. ಚಿಂತೆಯನ್ನು ಸೃಷ್ಟಿಸುವ ಕಾರಣಗಳು ಅಸಂಖ್ಯ.        
ಭಯವೂ ಚಿಂತೆಗೆ ಕಾರಣವಾಗುತ್ತದೆ. ಆದರೆ ಸತ್ಯವಂತರಿಗೆ ಭಯವಿರದು. ಯಾರಿಗಾದರೂ ಹಿಂಸೆ, ಮೋಸ, ಅನ್ಯಾಯ, ವೃಥಾರೋಪ ಮಾಡಿದರೆ, ಅಗೌರವಯುತವಾದ ಪದಗಳಿಂದ ಬೈದಿದ್ದರೆ.... ಭಯ ಸಹಜ. ಸತ್ಯವನ್ನೇ ಬದುಕಿನ ವೃತವನ್ನಾಗಿಸಿದರೆ ಭಯ ಪಡುವುದಾದರೂ ಅನಗತ್ಯ. ಹಾಗಾಗಿ ಚಿಂತಾ ರಹಿತರಾಗಲು ಬದುಕಿನ ಪಥವು ವಕ್ರವಾಗದಂತೆ ಎಚ್ಚರಿಕೆ ಅಗತ್ಯ. ವಕ್ರವಾಗುವುದರ ಅರಿವಾದಾಗ ಸರಿಪಡಿಸುವ ಸೌಜನ್ಯವೂ ಅಗತ್ಯ. ಅನಾರೋಗ್ಯ, ಹಣಕಾಸಿನ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಸಾಮಾಜಿಕ ಕಾರಣಗಳು, ಆತ್ಮೀಯರ ಸಾವು, ಜಮೀನಿನ ತಗಾದೆ, ಯಾವುದೋ ಸೋಲು... ಹೀಗೆ ಅಸಂಖ್ಯ ಸಂಗತಿಗಳು ಚಿಂತೆಯ ಸೃಷ್ಟಿಗೆ ಹೇತುವಾಗುತ್ತವೆ. ಚಂತೆಯು ವ್ಯಕ್ತಿಯನ್ನು ಆವರಿಸಿದಾಗ ಹೆದರುವುದು ಸಹಜ. ಹೆದರಿಕೆ ಮುಕ್ತರಾದರೆ ಚಿಂತೆಯು ಉದ್ಭವಿಸದು. ಚಿಂತೆಯ ವ್ಯಾಪ್ತಿ ಮತ್ತು ಅವಧಿ ಹೆಚ್ಚಿದಂತೆ ಅದು ಮನೋರೋಗಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಮರೆಯಬಾರದು. 
      ಒಂದು ಅಧ್ಯಯನವು ಹೇಳುವಂತೆ ಚಿಂತೆಯು ಆರು ತಿಂಗಳೊಳಗೆ ಶಮನವಾಗದಿದ್ದರೆ ಭ್ರಾಂತು ಹಿಡಿಯುತ್ತದೆ. ಮನುಷ್ಯನಿಗೆ ಸೋಲು ಗೆಲುವು, ಲಾಭ ನಷ್ಟಗಳು ಸಹಜ. ಆದರೆ ಅವಕಾಶಗಳಿಂದ ಯಾರೂ ವಂಚಿತರಾಗುವುದಿಲ್ಲ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸುವ ಎದೆಗಾರಿಕೆಯು ಹೊಸ ದಾರಿಯನ್ನು ತೆರೆದಿಡುತ್ತದೆ. ಸೋಲಿನ ಅನುಭವಗಳು ಮುಂದಿನ ನಡೆಗಳನ್ನು ಸುಲಭಗೊಳಿಸುತ್ತವೆ. ಆದರೆ ಸಾಧನೆ ಮಾಡುವ ಮತ್ತು ಆ ಮೂಲಕ ಗುರಿ ತಲುಪುವ ಬದ್ಧತೆಯಿಂದ ಜಾರಬಾರದು.
       ಸೂರ್ಯನು ಮುಂಜಾನೆ ಸಣ್ಣಗಿರುತ್ತಾನೆ. ಬೆಳೆಯುತ್ತಾ ಏರುತ್ತಾನೆ. ಸಂಜೆ ಮತ್ತೆ ಮರಳಿ ಬೆಳಗ್ಗಿನ ಸ್ಥಿತಿಗೆ ಬರುತ್ತಾನೆ. ಆದರೆ ಚಿಂತೆ ಮಾಡುವುದಿಲ್ಲ. ಮರುದಿನ ಮತ್ತೆ ಪ್ರಯತ್ನವನ್ನು ಮುಂದುವರಿಸುತ್ತಾನೆ. ಏಳು ಬೀಳುಗಳು ಪ್ರಕೃತಿ ಸಹಜ. ಬಿದ್ದಾಗ ಏಳುವ ಸಾಹಸ ಮಾಡಲೇ ಬೇಕು. ಚಿಂತೆ ಮಾಡುತ್ತಾ ಮೂಲೆ ಸೇರಿದರೆ ಸ್ವಯಂ ನಾಶ ನಿಶ್ಚಯ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article