
ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 43
Sunday, February 12, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 43
ಎಷ್ಟೊಂದು ಬೇಗ ದಿನಗಳು ಉರುಳುತ್ತಿವೆ...!ಅನುಭವಗಳೆಲ್ಲವೂ ನೆನಪಿನ ಪುಟಗಳಿಗೆ ಸೇರಿದಂತೆ ಬರುವ ದಿನಗಳಿಗಾಗಿರುವ ಖಾಲಿ ಹಾಳೆಗಳು ಬಣ್ಣ ತುಂಬಿಕೊಳ್ಳಬೇಕಿದೆ!
ಪ್ರಯತ್ನಿಸದ ಹೊರತು ಕೈಗೆಟುಕಿದ ಯಾವ ಗೆಲುವೂ ನಮ್ಮದಲ್ಲ!
ಅಲ್ಲೊಂದು ಕಾಡು. ಆನೆಗಳು ಮತ್ತು ಮಾವುತರಿದ್ದರು. ಅಲ್ಲಿರುವ ಪ್ರತಿಯೊಂದು ಆನೆಗಳ ಕಾಲನ್ನೂ ಸಣ್ಣ ಹಗ್ಗದಿಂದ ಕಟ್ಟಲಾಗಿತ್ತು. ಆನೆಗಳು ಸುಲಭವಾಗಿ ಆ ಹಗ್ಗವನ್ನು ತುಂಡರಿಸಿ ಹೋಗಬಹುದಿತ್ತು. ಆದರೆ ಹಾಗಾಗಲಿಲ್ಲ... ಎಲ್ಲಾ ಆನೆಗಳೂ ನಿಂತಲ್ಲಿಂದ ಕದಲುತ್ತಿರಲಿಲ್ಲ....!
ಏನಾಶ್ಚರ್ಯ...? ಯಾಕಿರಬಹುದು..?
ನಮ್ಮ ಮನೆಗಳಲ್ಲಿರುವ ದನಗಳು, ಒಮ್ಮೊಮ್ಮೆ ನಾಯಿಗಳೂ ಹೀಗೆಯೇ ಮೋಸ ಹೋಗ್ತವೆ ಅಲ್ವಾ? ಹಗ್ಗವನ್ನು ಗೂಟಕ್ಕೆ ಕಟ್ಟದಿದ್ದರೂ ದನಗಳು ಅಲ್ಲೇ !
ಇದು ನಂಬಿಕೆ! ಆನೆಗಳು ಸಣ್ಣದಿರುವಾಗ ಮಾವುತರು ಅವುಗಳ ಕಾಲನ್ನು ದಿಮ್ಮಿಗೆ ಕಟ್ಟುತ್ತಾರೆ. ಎಷ್ಟು ಪ್ರಯತ್ನಿಸಿದರೂ ಬಿಡುಗಡೆ ಸಾಧ್ಯವಾಗುವುದಿಲ್ಲ. ಕೊನೆಗೊಮ್ಮೆ ಪ್ರಯತ್ನವನ್ನು ನಿಲ್ಲಿಸಿಬಿಡುತ್ತವೆ. ಸಣ್ಣ ವಯಸ್ಸಿನ ಸೋಲು ತನ್ನಿಂದ ಇನ್ನು ಮುಂದೆ ಸಾಧ್ಯವೇ ಆಗದೆನ್ನುವ ತಪ್ಪು ಭಾವನೆಯನ್ನು ಹುಟ್ಟಿಸಿಬಿಡುತ್ತದೆ..! ಸುಮ್ಮನಿರುವ ಸೋಮಾರಿತನವನ್ನು ರೂಢಿಸಿಕೊಂಡರೆ ಅತ್ಯಂತ ಸಮೀಪದಲ್ಲಿ ಕೈಗೆಟಕುವ ಗೆಲುವು ಸಿಗದಾಗುತ್ತದೆ..!
ಈಗ ನೀವೊಂದು ಪುಸ್ತಕ ಮತ್ತು ಪೆನ್ನನ್ನು ಕೈಗೆತ್ತಿಕೊಳ್ಳಿ. ನೀವು ಒಂದು ನಿಮಿಷದಲ್ಲಿ ಎಷ್ಟು ಸೊನ್ನೆಗಳನ್ನು ಹಾಕಬಹುದೆಂದು ಊಹಿಸಿಕೊಂಡು, ನಿಮ್ಮ ಊಹೆಯ ಸಂಖ್ಯೆಯನ್ನು ಬರೆದಿಡಿ. ಈಗ ಸೊನ್ನೆಯನ್ನು ಬರೆಯಲು ಪ್ರಾರಂಭಿಸಿ. ಸರಿಯಾಗಿ ಒಂದು ನಿಮಿಷವಾಗುವಾಗ ನಿಲ್ಲಿಸಿ. ನೀವು ಹಾಕಿದ ಸೊನ್ನೆಗಳು ಎಷ್ಟಿವೆ..? ಎಣಿಸಿ. ಆರಂಭದ ನಿಮ್ಮ ಊಹೆ ಮತ್ತು ನಂತರದ ನಿಮ್ಮ ಸಾಧ್ಯತೆಗಿರುವ ವ್ಯತ್ಯಾಸವನ್ನು ಗಮನಿಸಿ! ಏನನ್ನಿಸಿತು? ಬರೆದು ಕಳಿಸ್ತೀರಲ್ಲಾ?
ಶಿಶಿರ್, ಭವ್ಯಶ್ರೀ, ಪ್ರಿಯಾ, ಲಹರಿ, ಶ್ರಾವ್ಯ, ಸಾತ್ವಿಕ್ ಗಣೇಶ್, ವೈಷ್ಣವಿ ಕಾಮತ್, ಪ್ರಣಮ್ಯ, ಹಿತಶ್ರೀ, ಸಾನ್ವಿ ಸಿ.ಎಸ್, ರಶ್ಮಿತಾ ರವಿರಾಜ್, ಧನ್ವಿ ರೈ, ನಿಭಾ... ಕಳೆದ ಬಾರಿಯ ಪತ್ರಕ್ಕೆ ನಿಮ್ಮ ಪ್ರತಿಕ್ರಿಯೆ ಬಹಳ ಖುಷಿ ಕೊಟ್ಟಿತು. ಎಷ್ಟೊಂದು ಪ್ರಬುದ್ಧವಾಗಿ ಬರೆಯುತ್ತಿದ್ದೀರಿ. ನಿಮ್ಮೊಳಗಿರುವ ಹೊಸದೊಂದು ಸಾಧ್ಯತೆಗೆ ಜಗಲಿ ವೇದಿಕೆಯಾಗುತ್ತಿದೆ! ಮಾಹಿತಿಗಳ ಕೊಡು ಕೊಳ್ಳುವಿಕೆಯ ಪತ್ರೋತ್ತರ ಚಂದ....! ಕಲಿಸುತ್ತಾ ಕಲಿಯುವ ಅವಕಾಶ ಇಲ್ಲಿ ಎಲ್ಲರಿಗೂ... ನಿಮ್ಮ ಗೆಳೆಯ ಗೆಳತಿಯರಿಗೂ ಬರೆವಣಿಗೆಯ ರುಚಿಯನ್ನು ಉಣಿಸಿ. ಓದುವ ಆಸಕ್ತಿಯನ್ನು ವಿಸ್ತರಿಸಿ. ಅಕ್ಕನ ಪ್ರೀತಿ ನಿಮಗೆಲ್ಲರಿಗೂ...
ಈ ಬಾರಿ ಮತ್ತೊಂದು ಹೊಸ ನಿರೀಕ್ಷೆ ನಿಮ್ಮಿಂದ.... ಕಾಯುತ್ತಿರುತ್ತೇನೆ. ನಿಮ್ಮ ಪ್ರೀತಿಯ ಉತ್ತರಕ್ಕಾಗಿ..... ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************