ಕಲಿಕಾ ಹಬ್ಬದ ಬಗ್ಗೆ ಶಿಕ್ಷಕರ ಅನಿಸಿಕೆ - 7
Sunday, February 19, 2023
Edit
ಲೇಖಕರು : ಅರ್ಚನಾ
ಅತಿಥಿ ಶಿಕ್ಷಕಿ
ಸ. ಉ. ಹಿ. ಪ್ರಾ. ಶಾಲೆ ಸಾವ್ಯ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳ ಸಂತಸ ಸಡಗರದ ಹಬ್ಬ
ಭಾವವ ಸ್ಪುರಿಸುತಾ ಕಣ್ಮನ ತಣಿಸುವ
ಹರುಷವ ಸವಿಯುವ ಹಬ್ಬ....
ಆಹಾ! ಕಲಿಕಾ ಹಬ್ಬ ಹೆಸರೇ ಸೂಚಿಸುವಂತೆ ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಅಪರಿಮಿತ ಸ್ವಾತಂತ್ರ್ಯ ಮತ್ತು ಖುಷಿ ಮಗುವಿಗೆ ಹಬ್ಬದ ಸಡಗರವನ್ನೇ ಉಂಟುಮಾಡಬಹುದಲ್ಲವೇ...?
ಅಂಡಿಂಜೆ ಕ್ಲಸ್ಟರ್ ಕಲಿಕಾ ಹಬ್ಬವು ನಮ್ಮ ಹತ್ತಿರದ ಸರ್ಕಾರಿ ಪ್ರೌಢಶಾಲೆ ಕೊಕ್ರಾಡಿಯಲ್ಲಿ ನಡೆಯಿತು. ಇದು ಕೇವಲ ಸರ್ಕಾರಿ ಶಾಲಾ ಮಕ್ಕಳಿಗಾಗಿ ಮಾತ್ರ ಇದ್ದುದರಿಂದ ಆರು ಶಾಲೆಗಳು ಭಾಗವಹಿಸಿದ್ದವು. ನಮ್ಮ ಶಾಲೆಯ 24 ವಿದ್ಯಾರ್ಥಿಗಳು ಜೊತೆಗೆ ನಾನು ಭಾಗವಹಿಸಿರುವುದು ನನ್ನ ಪುಣ್ಯವೇ ಸರಿ. ಶಾಲೆಗೆ ಹತ್ತಿರವಾಗುತ್ತಿದ್ದಂತೆ ಶಾಲೆಯ ಪ್ರವೇಶ ದ್ವಾರವೇ ನಮ್ಮನ್ನು ಕೈಬೀಸಿ ಕರೆದು ಮನಸ್ಸಿಗೆ ಮುದವನ್ನೀಯುವಂತಿತ್ತು. ಆಕಾಶದೀಪಗಳು ವರ್ಣರಂಜಿತವಾಗಿ ಶೃಂಗರಿಸಿದ ಪರಿಯಂತೂ ನಮ್ಮ ಮನಸ್ಸಿಗೆ ಆಹ್ಲಾದಕರವೆಂಬಂತೆ ಭಾಸವಾಯಿತು.
ಆಗಮಿಸಿದ ಅತಿಥಿಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಸಾಲು ಸಾಲಾಗಿ ನಿಂತ ಮಕ್ಕಳ ಹರುಷದ ಹೊನಲಿನೊಂದಿಗೆ ಬ್ಯಾಂಡ್ ಮೂಲಕ ಕರೆದೊಯ್ದರು. ಮೆರವಣಿಗೆಯಲ್ಲಿ ಉತ್ಸಾಹದಿಂದ ಶಿಸ್ತಿನ ಸಿಪಾಯಿಗಳಂತೆ ಅಂಡಿಂಜೆ ಶಾಲಾ ಮಕ್ಕಳು ಸಾಮೂಹಿಕ ಕವಾಯತುಗಳಿಗೆ ಹೆಜ್ಜೆ ಹಾಕಿ, ನವಚೈತನ್ಯದ ಹರ್ಷೋದ್ಗಾರದೊಂದಿಗೆ ಸರ್ವರ ಮನಸೆಳೆದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಅತಿಥಿಗಳನ್ನು ಸಮಾರಂಭದ ವೇದಿಕೆಗೆ ಕರೆತಂದು ರಾಜಾ ಟೋಪಿ ತೊಡಿಸಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಶಾಲಾ ಮುಖ್ಯ ಗುರುಗಳು ಶಿಕ್ಷಕ ವೃಂದದವರೆಲ್ಲರೂ ಬೆನಕನ ನೆನೆದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಇತ್ತರು.
ಕಲಿಕಾ ಹಬ್ಬದಲ್ಲಿ 'ಮಾಡು - ಆಡು' , 'ಊರು ತಿಳಿಯೋಣ', 'ಕಾಗದ - ಕತ್ತರಿ', 'ಆಡು - ಹಾಡು' ಎಂಬ ನಾವೀನ್ಯತೆಯ ಚಟುವಟಿಕೆಗಳಿದ್ದು ಮಕ್ಕಳು ಸಂತೋಷದಿಂದ ಪಾಲ್ಗೊಳ್ಳುವಂತಿದೆ. ಮಕ್ಕಳಿಗೆ 'ಬೇಸರ' ಎನ್ನುವ ಪದವೇ ಹತ್ತಿರ ಸುಳಿಯದೆ, ಸಮಯ ವ್ಯರ್ಥ ಮಾಡದೇ ಹೆಜ್ಜೆ ಹೆಜ್ಜೆಗೂ ಮಕ್ಕಳು ಚಟುವಟಿಕೆಗಳ ಮೂಲಕ ಅನುಭವಿಸಿ ಕಲಿಯುವ ಕಾರಣ ಜೀವಮಾನಕ್ಕೂ ಮರೆಯಲಾರರು. ಎಲ್ಲಾ ಮಕ್ಕಳು ಉತ್ಸಾಹದ, ಚೈತನ್ಯದ ಚಿಲುಮೆಯಂತೆ ಸಂಭ್ರಮಿಸುತ್ತಿರುವುದನ್ನು ಕಂಡು ನಾನು ಮೂಕವಿಸ್ಮಿತಳಾದೆ.
ಒಟ್ಟಾರೆಯಾಗಿ ಕಲಿಕಾ ಹಬ್ಬವು ಮಕ್ಕಳ ಸ್ವಂತ ಕಲಿಕೆಯ ವಿಧಾನವಾಗಿದೆ. ಬಹಳ ಮನರಂಜನೀಯವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಲ್ಲರ ಜೊತೆ ಬೆರೆತು, ಆಡಿ, ಹಾಡಿ, ಕುಣಿದು ಕುಪ್ಪಳಿಸಿದರು. ಬೇರೆ ಶಾಲೆಯ ಮಕ್ಕಳೊಂದಿಗೆ ಆತ್ಮೀಯ ಒಡನಾಟ ಬೆಳೆಸಿ, ಎರಡು ದಿನಗಳಲ್ಲಿ ಝೇಂಕರಿಸುವ ಕಲಿಕಾ ಹಬ್ಬ ಮುಗಿಯಿತಲ್ಲ ಎಂಬ ಬೇಸರಿಸಿದರು.
ಆ ಕ್ಷಣದೊಂದಿಗೆ ಹಿರಿಯರ , ಕಿರಿಯರ ಖುಷಿ ಎಲ್ಲೆಡೆ ಹರಿದು ಆದರದಲ್ಲಿ ಕಲಿಕಾ ಹಬ್ಬ ಉಣಬಡಿಸಿದ ಶಿಕ್ಷಕರೆಲ್ಲರಿಗೂ, ಊಟಕೆ ಪಾಕದ ಸವಿಯಿತ್ತ ಈ ಶಾಲೆಗೂ ಹೃನ್ಮನದಿ ಧನ್ಯತೆ ಹೇಳುತ್ತಾ....
ಕಲಿಕೆಯು ಕಲಿತಷ್ಟು ಕಲಿಸುವ ಸಾಗರ
ಅರಿಯಲು ಅರಿವಿನ ಅಗರ
ತಿಳಿಯಲು ಜ್ಞಾನ ಭಂಡಾರ
ಕಲಿಸುತ್ತದೆ ನಿತ್ಯ ಜೀವನದ ಸಾರ....
ಎನ್ನುತ್ತಾ ನನ್ನೀ ನುಡಿಗಳಿಗೆ ಪೂರ್ಣವಿರಾಮವೀಯುತ್ತಿದ್ದೇನೆ.
ಅತಿಥಿ ಶಿಕ್ಷಕಿ
ಸ. ಉ. ಹಿ. ಪ್ರಾ. ಶಾಲೆ ಸಾವ್ಯ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************