-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 51

ಸ್ಫೂರ್ತಿಯ ಮಾತುಗಳು : ಸಂಚಿಕೆ - 51

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

ಸ್ಫೂರ್ತಿಯ ಮಾತುಗಳು : ಸಂಚಿಕೆ - 51
                        
           ವಾದವು ಭಾಷೆಯ ಹುಟ್ಟಿನೊಂದಿಗೆಯೇ ಸಮಾಜದಲ್ಲಿ ಬೆಳೆಯತೊಡಗಿದೆ. ವಾದದಿಂದ ವಾಕ್ಚಾತುರ್ಯದ ವರ್ಧನೆಯಾಗುತ್ತದೆ. ಶಾಲೆಗಳಲ್ಲಿ ನಡೆಯುವ ಚರ್ಚಾ ಸಭೆಗಳು ಮಕ್ಕಳ ವಾಕ್ಸಾಮರ್ಥ್ಯವನ್ನು ಬಲಗೊಳಿಸುತ್ತವೆ. ವಾದದಿಂದ ಭಾಷಾ ಸಾಮರ್ಥ್ಯವೂ ಪ್ರಕಾಶಿತವಾಗುತ್ತದೆ. ವಾದದ ನಡೆಯಲ್ಲಿ ವಾಕ್ಪಟುತ್ವವೇ ಬಂಡವಾಳ. ಅಸಂಗತ ಮಾತಿನ ಚಕಮಕಿಯನ್ನು ವಿವಾದವೆನ್ನುವರು.  ವಾಕ್ಪಟುವಿಗೆ ವಾದ ಮಾಡಲು ನಾಲಗೆ ಮಾತ್ರವೇ ಸಾಲದು, ಸುಂದರ ಮತ್ತು ಪ್ರೌಢ ಭಾಷಾ ಸಾಹಿತ್ಯವೂ ಅನಿವಾರ್ಯ. ಜ್ಞಾನಿಗಳ ಮಧ್ಯೆ ನಡೆಯುವ ವಾದಕ್ಕೆ ಕಿವಿಯಾಗುವ ಪ್ರೇಕ್ಷಕರು ಜ್ಞಾನದ ರಸದೌತಣವನ್ನೇ ಉಣಬಹುದು. ಕೆಲವೊಮ್ಮೆ ಜ್ಞಾನಿಗಳೊಳಗಿನ ವಾದದ ಸರಣಿ ಅಥವಾ ಮಾತಿನ ಸಮರವನ್ನು ವಾಗ್ಯುದ್ಧ ಎಂದೂ ಹೇಳುವುದಿದೆ. ಆದರೆ ಆ ವಾಗ್ಯುದ್ಧದಲ್ಲಿ ಯಾವುದೇ ಅಸಂಗತಗಳು ನಡೆಯುವುದಿಲ್ಲ. ದಾರಿ ತಪ್ಪಿದ ಮಾತುಗಳು ಹೊಮ್ಮುವುದಿಲ್ಲ. ಗೌರವಯುತವಾದ ವಾಗ್ಯುದ್ಧವು ಶ್ರೋತೃವಿನ ಜ್ಞಾನವನ್ನು ವರ್ಧಿಸುತ್ತದೆ. ಯಕ್ಷಗಾನ ಪಾತ್ರಧಾರಿಗಳು ತಮ್ಮ ಭಾಷೆ ಮತ್ತು ಸಾಹಿತ್ಯ ಶ್ರೇಷ್ಠತೆಯನ್ನು ಅನಾವರಣಗೊಳಿಸುವುದಿದೆ. ಪಾತ್ರದ ನಿಲುವುಗಳನ್ನು ಮಂಡಿಸುವಾಗ ವಾದ ಪ್ರತಿವಾದಗಳು ನಡೆಯುತ್ತವೆ. ಆದರೆ ಅದು ಪಾತ್ರದ ಘನತೆಯನ್ನು ಎತ್ತಿ ತೋರಿಸುವ ಉದ್ದೇಶದ ವಾದವಾಗಿರುತ್ತದೆ. ಕಥೆಯನ್ನು ಬಿಟ್ಟು ಹಾಕುವ ಮತ್ತು ಪಾತ್ರಕ್ಕೆ ಅಪಚಾರವಾಗುವಂತಹ ಯಾವುದೇ ಘಟನೆಗಳು ಇಲ್ಲಿ ಉದ್ಭವಿಸುವುದಿಲ್ಲ. ಸಹ್ಯ ಮತ್ತು ಜನಾಪೇಕ್ಷಿತ ವಾದ ಪ್ರತಿವಾದಗಳೇ ನಡೆಯುತ್ತವೆ. ಧನಾತ್ಮಕ ಮತ್ತು ಜ್ಞಾನಪೋಷಕ ವಾದವು ಖಂಡಿತವಾಗಿಯೂ ಕರ್ಣಾನಂದಕರ ಮತ್ತು ಹೃದಯಾನಂದಕರ. 
       ವಿತಂಡವಾದ ಅಥವಾ ಕುತರ್ಕವು ಸುಸಂಗತವಲ್ಲ. ವಿಘ್ನಸಂತೋಷಿಗಳಿಗೆ ವಿತಂಡವಾದದಿಂದ ಉಚಿತ ಸುಖ ಅಥವಾ ಪುಕ್ಕಟೆ ಮನರಂಜನೆ ಸಿಗಬಹುದಾದರೂ ಇದು ಅಸಹನೀಯ. ವಿಕೃತ ತರ್ಕದಲ್ಲಿ ಬಳಸಲ್ಪಡುವ ಪದಗಳು ನೇತ್ಯಾತ್ಮಕವಾಗಿರುತ್ತವೆ. ವಿತಂಡವು ಘಾಸಿ ನೀಡುವ ಹುಸಿ ಮಾತುಗಳ ಸಮುಚ್ಚಯವಾಗಿರುತ್ತದೆ. ವಿತಂಡವಾದದಲ್ಲಿ ದಬ್ಬಲ್ಪಡುವ ಹಲವು ಪದಗಳು ಗಬ್ಬು ವಾಸನೆ ಬೀರುತ್ತವೆ; ಜೊತೆಗೆ ಕರ್ಣಾಘಾತಕರವೂ ಆಗಿರುತ್ತವೆ. ಕುತರ್ಕವು ಮಾತಿನ ಘರ್ಷಣೆ, ಕೈ ಮಿಲಾಯಿಸುವಿಕೆ ಹಾಗೂ ದಂಡದ ಉಪಯೋಗದೆಡೆಗೂ ಸಾಗಬಹುದು. ವಿತಂಡವಾದ ನಡೆಯುತ್ತದೆಂದಾದರೆ ಪ್ರಾಜ್ಞರು ಅಲ್ಲಿ ಇರರು. 
       “ವಾದೇ ವಾದೇ ಜಾಯತೇ ತತ್ವಬೋದಃ” 
ಎಂಬ ಮಾತಿದೆ. ವಾದದಿಂದ ತತ್ವಗಳ ಸ್ಫೋಟವಾಗಬೇಕು. ವಾದವು ನಿನಾದವಾಗಬೇಕು. ನೋಡುಗರು ಅಥವಾ ಕೇಳುಗರು ಆನಂದವನ್ನು ಅನುಭವಿಸುವಂತಹ ಭಾವಪೂರ್ಣ ಭಾಷೆಯ ಪ್ರದರ್ಶನವಾಗಬೇಕು. ಅಹಂಕಾರದ ಛಾಯೆ ಮತ್ತು ರುಚಿರಹಿತ ಮಾತುಗಳ ಆರ್ಭಟವಿರುವ ವಾದ ಯಾರಿಗೂ ಬೇಡ. ಮೌಲ್ಯ ರಕ್ಷಣೆಯ ಎಚ್ಚರಿಕೆಯೊಂದಿಗೆ ವಾಗ್ವಾದ ಬೆಳೆಯಬೇಕು. ಚರ್ಚಿಸುವ ಮಾತುಗಳು ತೂತಾಗಿರದೆ ವಿಷಯ ಪೋಷಕ ಮುತ್ತುಗಳಂತಿರಬೇಕು. ವಾದದಲ್ಲಿ ವಾಕ್ ಮಂಡನೆಯಾಗಬೇಕೇ ಹೊರತು ವಾಕ್ ಖಂಡನೆ ನಡೆಯಲೇ ಬಾರದು. ವಾಕ್ ಪ್ರಹಾರ ವಿಷದ ಅಂಬುವಿಗಿಂತ ತೀಕ್ಷ್ಣ ಮತ್ತು ವಿಪರೀತ ಹಾನಿಗಳ ಸಂತೆ. 
         ವಾದ ಪ್ರತಿವಾದಗಳಿಂದ ಸಮಯ ವ್ಯರ್ಥವಾಗುವುದೇ ಹೊರತು ಅಂತಿಮ ಪರಿಹಾರ ಖಂಡಿತವಾಗಿಯೂ ದೊರೆಯುವುದಿಲ್ಲ. ಪಾಮರರ ವಿತಂಡವಾದದ ರಾದ್ಧಾಂತಗಳನ್ನು ತಪ್ಪಿಸಲು ಮೌನವೇ ದಿವ್ಯವಾದ ಔಷಧ. ಅಸಂಖ್ಯ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಮೌನವೇ ನೀಡಬಲ್ಲುದು. ನಾವೂ ಅಗತ್ಯ ಬಂದಾಗ ಮೌನದ ಅನುಯಾಯಿಗಳಾಗೋಣ. 
ನಮಸ್ಕಾರ.
.............ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article