-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 52

ಸ್ಫೂರ್ತಿಯ ಮಾತುಗಳು : ಸಂಚಿಕೆ - 52

ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

ಸ್ಫೂರ್ತಿಯ ಮಾತುಗಳು : ಸಂಚಿಕೆ - 52
                         
          “ಹಂಗಿನರಮನೆಗಿಂತ ವಿಂಗಡಣದ ಗುಡಿ ಲೇಸು” ಎಂಬ ಮಾತಿದೆ. ಅರಮನೆಯೊಳಗಿನ ಅಧಿಕಾರವಾಣಿಗಳು ಮತ್ತು ಅಸಹನೀಯ ಕಿರಿ ಕಿರಿಗಳ ಕಾರಣದಿಂದ ಈ ಮಾತು ಜನಿಸಿರಬಹುದು. ಆದರೆ ಹಂಗುಗಳಿರದೆ ಬದುಕು ಸಾಧ್ಯವೇ? ಹಂಗುಗಳಿರದೆ ಸೃಷ್ಟಿಯ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಘಟಿಸಬಹುದೇ? ಹಂಗು ಎಂದರೆ ಅವಲಂಬನೆ ಹಾಗೂ  ಬದುಕಿನ ಅನಿವಾರ್ಯ ಅಂಶ.
          ಜೀವಿಯ ಗರ್ಭಧಾರಣೆಯಿಂದ ‘ಹಂಗು’ ಆರಂಭ. ಪರಿಸರದ ಹಂಗು, ಜನನಿ ಜನಕರ ಹಂಗು ಹೀಗೆ ಬೆಳೆಯುತ್ತಾ ಸಮಾಜದ ನಾನಾ ವೃತ್ತಿ ನಡೆಸುವವರ ಹಂಗು ಕೂಡಾ ನಮಗೆ ಬೇಕು. ಖಗ, ಮೃಗ ಮತ್ತು ಉರಗಾದಿಗಳಿಗೆ; ಮರ, ಗಿಡ, ಬಳ್ಳಿ, ಮುಳ್ಳು ಕಂಟಿ ಹಾಗೂ ಪೊದರುಗಳಿಗೆ ಮನುಷ್ಯರ ಹಂಗು ಬೇಕಾದಂತೆ ಮನುಜರಿಗೂ ಈ ಎಲ್ಲವುಗಳ ಹಂಗು ಇದ್ದೇ ಇದೆ. ಉಣ್ಣುವುದರಿಂದ ಉಡುವ ತನಕದ ನಮ್ಮ ಅಗತ್ಯಗಳಿಗೆ ನಾವು ಅವಲಂಬಿಸ ಬೇಕಾದವರ ಮತ್ತು ಹಂಗುಗಳಿಗೆ ಒಳಗಾಗಬೇಕಾದುವುಗಳ ಪಟ್ಟಿ ಮಾಡಿದರೆ ಅದು ಬಲು ದೀರ್ಘ. ಇನ್ನು ಓದು, ಬರಹ, ಸಂಚಾರ, ನಾನಾ ಕಾಯಕಗಳಿಗೆ ನಾವೆಷ್ಟೋ ಅಂಶಗಳ ಅವಲಂಬನೆ ಹೊಂದಿದ್ದೇವೆ. ಹಂಗು ಎಂಬುದು ಜೀವನದ ಕೊಡುವ ಮತ್ತು ಕೊಳ್ಳುವ ಅನಿವಾರ್ಯ ಭಾಗ. ಹಣ ಇದ್ದರೆ ಏನೂ ಹಂಗಿಲ್ಲ ಎಂದು ಕೆಲವರು ಹೇಳುವುದುಂಟು. ಹಣವ ಗಳಿಸುವುದಕ್ಕೂ ನಾವು ಇತರರ ಹಂಗಿಗೊಳಗಾಗಲೇ ಬೇಕು. ಇನ್ನು ಹಣವಿದ್ದರೆ ಪ್ರೀತಿ, ಜ್ಞಾನ,  ಭಾವನೆಗಳೇ ಮುಂತಾದುವುಗಳನ್ನು ಪಡೆಯಲಾಗದು. ನಮಗೆ ಇತರರಿಂದ ದೊರೆಯುವ ಪ್ರೀತಿಯೂ ಹಂಗೇ ಆಗಿದೆ.
       ಮಹಾರಾಜನಾದವನಿಗೆ ಎಲ್ಲವನ್ನೂ ಗಳಿಸುವುದು ಸಾಧ್ಯವಿದೆಯಾದರೂ ಅವುಗಳನ್ನೆಲ್ಲವನ್ನೂ ಪಡೆಯಲು ಅಸಂಖ್ಯ ರೀತಿಯಲ್ಲಿ ಆತ ಹಂಗಿಗೊಳಗಾಗಲೇ ಬೇಕು. ಉತ್ತಮ ಚಿಂತಕನಾದ ರಾಜನು ತಾನು ಅರಮನೆ ‘ಕಟ್ಟಿಸಿದೆ’ ಎನ್ನುವುದಿಲ್ಲವಂತೆ. ನಾವೆಲ್ಲರೂ ಸೇರಿ ‘ಕಟ್ಟಿಸಿದೆವು’ ಎಂದೇ  ಹೇಳುವನಂತೆ. 
ದೇಶ ಕಾಯುವ ಯೋಧ, ಮೇಟಿಗೈಯುವ ರೈತ, ಚಿಕಿತ್ಸೆ ನೀಡುವ ವೈದ್ಯ, ಜ್ಞಾನ ನೀಡುವ ಗುರು, ಜನ್ಮ ಮತ್ತು ಬಾಳು ನೀಡುವ ಹೆತ್ತವರ ಹಂಗು ಮರೆಯಲಾಗದು. ನಮಗೆ ಸೇವೆ ನೀಡುವ ಬಡಗಿ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿಗಳು, ಕ್ಷೌರಿಕರು, ಅಡುಗೆಯವರು, ಪುರೋಹಿತರು, ಚಾಲಕರು, ವರ್ತಕರು, ಶುಶ್ರೂಷಕರು, ಮಾಲಿಗಳು- ಕೂಲಿಗಳು ಹೀಗೆ ನಾನಾ ವ್ಯಕ್ತಿಗಳ ಹಂಗು ನಿತ್ಯ ಸ್ಮರಣೀಯ. ಹಣ್ಣು ಕೊಡುವ ಮರ, ಹೂವು ನೀಡುವ ಗಿಡ, ಔಷಧ ನೀಡುವ ಸಸ್ಯ, ತರಕಾರಿ ಗಿಡಗಳು ಹೀಗೇ ಸಸ್ಯ ಸಂಕುಲಗಳ  ಹಂಗು ಅವಿಸ್ಮರಣೀಯ.
        ಗಾಳಿ, ಬೆಳಕು, ನೀರು ಇವು ನಮ್ಮ ಹಂಗಿನಲ್ಲಿದೆಯೆಂದರೆ ತಪ್ಪಾಗುತ್ತದೆ. ನಾವೇ ಇವೆಲ್ಲದರ ಹಂಗಿನಲ್ಲಿದ್ದೇವೆ. ಹಾಲು, ಗೊಬ್ಬರ ನೀಡುವ ಹಸು, ಉಳುವ ಎತ್ತು, ಹೊರುವ ಕತ್ತೆ, ಮನೆ ಕಾಯುವ ನಾಯಿ, ಆನೆ, ಕುದುರೆ, ಒಂಟೆ, ಆಡು ಕುರಿ ಇವೆಲ್ಲದರ ಅವಲಂಬಿಗಳು ನಾವು. ಜೇನು ನೊಣ, ರೇಶ್ಮೆ ಹುಳ, ಎರೆಹುಳಗಳಂತಹ ಹುಳ ಹುಪ್ಪಡಿಗಳು, ಕ್ರಿಮಿ ಕೀಟಗಳು, ಜಲಚರ ಜೀವರಾಶಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಶಗಳು. ಹಾಗಿರುವಾಗ ನನಗೆ ಯಾರ ಹಂಗೂ ಇಲ್ಲ ಅನ್ನುವುದು ಉದ್ಧಟತನ. ಉಗುರು ಕತ್ತರಿಸುವ ಉಪಕರಣದ ಹಂಗೂ ನಮಗಿದೆ.
ಕಾಲು ನಾನು ಸ್ವತಂತ್ರವಾಗಿ ನಡೆಯುತ್ತೇನೆ. ನಡಿಗೆಯಲ್ಲಿ ನನಗೆ ಯಾರ ಹಂಗೂ ಇಲ್ಲ ಎಂದು ಕೈಗಳಿಗೆ ಹೇಳಿತಂತೆ. ಅಂದಿನಿಂದ ಕಾಲು ನಡೆಯುವಾಗ ಕೈ ತಟಸ್ಥವಾಗಿ ನಿಂತಿತಂತೆ. ಅವನ ನಡಿಗೆ ನೋಡಿ ಇತರರು ಎದ್ದು ಬಿದ್ದು ನಗ ತೊಡಗಿದರಂತೆ. ಕಣ್ಣು, ರೆಪ್ಪೆ ಮುಚ್ಚಿ ತಟಸ್ಥವಾಗಿ ಬಿಟ್ಟಿತು. ನಡೆಯಲು ಕಾಲಿಗೆ ದಾರಿ ಕಾಣದೆ ಚಡಪಡಿಸಿದುವು. ಕಾಲಿಗೆ ಬುದ್ಧಿ ಬಂತು. ಅಹಂಕಾರ ಬಿಟ್ಟಿತು. ಒಂದು ದೇಹದ ಕೆಲಸಗಳಿಗೆ ಪರಸ್ಪರ ಎಲ್ಲ ಅಂಗಗಳ ಅವಲಂಬನೆಯೂ ಇದೆ. ಹಾಗಿರುವಾದ ಸಮಷ್ಠಿಯ ಕೆಲಸ ಕಾರ್ಯಗಳು “ಹಂಗು” ರಹಿತವಾಗಿ ಪೂರ್ಣಗೊಳ್ಳಲು ಸಾಧ್ಯವೇ...?
    ಬದುಕಿನಲ್ಲಿ ಯಾರೂ ಸರ್ವಸ್ವತಂತ್ರರಲ್ಲ. ಪ್ರತಿಯೊಬ್ಬರೂ ಪ್ರಪಂಚದಲ್ಲಿ “ಹಂಗಾಳು” ಗಳೇ ಆಗಿರುತ್ತಾರೆ. ಜೊತೆಗೆ ನಮ್ಮ ಹಂಗಿನಲ್ಲೂ ಈ ಪ್ರಪಂಚ ನಿಂತಿದೆ. ನಮ್ಮ ಬದುಕು ಸುಖಮಯ ಮತ್ತು ವರ್ಣಮಯವಾಗಲು ಕಾರಣವಾದ ಪ್ರಪಂಚದ ಸಕಲಗಳಿಗೆ ನಮ್ಮ ಸ್ಮರಣೆ, ಗೌರವ, ಪ್ರೀತಿ ಮತ್ತು ನೆರವು ನಿರಂತರವಾಗಿರಬೇಕು.  ನಮಸ್ಕಾರ
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article