ಅಕ್ಕನ ಪತ್ರ - 42 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1
Saturday, February 4, 2023
Edit
ಅಕ್ಕನ ಪತ್ರ - 42 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1
ಅಕ್ಕನ ಪತ್ರ 42ಕ್ಕೆ ಶಿಶಿರನ ಉತ್ತರ
ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನಿಮ್ಮ ಪತ್ರ ಓದುತ್ತಿರುವಾಗ ಹಿಂದೆ 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ ಡಾ. ವೀಣಾಭಾರತಿ ಅವರು ಬರೆದ "ಸಾರ್ಥಕ ಬದುಕು ಅಸಾಧಾರಣ ಸಾಧನೆ" ಎಂಬ ಲೇಖನ ನೆನಪಾಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯಕರವಾಗಿದ್ದ ಸಾರ್ಥಕ್ ಕಾಮತ್ ಎಂಬ ಬಾಲಕನಿಗೆ ತನ್ನ ಮೂರನೇಯ ವಯಸ್ಸಿನಲ್ಲಿ "ಡಶೆನ್ ಮಸ್ಕ್ಯುಲಾರ್ ಡಿಸ್ಟ್ರೊಫಿ" ಎಂಬ ಕಾಯಿಲೆ ಇರುವುದಾಗಿ ತಿಳಿದು ಬಂದಿತು. ಇದರಿಂದ 12ನೇ ವಯಸ್ಸಿನಲ್ಲಿ ಗಾಲಿ ಕುರ್ಚಿಯನ್ನು ಉಪಯೋಗಿಸಿ ತನ್ನ ಶಿಕ್ಷಣವನ್ನು ಮುಂದುವರಿಸಬೇಕಾದ ಅನಿರ್ವಾಯತೆ ಬಂದರು ಅವರು ಧೃತಿ ಗೆಡದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶೇಕಡಾ 91% ಅಂಕಗಳೊಂದಿಗೆ ತೇರ್ಗಡೆಯಾದ ಸಾರ್ಥಕ್ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿ.ಸಿ.ಎಂ.ಬಿಯನ್ನು ಆಯ್ಕೆ ಮಾಡಿಕೊಂಡರು.
ವಿಶ್ವದ ಮೊದಲ ಅಂಧ ವೈದ್ಯ ಮನಃಶಾಸ್ತ್ರಜ್ಞರಾದ ಡಾ.ಡೇವಿಡ್ ಹಾರ್ಟ್ಮನ್ ಅವರಂತೆ ತಾನು ವೈದ್ಯನಾಗಿ ಮನಶ್ಯಾಸ್ತ್ರಜ್ಞಾನಾಗಬೇಕೆಂದು ನಿರ್ಧರಿಸಿದರು. ಬೆಂಗಳೂರು ಕಿಮ್ಸ್ (ಕೆಂಪೇಗೌಡ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2022 ಜನವರಿಯಿಂದ ಡಾ. ಸಾರ್ಥಕ್ ಕಾಮತ್ ಅವರು ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಮನಶ್ಯಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಅವರು ತನ್ನ ಅಂದಿನ ಸ್ಥಿತಿಗೆ ಕೊರಗದೇ, ತನ್ನನ್ನು ಇನ್ನೊಬ್ಬರಿಗೆ ಹೊಲಿಸದೇ, ಛಲ ಮತ್ತು ಪರಿಶ್ರಮದಿಂದ ತನ್ನ ಕನಸ್ಸನ್ನು ನೆರವೇರಿಸಿದ ಬಗೆ ನಮಗೆಲ್ಲ ಸ್ಪೂರ್ತಿಯಲ್ಲವೇ?
ಡಾ. ಸಾರ್ಥಕ್ ಕಾಮತ್ ತನ್ನೊಳಗಿನ ಸಾಮರ್ಥ್ಯವನ್ನು, ತನಗಿರುವ ಅವಕಾಶವನ್ನು ಉಪಯೋಗಿಸಿ, ತಾನಿರುವ ಪರಿಸ್ಥಿತಿಯಲ್ಲಿ ಉತ್ತಮವಾಗಿ ಸಾಧಿಸಿ ತೋರಿಸಿದ್ದಾರೆ. ಹಾಗಾಗಿ ನನಗೆ ಈ ಲೇಖನ ತುಂಬಾ ಇಷ್ಟವಾಯಿತು. ಹಾಗೆಯೇ ನಾವು ಕೂಡಾ ಇನ್ನು ನಮ್ಮ ಮುಂದಿನ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಓದಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ. ನಿಮ್ಮ ಆಶೀರ್ವಾದ ನಮಗಿರಲಿ ಅಕ್ಕ. ಮುಂದಿನ ಪತ್ರದಲ್ಲಿ ಭೇಟಿಯಾಗೋಣ ಧನ್ಯವಾದಗಳು ಅಕ್ಕ.
10ನೇ ತರಗತಿ
ಎಸ್.ಎಲ್. ಎನ್. ಪಿ. ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಜಗಲಿಯ ಆತ್ಮೀಯ ಬಳಗಕ್ಕೆ ಮತ್ತು ಪ್ರೀತಿಯ ಅಕ್ಕನಿಗೆ ಭವ್ಯಶ್ರೀ ಮಾಡುವ ನಮಸ್ಕಾರಗಳು..... ನಾನು ಕ್ಷೇಮ ನೀವು ಹೇಗಿದ್ದೀರಾ.....? ಕ್ಷಮಿಸಿ ಅಕ್ಕ ಕಳೆದ ಬಾರಿಯ ಪತ್ರವನ್ನು ಓದಿದರೂ ಅನಿಸಿದ್ದನ್ನು ತಿಳಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಲಿಲ್ಲ. 42ನೇ ಪತ್ರದಲ್ಲಿ ಹೋಲಿಕೆಯ ಕುರಿತು ತಿಳಿಸಿದ್ದೀರಿ. ಕಪ್ಪು ಬಿಳುಪು ಎನ್ನುವ ಬಣ್ಣಗಳ ಬಗ್ಗೆ ನನಗೂ ಹಲವು ಬಾರಿ ಅಸಮಾಧಾನವೆನಿಸಿ, ಬೇಸರ ಉಂಟಾದದ್ದಿದೆ. ಆದರೆ ಬಿಳಿ ಬಣ್ಣವಾಗಲಿ ಸೌಂದರ್ಯವಾಗಲಿ ಬದುಕು ಕಟ್ಟಿ ಕೊಡುವುದಿಲ್ಲ. ಸಂಸ್ಕಾರ ಭಾವಗಳು, ಪ್ರಾಮಾಣಿಕ ಮನಸ್ಸುಗಳು, ಹಾಗೂ ಒಲವು ತುಂಬಿದ ಹೃದಯಗಳೇ ಸುಂದರ ಜೀವನಕ್ಕೆ ದಾರಿಗಳಾಗಿವೆ....
ಕಾಗೆ ಬಣ್ಣ ಕಪ್ಪಾಗಿದ್ದರೂ, ಸ್ವತಂತ್ರವಾಗಿ ಸುಂದರ ಬದುಕು ಸಾಗಿಸಬಲ್ಲ, ಅಂದವಾಗಿ ಹಾರಬಲ್ಲ ಪಕ್ಷಿಯಾಗಿದೆ. ಆಹಾರವನ್ನು ತನ್ನ ಗುಂಪಿನೊಂದಿಗೆ ಹಂಚಿ ತಿನ್ನಬಲ್ಲ ಒಂದು ಒಳ್ಳೆಯ ಗುಣವಿದೆ. ಸೌಂದರ್ಯವು ಮಾಸಿ ಹೋಗಬಹುದು ಆದರೆ ಒಳ್ಳೆಯ ಗುಣ ನಡತೆಗಳು ಎಂದಿಗೂ ಶಾಶ್ವತವಾದುದು...
ನಮ್ಮಲ್ಲಿ ಸೌಂದರ್ಯವೂ, ಐಶ್ವರ್ಯವೂ ಇಲ್ಲ ಎಂದು ವ್ಯಥೆಪಡುವ ಬದಲು, ನಮ್ಮಲ್ಲಿದ್ದುದನ್ನು ಸಂತಸದಿಂದ ಅನುಭವಿಸಿ ಸದುಪಯೋಗ ಪಡಿಸಿಕೊಂಡು ಸುಂದರ ಜೀವನ ನಿರ್ಮಿಸಿಕೊಳ್ಳುವುದು ಸೂಕ್ತ ಅಲ್ವಾ....? ಪರೀಕ್ಷೆ ಹತ್ತಿರ ಬರುತ್ತಿದೆ.... ಇದೊಂದು ಹೋರಾಟವೇ ಸರಿ. ಈ ಹೋರಾಟದಲ್ಲಿ ಪ್ರಾಮಾಣಿಕ ಪ್ರಯತ್ನಗಳಿಂದ ಅಂಕ ಗಳಿಸಿ ಜಯವೆನ್ನುವುದು ತಮ್ಮ ಕೈ ಸೇರಲಿ ಎಂದು ಜಗಲಿಯ ಎಲ್ಲಾ ಬಳಗ ದವರಿಗೂ ಶುಭ ಹಾರೈಸುವೆ. ಇನ್ನು ನಮ್ಮ ನಿಮ್ಮ ಭೇಟಿ ಮುಂದಿನ ಪತ್ರದಲ್ಲಿ, ಅಲ್ಲಿಯವರೆಗೂ, ನಮಸ್ಕಾರಗಳು...
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು.......
ನಾನು ಪ್ರಿಯ... ಈಗ ಎಲ್ಲಾ ಶಾಲಾ - ಕಾಲೇಜುಗಳಲ್ಲಿ ಮುಂಬರುವ ಪರೀಕ್ಷೆಗೆ ಪೂರ್ವ ಸಿದ್ಧತೆ ನಡೆಯುತ್ತಿದೆ.... ನನಗೆ ಕಾಗೆಯ ಕಥೆ ಕೇಳಿ ನಮ್ಮ ಕೆಲವು ದುರಾಭ್ಯಾಸದ ಚಿತ್ರಣ ಮರುಕಳಿಸಿತು... ನಾವು ಕೂಡಾ ಕೆಲವೊಮ್ಮೆ ನಮ್ಮ ಮನಸ್ಸನ್ನು ಬೇರೆಯವರೊಂದಿಗಿನ ಹೋಲಿಕೆಯತ್ತ ಸರಿಸುತ್ತೇವೆ.....
ಹೇಳಬೇಕೆಂದರೆ ಈ ಜಗತ್ತಿನಲ್ಲಿ ಯಾರೂ ಶ್ರೇಷ್ಠರು ಅಲ್ಲ ಯಾರೂ ದಡ್ಡರು ಅಲ್ಲ. ವಿಪರ್ಯಾಸವೆಂದರೆ ನಾವು ನಮ್ಮ ಅರ್ಧ ಜೀವನವನ್ನು ಇನ್ನೊಬ್ಬರಲ್ಲಿನ ಲೋಪ - ದೋಷಗಳ ಹೋಲಿಕೆಯೊಂದಿಗೆಯೆ ಕಳೆಯುತ್ತೇವೆ. ಆದರೆ ಎಲ್ಲರಿಗೂ ಅವರವರದೇ ಆದ ಅನುಪಮ ಕೌಶಲಗಳಿರುತ್ತವೆ.... ಆದರೆ ಅವನ್ನು ತೋರ್ಪಡಿಸುವಲ್ಲಿ ನಮ್ಮ"ಉತ್ತಮತೆ'' ತಿಳಿಯುವುದು. ನಾವು ಯಾವಾಗಲೂ ದೇವರು ನಮಗೆ ಹೆಚ್ಚು ಕಷ್ಟ ಕೊಡುತ್ತಿದ್ದಾನೆ ಎಂದು ಭಾವಿಸುತ್ತೇವೆ. ವಿಪರ್ಯಾಸವೆಂದರೆ ನಮಗಿಂತ ಹೆಚ್ಚು ಕಷ್ಟ ಪಟ್ಟು ಬೇರೆಯವರು ಜೀವನ ನಡೆಸುತ್ತಿರುತ್ತಾರೆ. ನಾವು ಯಾವಾಗಲೂ ನಮ್ಮ ಲೋಪಗಳನ್ನು ಬೇರೆಯವರಿಗೆ ಹೋಲಿಸದೆ ಉತ್ತಮರಾಗಿರಲು ಪ್ರಯತ್ನಿಸೋಣ. ಈ ಜಗದಲ್ಲಿ ಎಷ್ಟೋ ಜನ ಕಿವುಡರು, ಕುರುಡರು, ಅಂಗವಿಕಲರು ಇರುತ್ತಾರೆ ಆದರೆ ಅವರು ತಮ್ಮ ಲೋಪಗಳನ್ನು ಬೇರೆಯವರೊಂದಿಗೆ ಹೋಲಿಸುತ್ತಿದ್ದರೆ ಮಹತ್ವದ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.....
"ನಿನ್ನೊಳಗೆ ನೀ ಹೊಕ್ಕು, ನಿನ್ನನ್ನೇ ನೀ ಕಂಡು ನೀನೇ ನೀನಾಗು ಗೆಳೆಯ" ಎಂದರು ಕವಿ ಬೇಂದ್ರೆ. ನಾವು ಯಾವಾಗಲೂ ನಮ್ಮಲ್ಲಿನ ತೇಜಸ್ಸನ್ನು ಪ್ರಕಾಶಿಸುತ್ತ ಉತ್ತಮರು ಹಾಗೂ ಪ್ರಾಮಾಣಿಕರಾಗಿ ಬಾಳಬೇಕು ಎಂದು ಹೇಳುತ್ತಾ...... ಪ್ರತೀ ವಾರವೂ ಒಂದೊಳ್ಳೆಯ ಅದ್ಭುತ ನುಡಿಗಳೊಂದಿಗಿನ ನಿಮ್ಮ ಪತ್ರ ಬರಹವು ನಮ್ಮೆಲ್ಲರನ್ನೂ ಕ್ರಿಯಾತ್ಮರನ್ನಾಗಿ ಮಾಡುತ್ತದೆ ಅಕ್ಕ.... ವಂದನೆಗಳೊಂದಿಗೆ....
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಅಕ್ಕನ ಪತ್ರ.... ಮಕ್ಕಳ ಜಗಲಿ-42
ಇಂತೀ ಪ್ರೀತಿಯ ಅಕ್ಕನಿಗೆ ಲಹರಿಯು ಮಾಡುವ ನಮಸ್ಕಾರಗಳು.... ಕ್ಷಮಿಸಿ ಅಕ್ಕ... ಕಳೆದ ವಾರದ ಪತ್ರಕ್ಕೆ ಉತ್ತರ ಬರೆಯಲು ಸಾಧ್ಯವಾಗಲಿಲ್ಲ.... ಈ ಪತ್ರದಲ್ಲಿ ನಮಗೆ ಬಹಳಷ್ಟು ವಿಷಯಗಳನ್ನು ತಿಳಿಸಿದ್ದೀರಿ..... ಧನ್ಯವಾದಗಳು ಅಕ್ಕ. ಹೌದು ಅಕ್ಕ... "ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ... ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು" ಎಂಬ ನುಡಿಯನ್ನು ನಾನು ಪುಸ್ತಕದಲ್ಲಿ ಓದಿರುವೆನು.... ಡಾ. ಅಬ್ದುಲ್ ಕಲಾಂ ರಂತಹ ಅನೇಕ ಮಹಾನ್ ವ್ಯಕ್ತಿಗಳ ಜೀವನವು ನಮಗೊಂದು ಪಾಠವಾಗಿದೆ. ಈ ಸಲ ನಮಗೆ ಪಬ್ಲಿಕ್ ಪರೀಕ್ಷೆ ಇರುವ ಕಾರಣ ಬಹಳಷ್ಟು ಕಲಿಯಬೇಕಾಗಿದೆ. ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ನಮ್ಮೊಂದಿಗೆ ಸದಾ ಇರಲಿ ಅಕ್ಕ. ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುವೆನು. ಇಂತಿ ನಿಮ್ಮ ಪ್ರೀತಿಯ ಲಹರಿ.
೮ ನೇ ತರಗತಿ,
ತುಂಬೆ ಆಂಗ್ಲ ಮಾಧ್ಯಮ ಶಾಲೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕ, ನಾನು ಶ್ರಾವ್ಯ. ನಾವು ಆರೋಗ್ಯವಾಗಿದ್ದೇವೆ. ದಿನಗಳು ಹೇಗೆ ಉರುಳಿತು ಅಂತಾನೇ ತಿಳೀತಿಲ್ಲ. ಮೊನ್ನೆ ಮೊನ್ನೆಯಷ್ಟೇ ಕಾಲೇಜು ಸೇರಿದಂತಿದೆ. ಆದರೆ ಈಗ ಕಾಲೇಜು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಆಟ, ಪಾಠ, ಮೋಜು, ಮಸ್ತಿಗಳಿಗೆಲ್ಲ ಪೂರ್ಣವಿರಾಮ ಹಾಕುವ ಸಂದರ್ಭ ಬಂದಿದೆ. ಪರೀಕ್ಷೆಗಳು ಅಣಿಯಾಗಿದೆ. ಶಾಲೆಯಲ್ಲಿ ನಡೆಯುವ ಪರೀಕ್ಷೆ ನಮ್ಮ ವಿದ್ಯಾರ್ಥಿ ಜೀವನದ ಭವಿಷ್ಯನಿರ್ಧರಿಸಿದರೆ, ನಿತ್ಯ ಬದುಕಿನಲ್ಲಿ ಎದುರಾಗುವ ಪರೀಕ್ಷೆ ನಮ್ಮ ಜೀವನಕ್ಕೆ ಒಂದು ಪಾಠವಾಗಿ ಹೊರ ಹೊಮ್ಮುತ್ತದೆ. ಪರೀಕ್ಷೆಯಲ್ಲಿ ಸೋತವನು ಆ ಕ್ಷಣಕ್ಕೆ ಅವಕಾಶ ಕಳೆದುಕೊಳ್ಳಬಹುದು ಆದರೆ ಬದುಕಿಗೊಂದು ಪಾಠ ಮಾತ್ರ ಖಂಡಿತ ಕಲಿಯುತ್ತಾನೆ. ಏಳು ಬೀಳುಗಳಲ್ಲಿ ಗಟ್ಟಿತನದಿಂದ ಮುನ್ನುಗಿದವನು ನಿಜವಾದ ವಿಜಯಶಾಲಿಯಾಗುತ್ತಾನೆ. ಪ್ರತೀಬಾರಿಯಂತೆ ಈ ಬಾರಿಯೂ ಕಾಗೆ ಮತ್ತು ಇತರ ಪಕ್ಷಿಗಳ ಕತೆಯ ಮೂಲಕ ಒಂದು ಉತ್ತಮ ವಿಚಾರ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ನಮ್ಮ ಐದುಬೆರಳುಗಳು ಹೇಗೆ ಒಂದಕ್ಕೊಂದು ಸಮನಾಗಿಲ್ಲವೋ ಹಾಗೇ ಎಲ್ಲರ ಮನಸ್ಥಿತಿ, ಆಚರಣೆಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಕೆಲವಿಚಾರಗಳಲ್ಲಿ ವಿಷೇಶತೆಯನ್ನು ಹೊಂದಿರುತ್ತಾರೆ. ಹೀಗಿರುವಾಗ ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿ ಅಳೆಯುವುದು ಸರಿಯಲ್ಲ. ಕತೆಯಲ್ಲಿ ಕಾಗೆ ಮೊದಲು ತನ್ನನ್ನೇ ತಾನು ನಿಂದಿಸಿಕೊಂಡಿತ್ತು, ತನ್ನ ಬಗೆಗೆ ತಾನೇ ಬೇಸರ ಪಡುತ್ತಿತ್ತು. ಆದರೆ ಕೊನೆಗೆ ತನ್ನ ಅಸ್ತಿತ್ವ ತಿಳಿದಾಗ, ತನ್ನಷ್ಟು ಸ್ವತಂತ್ರವಾಗಿ ಬೇರಾರು ಇಲ್ಲ ಎಂದು ತಿಳಿದು ನೆಮ್ಮದಿಯ ಉಸಿರುಬಿಟ್ಟಿತು. ಹೀಗೆ ಮೊದಲು ನಮ್ಮನ್ನು ನಾವು ಸರಿಯಾಗಿ ಕಂಡುಕೊಂಡಾಗ ಬದುಕು ಸುಂದರ. ಧನ್ಯವಾದಗಳು
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ ಅಕ್ಕಾ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.
ನಾವೆಲ್ಲರೂ ಕ್ಷೇಮದಿಂದ ಇರುವೆವು. ನೀವೂ ಕೂಡ ಕ್ಷೇಮ ವೆಂದು ಭಾವಿಸುತ್ತೇನೆ. ನಿಮ್ಮ ಪತ್ರವನ್ನು ಓದಿದೆನು.
"ಆಕಳು ಕಪ್ಪಾದರೆ ಹಾಲು ಕಪ್ಪೇ" ಎನ್ನುವ ಮಾತಿನಂತೆ ನಾವು ಬಣ್ಣ, ರೂಪ ಅದಕ್ಕೆ ಹೆಚ್ಚು ಒತ್ತು ಕೊಡದೆ ಒಳ್ಳೆಯ ಸಾಧನೆಯನ್ನು ಮಾಡಬಹುದು. ಕೈಯಲ್ಲಿರುವ ಐದೂ ಬೆರಳುಗಳಲ್ಲಿ ವ್ಯತ್ಯಾಸವಿರುವಂತೆ ಯಾವಾಗಲೂ ಒಬ್ಬರಂತೆ ಇನ್ನೊಬ್ಬರು ಇರಲು ಖಂಡಿತಾ ಸಾಧ್ಯವಿಲ್ಲ. ಗುರು ಹಿರಿಯರಿಗೆ ಗೌರವ, ಚಿಕ್ಕವರ ಜೊತೆ ಪ್ರೀತಿ, ಪ್ರಾಣಿ, ಪಕ್ಷಿಗಳಲ್ಲಿ ಪ್ರೀತಿ, ಗೆಳೆಯರಲ್ಲಿ ಪ್ರೀತಿ - ವಿಶ್ವಾಸ ಮತ್ತು ನಮ್ಮಲ್ಲಿ ಒಗ್ಗಟ್ಟು ಇದ್ದರೆ ಅದುವೇ ಮಾನವನ ನಿಜವಾದ ಸೌಂದರ್ಯ. ನಾವು ನಮ್ಮನ್ನು ಇನ್ನೊಬ್ಬರಿಗೆ ಹೋಲಿಸುವ ಬದಲು ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುವಂತೆ ಮಾಡಬಹುದು. ಧನ್ಯವಾದಗಳು ಅಕ್ಕಾ.....
8ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ನಲ್ಮೆಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು....
ನಾವು ಯಾವತ್ತೂ ನಮ್ಮ ಜೀವನದಲ್ಲಿ ನಮ್ಮನ್ನು ಬೇರೆಯವರಿಗೆ ಹೋಲಿಸಿ ಕೊಳ್ಳಬಾರದು. ಅವರವರಿಗೆ ಅವರದ್ದೇ ಆದ ವ್ಯಕ್ತಿತ್ವವಿರುತ್ತದೆ. ಅದನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಮರುಗಬಾರದು. ಕಾಗೆಯ ಬಣ್ಣ ಕಪ್ಪಾಗಿದ್ದರೂ ಕೂಡ ಅದು ಕೊರಗದೆ ಪರಿಸರಕ್ಕೆ ತನ್ನಿಂದಾದ ಸಹಾಯವನ್ನು ಮಾಡುತ್ತಾ ಇದೆ. ಆದರೆ ಮನುಷ್ಯ ಈಗ ತನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಂಡೇ ಜೀವಿಸುತ್ತಿದ್ದಾನೆ. ಇದರಿಂದಾಗಿ ಮನುಷ್ಯನ ಜೀವನದಲ್ಲಿ ಸುಖ-ಸಂತೋಷಗಳು ಕಾಣದಂತಾಗುತ್ತಿದೆ. ಮಾನವನು ತನ್ನ ಜೀವನವನ್ನು ಆಸೆ-ಆಮಿಷಗಳಿಗೆ ಬಲಿಕೊಡುತ್ತಿದ್ದಾನೆ. ಕೆಲವರು ತಮಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ತೋರ್ಪಡಿಸದೆ ಇನ್ನೊಬ್ಬರನ್ನು ನಗಿಸುತ್ತಾ ಅವರ ಸಂತೋಷದಲ್ಲೇ ತಮ್ಮ ಸಂತೋಷವನ್ನು ಕಾಣುತ್ತಾರೆ. ಇಂಥವರಿಂದ ನಾವು ಕಲಿಯುವುದು ಬಹಳಷ್ಟಿದೆ. ನಾವು ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳದೆ ನಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಜೀವನದಲ್ಲಿ ಮುಂದೆಸಾಗಬೇಕು. ಧನ್ಯವಾದಗಳೊಂದಿಗೆ
6ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ , ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************
ಎಲ್ಲರಿಗೂ ನಮಸ್ಕಾರಗಳು.... ನಾನು ಪ್ರಣಮ್ಯ. ಜಿ. ಅಕ್ಕನ ಪತ್ರ ಓದಿ ಖುಷಿಯಾಯಿತು. ಅಕ್ಕ ಹೇಳಿದಂತೆಯೇ ನನ್ನ ಶಾಲಾ ಪರೀಕ್ಷೆಗಳ ತಯಾರಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ನಮ್ಮ ಶಾಲೆಯಲ್ಲಿ ತಾಲೂಕು ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳೆಲ್ಲವೂ ಮುಗಿದಿವೆ. ಉತ್ತಮ ಅಂಕಗಳೂ ಬಂದಿವೆ. ಮುಂದಿನ ವಾರ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿದ್ದು, ಅದಕ್ಕಾಗಿ ತಯಾರಿ ನಡೆಯುತ್ತಿದೆ.
ಅಕ್ಕ, ನಿಮ್ಮ ಶಾಲೆಯಲ್ಲಿ ನಡೆದ 'ಕಲಿಕಾ ಹಬ್ಬದ 'ಕೆಲವೊಂದಷ್ಟು ತುಣುಕುಗಳನ್ನು ನೋಡಿ ಆನಂದವಾಯಿತು. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸಿ, ನಮ್ಮನ್ನು ನಾವೇ ಹುರಿದುಂಬಿಸುತ್ತಾ ಮುನ್ನಡೆಯಬೇಕೇ ಹೊರತು ಬೇರೆಯವರ ಜೊತೆ ಹೋಲಿಕೆ ಮಾಡುವುದಾಗಲಿ, ಅನುಕರಣೆ ಮಾಡುವುದಾಗಲಿ ಸರಿಯಲ್ಲ. ಎಂಬ ಸತ್ಯಾಂಶವನ್ನು ನಾವೆಲ್ಲರೂ ಪಾಲಿಸುವವರಾಗೋಣ. ಅಕ್ಕ ಹೇಳಿದ ಕತೆಯ ನೀತಿಪಾಠದಂತೆಯೇ ನಮಗೆ ನಾವೇ ಶ್ರೇಷ್ಠ ಎಂಬ ಮನೋಭಾವನೆಯೊಂದಿಗೆ ಬಾಳೋಣ ಎಂಬ ಆಶಯದೊಂದಿಗೆ......
10ನೇ ತರಗತಿ
ಸಂತ ಜಾರ್ಜ್ ಆಂಗ್ಲಮಾಧ್ಯಮ
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************
ಪ್ರೀತಿಯ ಅಕ್ಕನಿಗೆ ಹಿತ ಶ್ರೀ ಮಾಡುವ ನಮನಗಳು.....
ಅಕ್ಕ ನೀವು ಇವತ್ತು ಒಂದು ಒಳ್ಳೆಯ ಮಹತ್ವಪೂರ್ಣವಾದ ಕಥೆ ಬರೆದಿದ್ದೀರಿ.
ನಮ್ಮ ಶಾಲೆಯ ಶಿಕ್ಷಕಿಯರು ನಮ್ಮ ಪ್ರತಿಭೆಯನ್ನು ಹೊರಹಾಕಲು ನಮ್ಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನಮಗೆ ಅವಕಾಶ ನೀಡಿದರು. ಇಂತಹ ಒಂದು ಅವಕಾಶವನ್ನು ನಾನು ಎಂದಿಗೂ ಬಿಟ್ಟುಕೊಡಲ್ಲ. ನನ್ನಲ್ಲಿ ಇದ್ದಂತಹ ಪ್ರತಿಭೆಗೆ ವೇದಿಕೆ ಸಿಕ್ಕಿತು. ಶಿಕ್ಷಕಿಯರು ಎಲ್ಲಾ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ನೀವು ಕೂಡ ಅಕ್ಕನ ಪತ್ರ ಬರೆಯಲು ಅವಕಾಶ ನೀಡಿದ್ದೀರಿ, ನಿಮಗೂ ಮಕ್ಕಳ ಜಗಲಿಗೂ ವಂದನೆಗಳು....
7ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ. ಪ್ರಾ. ಪಕಳಕುಂಜ
ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಅಕ್ಕಾ, ನಾನು ನಿಮ್ಮ ಪ್ರೀತಿಯ ಸಾನ್ವಿ. ಸಿ. ಎಸ್.... ನಾನು ಚೆನ್ನಾಗಿದ್ದೇನೆ. ನಿಮ್ಮ ಪತ್ರ ನನಗೆ ತುಂಬಾ ಇಷ್ಟವಾಯಿತು. ಎಲ್ಲರಲ್ಲೂ ಅವರದೇ ಆದ ಪ್ರತಿಭೆ ಇರುತ್ತದೆ. ನಮ್ಮಲ್ಲಿರುವ ಆ ಪ್ರತಿಭೆಯನ್ನೇ ಗುರಿಯಾಗಿಟ್ಟುಕೊಂಡು ನಾವು ಮುನ್ನಡೆಯಬೇಕು. ಅರುಣಿಮಾ ಸಿನ್ಹಾ ನಮಗೆ ನಿಜಕ್ಕೂ ಸ್ಪೂರ್ತಿ. ನಮಗೆ ಯಾವತ್ತೂ ನಮ್ಮಲ್ಲಿ ಇಲ್ಲ, ಅವರಲ್ಲಿ ಉಂಟು ಎಂಬ ಭಾವನೆ ಬರುತ್ತದೆ. ಅಂತಹ ಭಾವನೆ ನಮಗೆ ಬರಬಾರದು. ನಮಗೆ ಇಲ್ಲದಿರುವುದರ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಅಂತ್ಯವೇ ಇಲ್ಲ. ನೀವು ಬರೆದಂತಹ ಕಥೆಯಿಂದ ದೇವರು ಕೊಟ್ಟಷ್ಟರಲ್ಲೆ ನಾವು ತೃಪ್ತಿಪಡಬೇಕು ಎಂಬುದನ್ನು ನಾನು ಅರಿತುಕೂಂಡೆ. ಅಕ್ಕಾ, ಇನ್ನು ಮುಂದೆಯೂ ನಮಗೆ ಇಂತಹ ವಿಷಯಗಳನ್ನು ತಿಳಿಸಿರಿ. ಧನ್ಯವಾದಗಳು....
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಶಿಕ್ಷಕಿ, ಕಲಾವಿದೆ ಹಾಗೂ ಲೇಖಕಿಯಾದ ತೇಜಸ್ವಿ ಅಂಬೆಕಲ್ಲು ಇವರು ಬರೆದಿರುವ ಅಕ್ಕನ ಪತ್ರ : ಸಂಚಿಕೆ - 42 ರನ್ನು ಓದಿ ಮನಸ್ಸಿಗೆ ಬಹಳ ಸಂತೋಷವಾಯಿತು. ನಾನು ರಶ್ಮಿತ ರವಿರಾಜ್ ನಾಯಕ್.
ನಿಮ್ಮ ಪತ್ರವನ್ನು ಓದುತ್ತಾ ಡಿವಿಜಿಯವರ
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ – ಮಂಕುತಿಮ್ಮ ||
ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾದವು. ವ್ಯಕ್ತಿಯೊಬ್ಬನ ಸಂತೋಷಕ್ಕೆ ಹರುಷಕ್ಕೆ ಹಲವಾರು ದಾರಿಗಳು ಇವೆ. ನಮಗೆ ಸಿಗದೇ ಇದ್ದದರ ಬಗ್ಗೆ ಚಿಂತಿಸದೆ , ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು, ಬೈಲೂರು,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
******************************************
ನಮಸ್ತೇ ಅಕ್ಕ.... ನಾನು ನಿಮ್ಮ ಪ್ರೀತಿಯ ಧನ್ವಿ ರೈ ಪಾಣಾಜೆ. ನಿಮ್ಮ ಪತ್ರವನ್ನು ಮನೆಯವರೆಲ್ಲರೂ ಸೇರಿ ಓದಿದೆವು. ಎಷ್ಟೊಂದು ಅರ್ಥಗರ್ಭಿತ ವಾದ ವಾಕ್ಯಗಳು, ಸಂದೇಶಗಳನ್ನು ವ್ಯಕ್ತಪಡಿಸಿದ್ದೀರಿ.... ಹೌದು ನಾವು ನಿಜವಾಗ್ಲೂ ಚಿಕ್ಕ ಮಕ್ಕಳು, ಜೀವನದ ಆಗುಹೋಗುಗಳ ಚಿಂತೆ ನಮಗಿಲ್ಲ. ಆದರೆ ಇಲ್ಲಿ ನೀವು ನಮಗೆ ಅರ್ಥವಾಗುವ ರೀತಿಯಲ್ಲಿ ಕೆಲವೊಂದು ವಿಚಾರಗಳನ್ನು ವಿವರಿಸಿದ್ದೀರಿ. ನಮ್ಮಲ್ಲಿರುವ ಎಲ್ಲ ರೀತಿಯ ಪ್ರತಿಭೆಗಳನ್ನು ಹೊರತರಲು ಮುನ್ಸೂಚನೆಯನ್ನು ನೀಡಿರುವಿರಿ. ಯಾವ ಹುತ್ತ ದಲ್ಲಿ ಯಾವ ಹಾವು ಇದೆ ಎಂಬುದನ್ನು ಬಲ್ಲವರಿಲ್ಲ. ಹಾಗೆಯೇ ಯಾರಲ್ಲಿ ಯಾವ ಯಾವ ಪ್ರತಿಭೆ ಸಾಮರ್ಥ್ಯ ಇದೆ ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಮೂರ್ತ ರೂಪ ಕೊಡುವುದು ನಮ್ಮ ಮುಖ್ಯ ಧ್ಯೇಯವಾಗಿರಬೇಕು ಹಾಗೂ ಇದು ಸಮಾಜಕ್ಕೆ ಒಂದು ಮಾದರಿಯಾಗಿ ಪ್ರತಿಧ್ವನಿ ಸಬೇಕು.
ಅವರಲ್ಲಿ ಅದು ಇದೆ, ಮತ್ತೊಂದಿದೆ ಎಂಬುದನ್ನು ಹೇಳುವುದನ್ನು ಬಿಟ್ಟು ನಮ್ಮಲ್ಲಿ ಏನೇನಿದೆ, ಅದನ್ನು ಹೇಗೆ ನೀರೆರೆದು ಪೋಷಿಸಬೇಕು ಎಂಬುದನ್ನು ಗಮನಿಸಿ ಮುಂದಕ್ಕೆ ನಡೆದರೆ ಗೆಲುವು ಕಟ್ಟಿಟ್ಟ ಬುತ್ತಿ ಖಂಡಿತಾ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು. ನಿಮ್ಮ ಸಮಯೋಚಿತ ಪತ್ರಕ್ಕೆ, ನಿಮ್ಮ ಕಾಳಜಿಗೆ ಕೃತಜ್ಞತೆಗಳು ಅಕ್ಕ. ಇನ್ನು ಮುಂದೆಯೂ ನಿಮ್ಮ ಪತ್ರದಲ್ಲಿ ಸಾಮಾಜಿಕ ಕಳಕಳಿಯ, ವಿದ್ಯಾರ್ಥಿಗಳು ಹೇಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಓದಲು ಕಾಯುತ್ತಿರುವ....
7 ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೆ ಅಕ್ಕಾ... ನಾನು ನಿಭಾ... ಕಳೆದ ಬಾರಿ ಪರೀಕ್ಷೆ ಇದ್ದ ಕಾರಣ ನಿಮ್ಮ ಪತ್ರಗಳಿಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲ ಕ್ಷಮೆ ಇರಲಿ.
ನಿಮ್ಮ ಕಥೆ ಕೇಳುವುದೆಂದರೆ ತುಂಬಾ ಖುಷಿಯಾಗುತ್ತದೆ. ತುಂಬಾ ಅರ್ಥಪೂರ್ಣವಾಗಿತ್ತು. ನೀವು ಹೇಳಿದಂತೆ ನಾವು ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿ ದುಃಖಪಡುವ ಬದಲು ನಮ್ಮಲ್ಲಿ ಇರುವುದನ್ನೇ ಅನುಕೂಲವನ್ನಾಗಿ ಮಾಡಿ ಏನಾದರೂ ಸಾಧಿಸಿ ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು. ಏಕೆಂದರೆ ಎಲ್ಲರಿಗೂ ಒಂದೇ ರೀತಿಯ ಪ್ರತಿಭೆ ಇರುವುದಿಲ್ಲ ಉದಾಹರಣೆ ಗೆ ಒಬ್ಬರು ಚಿತ್ರಕಲೆಯಲ್ಲಿ ಉತ್ತಮರಾಗಿದ್ದರೆ, ಮತೊಬ್ಬರು ನೃತ್ಯದಲ್ಲಿ ನಿಪುಣರಾಗಿರುತ್ತಾರೆ. ಎಲ್ಲರಲ್ಲಿಯೂ ಎಲ್ಲಾ ಕಲೆ ಇರಲು ಸಾಧ್ಯವಿಲ್ಲ ಹಾಗೇನಾದರೂ ಇದಿದ್ದರೆ ಆ ಕಲೆಗೆ ಬೆಲೆಯೇ ಇರುತ್ತಿರಲಿಲ್ಲ. ಹಾಗೆ ಈಗ ಪರೀಕ್ಷೆಯ ಸಿದ್ಧತೆಯಲ್ಲಿದ್ದೇವೆ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ ಅಕ್ಕಾ.
ಧನ್ಯವಾದಗಳು
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************