-->
ಕಲಿಕಾ ಹಬ್ಬ : ಶಿಕ್ಷಕರ ಅನಿಸಿಕೆ - 3

ಕಲಿಕಾ ಹಬ್ಬ : ಶಿಕ್ಷಕರ ಅನಿಸಿಕೆ - 3

ಲೇಖಕರು : ಶೃತಿ , ಸಹಶಿಕ್ಷಕರು
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
  
              ಕಲಿಕಾ ಹಬ್ಬ ಈ ಹೆಸರೇ ಎಷ್ಟು ಚೆನ್ನಾಗಿದೆ. ಇಲ್ಲಿ ಯಾವುದೇ ಸ್ಪರ್ಧೆ ಇಲ್ಲ. ಸೋಲು ಗೆಲುವಿನ ಲೆಕ್ಕಾಚಾರವಿಲ್ಲ. ಕಲಿಕೆಯನ್ನು ಸಂಭ್ರಮಿಸುವಂತಾದರೆ ಆ ಕಲಿಕೆ ಶಾಶ್ವತವಾಗಬಹುದಲ್ಲವೇ?
       ಅಜ್ಜಿನಡ್ಕ ಕ್ಲಸ್ಟರಿನ ಕಲಿಕಾ ಹಬ್ಬವು ನಮ್ಮ ಮೂಡಂಬೈಲು ಶಾಲೆಯಲ್ಲಿ ನಡೆಯಿತು. ಇದು ಕೇವಲ ಸರ್ಕಾರಿ ಶಾಲಾ ಮಕ್ಕಳಿಗಾಗಿ ಮಾತ್ರ ಇದ್ದದ್ದರಿಂದ ನಮ್ಮ ಕ್ಲಸ್ಟರ್ ನಲ್ಲಿ ಕೇವಲ 6 ಶಾಲೆಗಳು ಮಾತ್ರ ಇದರ ವ್ಯಾಪ್ತಿಗೆ ಒಳಪಡುತ್ತಿದ್ದವು. ಈ ಹಬ್ಬದಲ್ಲಿ ಒಂದು ಕ್ಲಸ್ಟರ್ ನ 4 ರಿಂದ 9 ನೇ ತರಗತಿಯ 120 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ. ಈ ವಿಷಯದಲ್ಲಿ ನಮ್ಮ ಕ್ಲಸ್ಟರ್ ಮಕ್ಕಳ ಪುಣ್ಯವೋ ಏನೋ ಎಲ್ಲಾ 6 ಶಾಲೆಗಳ 4 ರಿಂದ 8 ನೇ ತರಗತಿಯ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಅವಕಾಶ ಸಿಕ್ಕಿತ್ತು.
       ಆಡು ಹಾಡು, ಮಾಡು ಹಾಡು, ಊರು ಸುತ್ತೋಣ, ಕಾಗದ ಕತ್ತರಿ ಹೀಗೆ ನಾಲ್ಕು ಮುಖ್ಯ ವಿಷಯಗಳಲ್ಲಿ 2 ದಿನಗಳಲ್ಲಿ ಮಕ್ಕಳಿಗೆ ಭಾಗವಹಿಸುವ ಅವಕಾಶವಿದೆ.
       ನಮ್ಮ ಶಾಲೆಯಲ್ಲಿ ಪಂಜರ ಶಾಲೆ ನಾಟಕದ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಕುರ್ಚಿ ಇಡದೆ ಸರಳ ರೀತಿಯಲ್ಲಿ ಉದ್ಘಾಟನೆ ಮಾಡಲಾಯಿತು. ಎಲ್ಲೂ ಸಮಯ ವ್ಯರ್ಥವಾಗದ ರೀತಿಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡ ರೀತಿ ಚೆನ್ನಾಗಿತ್ತು. ಚಿಟ್ಟೆಗೆ ಮತ್ತು ಬೋಳು ಮರಕ್ಕೆ ತಮ್ಮ ಹೆಬ್ಬೆಟ್ಟಿನ ಗುರುತು ಒತ್ತುವ ಮೂಲಕ ಮಕ್ಕಳು ಜೀವ ತುಂಬಿದರು.
       ಬಿಡುವಿನ ಸಮಯದಲ್ಲಿ ಕಥೆ, ಕವನ, ಚಿತ್ರ, ಅನಿಸಿಕೆ ಬರೆಯಲು ರೈಲು, ಹಕ್ಕಿ, ಹಾವು ಸಿದ್ದಗೊಂಡಿದ್ದವು. ಮಕ್ಕಳು ಊಟದ ನಂತರ ಬಣ್ಣ ಬಣ್ಣದ ಪೆನ್ನು ಹಿಡಿದು ಬರೆಯಲು ಓಡಿದರು. ಅವರ ಉತ್ಸಾಹ ನೋಡಲು ಖುಷಿಯಾಯಿತು. ಒಂದು ವೇಳೆ ಇದು ಸ್ಪರ್ಧೆಯಾಗಿರುತ್ತಿದ್ದರೆ ಮಕ್ಕಳು ಇಷ್ಟು ಉತ್ಸಾಹದಲ್ಲಿ ಬರುತ್ತಿದ್ದರೆ? ಬರೆಯುತ್ತಿದ್ದರೆ? ಸಂಭ್ರಮಿಸುತ್ತಿದ್ದರೆ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿ Thanks To ಕಲಿಕಾ ಹಬ್ಬ ಎಂದುಕೊಂಡೆ. 
       ಬಸ್ಸಿನ ವ್ಯವಸ್ಥೆಯೇ ಇಲ್ಲದ ಗಡಿನಾಡ ಶಾಲೆ ನಮ್ಮದು. ಯಾರೇ ಬರುವುದಿದ್ದರು ವಾಹನ ಮಾಡಿಸಿಕೊಂಡೆ ಬರಬೇಕು. ಹೀಗೆ ಬೇರೆ ಬೇರೆ ಶಾಲೆಯಿಂದ ಮಕ್ಕಳು ಗಾಡಿಯಲ್ಲಿ ಬರುವಾಗ ಕಲಿಕಾ ಹಬ್ಬದ ಹಾಡನ್ನು ಹಾಡುತ್ತಾ ಬರುವುದನ್ನು ನೋಡುವುದೇ ಖುಷಿ ಕೊಟ್ಟಿತು.
       ಯಾವ ಮಗುವಿಗೆ ಯಾವ ಚಟುವಟಿಕೆ ಇಷ್ಟ ಎಂಬುದನ್ನು ಗುರುತಿಸಲು ಈ ಕಲಿಕಾ ಹಬ್ಬ ಸಹಕಾರಿಯಾಯಿತು. ಮಕ್ಕಳು ಶಿಕ್ಷಕರು, ಪೋಷಕರೆಲ್ಲರೂ ಸೇರಿ ಶಾಲೆಯನ್ನು ಸಿಂಗರಿಸಿದ್ದೆವು. ಮಕ್ಕಳೆ ತಯಾರಿಸಿದ ಕ್ರಾಫ್ಟ್ ಗಳು, ಹೆಣೆದ ತೆಂಗಿನ ಹಸಿ ಮಡಲುಗಳು, ಬರೆದ ಗಾದೆ ಮಾತುಗಳು, ಒಗಟುಗಳು, ಚಿತ್ರಗಳು ಕಲಿಕಾ ಕುಟೀರವನ್ನು ಸಿಂಗರಿಸಿದ್ದವು. ಸಾಲಾಗಿ ತೂಗುಹಾಕಿದ್ದ ಬಾಳೆಗೊನೆಗಳು ಮಧ್ಯಾಹ್ನದ ಒಳಗೆ ಖಾಲಿಯಾಗಿದ್ದವು.
      ಮಕ್ಕಳು ಬಹಳ ಉತ್ಸಾಹದಲ್ಲಿ ಎಲ್ಲಾ ಚಟುವಟಿಕೆಯಲ್ಲಿ ಭಾಗಿಯಾದರು. ಆಡಿದರು, ಹಾಡಿದರು, ಕುಣಿದು ಕುಪ್ಪಳಿಸಿದರು, ಮಾಡಿ ನೋಡಿ ತಿಳಿದರು, ಊರು ಸುತ್ತಿದರು, ಮರಗಳ ಅಧ್ಯಯನ ಮಾಡಿದರು, ಸುತ್ತಮುತ್ತಲಿನ ಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸಿದರು, ಸಂದರ್ಶನ ಮಾಡಿದರು, ಚಿತ್ರ ಬಿಡಿಸಿದರು, ಕಾಗದ ಕತ್ತರಿಸಿ ಬಣ್ಣವ ಹಚ್ಚಿದರು. ಬೇರೆ ಶಾಲೆ ಮಕ್ಕಳೊಂದಿಗೆ ಸ್ನೇಹ ಬೆಳೆಸಿದರು.
      ನಮ್ಮ ನಲಿಕಲಿ ಮಕ್ಕಳೂ ಈ ಹಬ್ಬದಲ್ಲಿ ಭಾಗಿಯಾದರು. ಈ ಎರಡೂ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಮುಂದಿನ ವರ್ಷವೂ ಇಂತಹ ಹಬ್ಬಗಳು ಇರಲಿ ಎಂಬ ಮಕ್ಕಳ ಅಭಿಪ್ರಾಯ ಈ ಹಬ್ಬ ಅವರಿಗೆ ಖುಷಿಕೊಟ್ಟಿದೆ ಎಂಬುದನ್ನು ಖಾತರಿಪಡಿಸಿತು.
     ಬೇರೆ ಶಾಲೆಯ ಶಿಕ್ಷಕರೂ ನಮ್ಮ ಹಬ್ಬದ ತಯಾರಿಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಅವರವರ ಶಾಲೆಯಲ್ಲಿ ಗಣರಾಜ್ಯೋತ್ಸವ ಮುಗಿಸಿ ಬಂದು ನಮ್ಮ ಶಾಲೆಯಲ್ಲಿ ರಾತ್ರಿ 8 ಗಂಟೆವರೆಗೆ ಸಿದ್ಧತೆಯಲ್ಲಿ ಸಹಕರಿಸಿದರು. ಹೀಗೆ ಎಲ್ಲರ ಒಳ್ಳೆಯ ಮನಸ್ಸಿನ ಸಹಕಾರದಿಂದ ಕಲಿಕಾ ಹಬ್ಬ ಸಂಪನ್ನಗೊಂಡಿತು.
........................................................ ಶೃತಿ
ಸಹಶಿಕ್ಷಕರು
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*****************************************



Ads on article

Advertise in articles 1

advertising articles 2

Advertise under the article